Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಆ ವಿಲಕ್ಷಣ ಕತೆಗಾರ ಜೀವನ ಪರ್ಯಂತ ಚಾತುರ್ಮಾಸ ವ್ರತ ಹಿಡಿದಿದ್ದರೆ?

ಈ ಸ್ವಾಮಿಗಳು, ಪೀಠಾಪತಿಗಳು ಯಾಕಾದರೂ ಚಾತುರ್ಮಾಸಕ್ಕೆ ಕೂಡುತ್ತಾರೋ ಎಂಬ ಜಿಜ್ಞಾಸೆಯೊಂದಿತ್ತು. ಇದು ಜೈನರನ್ನು ಅನುಕರಿಸುವ ಪ್ರಯತ್ನವಾಗಿತ್ತಾ? ಗೊತ್ತಿಲ್ಲ. ಒಬ್ಬ ಸ್ವಾಮಿ ವರ್ಷದ ನಾಲ್ಕು ತಿಂಗಳು ಒಂದು ಕಡೆ ಸ್ಥಾಪಿತನಾಗುತ್ತಾನೆ. ಅದರಲ್ಲೂ ಮಳೆಗಾಲದಲ್ಲಿ. ಆತ ಹೊರ ಬರುವುದಿಲ್ಲ. ಕೆಲವು ದಿನ ಕೇವಲ ಕಟ್ಟು-ಹಿಟ್ಟು ಎಂಬಂಥ ಆಹಾರ. ಕೆಲವು ದಿನ ಬರೀ ಗೆಡ್ಡೆ ಗೆಣಸು ತಿನ್ನಬೇಕು. ತರಕಾರಿ ತಿನ್ನುವ ಹಾಗಿಲ್ಲ. ಇದಕ್ಕೆ ಮುಖ್ಯ ಕಾರಣ ಮಳೆ. ಮಳೆಯಲ್ಲಿ ಹೊರಬಿದ್ದರೆ ಹುಳು-ಹುಪ್ಪಡಿಯ ಮೇಲೆ ಕಾಲಿಟ್ಟು ಅಲ್ಲಿ ಪ್ರಾಣಿ ಹಿಂಸೆಯಾಗುತ್ತದೆ. ಈ ಪ್ರಾಣಿ ಹಿಂಸೆಯೆಂಬ conceptನ ಅತಿರೇಕಕ್ಕೆ ಒಯ್ದವರು ಜೈನರು. ಅವರು ಬ್ಯಾಕ್ಟೀರಿಯಾ ಹೊಕ್ಕಾವೆಂಬ ಕಾರಣಕ್ಕೆ ಬಾಯಿಗೆ ಬಟ್ಟೆ ಕಟ್ಟಿಕೊಳ್ಳುತ್ತಾರೆ. ರಾತ್ರಿ ಉಂಡರೆ ಕತ್ತಲಲ್ಲಿ ಕ್ರಿಮಿ ಕೀಟ ತಿಂದೇವೆಂದು ಸಾಯಂಕಾಲವೇ ಉಂಡು ಬಿಡುತ್ತಾರೆ. ಇದೆಲ್ಲದರ ಪರಮಾವಯೆಂದರೆ ಜೈನರು ವ್ಯವಸಾಯ ಮಾಡಬಾರದು! ಏಕೆಂದರೆ ಹೊಲ ಉಳುವಾಗ ಎರೆ ಹುಳ ನೇಗಿಲಿಗೆ ಸಿಕ್ಕು ಸಾಯುತ್ತವೆ. ಹಾಗಾದರೆ ಬದುಕಲಿಕ್ಕೇನು ಮಾಡಬೇಕು? ಬಡ್ಡಿ ವ್ಯಾಪಾರ ಮಾಡಬೇಕು. ಇದು ಸಿದ್ಧಾಂತ! ಆದರೆ ಜೈನ ಧರ್ಮಾವಲಂಬಿ ಮಾರ್ವಾಡಿಗಳು ಎರೆ ಹುಳುವಿನಿಂದ ಹಿಡಿದು ಪರಿಸರದಲ್ಲಿನ ಪ್ರತಿ ಜೀವಿಯನ್ನೂ ಕೊಂದು ಹಾಕುವಂಥ ಕೀಟನಾಶಕಗಳನ್ನು ಅಂಗಡಿಯಲ್ಲಿಟ್ಟು ಮಾರುತ್ತಾರೆ. Pesticide factoryಗಳೇ ಅವರವಿವೆ. ಹುಳ-ಹುಪ್ಪಡಿಯ ಮಾತಿರಲಿ, ಅವರ ಬಡ್ಡಿ ವ್ಯಾಪಾರ ಅನಾಮತ್ತಾಗಿ ಮನುಷ್ಯರನ್ನೇ ಮಟಾಷ್ ಮಾಡಿ ಬಿಡುತ್ತದೆ. ಮನುಷ್ಯ ಎಂಥ ಸಿದ್ಧಾಂತವನ್ನು ಬೇಕಾದರೂ ತನ್ನ ಅನುಕೂಲಕ್ಕೆ ಬಳಸಿಕೊಳ್ಳುತ್ತಾನೆ ಎಂಬುದಕ್ಕೆ ಇದೆಲ್ಲ ಉದಾಹರಣೆಯಷ್ಟೆ.

ಮೊನ್ನೆ ಸ್ವಾಮಿಗಳೊಬ್ಬರ ಬಗ್ಗೆ ವಿಚಾರಿಸಿದಾಗ `ಅವರು ಚಾತುರ್ಮಾಸಕ್ಕೆ ಕೂತಿದ್ದಾರೆ" ಎಂಬ ಉತ್ತರ ಬಂತು. Actually, ಚಾತುರ್ಮಾಸ ಅಂದರೆ ನಾಲ್ಕು ತಿಂಗಳು ತಾನೆ? ಬ್ರಾಹ್ಮಣ ಸ್ವಾಮಿಗಳು ಅದರಲ್ಲೂ ರಿಲೀಫು ಕಂಡುಕೊಂಡಿದ್ದಾರೆ. ಆಷಾಢ ಏಕಾದಶಿಯಂದು ಆರಂಭಿಸಿ ಭಾದ್ರಪದದಲ್ಲಿ ಬರುವ ಅನಂತ ಚತುರ್ದಶಿಯ ದಿನ ಎದ್ದು ಬಿಡುತ್ತಾರೆ. ಹೆಚ್ಚೆಂದರೆ ಐವತ್ತೆರಡು ದಿನ. ಅಷ್ಟೇ ಅಲ್ಲ, ಚಾತುರ್ಮಾಸವೆಂದರೆ ಮೌನ ಸಾಸಬೇಕು. ಜಂಗುಳಿಯಿಂದ ದೂರ. ಒಂದು ಕಾಲಕ್ಕೆ ಜೈನರು ಮಾಡುತ್ತಿದ್ದುದೇ ಅದನ್ನ. ವರ್ಷದಲ್ಲಿ ನಾಲ್ಕು ತಿಂಗಳು ಹಾಗೆ ಮೌನದಲ್ಲಿ ಉಳಿದುಬಿಟ್ಟರೆ ಮನಸ್ಸು ಚಿಂತನೆಗೆ, ಮರು ಚಿಂತನೆಗೆ, ಹೊಸ ಸಂಗತಿಗಳ ಆವಿಷ್ಕಾರಕ್ಕೆ, ವಿಸ್ತಾರಕ್ಕೆ, ವೈಶಾಲ್ಯಕ್ಕೆ, ಪಕ್ವಕ್ಕೆ ಈಡಾಗುತ್ತದೆ. ಆದರೆ ಕೂಡುವ ನಾಲ್ಕು ತಿಂಗಳುಗಳಲ್ಲೂ ಎರಡು ತಿಂಗಳು ರಿಯಾಯಿತಿ ತೆಗೆದುಕೊಂಡು, ತಮ್ಮ ದೇವರ ಪೆಟ್ಟಿಗೆ-ಸಾಲಿಗ್ರಾಮಗಳನ್ನಷ್ಟೆ ಒಯ್ದು, `ನಾವು ಎಲ್ಲಿಗೂ ಬರುವುದಿಲ್ಲ : ಆದರೆ ನಾವಿದ್ದಲ್ಲಿಗೆ ನೀವು ಬರಬಹುದು" ಎಂದು ಘೋಷಿಸುವ ಈ ಸ್ವಾಮಿಗಳದು ಇದ್ಯಾತರ ಚಾತುರ್ಮಾಸ? ಅವರ ಪೈಕಿ ಕೆಲವರು ಊಟದ ವಿಷಯದಲ್ಲಿ ನಿಯಮ ನಿಷ್ಠೆ ಪಾಲಿಸುತ್ತಾರೆ. ಉಳಿದವರಲ್ಲಿ ಅದೂ ಅಷ್ಟಕ್ಕಷ್ಟೆ.
ಈ ಚಾತುರ್ಮಾಸದ ಸಂಪ್ರದಾಯ ಲಿಂಗಾಯತ ಸ್ವಾಮಿಗಳಲ್ಲಿ ಇಲ್ಲವಾ? ಕೇಳಿ ನೋಡಬೇಕು. ಒಂದಷ್ಟು ಮಠಗಳಲ್ಲಿ ಇದ್ದೂ ಬರಬೇಕು. ಏನೋ ಕುತೂಹಲ. ನನ್ನ ಮನಸ್ಸು ಧರ್ಮ-ಗಿರ್ಮ ಅಂತ ಧೋಖಾ ತಿನ್ನುವಷ್ಟು ಬಲಹೀನವಲ್ಲ. ಆದರೆ ಮನುಷ್ಯ ವಿಭಿನ್ನವಾಗಿ ಬದುಕುತ್ತಾನೆಂದರೆ ಗಮನಿಸುವ ಆಸೆ. ನನ್ನ ಮಾವ ಬೆಳಗೆರೆ ಕೃಷ್ಣ ಶಾಸ್ತ್ರಿಗಳು ಹಾಗೆ ಕೆಲವಾರು ಸಂತರೊಂದಿಗೆ, ಅಲೌಕಿಕರೊಂದಿಗೆ ಅಲೆದಿದ್ದಾರೆ. ಮುಕುಂದೂರು ಸ್ವಾಮಿಗಳ ಬಗ್ಗೆ `ಯೇಗ್ದಾಗೆಲ್ಲಾ ಐತೆ` ಎಂಬ ಪುಸ್ತಕ ಬರೆದಿದ್ದಾರೆ. ಮುಕುಂದೂರು ಸ್ವಾಮಿಗಳ ಬಗ್ಗೆ ನನ್ನ ಅಮ್ಮ ಕೂಡ ಹೇಳುತ್ತಿದ್ದಳು. ಆಕೆಯನ್ನು ಸ್ವಾಮಿಗಳು `ಶಿವಲಿಂಗಿ` ಎಂದು ಕರೆಯುತ್ತಿದ್ದರಂತೆ. ಆತ ಸುಮಾರು ನೂರ ಮೂವತ್ತಾರು ವರ್ಷ ಬದುಕಿದ್ದರು ಎಂಬುದು ಶಾಸ್ತ್ರಿಗಳ ಲೆಕ್ಕಾಚಾರ. ಅವರಿಗೆ ಮಠವಿತ್ತಾ? ಗೊತ್ತಿಲ್ಲ. ಹೆಚ್ಚಿನ ಕಾಲ ಯಾವುದೋ ಬೆಟ್ಟದ ಮೇಲೆ ಕಳೆಯುತ್ತಿದ್ದರಂತೆ : ಕಡೂರು-ಬೀರೂರಿನ ಆಸುಪಾಸು, ದೇವನೂರಿನ ಬಳಿ. ಅವರು ಪವಾಡ ಮಾಡುತ್ತಿದ್ದರಂತೆ. ಹಾಗಂತ ಶಾಸ್ತ್ರಿಗಳು ಬರೆಯುತ್ತಾರೆ. ನಾನು ಪವಾಡಗಳನ್ನು ನಂಬುವುದಿಲ್ಲ. ಆದರೆ ಶಾಸ್ತ್ರಿಗಳನ್ನು ನಂಬುತ್ತೇನೆ. ಅವರು ಸುಳ್ಳು ಹೇಳುವುದಿಲ್ಲ. ಅವರಿಗೆ ಅದರ ಅವಶ್ಯಕತೆ ಇಲ್ಲ.

ಇದೆಲ್ಲ ಜಿಜ್ಞಾಸೆ ಯಾಕೆ ಬಂತೆಂದರೆ, ಮೊನ್ನೆ ಸಿಕ್ಕ ಗೆಳತಿಯೊಬ್ಬರಿಗೆ ಜಿ.ಎ.ಕುಲಕರ್ಣಿ ಬಗ್ಗೆ ಹೇಳುತ್ತಿದ್ದೆ. ಮರಾಠಿ ಲೇಖಕರಾತ. ಅವರ ಬಗ್ಗೆ ಈ ಹಿಂದೆಯೂ ಬರೆದಿದ್ದೆ. Strange person. ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದ ಜಿ.ಎ.ಕುಲಕರ್ಣಿ `ಬಸಪ್ಪಾ, ಚಾಕ್‌ಪೀಸ್ ತಗೊಂಡ್ ಬಾ..." ಅನ್ನುತ್ತಿದ್ದುದು ಬಿಟ್ಟರೆ ಇನ್ಯಾರೊಂದಿಗೂ ಕನ್ನಡ ಮಾತಾಡುತ್ತಿರಲಿಲ್ಲ. ಮನೆ ಪಕ್ಕದಲ್ಲೇ ನನ್ನ ಗೆಳೆಯ ಸುರೇಶ್ ಕುಲಕರ್ಣಿಯ ಮನೆಯಿತ್ತು. ಅವರ ತಾಯಿಯೊಂದಿಗೆ ಜಿ.ಎ. ಕನ್ನಡ ಮಾತಾಡುತ್ತಿದ್ದರು. ವಿಕ್ಷಿಪ್ತ ಸ್ವಭಾವದ ಜಿ.ಎ ತಮ್ಮ ಕೂಲಿಂಗ್ ಗ್ಲಾಸ್ ತೆಗೆಯುತ್ತಲೇ ಇರಲಿಲ್ಲ. ಅವರ ಕಣ್ಣುಗಳನ್ನ ಯಾರೂ ನೋಡಿರಲಿಲ್ಲ. ಅವರು ರಸ್ತೆಯ ಬಲಬದಿಗೆ ಎಂದೂ ನಡೆದವರಲ್ಲ. ಒಂದೇ ಅಂಗಡಿಯಲ್ಲಿ ಸಿಗರೇಟು ಕೊಳ್ಳಬೇಕು. ಒಂದೇ ಸಲೂನ್‌ನಲ್ಲಿ hair cut ಮಾಡಿಸಿಕೊಳ್ಳಬೇಕು. ಕ್ಲಬ್‌ಗೆ ಹೋದರೆ ಕೆಲವೇ ಪರಿಚಿತರೊಂದಿಗೆ ಇಸ್ಪೀಟು. ಇಂತಿಷ್ಟೇ ಪೆಗ್ ಮದ್ಯ. ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂತು. `ಯಾರಂವ ಜಿ.ಎ. ಕುಲಕರ್ಣಿ? ಕರಕೊಂಡು ಬರ್ರಿ` ಅಂತ ಕೇಳಿದಾಗ `ಬರೂಂಥಾದ್ದೇನಿಲ್ಲ` ಎಂದು ಉತ್ತರಿಸಿದ್ದರು. ಗಿರೀಶ್ ಕಾರ್ನಾಡರನ್ನು ಭೇಟಿಯಾಗದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. `ನಿಮ್ಮದೊಂದು ಕಥೆಯನ್ನು ನಾಟಕವಾಗಿ ರೂಪಾಂತರಿಸಿದ್ದೇನೆ. ಅದಕ್ಕೆ ಅನುಮತಿ ಕೊಡಿ. ನಾನು ಅದರ ಬಗ್ಗೆ ಚರ್ಚಿಸಬೇಕಿದೆ ನಿಮ್ಮೊಂದಿಗೆ. ಅಪಾಯಿಂಟ್‌ಮೆಂಟ್ ಕೊಡಿ" ಎಂದು ಖ್ಯಾತ ನಟಿ-ನಿರ್ದೇಶಕಿ ಸುಲಭಾ ದೇಶಪಾಂಡೆ ಪತ್ರ ಬರೆದಾಗ, `ಹಕ್ಕುಗಳು ಪಬ್ಲಿಷರ್‌ನ ಬಳಿ ಇವೆ. ಅನುಮತಿ ಅವರನ್ನ ಕೇಳಿ. ಕತೆ ಬರೆದಾಗಿದೆ. ನಾನಿನ್ನು ಚರ್ಚಿಸಬೇಕಾದದ್ದು ಏನೂ ಇಲ್ಲ" ಎಂದು ಉತ್ತರಿಸಿದ್ದರು ಜಿ.ಎ.
ಧಾರವಾಡದ ಕಾಲೇಜಿನಿಂದ ಅವರು ನಿವೃತ್ತರಾದಾಗ ಅವರಿಗೆ ಬೀಳ್ಕೊಡುಗೆ ಇತ್ತಂತೆ. ಮಾತಾಡೋಣವೆಂದರೆ ಯಾರಿಗೆ ಗೊತ್ತಿತ್ತು ಅವರ ಬಗ್ಗೆ? ಅವರ ಮನೆಯ ಅಂಗಳಕ್ಕೆ ಹೋದವರು ಅತಿ ಕಡಿಮೆ ಜನ. ವರಾಂಡದೊಳಕ್ಕೆ ಅವರು ಯಾರನ್ನೂ ಬಿಟ್ಟುಕೊಳ್ಳುತ್ತಿರಲಿಲ್ಲ. ಅವರಿಗಿಬ್ಬರು ಅವಿವಾಹಿತ ಸೋದರಿಯರಿದ್ದರು ಅಂತ ಕೇಳಿದ್ದೇನೆ. ರಿಟೈರಾದ ಮೇಲೆ ಪುಣೆಗೆ ಹೋದ ಜಿ.ಎ.ಕುಲಕರ್ಣಿಯವರಿಗೆ ಆ ಊರು ಹೊಂದಿಕೆಯಾಗಲಿಲ್ಲ. ಮತ್ತೆ ಧಾರವಾಡಕ್ಕೆ ಬರಲು ಹಂಬಲಿಸಿದರೆ, ಇಲ್ಲಿದ್ದ ಅವರ ಮನೆಯನ್ನು ಮಾಲೀಕ ಕೆಡವಿ ಬಿಟ್ಟಿದ್ದ. ಅದೇನಾಯಿತೋ ಘಾತ? ಕೆಲ ದಿನಗಳಿಗೇ ಜಿ.ಎ.ಕುಲಕರ್ಣಿ ಕ್ಯಾನ್ಸರ್ ಪೀಡಿತರಾಗಿ ತೀರಿಕೊಂಡರು.

ಸುಮಾರು ಹದಿನೇಳು ವರ್ಷಗಳ ಹಿಂದೆ `ಕಸ್ತೂರಿ` ಪತ್ರಿಕೆಯ ಸಂಪಾದಕನಾಗಿದ್ದಾಗ ಅದೊಂದು ದಿನ ನನ್ನ ಸಹೋದ್ಯೋಗಿ ಚಂದ್ರಕಾಂತ ವಡ್ಡು `ಇದೊಂದು ಕತೆ ಬಂದಿದೆ ನೋಡಿ, ಸ್ವಾಮಿ ಅಂತ ಹೆಸರು. ಮರಾಠಿಯ ಜಿ.ಎ.ಕುಲಕರ್ಣಿ ಬರೆದ ಕಥೇನ ಚಂದ್ರಕಾಂತ ಪೋಕಳೆ ಕನ್ನಡಕ್ಕೆ ಅನುವಾದಿಸಿದ್ದಾರೆ. ಚೆನ್ನಾಗಿದೆ" ಅಂತ ನನ್ನ ಕೈಗೆ script ಕೊಟ್ಟ. ಅವತ್ತಿಡೀ ನಾನು ಆ ಕತೆಯಲ್ಲಿ ಮುಳುಗಿ ಹಗಿದ್ದೆ. ಅವತ್ತೊಂದೇ ಯಾಕೆ? ತುಂಬ ದಿನ ಆ ಗುಂಗಿನಿಂದ ಹೊರಬರಲಾಗಿರಲಿಲ್ಲ.

ಇತ್ತೀಚೆಗೆ ನನ್ನ `ಚಲಂ` ಪುಸ್ತಕಕ್ಕೆ `ಕುವೆಂಪು ಭಾಷಾ ಭಾರತಿ ಪ್ರತಿಷ್ಠಾನ`ವು ಪ್ರಶಸ್ತಿ ನೀಡಿತಲ್ಲ? ಅವತ್ತು ಚಂದ್ರಕಾಂತ ಪೋಕಳೆ ಅವರಿಗೂ ಪ್ರಶಸ್ತಿ. ಇಬ್ಬರೂ ಅಕ್ಕಪಕ್ಕದಲ್ಲೇ ಕುಳಿತಿದ್ದೆವು. ಆಗ ಮತ್ತೆ ಜಿ.ಎ. ಕತೆಗಳ ಬಗ್ಗೆ ಪ್ರಸ್ತಾಪ ಬಂತು. ಅವರದೊಂದು ಕಥಾಸಂಕಲನ ಸಿದ್ಧಪಡಿಸಿದ್ದೇನೆ. ಹಕ್ಕುಗಳ ಬಗ್ಗೆ ಕಾಗದ ಪತ್ರ ನಡೆದಿದೆ ಅಂದಿದ್ದರು ಪೋಕಳೆ. `ನನಗೇ ಕೊಡಿ, ಪ್ರಕಟಿಸ್ತೀನಿ" ಅಂದೆ. ಮೊನ್ನೆ ಡಾ.ಅನಿಲ ಕಮತಿಯವರು ಎಕ್ಸಂಬಾಕ್ಕೆ ಕರೆದಾಗ ಅಲ್ಲಿ ಚಂದ್ರಕಾಂತ ಪೋಕಳೆ ಭೇಟಿಯಾಗಿ `ಜಿ.ಎ. ಅವರ ಕಥೆಗಳ ಸಂಕಲನ ಬಂತು" ಅಂದರು. ತಕ್ಷಣ ಬೆಂಗಳೂರಿಗೆ ಬಂದು ಓದತೊಡಗಿದೆ. ಮತ್ತೆ ಅದರಲ್ಲಿ ಮುಳುಗಿ ಹೋದೆ. ಎಂಥ ಚೆಂದದ ಕಥೆ ಬರೆಯುತ್ತಿದ್ದರು ಜಿ.ಎ!

ಇದು ನೋಡಿ, ಕೆಲವೇ ಪಾತ್ರಗಳ ಕಥೆ. ಅವನ ತಾಯಿ ತೀರಿ ಹೋಗಿದ್ದಾಳೆ. ಚಿಕ್ಕ ಹುಡುಗನಾದ ಅವನನ್ನು ಧೂಳು ತುಂಬಿದ ರಸ್ತೆಗಳ, ಏನೇನೂ ಆಕರ್ಷಣೆಗಳಿಲ್ಲದ ಊರೊಂದಕ್ಕೆ ಕರೆದುಕೊಂಡು ಬಂದ ಅವನ ಸೋದರ ಮಾವ ಶ್ರೀಪೂ ಅಲ್ಲಿ ಆ ಹುಡುಗನ ಚಿಕ್ಕಮ್ಮನಾದ ತಾನೀ ಮಾವುಷಿಯ ಮನೆಯಲ್ಲಿ ಬಿಟ್ಟು ಹೋಗುತ್ತಾನೆ. ಮರಾಠಿಯಲ್ಲಿ ಮಾವುಷಿ ಅಥವಾ ಮೌಸಿ ಅಂದರೆ ಚಿಕ್ಕಮ್ಮ. ಉತ್ತರ ಕರ್ನಾಟಕದ ಕಡೆ ಅಬಚಿ ಅಂತಲೂ ಅಂತಾರೆ. ತಾನೀ ಮಾವುಷಿ ಒಳ್ಳೆಯವಳು. ಚೆಂದ ಕೂಡ. ಅವಳು ಒಮ್ಮೆ ವರುಷಗಳ ಹಿಂದೆ ಮನೆಗೆ ಬಂದಾಗ ಇವನನ್ನು ಎತ್ತಿಕೊಂಡಿದ್ದು ಹುಡುಗನಿಗೆ ನೆನಪು. ಅವಳ ಮೈಗೆ ಹಳೆಯ ದೇವರ ಕೋಣೆಯ ವಾಸನೆ ಇದ್ದದ್ದೂ ಇವನಿಗೆ ನೆನಪು. ಅವಳ ಗಂಡ ಭಾಪೂರಾವ್. ಆತ ಡಾಕ್ಟರನಾದರೂ ಮನೆ ತುಂಬ ಬಡತನ. ಆತನಿಗೆ ಮನೆಗೆಲಸದ ತುಳಸಾ ಎಂಬ ಹೆಂಗಸಿನೊಂದಿಗೆ ಸಂಬಂಧ. ಹೀಗಾಗಿ ತಾನೀ ಮೌಸಿಗೆ ಕಡು ದುಃಖ. ಆದರೆ ಅನಾಥನಾಗಿ ಮನೆಗೆ ಬಂದ ಅಕ್ಕನ ಮಗನನ್ನು ಹೇಗಾದರೂ ಮಾಡಿ ಸಂತೋಷವಾಗಿಡಬೇಕು, ಓದಿಸಬೇಕು ಎಂಬ ಹಪಹಪಿ. ಈ ಊರಲ್ಲಿ ನೋಡಲು ಮತ್ತೇನಿಲ್ಲ: ಆದರೆ ರಾಜಾಸಾಬರ ಬಾವಿಯಿದೆ. ಅಲ್ಲಿಗೆ ಒಬ್ಬನೇ ಹೋಗಬಾರದು. ರತನ್‌ನ ಜೊತೆಗೆ ಕಳಿಸ್ತೀನಿ ಅನ್ನುತ್ತಾಳೆ ತಾನೀ ಮೌಸಿ.

ಪುರಾತನ ಬಾವಿಯ ಸುತ್ತ ಗಿಡ-ಮರ-ಒಳಗೆ ಪಾಟ. ರತನ್ ಕಲ್ಲೆಸೆದ ತಕ್ಷಣ ಬಾವಿಯೊಳಗಿನಿಂದ ನೂರಾರು ಪಾರಿವಾಳ ಭರ್ರನೆ ಎದ್ದು ಬರುತ್ತವೆ. ಹ್ಞಾಂ, ಇಲ್ಲಿ ನವಿಲೂ ಕಾಣಿಸ್ತವೆ ಅಂದಿದ್ದಳು ಮೌಸಿ. `ಅಲ್ನೋಡು ಅಲ್ನೋಡು` ಅಂತ ರತನ್ ಅನ್ನುವ ಹೊತ್ತಿಗೆ ನವಿಲು ಮಾಯ. ಇವನು ನೋಡಲಾಗುವುದೇ ಇಲ್ಲ. ಆದರೆ ಅನಾಥ ಹುಡುಗ ಮತ್ತು ತಾನೀ ಮೌಸಿ ತಾಯಿ-ಮಗನಷ್ಟೆ ಗೆಳೆಯರಾಗಿ ಬಿಡುತ್ತಾರೆ. ಶಾಲೆಯಲ್ಲಿ ಅವನ ಮೇಷ್ಟ್ರು ಹಲೇಶ್ವರ ಪ್ರವಾಸಕ್ಕೆ ಹೋಗಬೇಕು. ಎಲ್ಲಾರೂ `ನಾಕುನಾಕಾಣೆ ತರ್ರಿ` ಎಂದಾಗ ಇವನು `ನಾನು ಬರೋದಿಲ್ಲ, ಬಡವರು" ಅನ್ನುತ್ತಾನೆ. ಮೇಷ್ಟ್ರು ಬಡಿದಾಗ ಮೌಸಿ ತಾನೇ ಶಾಲೆಗೆ ಬಂದು ಮೇಷ್ಟ್ರನ್ನು ಬೈದು, ಆ ಶಾಲೆಯನ್ನೇ ಬಿಡಿಸಿ ಬೇರೆ ಶಾಲೆಗೆ ಸೇರಿಸುತ್ತಾಳೆ. ಹಲೇಶ್ವರಕ್ಕೆ ನಾವಿಬ್ಬರೇ ನಡಕೋತ ಹೋಗೋಣ. ರೊಟ್ಟಿ-ತುಂಬುಗಾಯಿ ಒಯ್ಯೋಣ. ಗಡಿಗೆ ತುಂಬ ಗಟ್ಟಿ ಮೊಸರು, ಗೊಜ್ಜಿನ ಹಿಟ್ಟು ಒಯ್ಯೋಣ. ದಾರ‍್ಯಾಗ ನವಿಲು ಕಂಡಾವು. ಅಲ್ಲಿ ಮಾವಿನ ತೋಪಿದೆ. ಗಿಡ ಗಿಡಕ್ಕೂ ಮಾವಿನಮಿಡಿ. ಅದಕ್ಕೆ ಉಪ್ಪು-ಕೆಂಪು ಮೆಣಸಿನ ಪುಡಿ, ಎಲ್ಲಾದರೂ ಬಾವಿ ಕಟ್ಟೆಯ ಮೇಲೆ ಕುಳಿತು ಶೇಂಗಾ-ಬೆಲ್ಲ ತಿನ್ನೋಣ. ಕೆರೆಯಲ್ಲಿ ಮೊಳಕಾಲುದ್ದ ನೀರಿನಲ್ಲಿ ಆಡೋಣ...

ಹಾಗೆಲ್ಲ ಮೌಸಿ ಹೇಳುತ್ತಿದ್ದರೆ ಅವನಿಗೆ ಚಿಕ್ಕಮ್ಮ ಥೇಟು ಅಮ್ಮ ಅನ್ನಿಸುತ್ತಾಳೆ. ಅದೊಂದು ದಿನ ನವಿಲು ನೋಡುವ ಹಂಬಲ ತಡೆಯಲಾಗದೆ ಹುಡುಗ ಒಬ್ಬಂಟಿಯಾಗಿ ರಾಜಾಸಾಬರ ಬಾವಿಯ ಬಳಿಗೆ ಹೋಗಿಬಿಡುತ್ತಾನೆ. ಅಲ್ಲಿ ಅವನಿಗೆ ಜಂಟಿ ಕಾಣಿಸುತ್ತದೆ. ನವಿಲಿನದಲ್ಲ: ತಾನೀ ಮೌಸಿಯ ಗಂಡ ಭಾಪೂರಾವ್ ಮತ್ತು ಮನೆಗೆಲಸದ ತುಳಸಾ. ಆ ವಿಷಯ ತಿಳಿಸಿದಾಗ ಮೌಸಿ ಹತಾಶಳಾಗಿ `ಶಾಲೆಯಲ್ಲಿ ಯಾರಿಗೂ ಹೇಳಬೇಡ" ಎಂದಷ್ಟೆ ಹೇಳಿ ಕಣ್ಣೀರು ತುಂಬಿಕೊಳ್ಳುತ್ತಾಳೆ. ಸೇರಿಕೊಂಡ ಇನ್ನೊಂದು ಶಾಲೆಯಲ್ಲಿ ಮಾಸ್ತರನಿಗೆ ಉಗ್ಗು. ಅವನ ಭಾಷೆ ಶುದ್ಧವಲ್ಲ. ವಿಸ್ನು ಅನ್ನುತ್ತಾನೆ. ಕನ್ನು ಅನ್ನುತ್ತಾನೆ. ಆತನನ್ನು ಈ ಹುಡುಗ ಗೆಳೆಯರ ಮುಂದೆ ಅಣಕಿಸಿ ತೋರಿಸುತ್ತಾನೆ. ಅದು ಮಾಸ್ತರನಿಗೆ ಗೊತ್ತಾಗುತ್ತದೆ. ಆದರೆ ಆತ ಹೊಡೆಯುವುದಿಲ್ಲ.

`ನೋಡೂ, ನಿನ್ನ ಅಕ್ಷರ ಚೆನ್ನಾಗಿವೆ. ನಿಂಗೆ ಎಷ್ಟೊಂದು ಕವಿತೆ ಗೊತ್ತು. ನಿನ್ನ ವಯಸ್ಸಿನಲ್ಲಿ ನಾನು ದನಾ ಕಾಯುತ್ತಿದ್ದೆ. ಒಂದಕ್ಷರ ಬರುತ್ತಿರಲಿಲ್ಲ. ನೋಡೂ, ನಾನು ಕನ್ನು, ಹನ್ನು, ಮನ್ನು ಅಂತೇನಲ್ಲ? ಅದು ನನ್ನ ಭಾಷೆ. ನನ್ನ ತಾಯಿ ಭಾಷೆ. ಅದೂ ಒಂದು ಭಾಷೆಯೇ. ನನ್ನ ಭಾಷೆಯನ್ನು ಹೇಗೆ ಮರೆಯಲಿ? ನನ್ನ ತಾಯಿ ರಸ್ತೆಯ ಕಸ ಬಳಿಯುತ್ತಿದ್ದ ಜಾಡಮಾಲಿ. ಆದರೂ ಓದಿಸುತ್ತಿದ್ದಳು. ಅವಳಿಗೆ ಕೃಷ್ಣ ಅನ್ನಲಿಕ್ಕೇ ಬರುತ್ತಿರಲಿಲ್ಲ. ಹೀಗಾಗಿ ನಾನು ಕಿಸನ್ ಅಂತಲೇ ಅನ್ನಿಸಿಕೊಂಡೆ. ನನ್ನ ಉಗ್ಗು ಜನ್ಮತಃ ಬಂದದ್ದು. ಬೇಕೆಂತಲೇ ನಾನು ಉಗ್ಗುತ್ತೇನಾ? ಮಾತಾಡುವ ಬದಲು ನಾನು ಬರೆಯುತ್ತೇನೆ. ಕಾಗದ ಶಾಂತವಾಗಿ ನನ್ನ ಮಾತು ಆಲಿಸುತ್ತದೆ. ಉಳಿದವರ ಹಾಗೆ ನಗುವುದಿಲ್ಲ. ನೀನೂ ಬರಿ. ನಿನ್ನ ಇಷ್ಟದ ಮೌಸಿಯ ಬಗ್ಗೆ ಬರಕೊಂಡು ಬಾ. ಇಪ್ಪತ್ತು ಸಾಲು. ಅವಳಿಗೆ ಖುಷಿಯಾಗಿ ಶೇಂಗಾ-ಬೆಲ್ಲ ಕೊಡುತ್ತಾಳೆ. ನಾನು ಬದಾಮ್ ಕೊಡುತ್ತೇನೆ" ಅಂತಾರೆ ಮಾಸ್ತರ್.
ಹುಡುಗ ಕಣ್ಣೀರಾಗಿ ಬಿಡುತ್ತಾನೆ.

ಅವತ್ತೇ ರಾತ್ರಿ ತಾನೀ ಮೌಸಿ ಮತ್ತು ಅವಳ ಗಂಡ ಭಾಪೂರಾವ್ ಮಧ್ಯೆ ಜಗಳ. ಮನೆಗೆಲಸದ ತುಳಸಾ ಪಂಢರಾಪುರಕ್ಕೆ ಹೊರಟಿದ್ದಾಳೆ. ಅವಳಿಗೆ ಕೆಲ ದಿನಗಳ ಮಟ್ಟಿಗೆ ಕೊರಳಹಾರ ಕೊಡು ಅನ್ನುತ್ತಾನೆ ಗಂಡ. `ಮೊದಲು ನನ್ನ ಕೊಂದು ಹಾಕಿ, ಆ ಕೊರಳ ಹಾರ ತಗೋರಿ. ತವರ ಮನಿಯವರು ಕೊಟ್ಟದ್ದು ಅದು" ಎಂದು ಹಟಕ್ಕೆ ಬೀಳುತ್ತಾಳೆ. ಗಂಡ ಬಡಿಯುತ್ತಾನೆ. ಆಸ್ಪತ್ರೆಯಿಂದ ವಿಷ ತಂದು ತಿಂದು ಸಾಯಿ ಅಂತ ಬಯ್ಯುತ್ತಾನೆ. ಅವನ ಬಡಿದಾಟಕ್ಕೆ ಮಂಗಳಸೂತ್ರ ಹರಿದು ಹೋಗುತ್ತದೆ. ಹುಡುಗ ಅಡ್ಡ ಬಂದಾಗ ಭಾಪೂರಾವ್ ಅವನನ್ನು ಗೋಡೆಗೆ ಹೋಗಿ ಬೀಳುವಂತೆ ಒದೆಯುತ್ತಾನೆ. ತಕ್ಷಣ ಎದ್ದು ಕೋಲೆತ್ತಿಕೊಳ್ಳುವ ಮೌಸಿ `ಆ ಹುಡುಗನನ್ನು ಮುಟ್ಟಿದರೆ ನಿಮ್ಮನ್ನೇ ಕೊಲ್ತೀನಿ" ಎಂದು ಅಬ್ಬರಿಸುತ್ತಾಳೆ. ಭಾಪೂರಾವ್ ಅವಳ ಕೊರಳ ಹಾರ ಕಿತ್ತುಕೊಂಡು ಹೋಗಿ ಬಿಡುತ್ತಾನೆ.
ಈ ಹುಡುಗ ಚಿಕ್ಕಮ್ಮನ ಬಗ್ಗೆ ಬರೆದ ಪ್ರಬಂಧವನ್ನಿನ್ನೂ ಮಾಸ್ತರರಿಗೆ ಕೊಡಲಾಗಿಲ್ಲ. ಅಷ್ಟರಲ್ಲಿ ತಾನೀ ಮೌಸಿ ಅವನನ್ನು ಊರಿಗೆ ಹೊರಡಿಸಿಬಿಡುತ್ತಾಳೆ. ಇನ್ನು ಇಲ್ಲಿದ್ದುದು ಸಾಕು. ಶ್ರೀಪೂ ಮಾವನ ಮನೆಯಲ್ಲೇ ಇದ್ದು ಕಲಿತು, ದೊಡ್ಡವನಾಗು ಎಂದು ಹರಸಿ, ಕಿಸೆಯಲ್ಲಿ ಎರಡಾಣೆ ಇಟ್ಟು ಬಸ್ಸು ಹತ್ತಿಸಿ ಬಿಡುತ್ತಾಳೆ. ಬಸ್ಸು ಹೊರಟಾಗ ಅವಳು ಕುಕ್ಕರ ಕುಸಿದು ಅಳುವುದು ಕಾಣಿಸುತ್ತದೆ. ಹೋಗುವ ಬಸ್ಸಿನಲ್ಲಿ ದಿಡಗ್ಗನೆ ಎದ್ದ ಜನ `ನವಿಲು ನವಿಲು` ಅಂತ ಕೂಗುತ್ತಾರೆ. ಆದರೆ ಹುಡುಗನಿಗೆ ಕಾಣುವುದು ಜನರ ಬೆನ್ನು. ಅಲ್ಲಿ ಅವನಿಗೆ ನವಿಲೇ ಕಾಣುವುದಿಲ್ಲ. ಶಾಲೆಯ ಹತ್ತಿರ ಬಸ್ಸು ನಿಲ್ಲಿಸೋಣವೆಂದರೆ ಡ್ರೈವರ್ ಕೇಳಿಸಿಕೊಳ್ಳುವುದಿಲ್ಲ. ಬಸ್ಸಿನ ಕಿಟಕಿಯಿಂದಲೇ ಪ್ರಬಂಧವನ್ನು ಶಾಲೆಯ ಕಡೆಗೆ ಎಸೆಯುತ್ತಾನೆ. ಅದು ಮಾಸ್ತರನಿಗೆ ಸಿಕ್ಕು, ಅವರು ಓದಿ, ತಾನೀ ಮೌಸಿಗೆ ಕೊಟ್ಟಾಗ ಅವಳಿಗೆ ಖುಷಿಯಾಗಬಹುದು ಅಂದುಕೊಳ್ಳುತ್ತಾನೆ.

ಆದರೆ ಹಲೇಶ್ವರದ ಕನಸು ನನಸಾಗುವುದೇ ಇಲ್ಲ. ಮಾವಿನ ಮಿಡಿ ತಿನ್ನಲೇ ಇಲ್ಲ. ಮೌಸಿ ಕೈಗೆ ಪ್ರಬಂಧ ಸಿಗಲೇ ಇಲ್ಲ. ನವಿಲು ಕಾಣಿಸಲೇ ಇಲ್ಲ. ಶ್ರೀಪೂ ಮಾವನ ಮನೆಗೆ ಬಂದ ಮಾರನೆಯ ದಿನ ಊರಿನಿಂದ ಸುದ್ದಿ ಬರುತ್ತದೆ. ತಾನೀ ಮೌಸಿ ಹೋದಳು. ಮಲಗಿದವಳು ಏಳಲೇ ಇಲ್ಲ. ಶ್ರೀಪೂ ಮಾವ ಚೀರಾಡಿ, ಬೋರಲು ಬಿದ್ದು ಬಿಕ್ಕಿ ಅಳುವುದನ್ನು ಈ ಹುಡುಗ ಕಿಟಕಿಯಲ್ಲಿ ನಿಂತು ನೋಡುತ್ತಾನೆ, ಅಷ್ಟೆ.
ಇದೆಂಥ ಕಥೆ ಬರೆದರು ಜಿ.ಎ! ಎಲ್ಲಿಯ ಮಾನವ ವಿಷಾದ. ಯಾವ ರೌರವ ನರಕದ ಅಂತರ್ ದೃಷ್ಟಿ? ಇಂಥ ಹತ್ತು ಕಥೆಗಳನ್ನು ಕನ್ನಡಕ್ಕೆ ತಂದು `ಜಿ.ಎ.ಕುಲಕರ್ಣಿ ಕಥೆಗಳು` ಎಂಬ ಸಂಕಲನ ಮಾಡಿದ್ದಾರೆ ಚಂದ್ರಕಾಂತ ಪೋಕಳೆ. ಇನ್ನೂ ಅದೆಷ್ಟು ಬರೆದಿದ್ದಾರೋ ಎಕ್ಸಂಬಾದಲ್ಲಿ ಹುಟ್ಟಿದ ಗುರುನಾಥ ಆ ಬಾಜಿ ಕುಲಕರ್ಣಿ? ಹಾಗೆ ಬರೆಯಲು ಸಾಧ್ಯವಾದದ್ದೇ ಅವರ ಮೌನದಿಂದಾಗಿ, ಒಬ್ಬಂಟಿತನದಿಂದಾಗಿ ಮತ್ತು ಶಿಸ್ತಿನಿಂದಾಗಿ.

ಅದಲ್ಲವೆ ಚಾತುರ್ಮಾಸ? ಜೀವನ ಪರ್ಯಂತ ಅವರು ಚಾತುರ್ಮಾಸ ವ್ರತ ಹಿಡಿದಿದ್ದರೇನೋ?

-ನಿಮ್ಮವನು
ಆರ್.ಬಿ.

Read Archieves of 10 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books