Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಕನಸಿನ ಕನ್ಯೆಯೆಂಬ ಹೆಸರು ಯಾರಿಟ್ಟರೋ: ಆಕೆ ಮುದುಕಿಯಾಗಲೇ ಇಲ್ಲ!

ಕನಸಿನ ಕನ್ಯೆ!

ಹಾಗಂತ ಅವಳಿಗೆ ಹೆಸರಿಟ್ಟದ್ದು `ಸಪ್ನೋಂಕಾ ಸೌದಾಗರ್` ಚಿತ್ರದ ನಿರ್ಮಾಪಕನಾ, ನಿರ್ದೇಶಕನಾ ಅಥವಾ ಮಹಾನ್ ಕನಸುಗಾರನಾಗಿದ್ದ ರಾಜ್‌ಕಪೂರನಾ? ಗೊತ್ತಿಲ್ಲ. ಇವತ್ತು ಹೇಮಾಮಾಲಿನಿಗೆ ಅರವತ್ಮೂರು ವರ್ಷ. ಜಗತ್ತು ಇನ್ನೂ dream girl ಅಂತಲೇ ಕರೆಯುತ್ತಿದೆ. ಅವಳು ತುಂಬ ಪ್ರತಿಭಾವಂತ ನಟಿಯಲ್ಲ. ಆದರೆ ಅವಳ screen presence ಅದ್ಭುತ. `ಸಪ್ನೋಂಕಾ ಸೌದಾಗರ್` ಚಿತ್ರದ ಪಾತ್ರವನ್ನು ಮೊದಲು ಇನ್ನೊಬ್ಬ ನಟಿ-ನೃತ್ಯ ಪ್ರವೀಣೆ ವೈಜಯಂತಿಮಾಲಾಗಾಗಿ ರೂಪಿಸಲಾಗಿತ್ತು. ಅವಳನ್ನು ರಾಜ್‌ಕಪೂರ್ replace ಮಾಡಿಸಿ ಹೇಮಮಾಲಿನಿಗೆ dream girl ಎಂಬ ಕಿರೀಟ ತೊಡಿಸಿದ. ಅದು ಶಾಶ್ವತವೇ ಆಗಿ ಹೋಯಿತು. ಮೊದಲ ಸಿನೆಮಾ ಬಿಡುಗಡೆಯಾದದ್ದು 1968ರಲ್ಲಿ. ಆಗ ಹೇಮಾ ವಯಸ್ಸು ಇಪ್ಪತ್ತು.

ಹಾಗೆ ಕಿರೀಟವಿರಿಸಿಕೊಳ್ಳುವುದಕ್ಕೆ ಕೆಲವೇ ದಿನಗಳಿಗೆ ಮುಂಚೆ ತಮಿಳಿನ ಡೈರೆಕ್ಟರ್ ಶ್ರೀಧರ್ ಇನ್ನೇನು ಕೆಮೆರಾ ಮುಂದೆ ನಿಲ್ಲಬೇಕೆಂಬಷ್ಟರಲ್ಲಿ ಈ ಹುಡುಗಿ ತುಂಬ ಪೀಚು, ಸ್ಟಾರ್ ಅಪೀಲ್ ಇಲ್ಲ ಎಂದು ತಿರಸ್ಕರಿಸಿ ಅವಮಾನಿಸಿದ್ದ. ಆಗ ಹೇಮಾಮಾಲಿನಿಗಿಂತ ಹೆಚ್ಚು ಕ್ರುದ್ಧಳಾದವಳು ಅವಳ ತಾಯಿ ಜಯಾ ಚಕ್ರವರ್ತಿ. ಮಗಳನ್ನು ಹಿಂದಿ ಚಿತ್ರಗಳ ಹೀರೋಯಿನ್ ಆಗಿ ಮಾಡಿ ತೀರುತ್ತೇನೆ ಎಂದು ನಿರ್ಧರಿಸಿ ಮುಂಬಯಿಗೆ ಕರೆತಂದಳು. ಮುಂದಿನ ನಲವತ್ತು ವರ್ಷ ಹೇಮಾ ಮುಟ್ಟಿದ್ದೆಲ್ಲ ಚಿನ್ನವನ್ನೇ.

ತಿರುಚನಾಪಳ್ಳಿ ಹತ್ತಿರದ ಅಮ್ಮನ್ ಕುಡಿಯಲ್ಲಿ ಐಯ್ಯಂಗಾರರ ಮನೆಯಲ್ಲಿ ಹುಟ್ಟಿದ ಹೇಮಾಳ ತಾಯಿಗೆ ಚಿತ್ರರಂಗದ ಹಿನ್ನೆಲೆಯಿತ್ತು. ಮೊದಲ ಚಿತ್ರಕ್ಕೆ ಅವಳನ್ನು ಆಯ್ಕೆ ಮಾಡಿದ್ದು ಅದರ ನಿರ್ಮಾಪಕ ಅನಂತಸ್ವಾಮಿ. ಅದಾದ ಎರಡೇ ವರ್ಷಕ್ಕೆ ದೇವಾನಂದ್‌ನ `ಜಾನಿ ಮೇರಾ ನಾಮ್` ಬಿಡುಗಡೆಯಾಯಿತು. ಎಂಥ ಸೂಪರ್ ಹಿಟ್ ಎಂದರೆ ಹೇಮಾ ಹಿಂದಿ ಚಿತ್ರರಂಗದ ಬಹುದೊಡ್ಡ ಹೆಸರಾಗಿ ಬಿಟ್ಟಿತು. ಇತರೆ ನಾಯಕಿಯರು ಮಾಡಲು ಹಿಂಜರಿಯುತ್ತಿದ್ದ ಪಾತ್ರಗಳನ್ನೆಲ್ಲ ಹೇಮಾ ಮಾಡಿದಳು. `ಅಂದಾಜ್` ಚಿತ್ರದಲ್ಲಿ ಅವಳು ಮರುಮದುವೆಯಾಗುವ ಹೀರೋಯಿನ್! `ಲಾಲ್‌ಪತ್ಥರ್`ನಲ್ಲಿ ಅವಳದು ನೆಗೆಟಿವ್ ಪಾತ್ರ. `ಸೀತಾ ಔರ್ ಗೀತಾ`ದಲ್ಲಿ ಡಬಲ್ ರೋಲ್. ತಮಾಷೆಯ ಪಾತ್ರ, ತುಂಬ ಗಂಭೀರ ಪಾತ್ರ, ನೃತ್ಯ, ಗ್ಲಾಮರಸ್ ನಾಯಕಿಯ ಪಾತ್ರ ಹೀಗೆ ಎಲ್ಲ ತರಹದ ಪಾತ್ರಗಳನ್ನು ಮಾಡಿದ ಹೇಮಾ ನಲವತ್ತು ವರ್ಷಗಳಲ್ಲಿ 150 ಚಿತ್ರಗಳಲ್ಲಿ ನಟಿಸಿದಳು.

ಆಕೆಯನ್ನು ಮೊದಲು ತುಂಬ ಇಷ್ಟಪಟ್ಟು ಮದುವೆಯಾಗುವಂತೆ ಪ್ರಪೋಸ್ ಮಾಡಿದವನು ಮಹಾನ್ ನಟ ಸಂಜೀವ್ ಕುಮಾರ್. ಆದರೆ ಹೇಮಾಗೆ ತಾಯಿಯೇ ಸರಪಳಿ. ``ಒಲ್ಲೆ" ಅಂದಳು. ಆ ತಿರಸ್ಕಾರದಿಂದ ಖಿನ್ನತೆಗೊಳಗಾದ ಸಂಜೀವ್ ಕುಮಾರ್ ವಿಪರೀತ ಕುಡಿಯತೊಡಗಿದ. ಜೊತೆಗೆ ತಿನ್ನುವ ಗೀಳು. ಕಡೆತನಕ ಮದುವೆಯಾಗದೆ, ಹೆಣ್ಣಿನ ಆರೈಕೆ ಸಿಗದೆ ಅಂಥ ಶ್ರೇಷ್ಠ ನಟ ಸತ್ತೇ ಹೋದ. ಹೇಮಾಳನ್ನು ಮದುವೆಯಾಗಲು ಜಿತೇಂದ್ರ ತುದಿಗಾಲ ಮೇಲೆ ನಿಂತಿದ್ದ. ಇನ್ನೇನು ಹೇಮಾ ಒಪ್ಪಿಗೆ ಕೊಡಬೇಕು : ಸರಪಳಿ ಜಗ್ಗಿ ಬಿಟ್ಟಳು ಅಮ್ಮ. ಆದರೆ `ಷೋಲೆ` ಚಿತ್ರದಲ್ಲಿ ಧರ್ಮೇಂದ್ರನೊಂದಿಗೆ ಬಸಂತಿಯಾಗಿ ನಟಿಸಬೇಕಾಯಿತಲ್ಲ? ಅಮ್ಮನ ಸರಪಳಿ ತುಂಡಾಗಿ ಇಬ್ಬರ ನಡುವೆ ಭಯಂಕರ ಕೆಮಿಸ್ಟ್ರಿ ಆರಂಭವಾಗಿ ಬಿಟ್ಟಿತ್ತು. `ಸೀತಾ ಔರ್ ಗೀತಾ`, `ಚರಸ್`, `ದಿ ಬರ್ನಿಂಗ್ ಟ್ರೇನ್`, `ಡ್ರೀಮ್ ಗರ್ಲ್`, `ಷರಾಫತ್`, `ರಾಜಾ ಜಾನಿ`, `ನಯಾ ಜಮಾನಾ` ಹೀಗೆ ಅನೇಕ ಹಿಂದಿ ಹಿಟ್‌ಗಳನ್ನು ನೀಡಿದ ಧರಮ್-ಹೇಮಾ ಜೋಡಿ ಇಡೀ ಎಪ್ಪತ್ತರ ದಶಕವನ್ನು ಆಳಿತು. ಇಬ್ಬರೂ ಸೇರಿ 28 ಸಿನೆಮಾ ಮಾಡಿದರು. ಆ ಕಾಲದಲ್ಲಿ ಹೇಮಾ ನಟಿಸಿದ ಚಿತ್ರಗಳಲ್ಲಿ ಹೆಚ್ಚಿನವು ಹಿಟ್ ಆದವು.
ಹೀಗಾಗಿ ತಾರಾಮೌಲ್ಯ ಕಳೆದುಕೊಂಡು ಕುಸಿಯುತ್ತಿದ್ದ ರಾಜೇಶ್ ಖನ್ನಾನೊಂದಿಗೆ `ಪ್ರೇಮ್‌ನಗರ್`ನಲ್ಲಿ ನಟಿಸಿ ಅವನ ಗೆಲುವಿಗೆ ಕಾರಣಳಾದಳು. ಜೀನತ್‌ಳಿಂದ ದೂರವಾದ ದೇವಾನಂದ್‌ನೊಂದಿಗೆ `ಅಮೀರ್ ಗರೀಬ್`ನಲ್ಲಿ ನಟಿಸಿ ಆತನಿಗೆ ಉಸಿರಾಡುವುದಕ್ಕೆ ಆಸ್ಪದ ಮಾಡಿಕೊಟ್ಟಳು. ಅಂತೆಯೇ ರೀನಾರಾಯ್‌ಳಿಂದ ದೂರವಾದ ಜಿತೇಂದ್ರನೊಂದಿಗೆ `ಖುಷ್ಬೂ`ನಲ್ಲಿ ನಟಿಸಿ ಅವನಿಗೂ ಜೀವದಾನ ಮಾಡಿದಳು. ಆ ಕಾಲದ ಸೂಪರ್ ಸ್ಟಾರ್‌ಗಳಾದ ರಾಜೇಶ್ ಖನ್ನಾ ಮತ್ತು ಅಮಿತಾಬ್ ಬಚ್ಚನ್-ಇಬ್ಬರೊಂದಿಗೂ ಭಿನ್ನಾಭಿಪ್ರಾಯ ಬಂದು, ಅವರಿಂದ ದೂರವಾದರೂ ಹೇಮಾ ತಲೆ ಕೆಡಿಸಿಕೊಳ್ಳಲಿಲ್ಲ. ಬಿಚ್ಚಮ್ಮನ ಪಾತ್ರಗಳನ್ನು ಮಾಡಲಿಲ್ಲ. ಅವಳ ತಾರಾಮೌಲ್ಯ ಸ್ಥಿರವಾಗಿಯೇ ಇತ್ತು. ಹಾಗೆ ನೋಡಿದರೆ ಧರಮ್-ಹೇಮಾ ಇಬ್ಬರೂ ಅಪ್ರತಿಮ ಪ್ರತಿಭಾವಂತ, ಮನೋಜ್ಞ ನಟರಲ್ಲ. ಆದರೆ ತುಂಬ ಅದೃಷ್ಟವಂತರು. ಅನೇಕ ಸಿನೆಮಾಗಳು ಗೆದ್ದವು. ಅಂಥವರಿಂದಲೂ ಮನೋಜ್ಞ ಅಭಿನಯ ತೆಗೆಸಿದ್ದು ಖುಷ್‌ಬೂ, ಕಿನಾರಾ ಮತ್ತು ಮೀರಾ ಚಿತ್ರಗಳ ನಿರ್ದೇಶಕ ಗುಲ್ಜಾರ್ ಸಾಹೇಬರು.
ಧರ್ಮೇಂದ್ರ ಆಗಲೇ ಪ್ರಕಾಶ್ ಕೌರ್‌ಳನ್ನು ಮದುವೆಯಾಗಿದ್ದ. ಆಕೆ ಡಿವೋರ್ಸ್ ಕೊಡಲು ಒಪ್ಪದಿದ್ದಾಗ ಧರಮ್ ಮತ್ತು ಹೇಮಾ ಇಸ್ಲಾಮ್‌ಗೆ ಮತಾಂತರಗೊಂಡು ಮದುವೆಯಾದದ್ದು 1980ರಲ್ಲಿ. ಧರಮ್‌ಗೆ ಮೊದಲ ಪತ್ನಿಯಿಂದ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಹುಟ್ಟಿದ್ದರು. ಹೇಮಾಳಿಗೂ ಇಬ್ಬರು ಮಕ್ಕಳನ್ನು ಆತ ನೀಡಿದ: ಇಷಾ ಡಿಯೋಲ್ ಮತ್ತು ಅಹನಾ ಡಿಯೋಲ್. ನಾಲ್ವರೂ ಚಿತ್ರರಂಗದಲ್ಲೇ ಇದ್ದಾರೆ. ಮದುವೆಯ ನಂತರವೂ ಆ ಬಗ್ಗೆ ಬೀದಿ ರಂಪಗಳಾಗದೆ ದಂಪತಿಗಳಿಬ್ಬರೂ ನಾನಾ ಸಿನೆಮಾಗಳಲ್ಲಿ ಜೋಡಿಯಾಗಿ ಅಭಿನಯಿಸಿದರು. ಕ್ರಮೇಣ ಗಂಭೀರ ಪಾತ್ರಗಳೆಡೆಗೆ ತಿರುಗಿದ ಹೇಮಾ ತಾನೇ `ದಿಲ್ ಆಶನಾ ಹೈ` ಎಂಬ ಸಿನೆಮಾ ನಿರ್ದೇಶಿಸಿದಳು. ಭರತನಾಟ್ಯದತ್ತ ಗಮನಕೊಟ್ಟಳು. `ನೂಪುರ್` ಎಂಬ ಟೀವಿ ಸೀರಿಯಲ್ ಮಾಡಿದಳು. ಅನೇಕ ವರ್ಷಗಳ ಬ್ರೇಕ್‌ನ ನಂತರ 2003ರಲ್ಲಿ ಅಮಿತಾಬ್‌ನೊಂದಿಗೆ `ಬಾಗ್‌ಬಾನ್`ನಲ್ಲಿ ನಟಿಸಿದಳು. ಮಗಳು ಇಷಾ ಡಿಯೋಲ್‌ಳನ್ನು ಹಾಕಿಕೊಂಡು Tell me oh khuda ಎಂಬ ಎರಡನೇ ಚಿತ್ರ ನಿರ್ದೇಶಿಸಿದಳು.

ಲೋಕ ಸಭೆಗೆ 1999ರಲ್ಲಿ ವಿನೋದ್‌ಖನ್ನಾ ಪಂಜಾಬದ ಗುರುದಾಸ್‌ಪುರ ಕ್ಷೇತ್ರದಿಂದ ರ್ಸ್ಪಸಿದಾಗ ಅವನ ಪರವಾಗಿ ಧರಂ-ಹೇಮಾ ಪ್ರಚಾರಕ್ಕೆ ಹೋದರು. ಬಿಜೆಪಿ ಸೇರಿದರು. ಮುಂದೆ ಬಿಜೆಪಿಯ ಜನರಲ್ ಸೆಕ್ರೆಟರಿಯೂ ಆದ ಹೇಮಾಮಾಲಿನಿ ರಾಜ್ಯಸಭೆಗೂ ಕಾಲಿಟ್ಟಳು. ನ್ಯಾಷನಲ್ ಫಿಲ್ಮ್ ಡೆವಲಪ್‌ಮೆಂಟ್ ಕಾರ್ಪೊರೇಷನ್‌ಗೆ ಅಧ್ಯಕ್ಷಳಾದ ಮೊದಲ ಮಹಿಳೆ ಎನ್ನಿಸಿಕೊಂಡಳು. ತುಂಬ ದೊಡ್ಡ ಉತ್ಸವಗಳಲ್ಲಿ ಇವತ್ತಿಗೂ ಹೇಮಾ ತನ್ನಿಬ್ಬರು ಮಕ್ಕಳ ಜೊತೆಗೆ ನೃತ್ಯ ಮಾಡುತ್ತಾಳೆ.

ಪ್ರತಿಭಾವಂತೆಯಲ್ಲ, ನಿಜ. ಆದರೆ ಅದೃಷ್ಟವಂತೆ. ಅದ್ಭುತ ನೃತ್ಯವಿದೆ. ಅಸಾಧಾರಣ ರೂಪು ಇದೆ. ಗಂಡನನ್ನು ಧಾರಾಳವಾಗಿ ಗುಂಡು ಹಾಕಿ ಓಡಾಡಿಕೊಂಡಿರಲು ಬಿಟ್ಟು ತನ್ನ ಆಸಕ್ತಿಯ ವಿಷಯಗಳಲ್ಲಿ ತಾನು ಸಕ್ರಿಯಳಾಗಿದ್ದಾಳೆ ಹೇಮಾ.

ಇನ್ನೇನು ಬೇಕು?

-ಮಹಾಸ್ವಪ್ನ

Read Archieves of 04 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books