Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಭಕ್ಷೀಸು ಪಡೆದವನು ಹೆಲಿಕಾಪ್ಟರ್ ಹತ್ತಿದರೆ ಆ ಮಹಾರಾಜ ನೆಲ ಹಿಡಿದು ಬಿಟ್ಟ!

Take care mama, you are looking too weak ಅಂತ ಮೂಡಬಿದ್ರೆಯಲ್ಲಿ ಪುಟ್ಟ ಹುಡುಗಿಯೊಬ್ಬಳು ಮೆಸೇಜ್ ಕಳಿಸಿದ್ದಳು. ಕಳೆದ ಒಂದು ವರ್ಷದಿಂದ ತೂಕ ಕಳೆದುಕೊಂಡು, ನನ್ನ ಮೇಲೆ ನನಗೇ ದಯೆ ಹುಟ್ಟುವಷ್ಟು strict ಆಗಿ ಡಯೆಟ್ ಮಾಡಿರುವುದರಿಂದ ಕೊಂಚ ಬಲಹೀನಗೊಂಡಿರುವುದು ಹೌದಾದರೂ, ತೀರ ಚಳಿಯನ್ನು ತಡೆಯಲಾಗದೆ ಒದ್ದಾಡುವಷ್ಟು ಮೆತ್ತಗಾಗಿ ಬಿಟ್ಟಿದ್ದೇನೆ ಅಂದುಕೊಂಡಿರಲಿಲ್ಲ. ಮೊನ್ನೆ ಬೇಲೂರಿನ ಬಳಿಯಿರುವ ಮಗಳ ಎಸ್ಟೇಟ್‌ಗೆ ಹೋಗಿ ಒಂದು ರಾತ್ರಿಯ ಮಟ್ಟಿಗೆ ಉಳಿದಿದ್ದೆನಲ್ಲ? ಅಲ್ಲಿ ಆವತ್ತಷ್ಟೆ ಮಳೆ ನಿಂತಿತ್ತು. ಅದೆಲ್ಲಿ ಭೂಗರ್ಭದಿಂದ ಹುಟ್ಟಿಕೊಂಡಿತ್ತೋ ಆ ಚಳಿ? ನಿಜಕ್ಕೂ ನಡುಗಿ ಬಿಟ್ಟೆ. ಮಧ್ಯರಾತ್ರಿ ಹೊತ್ತಿಗೆ ಬೆನ್ನಲ್ಲಿ ಭಯಂಕರ ನಡುಕ. ಕೆಂಪುಗಣ್ಣಿನ ರೂಮ್ ಹೀಟರ್ ಯಾತಕ್ಕೂ ಸಾಲದು. ಒಂದು ಕಬ್ಬಿಣದ ಬುಟ್ಟಿಯಲ್ಲಿ ಕೆಂಡ ಮಾಡಿಸಿ ಹಾಸಿಗೆಯ ಬದಿಯಲ್ಲಿ ಇಟ್ಟುಕೊಂಡೆ. ಉಹುಂ, ಕಡೆಗೆ ನನ್ನ ಸಹಾಯಕ ಅದೆಲ್ಲಿಂದಲೋ ಕೊಂಚ ರಮ್ ತಂದು ಬೆನ್ನಿಗೆ, ಕಾಲಿಗೆ ಹಾಕಿ ಉಜ್ಜಿದ ಮೇಲೆಯೇ ಸಣ್ಣ ನಿದ್ರೆ. ಬೆಳಗ್ಗೆ ಪ್ರಖರ ಸೂರ್ಯನಿಗೆ ಬೆನ್ನು ಕೊಟ್ಟು ಮೈ ಕಾಯಿಸಿಕೊಂಡು, ಕೊಂಚ ಆಮ್ಲೆಟ್ ತಿಂದು ಹೊರಟಾಗ ಹಿತವೆನ್ನಿಸಿತ್ತು. ದಾರಿಯಲ್ಲಿ ಕೊಟ್ಟಿಗೆಹಾರ ಸಿಗುತ್ತದೆ. ಅದು ನನ್ನ ಅತ್ಯಂತ ಪ್ರೀತಿಯ ಬೆಟ್ಟಗಾಡು. ಘಟ್ಟ ಇಳಿಯುವ ಮುನ್ನ ಕೊಟ್ಟಿಗೆಹಾರದ ಬೇಬಿ ಹೋಟ್ಲಿಗೆ ಹೋಗಿ ಒಂದಷ್ಟು ಕೋಳಿ ಸಾರು ಮತ್ತು ನೀರು ದೋಸೆ ತಿನ್ನುವುದು ನನ್ನ ಹಳೆಯ ರೂಢಿ. ಮೊನ್ನೆ ಬೇಬಿ ಇರಲಿಲ್ಲ. ಅವರ ಪತ್ನಿ ಮಕ್ಕಳು ತಿಂಡಿ ಮಾಡಿ ಕೊಟ್ಟರು. “ಅವನು ಅದ್ದು ಇದ್ದಾನಾ?" ಅಂತ ಕೇಳಿದೆ. ಅಷ್ಟರಲ್ಲಿ ಅವನೇ ಬಂದ. ಸರಣಿ ಹತ್ಯೆಗಳನ್ನು ಮಾಡಿ, ವಿಲಕ್ಷಣ ರೀತಿಯಲ್ಲಿ ಸಿಕ್ಕು ಬಿದ್ದು ಕಡೆಗೆ ಕೇರಳದ ಕೋರ್ಟಿನ ಆದೇಶದಂತೆ ನೇಣಿಗೆ ಬಿದ್ದ ಚಂದ್ರನ್ ಎಂಬ ಪಾತಕಿಯೊಂದಿಗೆ ಹತ್ಯೆಗಳಲ್ಲಿ ಪಾಲ್ಗೊಂಡವನು ಅದ್ದು. ಆದರೆ ಅನೇಕ ವರ್ಷ ಜೈಲು ಕಳೆದು ಈಗ್ಗೆ ಸುಮಾರು ಹತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿರುವವನು. “ಇಲ್ಲೇ ಕೊಟ್ಟಿಗೆಹಾರದಲ್ಲಿ ಕೆಲಸ ಮಾಡಿಕೊಂಡಿದ್ದೇನೆ" ಅಂದ. ಇಡೀ ಚಂದ್ರನ್ ಹತ್ಯೆಗಳ ಪ್ರಕರಣವೇ ಒಂದು ದಂತಕಥೆಯಿದ್ದಂತಿದೆ. ಆಗ ಕರಾವಳಿ-ಕೇರಳದ ಎರಡು ಮೂರು ಜಿಲ್ಲೆಗಳಲ್ಲಿ ಚಂದ್ರನ್ ತಂಡ ಯಾವ ಪರಿ ಭೀತಿ ಹುಟ್ಟಿಸಿತ್ತೆಂದರೆ, ಅನೇಕರು ತಮ್ಮ ಮನೆಗಳಿಗೆ ಕೋವಿ-ಪಿಸ್ತೂಲು ತಂದಿಟ್ಟುಕೊಂಡಿದ್ದರು. ಅದರ ಬಗ್ಗೆ ಬರೆಯೋಣ ಅಂತ ಕೆಲ ಕಾಲ ಚಾರ್ಮಾಡಿ ಘಾಟಿನ ಸುತ್ತ ಓಡಾಡಿದ್ದೆ. ಅದೆಲ್ಲ ನೆನಪು ಮಾಡಿಕೊಳ್ಳುತ್ತ ಮೊನ್ನೆ ಘಟ್ಟ ಇಳಿದು ಮೂಡಬಿದ್ರೆ ತಲುಪಿದಾಗ ಸಾಯಂಕಾಲ ಮಸಕಾಗಿತ್ತು.

ಈ ಬಾರಿ ಆಳ್ವಾಸ್ ನುಡಿಸಿರಿ ಕಾರ್ಯಕ್ರಮಕ್ಕೆ ಖುದ್ದಾಗಿ ಮೋಹನ್ ಆಳ್ವ ಅವರೇ ಆಹ್ವಾನಿಸಿದ್ದರು. ಹಿಂದಿನ ಸಲವೂ ಒಪ್ಪಿಕೊಂಡಿದ್ದೆ. ಆದರೆ ‘ಕೇವಲ ಇಪ್ಪತ್ತು ನಿಮಿಷ ಮಾತನಾಡಬೇಕು’ ಅಂತ ಪತ್ರದಲ್ಲಿ ತಿಳಿಸಿದಾಗ ಕೇವಲ ಇಪ್ಪತ್ತು ನಿಮಿಷ ಮಾತನಾಡುವ ಸೌಭಾಗ್ಯಕ್ಕಾಗಿ ಎಂಟುನೂರು ಕಿಲೋಮೀಟರು ಡ್ರೈವ್ ಮಾಡೋದಾ? ಬರುವುದಿಲ್ಲ ಅಂದಿದ್ದೆ. ಈ ಬಾರಿ ನಿಮ್ಮದು ವಿಶೇಷ ಉಪನ್ಯಾಸ : ನಲವತ್ತು ನಿಮಿಷ ಮಾತನಾಡಿ ಅಂದಿದ್ದರು ಮೋಹನ್ ಆಳ್ವ. ಪತ್ರಿಕೋದ್ಯಮದಲ್ಲಿ ಸಂಘರ್ಷ ಮತ್ತು ಸಾಮರಸ್ಯ ಎಂಬ ಸಬ್ಜೆಕ್ಟು. ಈ ಬಾರಿ ನುಡಿಸಿರಿ ಸಮ್ಮೇಳನದ ಅಧ್ಯಕ್ಷತೆ ನನ್ನ ಗುರುಗಳಾದ ಡಾ.ಎಂ.ಎಂ.ಕಲಬುರ್ಗಿ ಅವರದು. ನಾನು ಇತಿಹಾಸದಲ್ಲಿ ಎಂ.ಎ ಮಾಡುತ್ತಿದ್ದ ಕಾಲದಲ್ಲಿ ಅವರು ಕನ್ನಡ ಕಲಿಸುತ್ತಿದ್ದರು. ಅವರ ಬಗ್ಗೆ ಮೊದಲಿನಿಂದಲೂ ಗೌರವ ಹೊಂದಿರುವವನು ನಾನು. ಅವರ ಕೃತಿಗಳ ವಿರುದ್ಧ ಮಠಾಶರು ಹೂಂಕರಿಸಿದಾಗ ನಮ್ಮ ಗುಂಪು ಕಲಬುರ್ಗಿಯವರ ಪರ ನಿಂತಿತ್ತು. ವೇದಿಕೆಯ ಮೇಲೆ ಡಾ. ಕಲಬುರ್ಗಿ, ಡಾ.ಮೋಹನ್ ಆಳ್ವ ಮತ್ತು ನೀವು ಮಾತ್ರ ಇರುತ್ತೀರಿ. ಭಾಷಣ ನೀವು ಮಾತ್ರ ಮಾಡುತ್ತೀರಿ ಅಂದಿದ್ದರು. ನಾನು ಆಳ್ವಾಸ್ ನುಡಿಸಿರಿ ಕಾರ್ಯಕ್ರಮದ ಅಚ್ಚುಕಟ್ಟು, ಸಮಯ ಪಾಲನೆ ಮುಂತಾದವುಗಳ ಬಗ್ಗೆ ಕೇಳಿದ್ದೆ. ಆದರೆ ನಾನು ಕೇಳಿದುದಕ್ಕಿಂತ, ಕಲ್ಪಿಸಿಕೊಂಡದ್ದಕ್ಕಿಂತ ಅದ್ಭುತವಾಗಿತ್ತದು. ಬಳ್ಳಾಲ್ ಹೊಟೇಲಿನ ಮುಂದೆಯೇ ಗೆಳೆಯರಾದ ನಾ.ದಾಮೋದರ ಶೆಟ್ಟಿ ಸಿಕ್ಕರು. ಒಬ್ಬೊಬ್ಬ ಅತಿಥಿಯನ್ನು ನೋಡಿಕೊಳ್ಳಲಿಕ್ಕೆ ಒಬ್ಬೊಬ್ಬ ಲೆಕ್ಚರರ್‌ನನ್ನು ನೇಮಿಸಲಾಗಿತ್ತು. ಊಟ, ತಿಂಡಿ ಎಲ್ಲ ಕರಾರುವಾಕ್ಕು. ಹಿಂದಿನ ದಿನವೇ ಸಂಜೆ ತಲುಪಿಕೊಂಡಿದ್ದೆನಾದ್ದರಿಂದ ಬೆಳಗ್ಗೆ ಮೆರವಣಿಗೆಗೆ ಬನ್ನಿ ಅಂದರು. ನನಗೆ ಮೆರವಣಿಗೆ ಯಾರದೇ ಆದರೂ ಪಾಲ್ಗೊಳ್ಳಲು ಕೊಂಚ ಹಿಂಜರಿಕೆ. ಉದ್ಘಾಟನೆಗೆ ಹೋಗೋಣ ಅಂದುಕೊಂಡೆ. ರಾತ್ರಿ ನಾ.ದಾಮೋದರ ಶೆಟ್ಟರು ಅದೆಲ್ಲಿಂದಲೋ ಒಂದು ಅದ್ಭುತವಾದ ಬಿರಿಯಾನಿ ಮತ್ತು ಪಾಂಪ್ರೆಟ್ ಮೀನು ಮಾಡಿಸಿ ತರಿಸಿದ್ದರು. ಭರ್ಜರಿ ಹರಟುತ್ತಾ ಊಟ ಮಾಡಿ ಮಲಗಿಬಿಟ್ಟೆ.

ಬೆಳಗ್ಗೆ ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ಆಳ್ವಾಸ್ ನುಡಿಸಿರಿ ಸಭೆ. ನಿಜಕ್ಕೂ ಆ ಜಂಗುಳಿ, ಕಾರ್ಯಕ್ರಮದ ಗ್ರಾಂಜರ್ ಮತ್ತು ಕಾರ್ಯಕರ್ತರ ವರ್ತನೆ ಕಂಡು ದಂಗು ಬಡಿದುಬಿಟ್ಟೆ. ನನಗೆ ದೊಡ್ಡ ಅಚ್ಚರಿ ಅನಿಸಿದ್ದು ಸ್ವತಃ ಡಾ.ಮೋಹನ್ ಆಳ್ವ. ಅವರು ವೈದ್ಯರು, ಬೃಹತ್ ವಿದ್ಯಾಸಂಸ್ಥೆಯ ಯಜಮಾನ, ಕಲಾಸಕ್ತ, ಸ್ವತಃ ನಟಿಸುತ್ತಾರೆ. ಯಕ್ಷಗಾನ ಕಲಾವಿದರು. ಅವರ ಮಾತೂ ಚೆಂದ. ಅಭಿರುಚಿ ಅದ್ಭುತ. ಇದೆಲ್ಲದರ ಮಧ್ಯೆ ರಾಜಕೀಯದಿಂದ ಒಂದು ಅಂತರ ಉಳಿಸಿಕೊಂಡೇ ರಾಜಕಾರಣಿ ಗೆಳೆಯರನ್ನಿಟ್ಟುಕೊಂಡಿರುವ ಸಭ್ಯ ಮನುಷ್ಯ. ಬೆಳಗ್ಗೆ ನಾನು ಹೋದಾಗ ಯಾರೋ ಬಂದು ಒಂದು ಪಟಗ ಸುತ್ತಿದರು. ಸುಮಾರು ಹದಿನೈದಿಪ್ಪತ್ತು ಸಾವಿರದಷ್ಟು ಜನ. ಆಶ್ಚರ್ಯವೆಂದರೆ ನನ್ನ ಬಳ್ಳಾರಿ, ರಾಯಚೂರು ಜಿಲ್ಲೆಗಳಿಂದಲೂ ಹುಡುಗ-ಹುಡುಗಿಯರು ಆಳ್ವಾಸ್ ಕಾಲೇಜಿಗೆ ಸೇರಿಕೊಂಡಿದ್ದಾರೆ. ಇತ್ತೀಚೆಗಷ್ಟೆ ಮಂಗಳೂರು ವಿಶ್ವವಿದ್ಯಾಲಯಕ್ಕೆ ಭಾಷಣಕ್ಕೆ ಹೋಗಿದ್ದೆ. ಆ ಹುಡುಗರೂ ಸಾವಿರ ಸಾವಿರ ಸಂಖ್ಯೆಯಲ್ಲಿ ಬಂದಿದ್ದರು. ಅವರಿಗೆಲ್ಲ ಜೊತೆಗೆ ನಿಂತು ಫೊಟೋ ತೆಗೆಸಿಕೊಳ್ಳುವ, ಆಟೋಗ್ರಾಫ್ ತೆಗೆದುಕೊಳ್ಳುವ ಹುಕಿ. ಇದ್ದಕ್ಕಿದ್ದಂತೆ ಗುಂಪಿನಲ್ಲಿ ವೈದೇಹಿ ಸಿಕ್ಕಾಗ ಹಿರಿಯಕ್ಕ ಸಿಕ್ಕಷ್ಟೆ ಸಂತೋಷ. ಎರಡು ಮಾತು ಆಡುವಷ್ಟರಲ್ಲಿ ಟೀವಿ ಛಾನಲ್‌ಗಳವರು ಬಂದು ಮುತ್ತಿಕೊಂಡರು. ಬರಗೂರರ ಭಾಷಣ ಮುಗಿಯುತ್ತಿದ್ದಂತೆ ನಾನು ಹೊರಬಿದ್ದು ಬಿಟ್ಟೆ. ಮಧ್ಯಾಹ್ನದ ಸೆಖೆಯಲ್ಲಿ ಕೂರುವುದು ಕಷ್ಟ.

ಕೋಣೆಯಲ್ಲಿ ಕುಳಿತು ಕೊಂಚ prepare ಆಗೋಣ ಭಾಷಣಕ್ಕೆ ಅಂದುಕೊಂಡೆ. ಆದರೆ ಎಲ್ಲಿಯ ಪ್ರಿಪರೇಷನ್ನು? ಹಿಂದಿನ ದಿನವಷ್ಟೆ ಆಫ್ರಿಕಾದ ಘಾನಾದಿಂದ ಹಿಂತಿರುಗಿದ್ದ ಕವಿ ಮಿತ್ರ ಎಲ್.ಹನುಮಂತಯ್ಯ ಕೋಣೆಗೆ ಬಂದ. ಅರವತ್ತು ದಾಟಿದ ಚಿರಯೌವನಿಗೆ ಜಯಪ್ರಕಾಶ್ ಮಾವಿನಕುಳಿ ಬಂದರು. ಇನ್ನು ಹರಟೆಗೆ ಎಣೆಯುಂಟೆ? ಪ್ರಿಪರೇಷನ್ನಿನ ಮಾತು ಕೈ ಬಿಟ್ಟು ಗೆಳೆಯರೊಂದಿಗೆ ಹರಟಿ ಮತ್ತೊಂದು ರೌಂಡ್ ಮೀನಿನ ಊಟ ಮಾಡಿದವನೇ-ತಾಚಿ!

ಸಂಜೆ ಐದಕ್ಕೆ ನನ್ನ ಭಾಷಣ. ಏನನ್ನಾದರೂ ಓದಿ ಸಿದ್ಧತೆ ಮಾಡಿಕೊಂಡಿದ್ದರೆ ತಾನೇ? ಬರೀ ನಲವತ್ತು ನಿಮಿಷ ಮಾತಾಡಿ. ಗಡಿ ದಾಟಿದರೆ ಕೆಂಪು ದೀಪ ಹೊತ್ತಿಕೊಳ್ಳುತ್ತದೆ. ಅಲ್ಲಿಗೆ ಮಾತು ಮುಗಿಸಲೇ ಬೇಕು ಅಂತೆಲ್ಲ ಗೆಳೆಯರು ಹೆದರಿಸಿದ್ದರು. ಆದರೆ ಭಾಷಣಕ್ಕೆ ನಿಂತವನಿಗೆ ಯಾವ ಗಡಿ, ಯಾವ ಕೆಂಪು ದೀಪ. ನನ್ನದೇ ಧಾಟಿಯಲ್ಲಿ ಪತ್ರಿಕೋದ್ಯಮದ ಬಗ್ಗೆ ಮಾತಾಡುತ್ತಾ ಹೋದೆ. ನನ್ನವೇ ಅನುಭವಗಳ ವಿವರವಿತ್ತು. ಕಾರ್ಗಿಲ್, ಅಫಘನಿಸ್ತಾನ, ಪಾಕಿಸ್ತಾನ್ ಮುಂತಾದ ದೇಶಗಳ ನನ್ನ ಸುತ್ತಾಟದ ಬಗ್ಗೆ ಹೇಳುತ್ತಾ ರಾಷ್ಟ್ರಗಳ, ಜಾತಿಗಳ, ಗುಂಪುಗಳ ಮಧ್ಯದ ಘರ್ಷಣೆಗಳನ್ನು ಒಬ್ಬ ಪತ್ರಕರ್ತ ನೋಡಬೇಕಾದ ರೀತಿ ವಿವರಿಸಿ ಕೊನೆಗೆ ದಕ್ಷಿಣ ಕನ್ನಡದ ವಿಷಯಕ್ಕೇ ಬಂದೆ. ಹದಿನಾಲ್ಕು ವರ್ಷಗಳ ಹಿಂದೆ ಪುತ್ತೂರಿನ ಬಳಿ ಸೌಮ್ಯ ಭಟ್ ಎಂಬ ಹುಡುಗಿಯ ಕೊಲೆಯಾದಾಗ ನಾನು ಬೆಂಗಳೂರಿನಿಂದ ಬಂದು ತನಿಖೆ ಮಾಡಿ ವಾಪಸು ಹೋಗಿ report ಪ್ರಕಟಿಸಿದ್ದೆ. ಇಡೀ ಜಿಲ್ಲೆಯ ಜನ ವರದಿಗಾಗಿ ಕಾಯುತ್ತಿದ್ದರು. ಈಗೇನಿದೆ? “ಸಂಜೆ ಇಂಥವರ ಕೊಲೆಯಾಗಲಿದೆ" ಎಂಬುದನ್ನು ಟೀವಿಗಳವರು ಬೆಳಗ್ಗೆಯೇ ಪ್ರಕಟಿಸುತ್ತಾರೆ. ಟಿವಿ ಬಂದ ಮೇಲೆ ಪತ್ರಿಕೋದ್ಯಮಕ್ಕೆ ಹೊಡೆತ ಬೀಳುವುದು ಖರೆ ಅಂತಾಗಿತ್ತು. ಅಮೆರಿಕದಲ್ಲಿ ಅದು ಆದದ್ದೂ ಹೌದು. ಆದರೆ ಕರ್ನಾಟಕದಲ್ಲಿ ಹಾಗಾಗಲಿಲ್ಲ. Thanks to Shobha Karandlaje. ಇಲ್ಲಿ ಕರೆಂಟೇ ಇರುವುದಿಲ್ಲ. ಜನ ಟೀವಿ ನೋಡುವುದಿಲ್ಲ. ಹೀಗಾಗಿ ಪತ್ರಿಕೋದ್ಯಮವು ಬರ್‌ಕರಾರ್ ಜಾರಿಯಲ್ಲಿದೆ ಅಂದೆ. ಜನ ಬಿದ್ದು ನಗುತ್ತಿದ್ದರು. ‘ಹೋ’ ಚಪ್ಪಾಳೆ. ನನಗಿರುವ ಪ್ಲಸ್ ಪಾಯಿಂಟೇ ಅದು. ನನಗೆ ಓದುಗರಿದ್ದಾರೆ. ಕೇಳುಗರಿದ್ದಾರೆ. ಟೀವಿಗಳಿಂದಾಗಿ ನೋಡುಗರಿದ್ದಾರೆ! ಮೂರೂ ಥರದ ಜನ ಸಭೆಗಳಲ್ಲಿ ಸಿಗುತ್ತಾರೆ. ಮಾತು ಕೇಳಿ ಸಂಭ್ರಮಿಸುತ್ತಾರೆ. ಫೊಟೋ ತೆಗೆಸಿಕೊಳ್ಳುತ್ತಾರೆ. ಆದರೆ ಹತ್ತರಲ್ಲಿ ಒಂಬತ್ತು ಜನ ಅದೇ ಪ್ರಶ್ನೆ ಕೇಳುತ್ತಾರೆ. ನಾನು ಉತ್ತರಿಸಲಾಗದೆ ತಲೆ ತಗ್ಗಿಸುತ್ತೇನೆ. “ಅಷ್ಟು ಚೆಂದದ ಪತ್ರಿಕೆ ಓ ಮನಸೇ... ಯಾಕೆ ನಿಲ್ಲಿಸಿದಿರಿ?"

ನನ್ನಲ್ಲಿ ಉತ್ತರವಿಲ್ಲ.

ಸಭೆಯಲ್ಲಿ ಮಾತು ಮುಗಿಸಿ ವೇದಿಕೆಯಿಂದ ಹೊರ ಬೀಳುವುದೇ ದುಸ್ತರವಾಗಿತ್ತು. ಆ ಪರಿ ಜನ ಮುಕುರಿಕೊಳ್ಳುತ್ತಿದ್ದರು. ಮೋಹನ ಆಳ್ವರಿಗೆ, ಕಲಬುರ್ಗಿಯವರಿಗೆ ನಮಸ್ಕಾರ ಹೇಳಿ ಸ್ಟೇಜಿನ ಹಿತ್ತಲಿನಿಂದ ಪರಾರಿಯಾಗಿ ಬಂದು ಬಿಟ್ಟೆ. ವೈದೇಹಿಯವರ ಮನೆಗೆ ನಾಳೆ ಹೋಗೋದು ಅಂತ ತೀರ್ಮಾನವಾಗಿತ್ತು. ರಾತ್ರಿ ಹನುಮಂತಯ್ಯ, ಪ್ರಾಚೀನ ಮಿತ್ರ ಲಕ್ಷ್ಮೀಪತಿ ಕೋಲಾರ, ನಾ.ದಾಮೋದರ ಶೆಟ್ಟಿ, ಜಯಪ್ರಕಾಶ್ ಮಾವಿನಕುಳಿ ಎಲ್ಲ ಸೇರಿದೆವು. ಈ ಪುಣ್ಯಾತ್ಮ ನನ್ನ ಬಳ್ಳಾರಿಯ ಗೆಳೆಯ ಸುರೇಶ್ ಶೆಟ್ಟಿ ಒಂದು ಸ್ಟೀಲಿನ water drum ತುಂಬ ಅದ್ಭುತವಾದ ಕಾಡುಹಂದಿಯ ಮಾಂಸ ಮಾಡಿಸಿಕೊಂಡು ಬಂದಿದ್ದ. ಅವನ ಗೆಳೆಯರೊಂದಷ್ಟು ಜನ. ಅದ್ಭುತವಾದ ಊಟ-ಪಾರ್ಟಿ. ಆದರೆ ಇನ್ನೇನು ಮಲಗೋಣ, ಬೆಳಗ್ಗೆ ವೈದೇಹಿಯವರ ಮನೆಗೆ ಹೋಗಲಿಕ್ಕಿದೆಯಲ್ಲ ಅಂದುಕೊಳ್ಳುವಷ್ಟರಲ್ಲೇ ಬೆಂಗಳೂರಿನಿಂದ ಫೋನು. ‘ಅರ್ಜೆಂಟಾಗಿ ಬಾ’. ಬೇರೆ ಹಾದಿಯೇ ಇರಲಿಲ್ಲ. ರಾತ್ರಿಯೇ ಹೊರಟು ಬಿಟ್ಟೆ. ವೈದೇಹಿಯವರಿಗೆ ಒಂದು ಮಾತು ಹೇಳಿ ಬರಲಿಕ್ಕೂ ಆಗಲಿಲ್ಲ. ಅವರು ಮರುದಿನ ತಿಂಡಿ ಮಾಡಿಟ್ಟುಕೊಂಡು ಕಾಯುತ್ತಿದ್ದರಂತೆ. ತುಂಬ ಹಳಹಳಿಯಾಯಿತು. ಆಕೆ ಹಿರಿಯ ಲೇಖಕಿ. ಈ ಬಾರಿ ಘಟ್ಟಿವಿಳಿದು ಮೊದಲು ಅವರ ಮನೆಗೇ ಹೋಗಬೇಕು ಎಂದು ತೀರ್ಮಾನಿಸಿದ್ದೇನೆ.

ಮೂಡಬಿದ್ರೆ ನನಗೆ ಹೊಸದಲ್ಲ. ಈ ಹಿಂದೆ ಗೆಳೆಯ ಜಯಪ್ರಕಾಶ್ ಮಾವಿನಕುಳಿ ನನ್ನ ಕಾದಂಬರಿಗೆ ‘ಡಾ.ಶಿವರಾಮ ಕಾರಂತ ಪ್ರಶಸ್ತಿ’ ಕೊಟ್ಟು ಸನ್ಮಾನಿಸಿದ್ದರು. ಅಲ್ಲಿನ ಶಾಸಕರಾಗಿದ್ದ ಅಮರನಾಥ ಶೆಟ್ಟರು ಅತ್ಯಂತ ಸೌಜನ್ಯದ, ಸಭ್ಯ ರಾಜಕಾರಣಿ. ಅವರ ಮನೆಯಲ್ಲ್ಲಿ ಔತಣ ನೀಡಿದ್ದರು. ಅವರಿಗೀಗ ಡಯಾಬಿಟಿಸ್ ತೊಂದರೆ ಕೊಡುತ್ತಿದೆ. ನುಡಿಸಿರಿ ಸಭೆಗೆ ಬರಬೇಕಾಗಿದ್ದ ದಿನ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮಲಗಿದ್ದರು. ಅದೇ ಮೂಡಬಿದ್ರೆಯಲ್ಲಿ ನನ್ನ ಸಹಪಾಠಿ, ವೀರೇಂದ್ರ ಹೆಗ್ಗಡೆಯವರ ಪತ್ನಿಯ ತಮ್ಮ ಯಶೋವರ್ಮ ಇದ್ದಾನೆ. ಹಿಂದೊಮ್ಮೆ ಅವನ ಕಾಲೇಜಿನಲ್ಲಿ ಭಾಷಣ ಮಾಡಿದ್ದೆ. ಅಲ್ಲದೆ ಮೂಡಬಿದ್ರೆ ತುಂಬ ಶುದ್ಧವಾದ ಊರು. ಅಲ್ಲಿನ ಬಸದಿಯ ತಂಪು ಚೆಂದ. ಕವಿ ರತ್ನಾಕರವರ್ಣಿಯ ಮನೆಯಿದೆ. ಏನೇ ಜೈನರ ಬೀಡು ಅಂದರೂ ಮೀನು ಸಾರಿನ ಊಟಕ್ಕೆ ಬರವಿಲ್ಲ. ‘ಇಲ್ಲಿ ನಮ್ಮದೇ ಗೆಸ್ಟ್ ಹೌಸ್ ಇದೆ. ಬಂದು ಉಳಿಯಿರಿ’ ಅಂದಿದ್ದರು ಮೋಹನ ಆಳ್ವರು. ಮತ್ತೆ ಹೋಗದೆ ಇರುತ್ತೇನೆಯೇ?

ಒಂದು ಖುಷಿಯೆಂದರೆ ಈ ಸಂಚಿಕೆ ಮುಗಿದ ಮೇಲೆ at a stretch ನಾಲ್ಕು ದಿನ ಬಿಡುವು ಸಿಗಲಿದೆ. ಪಟ್ಟಾಗಿ ಕುಳಿತು ಒಂದಷ್ಟು ಬರೆಯಬೇಕು. ಜೊಯಿಡಾದ ಕಾಡಿನ ಮರಗಳ ಪೊಟರೆಗಳಲ್ಲಿ ಅದ್ಭುತವಾದ ಚಳಿ ಬಿಟ್ಟಿದೆಯಂತೆ. ಒಂದಷ್ಟು ಪುಸ್ತಕ, ಹಾಳೆ, ಪೆನ್ನು, ಬೆಚ್ಚಗಿರಲು ಜೆರ್ಕಿನ್ನು, ಕೊಂಡಿರುವ ಹೊಸ ಕೆಮೆರಾ ತೆಗೆದುಕೊಂಡು ಹೊರಟು ಬಿಡಲು ನಿರ್ಧರಿಸಿದ್ದೇನೆ. ಹಾಗೆಲ್ಲ ಕಾಡು ತಿರುಗಿ ಯಾವ ಕಾಲವಾಯಿತೋ ಅನ್ನಿಸಿಬಿಟ್ಟಿದೆ. ಕಾಳಿ ನದಿಯ ನೀರ ತಂಪು, ಡಿಗ್ಗಿ ಕಾಡಿನ ಮೋಹಕ ಚಳಿ, ರಾತ್ರಿಯ ನಿಚ್ಚಳ ಕತ್ತಲು, ನನಗೆ ನಾನೇ ಮಾತಾಡಿಕೊಳ್ಳಲಿಕ್ಕೆ ಸಿಗುವಂಥ ಆಪ್ಯಾಯ ಮೌನ, ಎಲ್ಲೋ ಕಂಡು ಕಣ್ಮರೆಯಾಗುವ ಕಾಡೆಮ್ಮೆ, ಬೆಚ್ಚಿ ನಿಂತು ನೋಡುವ ಕರಿ ಮುಸುಡಿಯ ಮಂಗ, ಎದುರಿನ ಕೆರೆಯಲ್ಲಿ ಯಾರ ಭಯವೂ ಇಲ್ಲದೆ ಸ್ನಾನ ಮಾಡುತ್ತ ನಿಂತಿರುವ ಆನೆ, ರಾತ್ರಿಯ ಕಾವಳದಲ್ಲಿ ಫಳ್ಳನೆ ಹೊಳೆದು ಮರೆಯಾಗುವ ಚಿರತೆಯ ಕಣ್ಣು, ಮೊನ್ನೆ ಇಲ್ಲೇ ಬಂದಿತ್ತಂತೆ ಅಂತ ಸುದ್ದಿ ಕೊಡುವ ಹುಲಿ... ಬಿಡಿ, ನನ್ನ ಜೊಯಿಡಾ ಬೇರೆಯದೇ ಲೋಕ.

ಜರ್ಮನಿಗೆ ಹೋದಾಗ ದತ್ತ ಕಿಚಾಯಿಸಿದ್ದರು. ಇದೆಂಥ ಡಬ್ಬಾ ಕೆವೆರಾ ತಂದಿದ್ದೀರಿ ಅಂತ. ಜಿದ್ದಿಗೆ ಬಿದ್ದು ಈಗೊಂದು high end modelನ ಕೆಮೆರಾ ಖರೀದಿಸಿದ್ದೇನೆ. ಅದಕ್ಕೊಂದು ಫ್ಲಾಷ್ ಕೊಂಡುಬಿಟ್ಟರೆ ಅನಾಮತ್ತು ನಾಲ್ಕು ಲಕ್ಷ! ಫೊಟೋ ತೆಗೆಯಲಿಕ್ಕಾದರೂ ಊರು ಬಿಟ್ಟು ಕಾಡಿಗೆ ಹೋಗಬೇಕಿದೆ. ಜೊತೆಗೆ ಅವಳ ಪುಸ್ತಕ ಒಯ್ಯುತ್ತಿದ್ದೇನೆ : ಓರಿಯಾನಾ ಫೆಲಾಸಿಯ ಪುಸ್ತಕ. ಜೊತೆಗಿನ ಹುಡುಗರು ಬೇಕಾದರೆ ದಾಂಡೇಲಿಯಲ್ಲಿ ಅಥವಾ ನರಸಿಂಹನ ‘ಕಾಡು ಮನೆ’ಯಲ್ಲಿ ಇರಲಿ. ನಾನು ನನ್ನ ಪಾಡಿಗೆ ಕಾಡಿನಲ್ಲಿ ಓಡಾಡಿಕೊಂಡಿರುತ್ತೇನೆ.

ಮೊನ್ನೆ ಘೋರ್ಪಡೆಯವರು ತೀರಿಕೊಂಡ ಸುದ್ದಿ ಕೇಳಿದಾಗ ಸಂಡೂರಿನ ಕಾಡುಗಳೆಲ್ಲ ನೆನಪಾದವು. ಅವರು ಫೊಟೋಗ್ರಫಿ ಹುಚ್ಚಿನವರು. ಸಂಗೀತ ಕೇಳಿದರೆ ತುಂಬ ತನ್ಮಯರಾಗುತ್ತಿದ್ದರು. ಜನರೊಂದಿಗೆ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಒಂದು ಸಭೆಯಲ್ಲಿ ನನ್ನ ಭಾಷಣ ಕೇಳಿ ಆ ಮಹಾರಾಜಿಕೆಯ ಗತ್ತು ಬಿಟ್ಟು ಎದ್ದು ಬಂದು ತಬ್ಬಿಕೊಂಡು ಅಭಿನಂದಿಸಿದ್ದರು. ಅವರಿಗೆ ತಮ್ಮದೊಂದು ಪುಸ್ತಕವನ್ನು ನನ್ನಿಂದ ಕನ್ನಡಕ್ಕೆ ಅನುವಾದ ಮಾಡಿಸಬೇಕೆಂಬ ಅಭಿಪ್ರಾಯವಿತ್ತು. ಒಮ್ಮೆ ಸಂಡೂರಿನ ಅರಮನೆಗೂ ಸ್ವಾಗತಿಸಿದ್ದರು. ಆದರೆ ಅಷ್ಟರಲ್ಲಿ ನಾನು busy ಆದೆ. ನಂತರ ಘೋರ್ಪಡೆ ಖಾಯಿಲೆ ಬಿದ್ದರು. ಚೇತರಿಸಿಕೊಳ್ಳಲಾಗದ ಅಲ್‌ಝೈಮರ‍್ಸ್ ಖಾಯಿಲೆ. ತಮ್ಮನ್ನು ತಾವೇ ಮರೆತು ಬಿಡುವಂತೆ ಮಾಡುವ ನಿರ್ದಯಿ ಖಾಯಿಲೆ. ರಾಜಕಾರಣದಲ್ಲಿ ಘೋರ್ಪಡೆ ಕೆಟ್ಟ ಹೆಸರು ಪಡೆಯಲಿಲ್ಲ. ಆದರೆ ಕೋಟಿಗಟ್ಟಲೆ ಹಣವನ್ನು ಬ್ಯಾಂಕುಗಳಿಗೆ ಮತ್ತು ಸರ್ಕಾರಕ್ಕೆ ಹಿಂತಿರುಗಿಸದೆ ಮುಳುಗಿಸಿದರು.

ಅಷ್ಟು ವರ್ಷ ರಾಜಕಾರಣದಲ್ಲಿದ್ದರೂ ಅವರು ಗಣಿಗಾರಿಕೆಯ ಕೊಳೆಯನ್ನು ಮೈಗಂಟಿಸಿಕೊಳ್ಳಲಿಲ್ಲ ಎಂದು ಕೆಲವರು ಭಾವಿಸಿದ್ದಾರೆ. ಆದರೆ ಘೋರ್ಪಡೆ ಪಾಲಿಗೆ ಬಂದದ್ದು ಬರೀ ಮ್ಯಾಂಗನೀಸ್ ಬೆಟ್ಟಗಳು. ರೇಟು ಬಂದದ್ದು ಕಬ್ಬಿಣದ ಅದಿರಿಗೆ. ಅವರು ಮ್ಯಾಂಗನೀಸ್ ಅಗೆದು, ಶುದ್ಧೀಕರಿಸಿ ಮಾರ್ಕೆಟ್ಟಿಗೆ ಬಿಡುವಷ್ಟರಲ್ಲಿ ಅದರ ವೆಚ್ಚ ಘೋರ್ಪಡೆಯವರನ್ನು ಹೈರಾಣ ಮಾಡಿ ಬಿಡುತ್ತಿತ್ತು. ಅವರ ವಂಶಜರಿಂದಲೇ ‘ಭಕ್ಷೀಸಾ’ಗಿ ಬೆಟ್ಟಗಳನ್ನು ಪಡೆದ ಅನಿಲ್ ಲಾಡ್ ಸಂತತಿಗೆ ಸಿಕ್ಕದ್ದು ಬಂಗಾರದಂಥ ಕಬ್ಬಿಣ. ಅವರು ಹೆಲಿಕಾಪ್ಟರು ಹತ್ತಿದರು. ಘೋರ್ಪಡೆ ನೆಲ ಹಿಡಿದು ಮಲಗಿದರು. ಬದುಕಿನ ವಿಪರ್ಯಾಸಗಳೇ ಹೀಗಲ್ಲವೆ?

-ನಿಮ್ಮವನು
ಆರ್.ಬಿ.

Read Archieves of 17 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books