Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಅವರೆಲ್ಲ ಬಂದ ನಂತರ ಪಕ್ಷದಲ್ಲಿ ಶಿಸ್ತು-ನಿಯತ್ತು ಉಳಿದಾವಾದರೂ ಹೇಗೆ?

ಇಪ್ಪತ್ನಾಲ್ಕು ದಿನ!

ಯಡಿಯೂರಪ್ಪನ ಜಾತಕದಲ್ಲಿ ತುರಂಗವಾಸ ಬರೆದಿತ್ತೇನೋ? ಸದ್ಯಕ್ಕೆ ಮೊದಲ ಕಂತು ಮುಗಿಸಿ ಹೊರ ಬಂದಿದ್ದಾರೆ. ಹೊರ ಬರುವ ಸೂಚನೆ ಕಳೆದ ಮೂರು ದಿನಗಳ ಹಿಂದೆ ಇತ್ತು. ಅಲ್ಲಿ ಆಂಧ್ರದ ಹೈಕೋರ್ಟಿನಲ್ಲಿ ಜನಾರ್ದನ ರೆಡ್ಡಿ ಬೇಲ್ ಪಡೆದು ಚಂಚಲಗೂಡಾದಿಂದ ಹೊರ ಬರಬಹುದಾ? ಅಂಥದೊಂದು ನಿರೀಕ್ಷೆಯ ಮಾತು ಆರಂಭವಾಗಿದೆ.

ಅದಿರಲಿ, ಈ ತುರಂಗವಾಸದ ಅಧ್ಯಾಯಗಳು ಸದರಿ ನಾಯಕರ ಭವಿತವ್ಯ ಬದಲಿಸಲಿವೆಯಾ? ಅವರ ಪಕ್ಷಗಳಲ್ಲಿ ಸುರಂಗ ತೋಡಲಿವೆಯಾ? ಪಕ್ಷಕ್ಕೆ ಪಕ್ಷವೇ ಇಬ್ಭಾಗವಾಗಿ ಹೊಸದೊಂದು ರೂಪದಲ್ಲಿ ಇವೇ ಮತೀಯ ಶಕ್ತಿಗಳು ತಲೆಯೆತ್ತಲಿವೆಯಾ? ರಾಜ್ಯದಲ್ಲಿ ಮತ್ತು ರಾಷ್ಟ್ರಮಟ್ಟದಲ್ಲಿ ತೀರ ಅನಿರೀಕ್ಷಿತ ರೀತಿಯಲ್ಲಿ ಹೊಸ ಹೊಂದಾಣಿಕೆಗಳಾಗಲಿವೆಯಾ?

ಒಂದು ಚಿಕ್ಕ ಸಂಗತಿ : ಕೆಲವು ಅಂಗಡಿಗಳನ್ನ, ವ್ಯಾಪಾರಗಳನ್ನ, ಪತ್ರಿಕೆಗಳನ್ನ ಆರಂಭಿಸುವ ಸಂದರ್ಭದಲ್ಲಿ ಒಂದೋ, ಅವಕ್ಕೆ ಹೊಸ ಹೆಸರಿಡುತ್ತಾರೆ. ತಪ್ಪಿದರೆ, ಹಳೆಯದಾಗಿದ್ದು, ಆಲ್‌ಮೋಸ್ಟ್ ತೀರಿಕೊಂಡ ಸ್ಥಿತಿಯಲ್ಲಿರುವ ಅಂಗಡಿ ಅಥವಾ ಪತ್ರಿಕೆಯ ಹೆಸರು ಖರೀದಿ ಮಾಡಿ ಅದರ ಮಾಲಿಕತ್ವಕ್ಕೆ ತಾವು ಬಂದು ಕುಳಿತುಕೊಳ್ಳುತ್ತಾರೆ. ಹೊಸ ಹೆಸರಿನೊಂದಿಗೆ ಮಾಡಿದರೆ ಅದರ Brand name ಖ್ಯಾತಗೊಳ್ಳುವುದಕ್ಕೆ ಸಮಯ ಬೇಕು. ಹಳೆಯ ಹೆಸರಿಗೆ ಬ್ರ್ಯಾಂಡೂ ಇರುತ್ತದೆ, ಹಳೆಯ ಗ್ರಾಹಕರೂ ಇರುತ್ತಾರೆ. ವ್ಯಾಪಾರಿ ಪ್ರಪಂಚದಲ್ಲಿ ಇದು ಮಾಮೂಲಿ ವ್ಯವಹಾರ.

ಆದರೆ ಕರ್ನಾಟಕ ರಾಜಕಾರಣದಲ್ಲಿ ಅಂಥದೊಂದು ಹಳೆಯ ಪಕ್ಷದ ಟೈಟಲ್ಲು ತೇಲಿ ಬರಲಿದೆಯೆಂದರೆ ಅದು ಜನತಾದಳ(ಯು). ಸದ್ಯಕ್ಕೆ ಕರ್ನಾಟಕದಲ್ಲಿರುವ ಏಕಾಂಗಿ ಮಗುವೆಂದರೆ ಡಾ.ಎಂ.ಪಿ.ನಾಡಗೌಡ. ಆದರೆ ಜೆ.ಡಿ(ಯು)ಗೆ ಬಿಹಾರದಲ್ಲಿ ನಿತೀಶ್ ಕುಮಾರ್ ಗಾಡ್‌ಫಾದರ್ ಆಗಿರುವುದೂ, ಅವರು ಸಾಕಷ್ಟು ಯಶಸ್ವಿ ಮುಖ್ಯಮಂತ್ರಿಯಾಗಿರುವುದೂ ಮತ್ತು ಮುಂದಿನ ಪ್ರಧಾನಮಂತ್ರಿ ಪಟ್ಟಕ್ಕೆ ಅವರು ಅಣಿಯಾಗಿರುವುದೂ ಇತ್ತೀಚಿನ ಬೆಳವಣಿಗೆಗಳು. ಈತನಕ ಕರ್ನಾಟಕದಲ್ಲಿ ಇದರ ಬಗ್ಗೆ ಕೇವಲ ಎಂ.ಪಿ.ನಾಡಗೌಡರಷ್ಟೆ ಸಂಭ್ರಮ ಪಡುತ್ತಿದ್ದರು. ಈಗ ಅವರೊಂದಿಗೆ ಒಂದು ದೊಡ್ಡ ಗುಂಪು ಸೇರಿಕೊಳ್ಳಲಿದೆಯಾ. ಅದನ್ನು ಯಡಿಯೂರಪ್ಪ ಹಳೆಯ ಟೈಟಲ್ ಕೊಂಡಂತೆ ಕೊಂಡು ಮತ್ತೆ ಅಕಾರಕ್ಕೆ ತರಲು ಹವಣಿಸುತ್ತಾರಾ? ರಾಜಕೀಯ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ.

ಯಡಿಯೂರಪ್ಪ ಜೈಲಿಗೆ ಹೋದಾಗ ಬಿಜೆಪಿಯಲ್ಲಿ ಬೇಸರಪಟ್ಟವರಷ್ಟೇ ಸಂಖ್ಯೆಯಲ್ಲಿ ಸಂತೋಷ ಪಟ್ಟವರೂ ಇದ್ದರು. ಈಗ ಹೊರ ಬಂದಾಗ ಆ ಸ್ಥಿತಿ ಉಲ್ಟಾ ಆಗಿದೆ. ಜೈಲಿನಲ್ಲಿದ್ದೇ ರಾಜಕಾರಣ-ಹೋರಾಟ ಮಾಡ್ತೀನಿ ಎಂದು ಅಬ್ಬರಿಸಿದ ಯಡ್ಡಿ, ಜಾಮೀನು ಸಿಗದಾಕ್ಷಣ ಆಸ್ಪತ್ರೆ-ಆಸ್ಪತ್ರೆ ಅಡ್ಡಾಡಿ, ಕಡೆಗಿದು ರಾದ್ಧಾಂತವೇ ಆದೀತು ಅಂತ ಗೊತ್ತಾದಾಗ ತೆಪ್ಪಗೆ ಹೋಗಿ ಜೈಲಿನಲ್ಲಿ ಕುಳಿತರು. ಆದರೆ ತೆಪ್ಪಗೆ ಕುಳಿತರು ಅಂತ ಯಾರೂ ಭಾವಿಸಬೇಕಾಗಿಲ್ಲ. ಯಾರಿಗೆ ಯಾವ ಸಂದೇಶ ಮುಟ್ಟಿಸಬೇಕೋ ಮುಟ್ಟಿಸುತ್ತಲೇ ಇದ್ದರು. ಅವರ ಕೆಲಸಗಳು ಆಗುತ್ತಲೇ ಇದ್ದವು. ಬರುವ ಆಮದನಿ ಬರುತ್ತಲೇ ಇತ್ತು. ಹೊರಗೆ ಈ ರೇಣುಕಾಚಾರ್ಯನಂಥ ಅಪಸ್ಮಾರಿಗಳು ಕಾವು ಆರದಂತೆ, ಕ್ರಮೇಣ ಜೈಲಿನಲ್ಲಿರುವ ಯಡ್ಡಿ ಬಗ್ಗೆ ಜನರಲ್ಲಿ ಸಿಂಪಥಿ ಬೆಳೆಯುವಂತೆ ನೋಡಿಕೊಳ್ಳುತ್ತಿದ್ದರು. ಸೋಮಣ್ಣನಂಥ ಚಾಣಪತ್ರಿಗಳು ಅದ್ವಾನಿಯ ರಥಯಾತ್ರೆಯ ಸಾಫಲ್ಯವನ್ನೇ ನಾಶವಾಗುವಂತೆ ಪ್ಲಾನು ಮಾಡಿದರು. ಅದ್ವಾನಿಯನ್ನು ಕರೆತಂದ ಅನಂತಕುಮಾರ್ ಗ್ಯಾಂಗಿನವರ ಮುಖದಲ್ಲಿ ರಕ್ತವಿರಲಿಲ್ಲ. ಎರಡು ಗ್ಯಾಂಗುಗಳು ಬಿಜೆಪಿಯಲ್ಲಿ ಸೃಷ್ಟಿಯಾಗಿವೆ ಎಂಬುದು ಜನಸಾಮಾನ್ಯನಿಗೂ ಅರ್ಥವಾಗುವ ರೀತಿಯಲ್ಲಿ ಎರಡೂ ಬಣಗಳು ಬಹಿರಂಗ ಯುದ್ಧಕ್ಕೆ ಬಿದ್ದವು. ಯಡಿಯೂರಪ್ಪನ ಮೇಲೆ, ಕೃಷ್ಣಯ್ಯ ಶೆಟ್ಟಿಯ ಮೇಲೆ ಕೇಸು ಬಿದ್ದು ಜೈಲಿಗೆ ಸೇರಿದ ತಕ್ಷಣ ಆರ್.ಅಶೋಕ್ ಮೇಲೆ ಒಂದು ಕೇಸು ಹುಟ್ಟಿಕೊಂಡಿತು. ಅದರ ಬೆನ್ನಲ್ಲೇ ಯಡ್ಡಿ ಗುಂಪಿನ ನಿರಾಣಿಯ ಮೇಲೊಂದು ಕೇಸು. ಕಡೆಗೆ ಶೋಭಾ ಕರಂದ್ಲಾಜೆ ಮೇಲೆ, ಈ ಕಡೆ ಈಶ್ವರಪ್ಪನ ಮೇಲೆ ಕೇಸುಗಳಾಗುತ್ತವಂತೆ ಎಂಬ ಮಾತು ಕೇಳಿ ಬಂತು. ಆರಂಭದಲ್ಲಿ ಗೌಡರು ಮತ್ತವರ ಮಕ್ಕಳು ಯಡ್ಡಿ ಮೇಲಿನ ಕೇಸಿಗೆ ತುಪ್ಪ ಎರೆದರಾದರೂ ಮುಂದೆ ಇಡೀ ಬಿಜೆಪಿ ಕೋರ್ಟುಗಳ ಬಡಬಾಗ್ನಿಯಲ್ಲಿ ಬೇಯತೊಡಗಿತು. ಪರಸ್ಪರರನ್ನು ನಾಶಮಾಡುವ ಹುನ್ನಾರ. ಅಕಸ್ಮಾತ್ ಜನಾರ್ದನ ರೆಡ್ಡಿಯೇನಾದರೂ ಜೈಲಿನಲ್ಲಿರದೆ ಹೊರಗಿದ್ದಿದ್ದರೆ ಪರಿಸ್ಥಿತಿ ಇನ್ಯಾವ ಮಟ್ಟಕ್ಕೆ ಹೋಗಿರುತ್ತಿತ್ತೋ? ಗುಂಪುಗಾರಿಕೆಯೆಂಬುದು power politicsನಲ್ಲಿ ತುಂಬ ಸಾಮಾನ್ಯ. ಅಂಥ ದೊಡ್ಡ ಕಾಂಗ್ರೆಸ್ ನಾಯಕರೇ ಸೋನಿಯಾ ಗಾಂ ಖುದ್ದಾಗಿ ಕರೆದು ಗದರುವತನಕ ಸರಿ ಹೋಗುವುದಿಲ್ಲ. ಇನ್ನು ಬಿಜೆಪಿಯದು ಯಾವ ಲೆಕ್ಕ?

ಹಾಗೆ ನೋಡಿದರೆ ಫ್ಯಾಸಿಸ್ಟ್ ಲಕ್ಷಣಗಳನ್ನೆಲ್ಲ ಹೊಂದಿರುವ ಬಿಜೆಪಿಯಲ್ಲಿ ಶಿಸ್ತು ಇರಲೇ ಬೇಕಿತ್ತು. ಬಹಳ ದಿನಗಳ ತನಕ ಅದು ಇತ್ತೆಂಬುದೂ ಹೌದು. ಆರೆಸ್ಸೆಸ್ಸಿನಿಂದ ಪ್ರೇರಿತವಾದ ಫ್ಯಾಸಿಸ್ಟ್ ಶಿಸ್ತು. ಅಲ್ಲಿ ಡೆಮಾಕ್ರಸಿಗೆ ಅರ್ಥವಿರಲಿಲ್ಲ. ಆದರೆ ಆರೆಸ್ಸೆಸ್ಸಿನ ಈ ಮುದಿಗೊಡ್ಡುಗಳನ್ನಷ್ಟೆ ನಂಬಿ ಕುಳಿತರೆ ಬಿಜೆಪಿ ಜನ್ಮದಲ್ಲೇ ಅಕಾರಕ್ಕೆ ಬರಲಾರದು ಅಂತ ತೀರ್ಮಾನಿಸಿದ ವಾಜಪೇಯಿ ಮತ್ತು ಅವರ ತಲೆಮಾರಿನ ಕೆಲವರು ಬಿಜೆಪಿಗೆ ಶ್ರೀಮಂತರನ್ನು ಹಿಡಿದು ತರತೊಡಗಿದರು. That was the beginning of the end. ಬಿಜೆಪಿಯೆಂಬುದು ಬನಿಯಾ(ವ್ಯಾಪಾರಿ) ಜನರ ಪಾರ್ಟಿ ಎಂಬ ಮಾತು ಹುಟ್ಟಿಕೊಂಡಿತು. ಕೆಲವೆಡೆ ಶುದ್ಧ ಬಿಜೆಪಿ ಶಿಸ್ತಿನ ಮುಖಂಡರೇ ಉಮಾ ಭಾರತಿ, ವಿನಯ್ ಕಟಿಯಾರ್‌ರಂಥ ಪೋಕರಿಗಳ, ಪುಂಡರ ಗುಂಪಿನ ನಾಯಕರನ್ನು ಎತ್ತಿ ಕಟ್ಟಿದರು. ಇಂದು ಯಾವತ್ತಿಗೂ ಕ್ರಿಯಾಶೀಲವಾಗದ, ಒಳ್ಳೆಯರೂ ತರದ, ರೌಡಿಗಳ laumpen ಸಮೂಹ ಎಂಬುದು ಗೊತ್ತಿದ್ದರೂ ಚುನಾವಣೆಗಳ ಆ ಕ್ಷಣದ ಅವಶ್ಯಕತೆಗಾಗಿ ಮತ್ತು ಮಸೀದಿ ಪ್ರಕರಣ, ಯಾತ್ರೆಗಳು, ಸಾಮೂಹಿಕ ಹತ್ಯೆಗಳು ಮುಂತಾದವುಗಳ ಆವಶ್ಯಕತೆಗಳಿಗಾಗಿ ಭಜರಂಗದಳ, ಶ್ರೀ ರಾಮಸೇನೆಯಂಥ ಗುಂಪುಗಳನ್ನು ಸೃಷ್ಟಿಸಲಾಯಿತು.

ಇವೆರಡರಿಂದಲೂ ಬಿಜೆಪಿಗೆ ಲಾಭವಾಗಿದ್ದು ಹೌದು. ಶ್ರೀಮಂತರ ಬೆಂಬಲ ಅಂದರೆ ಮೇಲ್ಜಾತಿಯವರ ಬೆಂಬಲ ಸಿಕ್ಕಿತು. ಪುಂಡು ಪೋಕರಿಗಳು ಎಲ್ಲ ಜಾತಿಗಳಿಂದಲೂ ಬಂದರು. ಆದರೆ ಮುಸ್ಲಿಮರ ವಿರುದ್ಧ ಬಡಿದಾಡಲಿಕ್ಕೆ ಬಲಿಷ್ಠರೇ ಬೇಕಿತ್ತು: ಹೀಗಾಗಿ ಹಿಂದುಳಿದ ವರ್ಗದ ಅಮಾಯಕ ಹುಂಬರನ್ನು ಕರೆತಂದರು. ಮುಂದೇನಾಯಿತು ನೋಡಿ? ಪಕ್ಷದೊಳಕ್ಕೆ ಥೈಲಿ ಹಿಡಿದೇ ಬಂದಿದ್ದ ಶ್ರೀಮಂತರು ಮಟ್ಟಸವಾಗಿ ಚುನಾವಣಾ ರಾಜಕೀಯ ಮಾಡಿ ಗದ್ದುಗೆ ಹಿಡಿದರು. ಬಡಿದಾಡಿ ಬೆಂಕಿ ಹಚ್ಚಿದ ಹುಂಬರು ವರ್ಷಗಟ್ಟಲೆ ಜೈಲುಗಳಲ್ಲಿ ಕೊಳೆತರು. ಒಬ್ಬೊಬ್ಬರ ಮೇಲೂ ಸಾಲು ಸಾಲು ಕೇಸು ಬಿದ್ದವು. ಬೇಲ್ ಕೊಟ್ಟು ಬಿಡಿಸಿಕೊಳ್ಳುವುದು ಹಾಗಿರಲಿ. ಜೈಲಿಗೆ ಹೋಗಿ ವಿಚಾರಿಸಿಕೊಳ್ಳುವವರೂ ದಿಕ್ಕಿಲ್ಲದಂತಾಯಿತು. ಅವತ್ತು ಹಾಗೆ ರಾಮ ಜನ್ಮಭೂಮಿ, ಗೋಧ್ರಾ, ಗುಜರಾತ್ ಹತ್ಯಾಕಾಂಡ, ಇಲ್ಲಿ ದತ್ತಪೀಠ ಗಲಾಟೆಗಳು, ದನ ಕಡಿಯುವವರನ್ನು ಬಡಿಯುವ ಪ್ರಕರಣಗಳು- ಇವುಗಳಲ್ಲಿ ಭಾಗಿಯಾಗಿ ಅನೇಕ ವರ್ಷಗಳಿಂದ ಜೈಲುಗಳಲ್ಲಿದ್ದು ಹೊರಬಂದ ಅನೇಕ ಹುಡುಗರು ಶ್ರೀರಾಮಸೇನೆ, ಭಜರಂಗದಳ ಮುಂತಾದವುಗಳ ಕಡೆಗೆ ಕಣ್ಣು ಕೂಡ ಹಾಕುವುದಿಲ್ಲ. ಕೆಲವರು ರೌಡಿಗಳಾಗಿದ್ದಾರೆ. ಕೆಲವರು ತಣ್ಣಗಾಗಿದ್ದಾರೆ. ಕೆಲವರು ಕೊಲೆಯಾಗಿ ಹೋಗಿದ್ದಾರೆ. ಅವರ‍್ಯಾರೂ ಈಗ ಬಿಜೆಪಿಗೆ ಬೇಕಾಗಿಲ್ಲ.
ಆದರೆ ಅಕಾರಕ್ಕೆ ಬಂದ ಶ್ರೀಮಂತರು ಬಿಜೆಪಿಗೆ ಮಾಡಿದ್ದೇನು? ಅವರು ಬಿಜೆಪಿಯನ್ನು ಅಕಾರಕ್ಕೆ ತಂದದ್ದಷ್ಟೆ ನಿಜ. ಕರ್ನಾಟಕದಲ್ಲಿ ಅವೆಷ್ಟು ಕಮಲಗಳ ಆಪರೇಷನ್ನುಗಳು? ಎಷ್ಟು ಕೋಟಿ ಸುರಿದರು? ಒಂದೊಂದು ಬಂಡಾಯ ಎಷ್ಟೆಷ್ಟು ಕೋಟಿ ನುಂಗಿತು? ಸಹಜವಾಗಿಯೇ ಬಿಜೆಪಿಯೆಂಬ ಶಿಸ್ತಿನ ಪಕ್ಷದಲ್ಲಿ ಕೋಟ್ಯಂತರ ಸುರಿದವರೇ ದಂಡನಾಯಕರಾದರು. ಹಿಂದೆ ಕೇಂದ್ರದಲ್ಲಿ ಬಿಜೆಪಿ ಅಕಾರದಲ್ಲಿದ್ದಾಗ ಭ್ರಷ್ಟಾಚಾರಗಳಾದದ್ದು ಹೌದಾದರೂ ಅಲ್ಲಿ ಅದ್ವಾನಿ, ವಾಜಪೇಯಿ ಮುಂತಾದವರ ಹಿಡಿತ, ಬೆದರಿಕೆಯಾದರೂ ಇತ್ತು. ಆರೆಸ್ಸೆಸ್ಸು ಹೂಂಕರಿಸುತ್ತಿತ್ತು.
ಆದರೆ ಕರ್ನಾಟಕದಲ್ಲಾದದ್ದೇನು? ಯಡಿಯೂರಪ್ಪ ಮುತ್ಸದ್ದಿಯಾಗಬಹುದಿತ್ತು. ಮೊದಲು ಕುಮಾರಸ್ವಾಮಿಯೊಂದಿಗೆ ಉಡಿಕೆ ಮಾಡಿಕೊಂಡು ಆತ್ಮಗೌರವ-ಅಭಿಮಾನಗಳೆರಡನ್ನೂ ಕಳೆದುಕೊಂಡರು. ಅದನ್ನೇ ಸಿಂಪಥಿಯಾಗಿಸಿಕೊಂಡು ಚುನಾವಣೆಗೆ ಹೋದರು. ಅಲ್ಲಿ ಅಭ್ಯರ್ಥಿಗಳ ಆಯ್ಕೆಯಲ್ಲಿ ಅವರು ನೋಡಿದ್ದು ಎರಡೇ: ದುಡ್ಡು ಮತ್ತು ಜಾತಿ! ಈ ಹೊತ್ತಿಗೆ ಭಜರಂಗದಳ ಮತ್ತು ಶ್ರೀರಾಮಸೇನೆಯ ಪುಂಡರ ಪಟಾಲಮ್ಮು, ಕಡೆಗೆ ಆರೆಸ್ಸೆಸ್ ಕಾರ್ಯಕರ್ತರು ಕೂಡ ಯಡಿಯೂರಪ್ಪನವರ ಬಿಜೆಪಿಗೆ ಬೇಕಾಗಿರಲಿಲ್ಲ. ದುಡ್ಡಿದ್ದವನಿಗೆ, ಜಾತಿ ಬಲವಿದ್ದವನಿಗೆ ಟಿಕೀಟು ಕೊಡು: ಪುಂಡರನ್ನೂ ತರುತ್ತಾನೆ. ಗೆದ್ದೂ ಗೆಲ್ಲುತ್ತಾನೆ ಎಂಬ ಸಿದ್ಧಾಂತ ಅವರದಾಗಿತ್ತು. ಬಹುಮಟ್ಟಿಗೆ ಅದು ಯಶಸ್ವಿಯೂ ಆಯಿತು. ಕೊನೆಗೆ ಆಪರೇಶನ್ ಕಮಲಗಳಾದವಲ್ಲ? ಅವಂತೂ ತುಂಬು ಕುಟುಂಬದೊಳಕ್ಕೆ ಶುದ್ಧ ಹಾದರಗಿತ್ತಿಯರನ್ನು ಸೊಸೆಯಂದಿರಾಗಿ ತಂದುಕೊಂಡಂತಾಗಿಬಿಟ್ಟಿತು. ಇನ್ನೆಲ್ಲಿ ಉಳಿದೀತು ಶಿಸ್ತು?

ತುಂಬ ಘನತೆಯಿಂದ ಬಹುತೇಕ ಬದುಕನ್ನು ಕಳೆದ ನಿಷ್ಠಾವಂತ ಆರೆಸ್ಸೆಸ್ಸಿನ ಹಿರಿಯರು ಕೂಡ ಭ್ರಷ್ಟರಾಗತೊಡಗಿದರು. ಜಾತಿವಾದಿಗಳಾದರು. ಅವರಲ್ಲೇ ಡೀಲರುಗಳು ಹುಟ್ಟಿಕೊಂಡರು. ಮೂಲ ಆರೆಸ್ಸೆಸ್ಸಿನ ಘನತೆಯೇ ಕಳೆದು ಹೋಗಿ ಕಡೆಗೆ `ಕೇಶವ ಶಿಲ್ಪ`ವೆಂಬುದು ವೃದ್ಧಾಶ್ರಮದಂತಾಯಿತು. ಕೆಲಬಾರಿ ಅವರು ಯಡಿಯೂರಪ್ಪನನ್ನು ಗದರಲು ನೋಡಿದರು. ಆದರೆ ಆರೆಸ್ಸೆಸ್ಸಿನ ಅನೇಕ ಕೆಲಸಗಳನ್ನು ಮಾಡಿಕೊಟ್ಟ ಯಡಿಯೂರಪ್ಪ `ನಿಮ್ಮದೇನು ಧಮಕಿ?` ಎಂಬಂತೆ ಪ್ಯಾಂಟು ಕೊಡವಿಕೊಂಡು ಎದ್ದು ಬಂದರು. ಅಂಥ ಆರೆಸ್ಸೆಸ್ಸಿನ ಜಾಗಕ್ಕೆ ಬಂದು ಕುಳಿತದ್ದು ಬ್ರಾಹ್ಮಣ-ಲಿಂಗಾಯತ ಮಠಗಳು. ಅವು ಪರಿಸ್ಥಿತಿಯನ್ನು ಮತ್ತೂ ಹೊಲಗೆಡಿಸಿದವು. ಇವೆಲ್ಲವೂ ಅತಿರೇಕಕ್ಕೆ ಹೋಗಿ ಅಂತ್ಯ ಕಂಡದ್ದು ಪರಪ್ಪನ ಅಗ್ರಹಾರದ ಜೈಲಿನಲ್ಲಿ.

`ಇವತ್ತು ಈಶ್ವರಪ್ಪ ಮತ್ತೆ ಶಿಸ್ತು-ಪಕ್ಷದೆಡೆಗೆ ಬದ್ಧತೆ ಹಾಗೂ ಶುದ್ಧ ಹಸ್ತರಿಗೆ ಮಾತ್ರ ಟಿಕೆಟ್ ಕೊಟ್ಟು ಅಷ್ಟೂ ಕ್ಷೇತ್ರಗಳಲ್ಲಿ ಚುನಾವಣೆ ಎದುರಿಸುತ್ತೇವೆ" ಅನ್ನುತ್ತಿದ್ದಾರೆ. ಅವರು ಜಾತಿ ಮತ್ತು ದುಡ್ಡು ನೋಡಿ ಟಿಕೆಟ್ ಕೊಡುವುದಿಲ್ಲ ಅನ್ನುತ್ತಾರೆ. ಅವತ್ತೇ ಸಂಜೆ ಶ್ರೀರಾಮುಲುವಿಗೆ ಟಿಕೆಟ್ಟು ಕೊಡ್ತೇನೆ ಅನ್ನುತ್ತಾರೆ. ಜಾತಿ ಮತ್ತು ದುಡ್ಡಿನ ದಿರಿಸು ಬಿಚ್ಚಿಟ್ಟರೆ ಶ್ರೀರಾಮುಲುವಿಗೆ ಇರುವ ಅಸ್ತಿತ್ವವಾದರೂ ಏನು? ಕೇವಲ ಶುದ್ಧವಂತ-ನೀತಿವಂತರ ಸಾಲು ಒಯ್ದು ಚುನಾವಣೆ ಎದುರಿಸಿದರೆ ನೂರೈವತ್ತಿರಲಿ, ಹತ್ತು ಸೀಟು ಕೂಡ ಬರುವುದಿಲ್ಲವೆಂಬುದು ಈಶ್ವರಪ್ಪನವರಿಗೆ ಗೊತ್ತಿದೆ.

ಜೈಲಿನಲ್ಲೇ ಇರಲಿ, ನೇಣುಗಂಬದ ಮುಂದೆಯೇ ಇರಲಿ: ಯಡಿಯೂರಪ್ಪನೇ ನಮ್ಮ ನಾಯಕ. ಅವರೇ ಮತ್ತೆ ಮುಖ್ಯಮಂತ್ರಿ. ತಕ್ಷಣಕ್ಕೆ ಅವರೇ ರಾಜ್ಯಾಧ್ಯಕ್ಷರಾಗಬೇಕು. ಎಲ್ಲಿದೆ ಹೈಕಮಾಂಡ್? ಅದಕ್ಕೆ ಹಲ್ಲಿಲ್ಲ. ಅದ್ವಾನಿಯ ಮಾತನ್ನು ಅನಂತಕುಮಾರ್‌ರಂಥ ಬ್ರಾಹ್ಮಣರು ಕೇಳಬಹುದೇನೋ. ಕರ್ನಾಟಕದಲ್ಲಿ ಬಿಜೆಪಿ ಅಂದರೆ ಯಡಿಯೂರಪ್ಪ! ಈ ಮಾತು ಸ್ವತಃ ಯಡಿಯೂರಪ್ಪನಿಂದ ಹಿಡಿದು ರೇಣುಕಾಚಾರ್ಯನ ತನಕ ಎಲ್ಲರೂ ಆಡುತ್ತಾರೆ. ಈಶ್ವರಪ್ಪನಿಗೆ ಸತ್ಯವೇನೆಂಬುದು ಗೊತ್ತು: ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆಸುತ್ತೇವೆ ಎಂದು ಭೋಂಗು ಬಿಡುತ್ತಾರೆ. ದಿಲ್ಲಿಯ ಹೈಕಮಾಂಡ್ ತೀರ ಕಟುವಾದರೆ ಯಡಿಯೂರಪ್ಪ ನಿತೀಶ್ ಕುಮಾರ್‌ರೊಂದಿಗೆ ಒಪ್ಪಂದ ಮಾಡಿಕೊಂಡು ಜೆಡಿ(ಯು) ಸೇರಿ ಬಿಜೆಪಿಯನ್ನು ನಿರ್ನಾಮ ಮಾಡಿಬಿಡಬಹುದು. ಅಥವಾ ಯಡ್ಡಿಯ ಹಟಕ್ಕೆ ಬೆಚ್ಚಿ ಅವರ ಕೈಗೆ ಕರ್ನಾಟಕದ ಘಟಕವನ್ನು ಬಿಟ್ಟು ಬಿಡಬಹುದು. ಈ ಮಧ್ಯೆ ಮತ್ತೆ ಕುಮಾರಸ್ವಾಮಿ-ಯಡಿಯೂರಪ್ಪ ಒಳ ಒಪ್ಪಂದ ಮಾಡಿಕೊಂಡರೆ?
ಭವಿಷ್ಯ ಭಗವಂತ ಮಾತ್ರ ಬಲ್ಲ.

- ರವಿ ಬೆಳಗೆರೆ

Read Archieves of 10 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books