Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಯಮುನಮ್ಮ ಎಲ್ಲಿದ್ದಾಳೋ? ಆದರೆ ಬಾಬ್ಬಿ ಅಲ್ಲೇ ಇದ್ದಾಳೆ!

ಒಂದು ಕಾರು ಬಂದು ಮನೆಯೆದುರು ನಿಂತಿತು. ಆಡುತ್ತಿದ್ದ ಮಕ್ಕಳು ಕಾರಿನಿಂದ ಇಳಿದ ಯುವತಿಯನ್ನೇ ಕಣ್ಣರಳಿಸಿ ನೋಡಿದರು. ಆಕೆಗಿಂತ ಮುಂಚೆ ಮನೆಯೊಳಕ್ಕೆ ಬಂದದ್ದು ಆಕೆಯ ಅತ್ತರಿನ ಘಮ. ಇನ್ನೂ ಚಿಕ್ಕ ವಯಸ್ಸು. ನೋಡಲು ತಕ್ಕ ಮಟ್ಟಿಗೆ ಚೆನ್ನಾಗಿಯೇ ಇದ್ದಳು. ಅದ್ಭುತವಾದ ಇಂಗ್ಲಿಷು. ಆದರೆ ನನ್ನ ಮನೆಯಲ್ಲಿ ಒಂದು ಮುರುಕಲು ಛೇರು ಮಾತ್ರ ಇತ್ತು. ಪುಟ್ಟ ಬಾಡಿಗೆಯ ಮನೆ. ನನ್ನ ಮನೆಯಾಕೆ ಚಾಪೆ ತಂದು ಹಾಕಿ ಆಕೆಯನ್ನು ಕೂಡಿಸಿದಳು. ಮನೆಗೆ ಫೋನೂ ಇರಲಿಲ್ಲ. `ಪತ್ರಿಕೆ` ಆರಂಭಿಸಿ ಆರೆಂಟು ವಾರಗಳಾಗಿದ್ದವಷ್ಟೆ. Organised ವೇಶ್ಯಾವಾಟಿಕೆಗಳ ಬಗ್ಗೆ ಉಗ್ರ ವರದಿಗಳನ್ನು ಪ್ರಕಟಿಸುತ್ತಿದ್ದೆ. ಬಂದ ಯುವತಿ, ಆ ವಿಷಯಕ್ಕೆ ಸಂಬಂಸಿದವಳಂತೆ ಕಾಣಲಿಲ್ಲ. ಆದರೆ, ``ಈ ವಾರ ನನ್ನ ತಾಯಿಯ ಬಗ್ಗೆ ಬರೆದಿದ್ದೀರಿ. ಮತ್ತೆ ಬರೀತೀರಂತೆ. ನಿಮಗೆ ಗೊತ್ತಿರಲಿಕ್ಕಿಲ್ಲ. ನನಗೆ ಮುತ್ತಪ್ಪ ರೈ ಗೊತ್ತು. ನನ್ನ ತಂಟೆಗೆ ಬಂದ್ರೆ ಕೊಲೆ ಮಾಡಿಸಿಬಿಡ್ತೀನಿ" ಅಂದಳು. `ಕಿಡಿ` ಪತ್ರಿಕೆಯನ್ನು ಶೇಷಪ್ಪ ತೀರಿಕೊಂಡ ನಂತರ ಖರೀದಿಸಿ ಅದರ ಬೋರ್ಡು ಮನೆಯ ಮುಂದೆ ಹಾಕಿಕೊಂಡ ಗೌಡ ಎಂಬಾತನ ಮಗಳು. ಪತ್ರಿಕೆ ನಡೆಸಿದ ಕುರುಹುಗಳಿರಲಿಲ್ಲ. ಬೋರ್ಡಿದ್ದ ಮನೆಯಲ್ಲಿ ಹುಡುಗಿಯರನ್ನಿಟ್ಟುಕೊಂಡು ಮಾಂಸದ ಅಂಗಡಿ ನಡೆಸುತ್ತಿದ್ದುದು ಈ ಯುವತಿಯ ತಾಯಿ ಗಿರಿಜಮ್ಮ. ಅವಳು ಮತ್ತೆ ಮುತ್ತಪ್ಪ ರೈ ಹೆಸರೆತ್ತಿದಾಗ,
``ಅದು ಹಾಗಿರಲಿ. ನೀನು ನೆಟ್ಟಗೆ ಬದುಕೋದು ಕಲಿ. ಲಕ್ಷಣವಾಗಿದೀಯ. ಇಂಗ್ಲಿಷೂ ಬರುತ್ತೆ. ಗೌರವದಿಂದಿರೋಕೇನು ಕೇಡು. ಎದ್ದು ನಡಿ" ಎಂದು ಗದರಿಸಿದ್ದೆ. ಇವತ್ತು ಅವಳು ಮತ್ತೆ ಸುದ್ದಿಯಲ್ಲಿದ್ದಾಳೆ. `ಒರಟ` ಪ್ರಶಾಂತನ ಸಂಸಾರಕ್ಕೆ ಹುಳಿ ಹಿಂಡಿ. ಈಕೆಯ ಹೆಸರು ಬಾಬ್ಬಿ ಗೌಡ.

ಇನ್ನೊಂದು ಸಂಜೆ ಒಬ್ಬ ಹೆಣ್ಣುಮಗಳು ಆಟೋದಲ್ಲಿ ಅದೇ ಪುಟ್ಟ ಮನೆಗೆ ಬಂದಳು. ಹೆಸರು ಯಮುನಮ್ಮ. ಉಟ್ಟ ಸೀರೆ ಪಿಸಿದಿತ್ತು. ``ನನ್ನ ಬಗ್ಗೆ ಬರೀತೀರಂತೆ. ಬರೆದರೆ ಪೊಲೀಸರು ಹಣಕ್ಕೆ ಬರ‍್ತಾರೆ. ಅವರಿಗೆ ಕೊಡೋ ಬದಲು ನಿಮಗೇ ನನ್ನ ಕೈಲಾದ್ದು ಕೊಟ್ಟುಬಿಡ್ತೀನಿ" ಅಂದಳು.

ಕೆ.ಆರ್.ಪುರಂನಲ್ಲಿ ಚಿಕ್ಕ ಮನೆಯಲ್ಲಿ ತನ್ನದೇ ಸೊಸೆ ಮತ್ತು ಇನ್ನೊಬ್ಬ ಹುಡುಗಿಯನ್ನಿಟ್ಟುಕೊಂಡು ಕಸುಬು ಮಾಡುತ್ತಿದ್ದ ಮಧ್ಯೆವಯಸ್ಕ ವೇಶ್ಯೆ. ಅವಳಿಗೂ ಬುದ್ಧಿ ಹೇಳಿದೆ. ಆಟೋಕ್ಕೆ 75 ರುಪಾಯಿ ಖರ್ಚು ಮಾಡಿದ್ದಳು. ಲಲಿತಳನ್ನು ಕರೆದು ನೂರಐವತ್ತು ರುಪಾಯಿ ಆಕೆಗೆ ಕೊಡಲು ಹೇಳಿದೆ. ಲಲಿತಳಿಗೆ ಆಕೆ ಯಾರೆಂದೇ ಗೊತ್ತಿರಲಿಲ್ಲ. ಅರಿಶಿನ ಕುಂಕುಮದ ಜೊತೆಗೆ ನೂರೈವತ್ತು ರುಪಾಯಿ ಕೊಟ್ಟು, ಇಳಿಸಂಜೆಯಾಗಿದ್ದರಿಂದ ಲೈಟು ಹಾಕಿದಳು. ದೀಪದ ಕೆಳಗೆ ನಿಂತ ಯಮುನಮ್ಮ ``ಸ್ವಾಮೀ ನಾವು ಕಸುಬಿನವರು, ನಮ್ಮ ಹರಕೆ ಸುಳ್ಳಾಗುವುದಿಲ್ಲ. ಈ ಮನೆ ಬೆಳಗಿ ಉದ್ಧಾರವಾಗಲಿ" ಅಂದವಳೇ ಕಣ್ಣು ತುಂಬಿಕೊಂಡಳು. ಈಗ ಎಲ್ಲಿದ್ದಾಳೋ? ಮುತ್ತಪ್ಪ ರೈ ಋಜು ಮಾರ್ಗಕ್ಕೆ ಬಂದು ಕಾಲವೇ ಆಗಿದೆ. ನನ್ನ ಮನೆ-ಬದುಕು ನಿಜಕ್ಕೂ ಉದ್ಧಾರವಾಗಿದೆ. ಒಬ್ಬ ಬಾಬ್ಬಿ ಗೌಡ ಮಾತ್ರ ಅದೇ ಹಾದಿ. ಬದುಕೆಂದರೆ ಹೀಗೇನಾ?

-ಬೆಳಗೆರೆ

Read Archieves of 04 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books