Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ವೇಶ್ಯೆಯನ್ನು ಹಿಡಿದ ಪತಿವ್ರತೆಯನ್ನು ಲೆಕ್ಕ ಕೇಳಬಾರದೆ ಸ್ವಾಮೀ?

ಮಧುಕರ ಶೆಟ್ಟಿ!

ಕರ್ನಾಟಕ ಕಂಡ ಅತ್ಯಂತ ಪ್ರಾಮಾಣಿಕ, ನೇರ ಮನಸ್ಸಿನ, ಪ್ರಾಂಜಲ ಹೃದಯದ ಅಧಿಕಾರಿ ಕರ್ನಾಟಕ ಲೋಕಾಯುಕ್ತವನ್ನೇ ಲಂಚದ ಗಂಗೋತ್ರಿ, ಅಪ್ರಮಾಣಿಕರ ಪೊಟರೆ, ಪದವಿಯಾಸೆ ಮತ್ತು ಹೆಸರಿನಾಸೆಗಾಗಿ ಹಂಬಲಿಸುವವರ ಕೂಟ ಎಂದು ನೇರ ಮಾತುಗಳಲ್ಲಿ expose ಮಾಡಿದ್ದಾರೆ. ಎರಡು ವರ್ಷ ಅಲ್ಲಿದ್ದದ್ದೇ ನಾನು ಮಾಡಿದ ತಪ್ಪು. ಅದೂ ಭ್ರಷ್ಟಾಚಾರವೇ ಎಂಬ ಪ್ರಾಯಶ್ಚಿತ್ತದ ಮಾತಾಡಿದ್ದಾರೆ.

ಒಬ್ಬ ಅಧಿಕಾರಿ ಒಂದು ವ್ಯವಸ್ಥೆಯಲ್ಲಿರುವುದು ಅನಿವಾರ್ಯ. ಅದರಲ್ಲಿ ಹುಳು-ಹುಪ್ಪಟೆಗಳಿರುವುದೂ ಅನಿವಾರ್ಯ. ಪ್ರಾಮಾಣಿಕನಾದ ಮನುಷ್ಯ ಭ್ರಷ್ಟ ವ್ಯವಸ್ಥೆಯ ವಿರುದ್ಧ ಬಡಿದಾಡಬೇಕು. ದಂಡನಾಯಕನಾದವನ ಕೈಗೆ ಸಿಗುವ ಸೈನಿಕರೆಲ್ಲರೂ ಶೂರರೂ, ರರೂ ಆಗಿರುವುದಿಲ್ಲ. ಲಂಚಕೋರರು, ಕೆಲಸಗಳ್ಳರು, ಅಪ್ರಮಾಣಿಕರು ಇದ್ದೇ ಇರುತ್ತಾರೆ. ಸರಿಪಡಿಸಿ, ಶಿಕ್ಷಿಸಿ, ತಿದ್ದಿ ಮತ್ತೆ ಜತೆಗಿಟ್ಟುಕೊಂಡು ಯುದ್ಧ ಮುಂದುವರೆಸಬೇಕು. ಇದು ಅನಿವಾರ್ಯ. ಅಂಥವರಲ್ಲಿ ಮಧುಕರ ಶೆಟ್ಟರು ಅಮೆರಿಕಕ್ಕೆ ಹೋಗಿ ಕುಳಿತು ವೈರಾಗ್ಯದ ಮಾತುಗಳನ್ನೇಕೆ ಆಡುತ್ತಿದ್ದಾರೆ. ಅದೂ ಈ ಸಂದರ್ಭದಲ್ಲಿ?

ಪರಿಶೀಲಿಸಿ ನೋಡಿದರೆ ಬೇರೆಯದೇ ಅಂಶಗಳು ಹೊರ ಬರುತ್ತವೆ. ಮಧುಕರ ಶೆಟ್ಟಿ ಮೊದಲಿನಿಂದಲೂ ಕಾನೂನಿಗೆ ಮಾತ್ರ ಅನ್ವಯವಾಗುವಂತೆ ಕೆಲಸ ಮಾಡಿಕೊಂಡು ಬಂದ ಅ—ಕಾರಿ. ಲೋಕಾಯುಕ್ತರ Aಧಿನದ Anti Corruption Police ವಿಭಾಗಕ್ಕೆ ಎಸ್.ಪಿ. ಆಗಿ ನೇಮಕಗೊಂಡಾಗ ಅವರಿಗೆ ಅಲ್ಲಿ ಮೊದಲ ಅಚ್ಚರಿ ಕಾದಿತ್ತು. ಅಸಲಿಗೆ ಲೋಕಾಯುಕ್ತಕ್ಕೆ ಒಂದು ನೀತಿ ನಿಯಮಾವಳಿಗಳ manual ಇರಲೇ ಇಲ್ಲ. ಸಿ.ಬಿ.ಐ ಒಂದು manual ಹೊಂದಿರುತ್ತದೆ. ಜೈಲಿಗೊಂದು ಮ್ಯಾನುಯಲ್ ಇರುತ್ತದೆ. ಪೊಲೀಸರಿಗೊಂದು ಮ್ಯಾನುಯಲ್ ಇರುತ್ತದೆ. ಅದು ನಿಯಮ. ಆದರೆ ಅಷ್ಟೆಲ್ಲ ಇಲಾಖೆಗಳಲ್ಲಿನ ಭ್ರಷ್ಟಾಚಾರವನ್ನು ಹಣಿಯಲು ನೇಮಕಗೊಂಡ ಲೋಕಾಯುಕ್ತಕ್ಕೆ manual ಇಲ್ಲದಿದ್ದರೆ ಹೇಗೆ?

ಮಧುಕರ ಶೆಟ್ಟರು ತಿಂಗಳು ಗಟ್ಟಲೆ ಏಕಾಂಗಿಯಾಗಿ ಹಗಲೂ ರಾತ್ರಿ ಕುಳಿತು ಲೋಕಾಯುಕ್ತ manual ರಚಿಸಿ ಅದನ್ನು ಸರ್ಕಾರದ ಛೀಫ್ ಸೆಕ್ರೆಟರಿ ಕೈಗೆ ಕೊಟ್ಟರು. ಮುಂದೆ ಅದು ಹೋಮ್ ಡಿಪಾರ್ಟ್‌ಮೆಂಟಿಗೆ ಹೋಗಿ ಅಲ್ಲೇ ಬಾಕಿಯಾಯಿತು. ಲೋಕಾಯುಕ್ತಕ್ಕೆ ಒಂದು manual ಅಂತ ಆದದ್ದೇ ಆದರೆ ಸಂತೋಷ ಹೆಗ್ಡೆಯವರಂತಹ ‘ಭ್ರಷ್ಟಾಚಾರ ವಿರೋ ಅಟಾಟೋಪ ಶೂರ’ರು ಯಾರದೋ ಸಾಹಸಕ್ಕೆ ತಾವು ಪ್ರಚಾರ ಪಡೆಯುವುದು ನಿಂತು ಹೋಗುತ್ತಿತ್ತು. ಈ ಹಿಂದೆ ನಾನು ಬರೆದದ್ದೂ ಅದನ್ನೇ. ಅಸಲಿಗೆ trap ಅಥವಾ ದಾಳಿಯಂತಹುದು ನಡೆದಾಗ ಅಲ್ಲಿ ಲೋಕಾಯುಕ್ತರು ಕುಳಿತು ಭಾಷಣ ಮಾಡುವಂತಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಮಿಂಚುವಂತಿಲ್ಲ. ಆದರೆ ಐದೂ ವರ್ಷ ಸಂತೋಷ್ ಹೆಗ್ಡೆ ಮಾಡಿದ್ದೇ ಅದೊಂದು ಕೆಲಸವನ್ನ. ದಾಳಿ ಅಥವಾ trapನಂಥವು ಕೇವಲ ಲೋಕಾಯುಕ್ತ ವಿಭಾಗದ ಪೊಲೀಸ್ ಪಡೆಗೆ ಬರುತ್ತವೆ. ಆದರೆ ಅವು ನಡೆದ ಮೇಲೆ ಒಂದೇ ಒಂದು ಪತ್ರಿಕಾಗೋಷ್ಠಿಯಲ್ಲೂ ಮಧುಕರ ಶೆಟ್ಟರು ಕಾಣಿಸಿಕೊಳ್ಳುತ್ತಿರಲಿಲ್ಲ. ಬದಲಿಗೆ ಯಾರೋ ಕತ್ತರಿಸಿಟ್ಟ ರುಂಡವನ್ನು ತಮ್ಮ ಖಡ್ಗಕ್ಕೆ ಚುಚ್ಚಿಕೊಂಡು ಝಳಪಿಸುತ್ತಿದ್ದುದು ಸಂತೋಷ್ ಹೆಗ್ಗಡೆ ಮತ್ತು ಅವರ ಪಕ್ಕದಲ್ಲಿರುತ್ತಿದ್ದುದು ರೂಪ ಕುಮಾರ್ ದತ್ತಾ.

ಹೆಗ್ಡೆ ಅವರಿಗೆ ಪ್ರಚಾರವೆಂಬ ರಕ್ತದ ರುಚಿಯನ್ನು ಮೊದಲು ತೋರಿಸಿದವರೇ ರೂಪ ಕುಮಾರ್ ದತ್ತಾ. ನಿಜಕ್ಕೂ ರೂಪ ಕುಮಾರ್ ದತ್ತಾ ಒಬ್ಬ ನಿಷ್ಠಾವಂತ ಅಧಿಕಾರಿ. ಆದರೆ ಅವರು ಮಹತ್ವಾಕಾಂಕ್ಷಿ. ಅವರಿಗೆ ಮುಂದೆ ಐದು ವರ್ಷಗಳ ಸರ್ವೀಸಿದೆ. ಶತಾಯಗತಾಯ ಸಿ.ಬಿ.ಐ. ನಿರ್ದೇಶಕರ ಪಟ್ಟಕ್ಕೇರುವ ಅಭಿಲಾಷೆ. ಹೀಗಾಗಿ ಒಂದು ವರ್ಷದಲ್ಲಿ ನೂರು ಜನ ‘ಭಷ್ಟರನ್ನು’ ಬಲಿ ಹಾಕುವ ನಿರ್ಧಾರ ಅವರದು. ಆ ಶೂರರ ಪಟ್ಟಿಯಲ್ಲಿ ಯಾರಿದ್ದರೂ ಸರಿಯೇ. ಪಾಪಿ ಪರದೇಶಿಗಳಂಥ ಜೇಬುಗಳ್ಳರಿಂದ ಹಿಡಿದು ಖ್ಯಾತನಾಮರ ತನಕ! ಈ ಭರದಲ್ಲಿ ಕೆಲವು ಅನಾಹುತಗಳೂ ನಡೆದು ಹೋದವು. ಸಿಕ್ಕಿದ್ದು ಹತ್ತು ರುಪಾಯಿಗಳಾದರೆ, ತೋರಿಸಿದ್ದು ಕೋಟ್ಯಂತರ. ಹೀಗಾಗಿ ನ್ಯಾಯಾಲಯಗಳಲ್ಲಿ ಹೆಚ್ಚಿನ ಕೇಸುಗಳು ನಿಲ್ಲಲಿಲ್ಲ. ಹೇಮಂತ ನಿಂಬಾಳ್ಕರ್ ಮತ್ತು ಸಿ.ಸೋಮಶೇಖರ್‌ರಂತಹ ದಕ್ಷರಿಗೆ ಮುಖಭಂಗ ಮಾಡುವ ಪ್ರಯತ್ನ ನಡೆಯಿತು.

ಇಷ್ಟಾಗಿ, ನಿಜಕ್ಕೂ ಲೋಕಾಯುಕ್ತ ಪೊಲೀಸಿನವರು ಮಾಡಿದ ಸೆನ್ಸೇಷನಲ್ ಹಾಗೂ ಕರಾರುವಾಕ್ ಕೇಸುಗಳೆಂದರೆ ಕಟ್ಟಾ ಜಗದೀಶ್ ಹಾಗೂ ಶಾಸಕ ಸಂಪಂಗಿಯ trap. ಅದೇ ರೀತಿ ಸ್ಪೆಷಲ್ ಡಿ.ಸಿ.ರಾಮಾಂಜನೇಯ, ಕೋಲಾರ ಎಸ್ಪಿ ಪುಟ್ಟಸ್ವಾಮಿ ಮತ್ತು ಕಾರ್ಪೊರೇಟರ್ ಗೋವಿಂದರಾಜು ತರಹದ ಕುಳಗಳನ್ನು ಬಲಿ ಹಾಕಿದರು. ನಿಮಗೆ ಗೊತ್ತಿರಲಿ, ಇವೆಲ್ಲ ದಾಳಿಗಳ ಹಿಂದಿದ್ದದ್ದು ಇಬ್ಬರೇ. ಒಬ್ಬರು ಮಧುಕರ ಶೆಟ್ಟಿ. ಇನ್ನೊಬ್ಬರು ಮೊಹಂತಿ. ಇಬ್ಬರೂ ಪ್ರಚಾರದಿಂದ ದೂರ ಉಳಿದರು. ತಾವು ಮಾಡಬೇಕಾದ ಕೆಲಸವನ್ನು ಕಾನೂನು ವ್ಯಾಪ್ತಿ ಮೀರದಂತೆ ಮಾಡಿ ಮುಗಿಸಿದರು. ಆದರೆ ಕೆಲವು ಅಧಿಕಾರಿಗಳ ವಿರುದ್ಧ ಕೆಲಸಕ್ಕೆ ಬಾರದ, ಹುರುಳಿಲ್ಲದ ದೂರು ಬಂದಾಗ ಅದನ್ನು ತನಿಖೆ ಮಾಡಿ, ಸುಳ್ಳು ದೂರು ಅಂತ ನಿರ್ಧರಿಸಿ ಫೈಲು ಮುಚ್ಚಿಟ್ಟರು. ಆದರೆ ‘ನೂರು ಬಲಿ’ಯ ಶಪಥ ಮಾಡಿದ್ದ ರೂಪ ಕುಮಾರ್ ದತ್ತಾ, ಮಧುಕರ ಶೆಟ್ಟಿಯವರನ್ನು ಪಕ್ಕಕ್ಕಿಟ್ಟು ಸುಳ್ಳು ದೂರನ್ನೇ ಸತ್ಯವೆಂದು ಸಾಬೀತು ಮಾಡಲು ಹೋಗಿ ಹೇಮಂತ ನಿಂಬಾಳ್ಕರ್‌ರಂತಹ ದಕ್ಷ ಅಧಿಕಾರಿಯ ಮೇಲೆ ದಾಳಿ ಮಾಡಿ ಹೆಸರು ಕೆಡಿಸಿದರು. ನಿಂಬಾಳ್ಕರ್ ಎಷ್ಟು ಮನನೊಂದಿದ್ದರೆಂದರೆ, ಸಂತೋಷ್ ಹೆಗ್ಡೆಯವರ ಮೇಲೆ ‘ಒಂದು ರುಪಾಯಿ’ಯ ಮಾನನಷ್ಟ ಮೊಕದ್ದಮೆ ಹೂಡಲಿಕ್ಕೆ ಸರ್ಕಾರದಿಂದ ಅನುಮತಿ ಕೋರಿದ್ದರು.

ಇದೆಲ್ಲಕ್ಕಿಂತ ಹೆಚ್ಚಾಗಿ ಬಹುಶಃ ಮಧುಕರ ಶೆಟ್ಟಿ ನೊಂದದ್ದು ‘ನೂರು ಬಲಿ’ಯ ರಕ್ತದಾಹದ ಫಲವಾಗಿ ಕಾರಕೂನನೊಬ್ಬನನ್ನು trap ಮಾಡಿದಾಗ. “ಎಂತೆಂಥವರನ್ನೋ ಬಿಟ್ಟು ನನ್ನಂಥ ಬಡಪಾಯಿಯನ್ನು ಹಿಡಿದಿರಲ್ಲಾ ಸ್ವಾಮೀ?" ಅಂದ ಆತ ಆತ್ಮಹತ್ಯೆ ಮಾಡಿಕೊಂಡಿದ್ದ! ಇಂಥವ್ಯಾವನ್ನೂ ಪತ್ರಿಕೆಗಳಿಗೆ ಹೇಳಲಿಲ್ಲ ಸಂತೋಷ ಹೆಗ್ಡೆ. ಆಯಿತು, ಭ್ರಷ್ಟರ ವಿರುದ್ಧ ಬಡಿದಾಡುವಾಗ ಇಂಥವು ಆಗುವುದು ಸಹಜವೇ. ಕಾಲಕಾಲಕ್ಕೂ ಭ್ರಷ್ಟಾಚಾರ, ಅನಾಚಾರ ಬಯಲಾಗುತ್ತ ಬಂದಿವೆ. Trapಗಳು, ದಾಳಿಗಳೂ ಆಗುತ್ತಲೇ ಇವೆ. ಕೆಲವರಿಗೆ ಶಿಕ್ಷೆಗಳೂ ಆಗುತ್ತವೆ. ಆದರೆ ಇದೆಲ್ಲವೂ Anti Corruption Police ನಡೆಸುವ ಕಾರ್ಯಾಚರಣೆ. ಇದನ್ನು ತಮ್ಮ ಸಾಧನೆ ಎಂದು ಹೇಳಿಕೊಂಡು ಪ್ರಚಾರ ಪಡೆದು ಹೆಗ್ಡೆಯವರು ಮಹಾತ್ಮರಾಗಬೇಕಿತ್ತಾ?

ಕಟ್ಟಾ ಜಗದೀಶ್, ಕಟ್ಟಾ ನಾಯ್ಡು, ಯಡಿಯೂರಪ್ಪ, ಕೃಷ್ಣಯ್ಯ ಶೆಟ್ಟಿ, ಸಂಪಂಗಿ-ಹೀಗೆ ಸಾಲು ಸಾಲು ಜನರನ್ನು ಜೈಲಿಗಟ್ಟಿದ ನ್ಯಾಯಾಧೀಶ ಸುಂದ್ರ ರಾವ್ ಅವರು ಒಂದಾದರೂ ಪತ್ರಿಕಾಗೋಷ್ಠಿ ಮಾಡಿದರಾ? ನ್ಯಾಯಾಲಯವೆಂಬುದು ನಿಷ್ಪಕ್ಷವಾದ cutting edge. ಅದೇ ನ್ಯಾಯಸ್ಥಾನದಲ್ಲಿ ಕುಳಿತು ಬಂದವರಲ್ಲವೆ ಹೆಗ್ಗಡೆ? ತೀರ ಕುಮಾರಸ್ವಾಮಿಯವರ ಹೇಳಿಕೆಗೂ ಪ್ರತ್ಯುತ್ತರ ನೀಡುವಂಥ ಮಟ್ಟದ ವ್ಯಕ್ತಿಯೇಕಾದರು? ರಾಜಕೀಯ ಸ್ಥಾನವೇ ಬೇಡ, ಯಾವ ಹುದ್ದೆಯ ಆಸೆಯೂ ಇಲ್ಲ ಎಂದು ಪದೇಪದೇ ಹೇಳುವ ಹೆಗ್ಗಡೆ ಪ್ರಾಮಾಣಿಕತೆಯನ್ನು ಪಾತಿವ್ರತ್ಯದಂತೆ ಧರಿಸುವ ಅವಶ್ಯಕತೆಯಾದರೂ ಏನಿದೆ? ನಾನು ಈ ಹಿಂದೆ ಸಂಪಾದಕೀಯದಲ್ಲಿ ಈ ಅಂಶವನ್ನು ಅನೇಕ ಸಲ ಪ್ರಸ್ತಾಪಿಸಿದ್ದೇನೆ. ಮಧುಕರ ಶೆಟ್ಟಿಯವರ ಮಾತಿನಲ್ಲಿ ಈಗ ಕೇಳಿ ಬಂದಿರುವುದು ಅದೇ ಧ್ವನಿ. ಪ್ರಾಮಾಣಿಕತೆ ಎಂಬುದು ಬಿರುದಲ್ಲ. ಯಾರೋ ಮಾಡಿದ ಕೆಲಸದ ಹಿರಿಮೆಯನ್ನು ಅಪಹರಿಸಿ ಅದನ್ನು ಬಿರುದಾಗಿ ಧರಿಸಿಕೊಳ್ಳುವ ‘ಪ್ರಾಮಾಣಿಕರು’ ಭ್ರಷ್ಟಾಚಾರಿಗಳಿಗಿಂತ ಅಪಾಯಕಾರಿ. ಅಸಲು ಪ್ರಾಮಾಣಿಕತೆ ಎಂಬುದು ಆಭರಣವೂ ಅಲ್ಲ. ಬಿರುದೂ ಅಲ್ಲ. You are paid for it and you are doing it. ಸಂಬಳ, ಕಾರು, ಬಂಗಲೆ, ಆಳು ಎಲ್ಲಾ ಕೊಟ್ಟ ಮೇಲೂ ತಮ್ಮ ಶ್ರೇಷ್ಠತೆ ಯಾಕೆ ಮೆರೆಯಬೇಕು. ಲಕ್ಷಾಂತರ ನೌಕರರಲ್ಲಿ ಸಾವಿರಾರು ಪ್ರಾಮಾಣಿಕ ಸರ್ಕಾರಿ ನೌಕರರಿದ್ದಾರೆ. ಅವರು ಯಾವತ್ತು ತಮ್ಮನ್ನು ಶ್ರೇಷ್ಠರೆಂದು ಹೇಳಿಕೊಂಡರು? ಇದು ಮಧುಕರ ಶೆಟ್ಟರ ಪ್ರಶ್ನೆ.

ಇವೇ ಪ್ರಶ್ನೆಗಳನ್ನು ಮಾಜಿ ಲೋಕಾಯುಕ್ತರ ವಿರುದ್ಧ ಪತ್ರಿಕೆ ಮೊದಲಿನಿಂದಲೂ ದನಿಯೆತ್ತುತ್ತ ಬಂದಿದೆ. ಬಳ್ಳಾರಿಯ ಗಣಿ ಹಗರಣದ ಕುರಿತು ವರದಿ ಮಾಡಿದ್ದರ ಹೊರತು ಐದು ವರ್ಷಗಳಲ್ಲಿ ಅವರು ಮಾಡಿದ್ದೇನೂ ಇಲ್ಲ. ಆ ವರದಿಯಲ್ಲೂ ಹೇರಳ ತಪ್ಪುಗಳಿವೆ. ಅನೇಕರಿಗೆ ಗೊತ್ತಿಲ್ಲದ ಸಂಗತಿಯೆಂದರೆ, ಗಣಿ ತನಿಖೆಯ ವಿಷಯದಲ್ಲಿ ಅವರು ಮಧುಕರ ಶೆಟ್ಟರನ್ನು ದೂರವೇ ಇಟ್ಟರು. ಯಥಾಪ್ರಕಾರ ರೂಪ ಕುಮಾರ್ ದತ್ತಾ, ಯು.ವಿ.ಸಿಂಗ್‌ರಂತಹ ಕೆಲವರನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಲೋಕಾಯುಕ್ತದಲ್ಲೇ ಇರುವ ಅನೇಕ ಅಧಿಕಾರಿಗಳಿಗೂ ಸಂಗತಿ ಗೊತ್ತಾಗದಂತೆ ವರದಿ ಸಿದ್ಧಪಡಿಸಿದರು.
ತಮಾಷೆ ಗೊತ್ತಾ? ಎಲ್ಲರ ಲೆಕ್ಕ ಕೇಳುವ, ಪ್ರತಿಯೊಂದರ ವಿವರ ಬೇಕೆನ್ನುವ ಲೋಕಾಯುಕ್ತ ಕಚೇರಿ ಇಡೀ ಗಣಿ ಹಗರಣದ ತನಿಖೆಗೆ ಆದ ವೆಚ್ಚ ಎಷ್ಟು ಎಂದು ‘ಪತ್ರಿಕೆ’ ಹಾಕಿದ ಮಾಹಿತಿ ಹಕ್ಕು ಕಾಯಿದೆ ಅನ್ವಯದ ಪ್ರಶ್ನೆಗೆ ನೀಡಿದ ಉತ್ತರವೇನು ಗೊತ್ತೆ? “ಖರ್ಚು ವೆಚ್ಚದ ವಿವರ ಕೊಡಲು ನಮಗೆ ಅಕಾರವಿಲ್ಲ. ಬೇಕಾದರೆ ಮೇಲ್ಮನವಿ ಸಲ್ಲಿಸಿ!"

ಇದರರ್ಥವೇನು?

ವೀರಪ್ಪನ್ ಕಾರ್ಯಾಚರಣೆಗೆ ಇಂತಿಷ್ಟು ನೂರು ಕೋಟಿ, ಬೊಫೋರ್ಸ್ ಹಗರಣದ ತನಿಖೆಗೆ ಇಂತಿಷ್ಟು ನೂರು ಕೋಟಿ ತಗುಲಿದೆ ಎಂದು ಸರ್ಕಾರವೇ ಬಹಿರಂಗ ಪಡಿಸುತ್ತಿರುವಾಗ ಅಕ್ರಮ ಗಣಿಗಾರಿಕೆ ತನಿಖೆಯ ಲೆಕ್ಕ ಕೊಡಲು ಆಗುವುದಿಲ್ಲವೆಂದರೆ ಏನರ್ಥ? ಸಿಕ್ಕಿ ಬಿದ್ದ ಭ್ರಷ್ಟಾಚಾರಿ ತನ್ನ ಅಕ್ರಮ ಸಂಪಾದನೆಯ ವಿವರ ನೀಡಲೇಬೇಕು. ಅವನದು ಸಿಕ್ಕಿ ಬಿದ್ದ ವೇಶ್ಯೆಯ ಪರಿಸ್ಥಿತಿ. ಆದರೆ ಸೆರೆ ಹಿಡಿದವನು ಮಾಡಿದ ಖರ್ಚೆಷ್ಟು? ಪತಿವ್ರತೆಯ ಲೆಕ್ಕ ಕೇಳಬಾರದೆ ಸ್ವಾಮೀ?

ಇದೆಲ್ಲ ಗೊಂದಲದ ಮಧ್ಯೆ ನ್ಯಾ.ಮೂ. ಶಿವರಾಜ್ ಪಾಟೀಲ್ ರಾಜೀನಾಮೆ ನೀಡಿದ್ದಾರೆ. ನ್ಯಾ.ಮೂರ್ತಿ ಗುರುರಾಜ್ ನಿರ್ಗಮಿಸಿದ್ದಾರೆ. ಹಿರಿಯ ಅಧಿಕಾರಿ ಗಾಂಧಿವ್ಕರ್‌ಗೆ ಎತ್ತಂಗಡಿಯಾಗಿದೆ. ಅನೇಕ ಹಗರಣಗಳಲ್ಲಿರುವ ಅರುಣ್ ಚಕ್ರವರ್ತಿ ಕೈಗೆ ಕಳ್ಳರ ಖಜಾನೆಯ ಬೀಗ ಒಪ್ಪಿಸಿದೆ ಸದಾನಂದ ಗೌಡರ ಸರ್ಕಾರ. ಬನ್ನೂರ ಮಠರ ಆಯ್ಕೆ ಸರಳವಾಗುತ್ತಿಲ್ಲ. ಮಾಜಿ ನ್ಯಾಯಮೂರ್ತಿ ಸಲ್ಡಾನಾ ಅವರದು ಪತ್ರ ಯುದ್ಧ. ಲೋಕಾಯುಕ್ತ ಅಧಿಕಾರಿಗಳನ್ನು ಬೆದರಿಸುವಂಥ ಪತ್ರ ಪ್ರೇಮ ದೇವೆಗೌಡರದು. ಸದಾನಂದ ಗೌಡರು ಯಾರ ಒತ್ತಡಕ್ಕೆ ಸಿಕ್ಕು ಗಾಂಧಿವ್ಕರ್ ಅವರನ್ನು ವರ್ಗಾಯಿಸಿದ್ದಾರೆ ಎಂಬುದು ಜಗತ್ತಿಗೇ ಗೊತ್ತಿರುವ ವಿಷಯ. ಒಟ್ಟಿನಲ್ಲಿ ಲೋಕಾಯುಕ್ತ ಎಂಬ ಒಂದು ಮಾಮೂಲು ಸರ್ಕಾರಿ ಸಂಸ್ಥೆ ತೆಪ್ಪಗೆ ಕೆಲಸ ಮಾಡದೆ ಅನವಶ್ಯಕ ರಾದ್ಧಾಂತಗಳಿಗೆ ಕಾರಣವಾಗಿದೆ.
ಇದರ ಆರಂಭವಾದದ್ದೇ ನ್ಯಾ.ಮೂ.ಸಂತೋಷ್ ಹೆಗ್ಗಡೆಯವರಿಂದ ಅಲ್ಲವೆ?

ಕಡೆಗೆ ಲೋಕಾಯುಕ್ತವೇ ಬೇಡ ಎಂಬ ಸಿನಿಕ ಮಾತು ಕೇಳಿ ಬರುವ ಸ್ಥಿತಿ ನಿರ್ಮಾಣವಾಗಿದೆ.

ಶೋಚನೀಯ!

-ರವಿ ಬೆಳಗೆರೆ

Read Archieves of 21 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books