Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಜೀವನದಲ್ಲಿ ಮೊದಲ ಬಾರಿಗೆ ಕೊಂಕು ನುಡಿದಿದ್ದಳು ಇಂದಿರಾ!

ಮೊದಲು ಎಂ.ಓ.ಮಥಾಯ್ ಬರೆದ `She` ಎಂಬ ಛಾಪ್ಟರಿನ ಅನುವಾದ ಪ್ರಕಟಿಸಿ. ಅದು ಬಹಳ ರಸವತ್ತಾಗಿದೆ ಎಂದು ಅನೇಕರು ಪತ್ರ ಬರೆದಿದ್ದಾರೆ. ನಿಜ, She ಎಂಬ ಅಧ್ಯಾಯವನ್ನು ಸಾದ್ಯಂತವಾಗಿ ಬರೆದ ಮಥಾಯ್ ಪುಸ್ತಕ ಅಚ್ಚಿಗೆ ಹೋಗುವ ಮುನ್ನ ಅದೇಕೋ ಮನಸು ಬದಲಿಸಿ ಆ ಅಧ್ಯಾಯವನ್ನು ತೆಗೆಸಿ ಹಾಕಿ ಬಿಟ್ಟಿದ್ದರು. ಆದರೂ ಅದು ಹೇಗೋ ಪ್ರೆಸ್ಸಿನಿಂದ ಹೊರ ನುಸುಳಿ ತುಂಬ ಕಡೆ ಸರ್ಕ್ಯುಲೇಟ್ ಆಯಿತು. ಅದರ ಪ್ರತಿ ನನ್ನ ಬಳಿಯೂ ಇದೆ. ಅದು ನೆಹರೂಗೆ ಸಂಬಂಸಿದ್ದಲ್ಲ. ಬದಲಿಗೆ ಇಂದಿರಾಗಾಂಗೆ ಸಂಬಂಸಿದ್ದು.

ಅವು ಇಂದಿರಾಗಾಂಯ ಕಾಮಕಾಂಡದ ಅಧ್ಯಾಯ. ಸ್ವತಃ ತಾನು ಇಂದಿರಾಗಾಂಯೊಂದಿಗೆ ಲೈಂಗಿಕ ಸಂಬಂಧವಿರಿಸಿಕೊಂಡಿದ್ದೆ ಎಂಬುದಾಗಿ ಬರೆಯುತ್ತಾರೆ ಎಂ.ಓ.ಮಥಾಯ್. ಅಧ್ಯಾಯವೇನೋ ರೋಚಕವಾಗಿದೆ, ಇಂಟರೆಸ್ಟಿಂಗ್ ಆಗಿದೆ. ಆದರೆ ನಾನು ಮೊದಲ ಅಧ್ಯಾಯದಿಂದ ಮಥಾಯ್ ಪುಸ್ತಕವನ್ನು ತರ್ಜುಮೆ ಮಾಡುತ್ತಿದ್ದೇನೆ. ಹೀಗಾಗಿ `She' ಅಧ್ಯಾಯದ ಸರದಿ ಬರಲಿ ಎಂದಷ್ಟೆ ವಿನಂತಿ.

ಮೊದಲೇ ಹೇಳಿದಂತೆ ಮಥಾಯ್ ನೆಹರೂ ಕುರಿತಾದ ಎರಡೂ ಪುಸ್ತಕಗಳನ್ನು ತೀರ ಅಂಥ ನಂಜಿಟ್ಟುಕೊಂಡು ಬರೆದಿಲ್ಲ. ಅಂತೆಯೇ ನೆಹರೂ ಬಗ್ಗೆ ವಿಪರೀತ ಆರಾಧನಾಭಾವವನ್ನೂ ಇಟ್ಟುಕೊಂಡಿಲ್ಲ. ಕೆಲವು ಕಡೆ ತನ್ನ ಪ್ರಾಮಾಣಿಕತೆಯ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ವಿವರವಾಗಿ ಬರೆಯುತ್ತಾರೆ. ಅದಕ್ಕೆ ಅವತ್ತಿನ ಸನ್ನಿವೇಶವೂ ಕಾರಣವಾಗಿದ್ದಿರಬೇಕು. ಆದರೆ ಒಂದು ಮಾತ್ರ ನಿಜ : ದೇಶದ ಪ್ರಧಾನಿಯಾಗಿದ್ದಾತನಿಗೆ ಪರ್ಸನಲ್ ಸೆಕ್ರೆಟರಿ ಆಗಿ ಎಂಥ ಮನುಷ್ಯನಿರಬೇಕು. ಒಬ್ಬ ಮಾಸ್ಟರ್ ಮತ್ತು ಸರ್ವೆಂಟ್ ಸಂಬಂಧ ಹೇಗಿರಬೇಕು ಎಂಬುದಕ್ಕೆ ಮಥಾಯ್ ಮತ್ತು ನೆಹರೂ ಇಬ್ಬರೂ ಉದಾಹರಣೆಯಾಗುತ್ತಾರೆ.

ಆ ದಿನಗಳಿನ್ನೂ ಭಾರತ-ಪಾಕಿಸ್ತಾನದ ಮಟ್ಟಿಗೆ ಕರಾಳ ದಿನಗಳೇ ಆಗಿದ್ದವು. ಎರಡೂ ಕಡೆ ಹಿಂಸಾಚಾರ ತೆರವಿಲ್ಲದೆ ನಡೆಯುತ್ತಿತ್ತು. ಆಗ ನೆಹರೂ ನಿವಾಸ ೧೭ ಯಾರ್ಕ್ ರೋಡ್‌ನಲ್ಲಿತ್ತು. ನಾನು ಗಮನಿಸುತ್ತಲೇ ಇದ್ದೆ. ಒಂದು ವಾರದಿಂದ ಪ್ರತಿನಿತ್ಯ ಒಬ್ಬ ದಪ್ಪನೆಯ ಹುಡುಗಿ ಬೆಳಗಾಗುತ್ತಲೂ ಬಂದು ಮನೆಯತ್ತ ನೋಡುತ್ತ ನಿಂತಿರುತ್ತಿದ್ದಳು. ಏನನ್ನೂ ಕೇಳುತ್ತಿರಲಿಲ್ಲ. ಮಾತೂ ಆಡುತ್ತಿರಲಿಲ್ಲ. ಮುಖ ಮಾತ್ರ ಮ್ಲಾನ ಮ್ಲಾನ. ಉಳಿದವರಂತೆ ಆ ಹುಡುಗಿ ನೆಹರೂ ಅವರನ್ನು ಕಾಣುವ, ನೋವು ಹೇಳಿಕೊಳ್ಳುವ ಪ್ರಯತ್ನ ಏನನ್ನೂ ಮಾಡುತ್ತಿರಲಿಲ್ಲ. ಅದೊಂದು ಬೆಳಗ್ಗೆ ನೆಹರೂ ಹೊರಕ್ಕೆ ಹೋದ ಮೇಲೆ ಆಕೆಯನ್ನು ಕರೆದು ಮಾತನಾಡಿಸಿದೆ. ಆಕೆ ಪಶ್ಚಿಮ ಪಂಜಾಬದ ಮಿಂಯಾವಾಲಿ ನಗರದವಳು. ಬಿ.ಎ ಜೊತೆಗೆ ಬಿ.ಟಿ., ಡಿಗ್ರಿಯೂ ಇತ್ತು. ಆಕೆಯ ತಂದೆ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷನಾಗಿದ್ದ. ದೇಶ ಇಬ್ಭಾಗವಾದಾಗ ಮೊದಲು ತನ್ನ ಕುಟುಂಬದವರನ್ನು ವಿಶೇಷವಾದ ರೈಲು ಹತ್ತಿಸಿ ಕಳಿಸಿ ಬಿಟ್ಟ. ತನ್ನ ಪ್ರದೇಶದಿಂದ ಭಾರತಕ್ಕೆ ಹೋಗ ಬಯಸುವ ಕಟ್ಟ ಕಡೆಯ ಹಿಂದೂ ನಿರಾಶ್ರಿತ ಹೊರ ಬೀಳುವ ತನಕ ತಾನು ಹೊರಡುವುದಿಲ್ಲವೆಂದು ಆಣೆ ಮಾಡಿದ್ದ ಆತ. ಅಂತೆಯೇ ವಲಸಿಗ ಹಿಂದೂಗಳೆಲ್ಲ ಹೊರಬಿದ್ದ ಮೇಲೆ ತಾನು ರೈಲು ಹತ್ತಿದ. ದುರಂತವೆಂದರೆ ಲಾಹೋರ್ ರೈಲ್ವೆ ನಿಲ್ದಾಣದಲ್ಲಿ ಆತನನ್ನು ಪಾಕಿಸ್ತಾನಿ ಪುಂಡರು ಬೋಗಿಯಿಂದ ಎಳೆದು ಭಯಂಕರವಾಗಿ ಕತ್ತರಿಸಿ ಹಾಕಿದ್ದರು. ಅದನ್ನು ಹೇಳುವ ಹೊತ್ತಿಗೆ ಹುಡುಗಿ ಕಣ್ಣೀರ ಮಡುವಾಗಿದ್ದಳು.

ನಾನು ತಕ್ಷಣ ಅವಳನ್ನು ಜೀಪಿನಲ್ಲಿ ಕರೆದೊಯ್ದು ಕನಾಟ್ ಸರ್ಕಸ್ ಬಳಿ ಮರವೊಂದರ ಅಡಿಯಲ್ಲಿ ಕುಳಿತಿದ್ದ ಅವಳ ತಾಯಿಯ ಬಳಿ ಬಿಟ್ಟು ಮರುದಿನ ಯಾರ್ಕ್ ರೋಡ್‌ನ ಬಂಗಲೆಗೆ ಬಂದು ನನ್ನನ್ನು ಕಾಣುವಂತೆ ಹೇಳಿದೆ. ಅಂದು ಸಂಜೆ ನೆಹರೂ ಅವರಿಗೆ ಆ ಹುಡುಗಿಯ ಪಾಡು ವಿವರಿಸಿದಾಗ, `ಅವಳ ತಂದೆ ನನಗೆ ಗೊತ್ತು : ಸಾತ್ವಿಕ ಕಾಂಗ್ರೆಸ್ಸಿಗ" ಅಂದಿದ್ದರು ನೆಹರೂ. ಆಕೆಯನ್ನು ಸೆಕ್ರೆಟೇರಿಯಟ್ ನೌಕರಳನ್ನಾಗಿ ತೆಗೆದುಕೊಂಡು ಗೃಹ ಕಚೇರಿಯಲ್ಲೇ ಇರುವಂತೆ ಮಾಡೋಣ. ತನ್ನಂತೆಯೇ ನಿರಾಶ್ರಿತರಾಗಿ ಬಂದವರನ್ನು ವಿಚಾರಿಸುವ ರಿಸೆಪ್ಷನಿಸ್ಟ್ ಆಗಿರಲಿ ಎಂದೆ. ತಕ್ಷಣ ನೆಹರೂ ಒಪ್ಪಿಕೊಂಡರು. ಅಂಥದೊಂದು ಹುದ್ದೆ ಸರ್ಕಾರದಲ್ಲಿರಲಿಲ್ಲ. ಆದರೂ ಕೊಂಚ ಒದ್ದಾಡಿ ಆ ಹುಡುಗಿಯ ನೇಮಕ ಮಾಡಿಸಿದೆ. ಟೀಚರಿಕೆ ಮಾಡಿದರೆ ಸಿಗುವುದಕ್ಕಿಂತ ಹೆಚ್ಚಿನ ಸಂಬಳ ಸಿಗುತ್ತದೆ ಅಂದಾಗ ಆಕೆ ಸಂತೋಷದಿಂದ ಒಪ್ಪಿಕೊಂಡಳು. ಅವತ್ತಿನಿಂದ ನೆಹರೂ ನಿವಾಸದ ರಿಸೆಪ್ಷನಿಸ್ಟ್‌ಳಾದ ಆ ಹೆಣ್ಣು ಮಗಳು ಇವತ್ತು ಇಡೀ ದೆಹಲಿಗೆ ಪರಿಚಿತೆ : ಆಕೆಯ ಹೆಸರು ಮಿಸ್. ವಿಮಲಾ ಸಿಂ.

ಹೆಚ್ಚು ಕಡಿಮೆ ಅವೇ ದಿನಗಳಲ್ಲಿ ನನಗೆ ಸಿಕ್ಕವನು ಮೋಹನ್. ಅವನಿಗೆ ತಂದೆಯಿರಲಿಲ್ಲ. ಭಾರತಕ್ಕೆ ವಲಸೆ ಬರುವಾಗ ತಾಯಿಯಿಂದ ಬೇರ್ಪಟ್ಟಿದ್ದ. ಕೆಲವು ದಿನ ಅವನನ್ನು ನನ್ನ ಕೋಣೆಯಲ್ಲಿಟ್ಟುಕೊಂಡೆ. ಅವನಿಗೆ ಇಂಗ್ಲಿಷು ಬರದು. ನನಗೆ ಹಿಂದಿ ಬರದು. ಕಡೆಗೆ ಯಾರ್ಕ್ ರೋಡ್‌ನ ಶ್ರೀಮಂತರೊಬ್ಬರು ಅವನನ್ನು ದತ್ತು ತೆಗೆದುಕೊಂಡರು. ಅವನನ್ನು ಪಿಲಾನಿ ರೆಸಿಡೆನ್ಷಿಯಲ್ ಸ್ಕೂಲಿಗೆ ಕಳಿಸಿದರು. ಈ ಮಧ್ಯೆ ಅವನ ತಾಯಿಯೂ ಪತ್ತೆಯಾದಳು. ಹುಡುಗ ಅಂಥ ಬುದ್ಧಿವಂತನಲ್ಲ. ಮೆಟ್ರಿಕ್ಯುಲೇಷನ್ ಪಾಸ್ ಮಾಡಿಕೊಂಡ. ಒಂದು ಜಾಗ ಖಾಲಿಯಿದ್ದುದರಿಂದ ಪ್ರಧಾನ ಮಂತ್ರಿಗಳ ಸೆಕ್ರೆಟೇರಿಯಟ್‌ನಲ್ಲಿದ್ದಾನೆ. ಇದಿರಿಗೆ ಸಿಕ್ಕಾಗಲೆಲ್ಲ `ಅಪ್ಪಾ" ಅನ್ನುತ್ತಾನೆ. ಸಂಕೋಚವಾಗುತ್ತದೆ. ಮುಂದೆ ನಿರಾಶ್ರಿತರ ಕಾಲನಿಯಲ್ಲಿ ಅವನಿಗೆ ನೆಹರೂ ಸೈಟು ಕೊಟ್ಟರು, ಮನೆ ಕಟ್ಟಿಕೊಂಡ. ತನ್ನ ತಾಯಿಯನ್ನು ಮೋಹನ್ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ : ಅಷ್ಟು ಸಾಕು.

ಆಗಸ್ಟ್ 1947 ಬಂತಲ್ಲ? ಭಾರತ ಸ್ವತಂತ್ರವಾಯಿತು. ನೀನಿನ್ನು ಸೆಕ್ರೆಟೇರಿಯಟ್‌ನಲ್ಲಿ ಕೆಲಸ ಮಾಡಬೇಕು ಅಂದರು ನೆಹರು. ನನಗೆ ಕಚೇರಿಗಳು, ಫೈಲುಗಳು ಅಂದರೇನೇ ಆಗದು. ಇಷ್ಟಕ್ಕೂ ಅಲ್ಲಿ ಏನು ಕೆಲಸ ಮಾಡೋದು ಅಂದೆ. `ನೋಡು, 15ನೇ ತಾರೀಕಿನಿಂದ ಸರ್ಕಾರ ನಮ್ಮದು. ಹೆಚ್ಚಿನ ಕೆಲಸ ಸೆಕ್ರೆಟೇರಿಯಟ್‌ನಲ್ಲೇ ಆಗುತ್ತದೆ. ನೀನು ಮನೆಯಲ್ಲೇ ಉಳಿದರೆ ಅನೇಕ ವಿಷಯಗಳು ನಿನಗೆ ಗೊತ್ತಾಗುವುದೇ ಇಲ್ಲ. ಅಲ್ಲದೇ ಸದಾ ಸರ್ಕಾರಿ ಅಕಾರಿಗಳಿಂದ ಸುತ್ತುವರಿಯಲ್ಪಟ್ಟಿರುವುದು ನನಗೂ ಸಹಿಸಲಾಗದ ವಿಷಯ. ಕಚೇರಿಗೆ ಬಂದು ಕೂಡು. ಕೆಲಸ ತಾನಾಗೇ ತೋಚುತ್ತದೆ" ಅಂದರು ನೆಹರೂ. ಅರೆಮನಸ್ಸಿನಿಂದಲೇ ನಾನು ಒಪ್ಪಿಕೊಂಡೆ. ಅವತ್ತಿನ ವಿದೇಶಾಂಗ ಖಾತೆಯ ಸೆಕ್ರೆಟರಿ ಜನರಲ್ ಗಿರಿಜಾ ಶಂಕರ ಬಾಜಪೇಯಿ ಅವರು ಬಂದು ನನ್ನನ್ನು ಪ್ರಧಾನಿಯ ಪರ್ಸನಲ್ ಪ್ರೈವೇಟ್ ಸೆಕ್ರೆಟರಿಯನ್ನಾಗಿ ನೇಮಿಸುವ ಪ್ರಸ್ತಾಪ ಮಾಡಿದರು. ಅದರರ್ಥ ನೆಹರೂ ಟೇಬಲ್ಲಿಗೆ ಹೋಗುವ ಪ್ರತೀ ಪತ್ರ ನನ್ನ ಮೂಲಕವೇ ಹೋಗುತ್ತದೆ. ಉಳಿದಂತೆ ನೆಹರೂ ಹೇಳಿದ ಯಾವುದೇ ಕೆಲಸ ಮಾಡಲು ನಾನು ಸ್ವತಂತ್ರ ಇರುತ್ತೇನೆ.

`ಆಯ್ತು, ಆದರೆ ನನಗೆ ಇಂಥ ಹುದ್ದೆ ಅಂತ ನೀಡಬೇಡ. ನನ್ನ ಕೆಲಸ ನಾನು ಹುಡುಕಿಕೊಳ್ಳುತ್ತೇನೆ. ನೆಹರೂ ಅಕಾರದಲ್ಲಿರುವವರೆಗೆ ಮಾತ್ರ ಸೆಕ್ರೆಟೇರಿಯಟ್‌ನಲ್ಲಿರುತ್ತೇನೆ. ಸಂಬಳ ನೀಡದೆ ಕೆಲಸ ತೆಗೆಸುವುದು ಸರ್ಕಾರಿ ಸಂಪ್ರದಾಯವಲ್ಲ ಅಂತೀರಿ. ಹೀಗಾಗಿ ನಾನು ಐದುನೂರು ರುಪಾಯಿಗಳ ಸಂಭಾವನೆ ಪಡೆಯುತ್ತೇನೆ" ಅಂದಾಗ ಬಾಜಪೇಯಿ ಆಶ್ಚರ್ಯದಿಂದ ನೋಡಿದರು. ಕೊನೆಗೆ ಅವರು ನನಗೆ 750 ರುಪಾಯಿ ಸಂಭಾವನೆ ನಿಗದಿ ಮಾಡಿದರು. ಅಸಿಸ್ಟೆಂಟ್ ಪ್ರೈವೇಟ್ ಸೆಕ್ರೆಟರಿ ಎಂಬ ಹುದ್ದೆಗೆ ನೇಮಕವಾದಾತ ನನಗಿಂತ ದುಪ್ಪಟ್ಟು ಸಂಬಳ ಪಡೆಯುತ್ತಿದ್ದ. ಆದರೆ ಉಳಿದವರಂತೆ ನಾನು ಮೆಡಿಕಲ್ ಫಿಟ್‌ನೆಸ್ ಪತ್ರ ತರಬೇಕಾಗಲಿಲ್ಲ. ನನಗೆ ರಹಸ್ಯ ಕಾಯ್ದುಕೊಳ್ಳುವ ಬಗ್ಗೆ ಪ್ರಮಾಣವನ್ನೂ ಮಾಡಬೇಕಾಗಲಿಲ್ಲ. ಮುಂದೆ ಹಣಕಾಸು ಮಂತ್ರಿಗಳು ಹೆಚ್ಚಿನ ಖರ್ಚು ನಿಲ್ಲಿಸುವಂತೆ ಆದೇಶ ಜಾರಿ ಮಾಡಿದಾಗ ಒಂದು ವರ್ಷವಿಡೀ ನಾನು ಸಂಬಳವನ್ನೇ ಪಡೆಯಲಿಲ್ಲ. ಆದರೆ ಒಮ್ಮೆ ರೈಲು ಪ್ರಯಾಣದ ವೆಚ್ಚಕ್ಕೆ ಸಂಬಂಸಿದಂತೆ ಗುಮಾಸ್ತೆಯೊಬ್ಬ ಆಕ್ಷೇಪಿಸಿದಾಗ ನನಗೆ ರೇಗಿ ಹೋಯಿತು. ನಿಮ್ಮ ಮಟ್ಟದ ನೌಕರರಿಗೆ ಫಸ್ಟ್ ಕ್ಲಾಸ್ ಪ್ರಯಾಣದ ಸೌಲಭ್ಯ ಸಿಗುವುದಿಲ್ಲ ಅಂತ ಅವನಂದಾಗ ಸರಿ, ನನಗೆ ಥರ್ಡ್ ಕ್ಲಾಸ್ ಸೌಲಭ್ಯ ಕೊಡು ಅಂದೆ. ಈ ವಿಷಯ ಗೊತ್ತಾದಾಗ ಸಿಟ್ಟಿಗೆದ್ದ ನೆಹರೂ ನನ್ನ ಸಂಬಳವನ್ನು 1500/- ರುಪಾಯಿಗಳಿಗೆ ನಿಗದಿಗೊಳಿಸಿ, ಫಸ್ಟ್‌ಕ್ಲಾಸ್ ದರ್ಜೆ ಸೌಲಭ್ಯ ಮಂಜೂರು ಮಾಡಿದರು. ಆದರೆ ಅವತ್ತಿನಿಂದ ನಾನು ಸರ್ಕಾರಿ ವೆಚ್ಚದಲ್ಲಿ ಪ್ರಯಾಣ ಮಾಡುವುದನ್ನೇ ಬಿಟ್ಟು ಬಿಟ್ಟೆ.
ಸೆಕ್ರೆಟೇರಿಯಟ್‌ನಲ್ಲಿ ನಾನು ಆಯ್ದುಕೊಂಡ ಕೆಲಸವೆಂದರೆ ಆಗಿನ ಐಇಖ ಅಕಾರಿಗಳ ಕುರಿತು, ಮತ್ತಿತರ ಅಕಾರಿಗಳ ಕುರಿತು ಅವರ ಮೇಲಕಾರಿಗಳು ಕಳಿಸಿದ ಗೌಪ್ಯ ವರದಿಗಳನ್ನು ಅಭ್ಯಸಿಸುವುದು. ಇದು ಯಾವತ್ತಿದ್ದರೂ ನೆಹರೂ ಅವರಿಗೆ ಸಹಾಯಕವಾಗುವುದೆಂದು ನನಗೆ ಗೊತ್ತಿತ್ತು. ಎರಡು ತಿಂಗಳು ಹಗಲೂ ರಾತ್ರಿ ಆ ವರದಿಗಳನ್ನು ಓದಿದೆ. ಹಿಂದಿನ ಇಂಗ್ಲಿಷ್ ಅಕಾರಿಗಳು ತಮ್ಮ ಅನ ಸಿಬ್ಬಂದಿಯ ಕುರಿತು ಬರೆದ ವರದಿಗಳು ನಿಜಕ್ಕೂ ಎಷ್ಟು ವಸ್ತು ನಿಷ್ಠ, ಉಪಯುಕ್ತ ಮತ್ತು ಅರ್ಥಪೂರ್ಣ ಎಂಬುದು ಮನವರಿಕೆಯಾದದ್ದೇ ನನಗೆ ಆವಾಗ.
ನೆಹರೂ ಟೇಬಲ್ಲಿಗೆ ಹೋಗುವ ಮತ್ತು ಅವರಿಂದ ಬರುವ ಪ್ರತಿ ಪತ್ರ, ಪ್ರತಿ ಫೈಲೂ ನನ್ನನ್ನು ದಾಟಲೇಬೇಕಿತ್ತು. ಅದರರ್ಥ, ಅವರಿದ್ದಷ್ಟು ಹೊತ್ತೂ ನಾನು ಪಕ್ಕದ ಕೋಣೆಯಲ್ಲಿ ಇರಲೇಬೇಕು. ಮನೆಯಲ್ಲಿ ನಾನು ಜೊತೆಗಿರುತ್ತಿದ್ದೆ. ನನ್ನ ಊಟವನ್ನು ಕೋಣೆಯಲ್ಲಿ ಒಬ್ಬನೇ ಮಾಡುತ್ತಿದ್ದೆ. ನೆಹರೂಗೆ ಪ್ರತಿಯೊಂದೂ ತಿಳಿದಿರಲಿ ಎಂಬ ಭಾವನೆ ನನ್ನದು. ಕೆಲ ವಿಷಯಗಳನ್ನು ಸಂಬಂಧ ಪಟ್ಟ ತಜ್ಞರಿಂದ ಕೇಳಿ ಪರಾಮರ್ಶಿಸಿ ನೆಹರೂಗೆ ತಿಳಿಸುತ್ತಿದ್ದೆ. ಕೃಷ್ಣ ಮೆನನ್‌ರ ಫಾರಿನ್ ಅಫೇರ‍್ಸ್ ವಿಷಯದಲ್ಲಿ ಮಾತ್ರ ನನ್ನಲ್ಲಿ ನಿರಾಸಕ್ತಿಯಿತ್ತು. ಅದೊಂಥರಾ ಎರಡು ರಾಷ್ಟ್ರಗಳ ಮಧ್ಯದ pillow fighting.

ವಲ್ಲಭ ಭಾಯಿ ಪಟೇಲರ ಮರಣಾ ನಂತರ ನನಗೆ ಮುಜುಗುರ ಶುರುವಾಯಿತು. ಅನೇಕ ಮಂತ್ರಿಗಳು, ಎಂ.ಪಿ.ಗಳು, ಹಿರಿಯ ಅಕಾರಿಗಳು ನನ್ನನ್ನು `ಡೆಪ್ಯುಟಿ ಪಿ.ಎಂ." ಎಂದು ಕರೆಯಲಾರಂಭಿಸಿದರು. ಕೆಲವರು `Power behind the throne` ಅಂದರು. ತಮ್ಮ ಜೀವನಗಾಥೆ ಬರೆಯುತ್ತಾ ಸಿ.ಡಿ.ದೇಶಮುಖ್ ಅವರು `ಪ್ರಧಾನಿಗಳ ಆಪ್ತರಲ್ಲಿ ಅತಿ ಮುಖ್ಯ` ಎಂದು ಬರೆದಿದ್ದಾರೆ. ಎಲ್ಲೋ ಕೆಲವರನ್ನು ಹೊರತು ಪಡಿಸಿದರೆ ಆಗಿದ್ದ ಮಂತ್ರಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಜನ ಅಯೋಗ್ಯರು, ಭಟ್ಟಂಗಿಗಳು. ಅದಷ್ಟೆ ನನ್ನ ಅಭಿಪ್ರಾಯವಾಗಿತ್ತು. ಅವರಿಂದ ಬರುತ್ತಿದ್ದ ಪತ್ರಗಳಿಗೆ ನನ್ನದೊಂದು ಚೀಟಿ ಅಂಟಿಸಿ ಅದರ ಮೇಲೆ ನನ್ನ ಅಭಿಪ್ರಾಯ ಬರೆದಿರುತ್ತಿದ್ದೆ. ನೆಹರೂ ಅದನ್ನು ಗಮನಿಸಿದ ಮೇಲೆ ಚೀಟಿ ತೆಗೆದು ಹಾಕುತ್ತಿದ್ದೆ.

ಅದೊಂದು ಬೆಳಿಗ್ಗೆ, 1952ರ ಮಳೆಗಾಲದಲ್ಲಿ ನನಗೊಂದು ಟೆಲಿಗ್ರಾಂ ಬಂದಿತ್ತು. ಇನ್ನೇನು ನಾನು ನೆಹರೂರೊಂದಿಗೆ ಸೆಕ್ರೆಟೇರಿಯಟ್‌ಗೆ ಹೊರಡಲು ಕಾರು ಹತ್ತಬೇಕು: ಬಿಚ್ಚಿ ನೋಡಿದರೆ ನನ್ನ ಎಂಬತ್ನಾಲ್ಕು ವಯಸ್ಸಿನ ವೃದ್ಧ ತಂದೆ ತೀರಿ ಹೋದ ಸುದ್ದಿ. ಯಾವ ಭಾವನೆಯನ್ನೂ ತೋರಗೊಡದೆ ಸುಮ್ಮನೆ ಅದನ್ನು ಕಿಸೆಯಲ್ಲಿಟ್ಟುಕೊಂಡು ಪ್ರಧಾನಿಗಳ ಕಚೇರಿಯಲ್ಲಿ ಕುಳಿತು ಇಡೀ ದಿನ ಕೆಲಸ ಮಾಡಿದೆ. ಯಾರಿಗೂ ವಿಷಯ ಹೇಳಲಿಲ್ಲ. ಎರಡು ವರ್ಷಗಳ ಹಿಂದೆ ಕೇರಳಕ್ಕೆ ಹೋದಾಗ ಇಂಥದ್ದೇನಾದರೂ ಅವಘಡ ಸಂಭವಿಸಿದರೆ ನನಗೋಸ್ಕರ ಶವವಿಟ್ಟುಕೊಂಡು ಕಾಯಬೇಡಿ. ಈ ದಿನಗಳಲ್ಲಿ ಟೆಲಿಗ್ರಾಂಗಳನ್ನು ನಂಬುವಂತಿಲ್ಲ. ತಲುಪದಿದ್ದರೆ ಕಷ್ಟ. ನೀವು ಕಾರ್ಯಗಳನ್ನು ಮುಗಿಸಿಬಿಡಿ ಎಂದು ಸೋದರ ಸೋದರಿಯರಿಗೆ ಹೇಳಿಯೇ ಬಂದಿದ್ದೆ. ಅದಾದ ನಾಲ್ಕು ದಿನಕ್ಕೆ ಸರಿಯಾಗಿ ಭಾನುವಾರ ಮಧ್ಯಾಹ್ನ ನಾನು ಮತ್ತು ನೆಹರೂ ಊಟಕ್ಕೆಂದು ಮನೆಗೆ ಬಂದೆವು. ಬಾಗಿಲಲ್ಲೇ ನಿಂತಿದ್ದ ಎನ್.ಕೆ.ಶೇಷನ್ ನನ್ನ ಕೈಗೆ ಇನ್ನೊಂದು ಟೆಲಿಗ್ರಾಂ ಕೊಟ್ಟಿದ್ದರು. ನನ್ನ ತಾಯಿ ತೀರಿ ಹೋದ ಸುದ್ದಿಯಿತ್ತು. ಟೆಲಿಗ್ರಾಂ ಮೊದಲೇ ಒಡೆದಿದ್ದರಿಂದ ಎಲ್ಲರಿಗೂ ಆ ವಿಷಯ ಗೊತ್ತಾಗಿತ್ತು.

ನಾನು ಊಟ ಕೂಡ ಮಾಡದೆ ನನ್ನ ಕೋಣೆ ಹೊಕ್ಕು ಮಲಗಿ ಬಿಟ್ಟೆ.ಸಂಜೆ ನೆಹರೂ ಮತ್ತು ಇಂದಿರಾ ನನ್ನನ್ನು ಹುಡುಕಿಕೊಂಡು ಕೋಣೆಗೇ ಬಂದರು. ನಾನು ಯಥಾಪ್ರಕಾರ ಎದ್ದು, ಸ್ನಾನ ಮುಗಿಸಿ, ನನ್ನ ಎಂದಿನ ಕೆಲಸದಲ್ಲಿ ತೊಡಗಿದ್ದೆ. ನೆಹರೂ ಆಪ್ಯಾಯತೆಯಿಂದ ನನ್ನ ಹೆಗಲ ಮೇಲೆ ಕೈಯಿರಿಸಿದರು.

`ನನ್ನ ತಂದೆ ನಾಲ್ಕು ದಿನಗಳ ಹಿಂದೆ ತೀರಿ ಹೋದರು. ಅವತ್ತೇ ಗೊತ್ತಾಗಿತ್ತು. ತಂದೆ ಹೋದ ತಕ್ಷಣ ಅಮ್ಮ ಪ್ರಜ್ಞೆ ತಪ್ಪಿದಳಂತೆ. ಒಮ್ಮೆ ಮಾತ್ರ ವಿಪರೀತ ಮಳೆ ಬೀಳುತ್ತಿದ್ದಾಗ ಕಣ್ತೆರೆದು `ಅವನಿಗೆ ತುಂಬ ಚಳಿಯಾಗ್ತಿದೆಯೇನೋ` ಅಂದಳಂತೆ. ಆ ಮೇಲೆ ಕಣ್ಮುಚ್ಚಿದವಳು ಮತ್ತೆ ಏಳಲಿಲ್ಲ. ಅವರಿಬ್ಬರ ದಾಂಪತ್ಯಕ್ಕೆ ಎಪ್ಪತ್ತೆರಡು ವರ್ಷವಾಗಿತ್ತು. ಅವರದೇ ಆದ ಜಗಳ, ದುಃಖ, ಪ್ರೀತಿ, ನರಳಿಕೆಗಳಿದ್ದವು. ಅಷ್ಟು ಪರಸ್ಪರರಿಗಾಗಿ ಬದುಕಿದ ಇನ್ನೊಂದು ಜೋಡಿಯನ್ನು ನಾನು ಕಂಡಿಲ್ಲ. ಒಂದರ್ಥದಲ್ಲಿ ಇಬ್ಬರಿಗೂ ಮರಣ ಒಮ್ಮೆಲೆ ಬಂದಂತೆ..." ಅಂದೆ.
ನೆಹರೂ ಮಾತನಾಡಲಿಲ್ಲ.

`ಊಟವಾದ ಕೂಡಲೆ ನಿನ್ನನ್ನು ನೋಡಲು ಅಪ್ಪ ಕೋಣೆಗೆ ಬಂದಿದ್ದರು. ಆದರೆ ನೀನು ಗಾಢ ನಿದ್ರೆಯಲ್ಲಿದ್ದೆ" ಅಂದಳು ಇಂದಿರಾ.

`ಮನಸು ನಿರ್ಮಲವಾಗಿದ್ದರೆ ನಿದ್ರೆ ಬರುತ್ತೆ" ಅಂದೆ.

`ಮನಸ್ಸೇ ಇಲ್ಲದಿದ್ರೂ ಬರುತ್ತೆ!" ಅಂದು ಕೊಂಕು ನಗೆ ನಕ್ಕಳು. ನೆಹರೂಗೆ ಆಶ್ಚರ್ಯವಾಗಿತ್ತು.

`ಇಷ್ಟು witty ಆಗಿ ನೀನು ಜೀವನದಲ್ಲಿ ಮಾತಾಡಿದ್ದು ಇದೇ ಮೊದಲು" ಅಂದು ಬಿಟ್ಟೆ. ನೆಹರೂ ಮತ್ತೆ ಅಚ್ಚರಿಗೊಳಗಾಗಿದ್ದರು.
ಅವರಿಗೆ ವಿಪರೀತ ಕೆಲಸದ ಗೀಳು. ಸೆಪ್ಟಂಬರ್ 1946ರಿಂದಲೂ ನೆಹರೂ ಭಾನುವಾರ ಮತ್ತು ರಜಾ ದಿನಗಳಲ್ಲೂ ಕುಳಿತು ಕೆಲಸ ಮಾಡುವ ರೂಢಿಯಿರಿಸಿಕೊಂಡಿದ್ದರು. ರಾತ್ರಿ ಗುಂಟ ಕೆಲಸವೇ. ಹೀಗಾಗಿ ಸಭೆಗಳಲ್ಲಿ ತೂಕಡಿಸಿ ಬಿಡುತ್ತಿದ್ದರು. ಅಷ್ಟಾದರೂ ಅವರಿಗೆ ತಮ್ಮ ಆರೋಗ್ಯದ ಬಗ್ಗೆ ಅತಿಯಾದ ಹೆಮ್ಮೆ. ರಜೆಯ ಮಧ್ಯಾಹ್ನಗಳಲ್ಲಿ ನಿದ್ರೆ ಮಾಡಿ ಅಂದರೂ ಕೇಳುತ್ತಿರಲಿಲ್ಲ. ಕಡೆಗೊಂದು ದಿನ, `ನೋಡಿ, ಸೆಕ್ರೆಟೇರಿಯಟ್‌ನಲ್ಲಿ ತುಂಬ ಜನ ವಿವಾಹಿತರಿದ್ದಾರೆ. ಹೆಂಡತಿ ಮಕ್ಕಳ ಜೊತೆಗಿರಬೇಡವೆ? ನೀವು ಎದ್ದು ಹೋಗುವ ತನಕ ಅವರು ಹೋಗುವಂತಿಲ್ಲ. ಕೊಂಚ ರಜೆ ಕೊಡಿ. ಬೇಕಾದರೆ ಒಬ್ಬಿಬ್ಬರು ಪಿ.ಎಗಳನ್ನು ಮನೆಗೇ ಕರೆಸುತ್ತೇನೆ" ಅಂದ ಮೇಲೆ ನೆಹರೂ ರಜೆಗಳಲ್ಲಿ ಮಧ್ಯಾಹ್ನ ಕೊಂಚ ಹೊತ್ತು ಮಲಗುವುದನ್ನು ರೂಢಿಸಿಕೊಂಡರು. `ಕೆಲಸ ಯಾರನ್ನು ಕೊಲ್ಲುವುದಿಲ್ಲ" ಎಂಬುದು ಅವರ ವಾದ. `ಆದರೆ ಅತಿಯಾದ ಕೆಲಸ ಸುಸ್ತು ಹುಟ್ಟಿಸುತ್ತದೆ. ಪ್ರಧಾನಿ ನೀವು. ಸುಸ್ತಾದವರಂತೆ ಸಪ್ಪಗೆ ಕಾಣಬಾರದು" ಅನ್ನುತ್ತಿದ್ದೆ.

ನಿಮಗೆ ಗೊತ್ತು ಜಗತ್ತಿನ ಐವರು ಅತ್ಯುತ್ತಮ ಇಂಗ್ಲಿಷ್ ಗದ್ಯ ಲೇಖಕರಲ್ಲಿ ನೆಹರೂ ಒಬ್ಬರು. ಬೇರೆಯವರು ಡ್ರಾಫ್ಟ್ ಮಾಡಿದ ಪತ್ರಗಳಿಗೆ ಸಹಿ ಹಾಕಲು ಮನಸಾಗುತ್ತಿರಲಿಲ್ಲ. ಹೀಗಾಗಿ ಅವರೇ ಪ್ರತಿಯೊಂದನ್ನೂ ಡಿಕ್ಟೇಟ್ ಮಾಡುತ್ತಿದ್ದರು. ತಮ್ಮ ಭಾಷಣ, ಹೇಳಿಕೆ ಮುಂತಾದವನ್ನು ತಾವೇ ಬರೆಯಲು ಕೂಡುತ್ತಿದ್ದರು. ಕಾಲಾಂತರದಲ್ಲಿ ಅವರ ಶೈಲಿಯನ್ನು ಅಭ್ಯಸಿಸಿದ ನಾನು ಅವರಿಗೆ ಒಪ್ಪಿತವಾಗುವಂತೆಯೇ ಬರೆಯತೊಡಗಿದೆ. ಆದರೆ ನೆಹರೂ ಮಾಡಿದ ಕೆಲವು ಅತ್ಯುತ್ತಮ ಭಾಷಣಗಳು ಅಂದರೆ-ಆ ಕ್ಷಣಕ್ಕೆ ತೋಚಿಕೊಂಡಂಥವು ಅಥವಾ ತಾವೇ ಕುಳಿತು ಬರೆದುಕೊಂಡಂಥವು. ಹಾಗೆ ಬರೆಯಲು ಕೂತಾಗ ನೆಹರೂ ಭಾವುಕರಾಗುತ್ತಿದ್ದರು. 1947ರ ಆಗಸ್ಟ್ 14-15ರ ರಾತ್ರಿ ಅವರು ಕಾನ್ಸ್‌ಟಿಟ್ಯುಯೆಂಟ್ ಅಸೆಂಬ್ಲಿಯನ್ನು ದ್ದೇಶಿಸಿ ಮಾಡಿದ `Tryst With Destiny` ಎಂಬ ಜಗದ್ವಿಖ್ಯಾತ ಭಾಷಣವನ್ನು ನೆಹರೂ ಕೈಯಾರೆ ಬರೆದಿದ್ದರು. ಮೊದಲು ಅದಕ್ಕೆ ``Date With Destiny`` ಅಂತ ಹೆಸರಿಟ್ಟಿದ್ದರು. `ಅಮೆರಿಕನ್ನರಿಂದಾಗಿ ಡೇಟ್ ಅನ್ನೋದಕ್ಕೆ ಬೇರೆಯದೇ ಅರ್ಥ ಬಂದಿದೆ. ಹುಡುಗಿಯರನ್ನು ಭೇಟಿ ಮಾಡೋದಕ್ಕೆ dating ಅಂತಾರೆ. ಅದರ ಬದಲು `ರ‍್ಯಾಂದೆವೂ ವಿಥ್ ಡೆಸ್ಟಿನಿ` ಅನ್ನಬಹುದು. ಆದರೆ ಫ್ರಾಂಕ್ಲಿನ್ ರೂಸ್‌ವೆಲ್ಟ್ ತನ್ನ ಯುದ್ಧ ಕಾಲದ ಭಾಷಣದಲ್ಲಿ ಬಳಸಿದ್ದಾನೆ. ಬದಲಿಗೆ Tryst With Destiny ಅನ್ನಬಹುದು" ಅಂದೆ.

ನೆಹರೂ ಸ್ವಲ್ಪ ಹೊತ್ತು ಯೋಚಿಸಿ Date ಎಂಬುದನ್ನು ಬದಲಿಸಿ Tryst ಅಂತ ಬರೆದರು. ಆ ಕೈಬರಹ ಇತ್ತೀಚಿನ ತನಕ ನನ್ನಲ್ಲಿತ್ತು. ಇತ್ತೀಚೆಗೆ ನೆಹರೂ ಮ್ಯೂಸಿಯಮ್‌ಗೆ ಅದನ್ನು ಒಪ್ಪಿಸಿದೆ.

Read Archieves of 10 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books