Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಅವರಿಲ್ಲದ ಆ ಬಂಗಲೆಯಲ್ಲಿ ಏನಿದ್ದರೇನು, ಇಲ್ಲದಿದ್ದರೂ ಏನು ಅನ್ನಿಸಿ...

ಎಲ್ಲಿದೆ ಯಕ್ಸಂಬಾ?

ಗೊತ್ತಿಲ್ಲ. ಆದರೆ ಡಾ.ಅನಿಲ ಕಮತಿ ಅವರು ರಾಜ್ಯೋತ್ಸವಕ್ಕೆ ಕರೆದಾಗ ಇಲ್ಲವೆನ್ನಲಾರದಾದೆ. ತುಂಬ ವರ್ಷಗಳಿಂದ ಕೇಳುತ್ತಿದ್ದ ಹೆಸರು ಅವರದು. ಶಿರಸಿಯ ಬಳಿ ಎಕ್ಕಂಬ ಅಂತ ಒಂದು ಊರಿದ್ದಂತೆ ನೆನಪು. ಇವರು ಅಲ್ಲಿದ್ದಾರಾ ಅಂತ ಒಂದು ಅನುಮಾನವಿತ್ತು. ಬೆಳಗಾವಿಗೆ ನಾನು ಅನೇಕ ಸಲ ಹೋಗಿದ್ದೇನೆ. ಆದರೆ ಚಿಕ್ಕೋಡಿಯ ಕಡೆ ಓಡಾಡಿರಲಿಲ್ಲ.

ಚಿಕ್ಕೋಡಿಯಲ್ಲಿ ನನ್ನ ಗೆಳೆಯ ಶ್ರೀನಿವಾಸ ಜಹಗೀರದಾರ ಕಾಲೇಜಿನಲ್ಲಿ ಪ್ರಿನ್ಸಿಪಾಲನಾಗಿದ್ದಾನೆ. ಅವನ ಪತ್ನಿ ಕಲ್ಪನಾ, ಜಹಗೀರದಾರ ಮತ್ತು ನಾನು ಧಾರವಾಡದಲ್ಲಿ ಎರಡು ವರ್ಷ ತುಂಬ ಆತ್ಮೀಯವಾಗಿ ಕಳೆದವರು. ಅವನು ಬಳ್ಳಾರಿಗೆ ಬಂದಿರುತ್ತಿದ್ದ. ನನ್ನ ತಾಯಿಗೆ ಆತ್ಮೀಯ. ಸರಿ, ಚಿಕ್ಕೋಡಿಯ ಮೂಲಕವೇ ಎಕ್ಸಂಬಾಕ್ಕೆ ಹೋಗಬೇಕಿದ್ದುದರಿಂದ ಅವನನ್ನು ನೋಡಿದಂತಾಯಿತು ಅಂದುಕೊಂಡು ಹೊರಟುಬಿಟ್ಟೆ. ಬೆಳಗಾವಿಯಲ್ಲಿ ಒಂದು ರಾತ್ರಿ ಉಳಿದೆ. ಉಳಿದದ್ದು ನನ್ನ ಆಪ್ತರಾದ ಜೈನಾಪುರ ಅವರ ಮಗನ ಹೊಟೇಲ್ ಕ್ಷೇಮದಲ್ಲಿ. ಬೆಳಗಾವಿಯಲ್ಲಿ ಸುಮಾರು ನಲವತ್ತು ವರ್ಷಗಳಿಂದ ಜಾಹೀರಾತು ಸಂಸ್ಥೆ ನಡೆಸುತ್ತಿರುವ ಜೈನಾಪುರ ಈ ಅರವತ್ಮೂರರ ಇಳಿವಯಸ್ಸಿನಲ್ಲೂ ಸೈಕಲ್ಲು-ಸ್ಕೂಟರು ಓಡಿಸುತ್ತಾರೆ. ಗೆಳೆಯರನ್ನು ``ಏ ಹನುಮಂತರಾವ್ ಕೇ ಔಲಾದ್" (ಏ ಮಂಗ್ಯಾನ ಮಗನೇ) ಅಂತ ಮಾತಾಡಿಸುತ್ತಾರೆ, ಅವರ ಎಂ.ಕೆ. ಪಬ್ಲಿಸಿಟೀಸ್‌ಗೆ ಹೋದರೆ ಕುಂದ, ಚಿಕ್ಕದಾದರೂ ಒಂದು ಗಿಫ್ಟು, ಅದ್ಭುತ ಚಹ, ಹೊಟ್ಟೆ ಬಿರಿಯೆ ನಗು ಮತ್ತು ಶುದ್ಧ ಮನಸ್ಸಿನ ಮಾತು-ಖಾಯಂ. ಸಂಯುಕ್ತ ಕರ್ನಾಟಕದಲ್ಲಿ ನೌಕರಿ ಮಾಡುತ್ತಿದ್ದಾಗಿಂದ ಆರಂಭವಾದ ನಮ್ಮ ಗೆಳೆತನ ಇವತ್ತಿಗೂ ಭರ್ಜರಿ ಜಾರಿಯಲ್ಲಿದೆ.

ಬೆಳಗ್ಗೆ ಕೋಣೆಯಿಂದ ಇಳಿದು ಲಾಬಿಗೆ ಬರುತ್ತಿದ್ದಂತೆಯೇ ``ಯಾಕೋ ಭಾಳ ಸೊರಗೀಯಲ್ಲೋ ರವೀ?" ಎಂದೇ ದೊಡ್ಡ ದನಿಯಲ್ಲಿ ಕೇಳಿ ತಬ್ಬಿಕೊಂಡ ಜೈನಾಪುರ ಇಷ್ಟು ವರ್ಷಗಳಲ್ಲಿ ಕೊಂಚವೂ ಬದಲಾಗಿಲ್ಲ. ಮಾತಾಡುತ್ತ ಕುಳಿತಿದ್ದಾಗಲೇ ಅಲ್ಲಿಗೆ ಗೆಳೆಯ ಸರಜೂ ಕಾಟಕರ್ ಬಂದ. ಅವನು ಶುದ್ಧ ಕನ್ನಡ ಕವಿ-ಲೇಖಕ. ಆದರೆ ಇಂಗ್ಲಿಷ್ ಪತ್ರಿಕೆಯ ಅತಿ ಹಿರಿಯ ವರದಿಗಾರ. ತಮಾಷೆಯೆಂದರೆ ಅವನ ಮನೆಯ ಭಾಷೆ ಮರಾಠಿ. ಪ್ರತಿಯೊಂದೂ ಕನ್ನಡ ಹೋರಾಟವನ್ನು ಬೆಂಬಲಿಸಿಕೊಂಡು ಬಂದ, ದೀನರ ಮೇಲೆ ನಿರಂತರ ತಂಪುಗಣ್ಣಿಟ್ಟುಕೊಂಡಿರುವ, ಬಂಡಾಯ ಮನೋಧರ್ಮದ ಗೆಳೆಯ. ತೊಂಬತ್ತು ದಾಟಿದ ಹಿರಿಯರಾದ ಪಾಟೀಲ ಪುಟ್ಟಪ್ಪನವರಿಗೆ ತುಂಬ ಆತ್ಮೀಯ. ಅವರ ಜೀವನ ಕಥನ ದಾಖಲಿಸಿ ಅದ್ಭುತವಾದ ಪುಸ್ತಕ ಬರೆದಿದ್ದಾನೆ. ಮರಾಠಿ, ಹಿಂದಿಗಳಿಂದ ಕೆಲವು ಕೃತಿಗಳನ್ನು ಅನುವಾದಿಸಿದ್ದಾನೆ. ನಮ್ಮ ಓರಗೆಯವರಲ್ಲಿ ಬಹುಶಃ
ಕುಂ.ವೀರಭದ್ರಪ್ಪನನ್ನು ಬಿಟ್ಟರೆ ಅತಿ ಹೆಚ್ಚು ಬರೆದವರು ಸರಜೂ ಮತ್ತು ನಾನು. ಅವನೊಂದಿಗಿನ ನನ್ನ ಸ್ನೇಹಕ್ಕೆ ಮೂವತ್ತು ತುಂಬಿವೆ. ಬೆಳಗಾವಿಯ ಸರಜು, ಹುಬ್ಬಳ್ಳಿಯ ಜಿ.ಎಚ್.ರಾಘವೇಂದ್ರ ಮತ್ತು ಹಾವೇರಿಯ ಸತೀಶ್ ಕುಲಕರ್ಣಿ ಅಂದರೆ ಅದೊಂದು ಆತ್ಮೀಯ ತ್ರಿಮೂರ್ತಿಗಳ ಗ್ಯಾಂಗು. ಎಲ್ಲಿಯವನೂ ಅಲ್ಲದ, ಆದರೆ ಎಲ್ಲ ಕಡೆಯವರಿಗೂ ಪರಿಚಿತನಾದ ನಾನು ಆಗಾಗ ಈ ಗ್ಯಾಂಗು ಸೇರಿಕೊಳ್ಳುತ್ತಿದ್ದೆ. ಕೆಲವೊಮ್ಮೆ ನಮ್ಮೆಲ್ಲರಿಗಿಂತ ಚಿಕ್ಕವಳಾದ ಸುಕನ್ಯಾ ಮಾರುತಿ ಬಂದು ಹಾವಳಿಯಿಡುತ್ತಿದ್ದಳು.
ಮೊನ್ನೆ ಅದನ್ನೆಲ್ಲ ನೆನೆಯುತ್ತ ಕುಳಿತಿದ್ದಾಗಲೇ ಉತ್ತರ ಕರ್ನಾಟಕದ ರಂಗಭೂಮಿಯ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಡಾ.ರಾಮಕೃಷ್ಣ ಮರಾಠೆ ಬಂದು ಜೊತೆಯಾದರು. ``ನೀವು ಭೀಮಾತೀರದ ಹಂತಕರ ಬಗ್ಗೆ ಬರೆದಿದ್ದೀರಿ. ನಾನು ಭೀಮಾತೀರದ ಲೇಖಕ" ಅಂತ ನಗೆಯಾಡಿದರು ಮರಾಠೆ. ಅವರದು ಹತ್ಯಾಕಾಂಡ ಆರಂಭಗೊಂಡ ದೇವಣಗಾಂವ. ಸೊನ್ನ ಮತ್ತು ದೇವಣಗಾಂವ ಗ್ರಾಮಗಳಿಂದಲೇ ಮೊದಲ ಟೀಮಿನ ಹಂತಕರು ಉದ್ಭವಿಸಿದರು. ಆ ತಲೆಮಾರೆಲ್ಲ ತೀರಿ ಹೋಗಿ, ಈಗ ಬಿಜಾಪುರ ಜಿಲ್ಲೆಯಾದ್ಯಂತ ಹಂತಕ ಪಡೆಗಳು ಹುಟ್ಟಿಕೊಂಡಿವೆ. ಆ ಮಾತು ಬೇರೆ. ಅಷ್ಟರಲ್ಲಿ ಜೈನಾಪುರರ ಹೊಟೇಲಿನ ಲಾಬಿಗೆ ಕವಯಿತ್ರಿ ಶೋಭಾ ನಾಯಕ್ ಬಂದರು. ಅವರ ಸಂಕಲನದ ಹೆಸರೇ ಚೆಂದ ಅನ್ನಿಸಿತು : ಖ್ವಾ ಬೀದಾ ಹಸೀನಾ. ಅದು ಉಜ್ಜೆಕಿಸ್ತಾನದ ಒಂದು ಸೀಮೆಯ ಹೆಸರು. ಕನಸುಗಣ್ಣಿನ ಸುಂದರಿ ಎಂಬ ಅರ್ಥ. ಅಲ್ಲಿ ರೇಶ್ಮೆ ಬೆಳೆಯುತ್ತಾರೆ. ಅಮೃತಾ ಪ್ರೀತಂರನ್ನು ಹಚ್ಚಿಕೊಂಡ, ಓದಿದ, ಅಭಿಮಾನಿಸಿದ ಶೋಭಾ ನಾಯಕ್ ಪ್ರೀತಿಯನ್ನೇ ಆಸರೆಯಾಗಿಟ್ಟುಕೊಂಡು ಪದ್ಯ ಬರೆದಿದ್ದಾರೆ. ಅವರಿಗೆ ಅಮೃತಾ ಮತ್ತು ಇಮ್ರೋಜ್ ದಾಂಪತ್ಯದ ಕುರಿತು ಬರೆಯಲಾದ ಪುಸ್ತಕವೊಂದನ್ನು ಕಳಿಸಿಕೊಡುವುದಾಗಿ ಹೇಳಿ, ಮಿತ್ರರಾದ ರವಿ ಕೋಟಾರಗಸ್ತಿ ಮತ್ತು ಉಳಿದವರಿಗೆ ಶುಭಾಶಯ ಹೇಳಿ ಹೊರಟೆ.

ಅದೇಕೆ ನಿಲ್ಲಬೇಕೆನ್ನಿಸಿತೋ ಗೊತ್ತಿಲ್ಲ. ಗೋಟೂರು ಎಂಬ ಪುಟ್ಟ ಊರಿನ ಇನ್ಸ್‌ಪೆಕ್ಷನ್ ಬಂಗಲೆಯ ಮುಂದೆ ಸ್ವಲ್ಪ ಹೊತ್ತು ನಿಂತೆ. ಚಿಕ್ಕೋಡಿ, ನಿಪ್ಪಾಣಿ ಮುಂತಾದವೆಲ್ಲ ಸಮೃದ್ಧ ಸೀಮೆಗಳು. ಅದ್ಭುತವಾದ ಕಬ್ಬು ಬೆಳೆಯುತ್ತಾರೆ. ತಂಬಾಕು ಕೂಡ ಸಮೃದ್ಧ. ಈ ಸೀಮೆಯ ಜನಕ್ಕೆ ಇವತ್ತಿಗೂ ಕಂಪೆನಿ ನಾಟಕಗಳೆಡೆಗೆ ಸೆಳೆತವಿದೆ. ಇನ್ನು ಆ ಕಾಲಕ್ಕೆ ಹೇಗಿದ್ದಿರಬಹುದು. ಈ ಸೀಮೆಗೆ ನಾಟಕ ಕಂಪೆನಿ ತಂದಿದ್ದ ಗುಡಗೇರಿ ಬಸವರಾಜ್ ಕೂಡ ಅವತ್ತಿಗೆ ಮಜಬೂತಾಗಿದ್ದ ಗಂಡಸು. ಪ್ರತಿ ಗಂಡಸಿನಲ್ಲೂ ಪ್ರೇಮ ಮತ್ತು ಕಾಮಗಳನ್ನು ಅರಸಿಕೊಂಡು ಹೊರಟ ಕಲ್ಪನಾ ಎಂಬ ಚಿತ್ರನಟಿ ಅದ್ಯಾವ ದುರ್ದಿನದಂದು ಗೋಟೂರಿನ ಐ.ಬಿ.ಗೆ ಬಂದಳೋ ಗೊತ್ತಿಲ್ಲ. ತುಂಬ ಮಾಮೂಲಿಯಾದ ಚಿಕ್ಕ ಊರಿನ ಐ.ಬಿ. ಅದು. ದಂಪತಿಗಳಂತೆಯೇ ಇದ್ದ ಗುಡಗೇರಿ ಬಸವರಾಜ ಮತ್ತು ಕಲ್ಪನಾಗೆ ಅವತ್ತು ಮನಸ್ತಾಪ. ನಾಟಕದಲ್ಲಿ ಡೈಲಾಗು ತಪ್ಪು ಹೇಳಿ, ಜನ ಗೇಲಿ ಮಾಡಿದ್ದಕ್ಕೆ ಮುನಿಸಿಕೊಂಡಿದ್ದಳು ಕಲ್ಪನಾ. ಅವತ್ತು ಆಕೆ ಬೇಡಿಕೊಂಡರೂ ಕಿವಿಯ ಮೇಲೆ ಹಾಕಿಕೊಳ್ಳದೆ ಗುಡಗೇರಿ ಬಸವರಾಜ ತನ್ನ ಮೋಟರ್ ಸೈಕಲ್ ಹತ್ತಿ ಹೊರಟು ಬಿಟ್ಟ. ಅಷ್ಟೇ ಆದದ್ದು. ಕಲ್ಪನಾ ನಿದ್ರೆ ಮಾತ್ರೆ ತೆಗೆದುಕೊಂಡು, ಕೈಲಿದ್ದ ಉಂಗುರದ ವಜ್ರದ ಹರಳು ಕುಟ್ಟಿ ಅದನ್ನೂ ನುಂಗಿ, ಶುದ್ಧ ಮುತ್ತೈದೆಯಂತೆ ಸಿಂಗರಿಸಿಕೊಂಡು ರೇಶ್ಮೆ ಸೀರೆಯುಟ್ಟು ಮಲಗಿಕೊಂಡು ಜೀವ ಬಿಟ್ಟಿದ್ದಳು. ಗೋಟೂರಿನ ಐಬಿಯ ಮುಂದೆ ಎರಡು ನಿಮಿಷ ನಿಂತೆ. ಯಾಕೋ ವಿಷಾದ ಆವರಿಸಿಕೊಂಡಂತಾಯಿತು. ಅಂಥ ನಿಕೃಷ್ಟ ಸಾವು ಬೇಕಾಗಿತ್ತೇ ಆಕೆಗೆ? ಬದುಕಲಾರದಂಥ ನಿಕೃಷ್ಟವಾದುದಲ್ಲ ಜೀವನ.

ಚಿಕ್ಕೋಡಿಯಲ್ಲಿ ಗೆಳೆಯ ಜಹಗೀರದಾರ ಸಿಕ್ಕ. ಅಲ್ಲೇ ಐ.ಬಿ.ಯಲ್ಲಿ ಶಾಸಕರಾದ ಚಂದ್ರಕಾಂತ ಬೆಲ್ಲದ ಸಿಕ್ಕರು. ಒಟ್ಟಿಗೆ ಹೊರಟು ಯಕ್ಸಂಬಿಯ ಡಾ.ಅನಿಲ ಕಮತಿ ಅವರ ಮನೆ ತಲುಪಿದಾಗ ನಡು ಮಧ್ಯಾಹ್ನ. ಯಕ್ಸಂಬಿ ಕರ್ನಾಟಕದ ಗಡಿ ಗ್ರಾಮ. ಅದರಿಂದಾಚೆಗೆ ಮಹಾರಾಷ್ಟ್ರ. ಒಂದು ಕಡೆ ಡಾಕ್ಟರಿಕೆ ಮಾಡುವ ಅನಿಲ ಕಮತಿ ಇನ್ನೊಂದು ಕಡೆ ಕನ್ನಡದ ಕೆಲಸ ಮಾಡುತ್ತಾರೆ. ಟೆಲಿಫೋನ್‌ನಲ್ಲಿ ಮಾತನಾಡಿದಾಗ ಕೊಂಚ ಹಿರಿಯರೇನೋ ಅನ್ನಿಸಿತ್ತು. ಅವರು ನನಗಿಂತ ಕೇವಲ ಎರಡು ವರ್ಷಕ್ಕೆ ಹಿರಿಯರು. ನನ್ನಂತೆಯೇ ಮೇಷ್ಟ್ರ ಮಗ. ಹತ್ತಿರದಲ್ಲೇ ಇರುವ ಸದಲಗಾ ಅವರ ಊರಾದರೂ ಎಕ್ಸಂಬಿಯಲ್ಲಿ ನೆಲೆ ನಿಂತಿದ್ದಾರೆ. ಕನ್ನಡ-ಮರಾಠಿ ಜಿದ್ದಾಜಿದ್ದಿ ತೀವ್ರವಾಗಿ, ಇನ್ನೇನು ಕನ್ನಡವೆಂಬುದು ಕುಸಿದೇ ಹೋಗುತ್ತದೆ ಎಂಬ ಪರಿಸ್ಥಿತಿ ಬಂದಾಗ ಕನ್ನಡ ಪರ ಮನಸ್ಸಿನ ಹಿರಿಯರಾದ ಶಿವಪ್ಪ ದಡ್ಡಿಕರ, ಕೆ.ಕೆ.ಮಠದ, ಭೀಮು ಮಾನೆ ಮತ್ತು ಡಾ.ಅನಿಲ ಕಮತಿ ಮುಂತಾದವರು ಸೇರಿ ಇಪ್ಪತ್ನಾಲ್ಕು ವರ್ಷಗಳ ಹಿಂದೆಯೇ ಕಟ್ಟಿದ್ದು ಎಕ್ಸಂಬಿಯ `ಗೆಳೆಯರ ಬಳಗ`.

ಪ್ರತೀ ವರ್ಷ `ಗೆಳೆಯರ ಬಳಗ` ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುತ್ತದೆ. ಇಲ್ಲಿಗೆ ಶಿವರಾಮ ಕಾರಂತರು ಬಂದು ಹೋಗಿದ್ದಾರೆ. ಅತಿಥಿಗಳಾಗಿ ಹಾ.ಮಾ.ನಾಯಕ, ಚಂಪಾ, ತೋಂಟದ ಸಿದ್ಧಲಿಂಗ ಸ್ವಾಮಿಗಳು, ಎಂ.ಎಂ.ಕಲಬುರ್ಗಿ, ಪಾಟೀಲ ಪುಟ್ಟಪ್ಪ, ಜಯಂತ ಕಾಯ್ಕಿಣಿ, ಡುಂಡಿರಾಜ್, ನಿಜಲಿಂಗಪ್ಪ ಮುಂತಾದವರೆಲ್ಲ ಬಂದಿದ್ದಾರೆ. ಈ ಬಾರಿ ಹೋದವರು ರಹಮತ್ ತರೀಕೆರೆ ಮತ್ತು ನಾನು. ಆಶ್ಚರ್ಯವೆಂದರೆ ಆ ಪುಟ್ಟ ಊರಿನ ಮನೆ ಮನೆಯಲ್ಲೂ ಅವತ್ತು ಹಬ್ಬದ ವಾತಾವರಣ. ಪ್ರತಿ ವರ್ಷ ಅತಿಥಿಗಳಿಗೆ ಊಟ ಮಾಡಿಸುವುದನ್ನು ಅಲ್ಲಿನ ಜನ ಪಾಳಿಯ ಪ್ರಕಾರ ಹಂಚಿಕೊಳ್ಳುತ್ತಾರೆ. ಅಷ್ಟು ಚಿಕ್ಕ ಊರಿನಲ್ಲಿ ಆ ಪರಿ ಜನ ಸೇರಿದ್ದು, ಅಷ್ಟು ಶ್ರದ್ಧೆಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದು, ನಿಡಸೋಸಿ ಮಠದ ಸ್ವಾಮಿಗಳು ಕೂಡ ತೀರ ಸರಳವಾಗಿ ನಡೆದುಕೊಂಡದ್ದು ತುಂಬ ಖುಷಿಯೆನ್ನಿಸಿತು.

ಕರ್ನಾಟಕದ ಕಟ್ಟ ಕಡೆಯ ಗ್ರಾಮದಲ್ಲಿ ಆಸ್ಪತ್ರೆ ಕಟ್ಟಿಕೊಂಡು, ಜನರನ್ನು ಹಚ್ಚಿಕೊಂಡು, ಅಲ್ಲಿ ಕುಳಿತೇ ಕನ್ನಡದ ಕೆಲಸ ಮಾಡುತ್ತಿರುವ, ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿರುವ, ನಾಡಿನ ಮೂಲೆಮೂಲೆಯಿಂದ ಸಾಹಿತಿಗಳನ್ನ- ಪತ್ರಕರ್ತರನ್ನ ಕರೆಸಿ ಜನಕ್ಕೆ ಪರಿಚಯಿಸುವ ಡಾ.ಅನಿಲ ಕಮತಿ ತುಂಬ ಸಜ್ಜನ ವ್ಯಕ್ತಿ. ತುಂಬ ಸಾತ್ವಿಕರು. ಆದರೆ ದಕ್ಷರು. ಕೇವಲ ರಾಜ್ಯೋತ್ಸವ ಮಾಡಿದರೆ ಕನ್ನಡ ಬದುಕಲಾರದು ಅಂತ ನಿರ್ಧರಿಸಿದ `ಗೆಳೆಯರ ಬಳಗ` ೧೯೯೧ರಿಂದ ತಮ್ಮದೇ ಶಿಕ್ಷಣ ಸಂಸ್ಥೆ ಪ್ರಾರಂಭಿಸಿದೆ. ಅಲ್ಲಿ ಕೆ.ಜಿ.ಕ್ಲಾಸಿನಿಂದ ಪಿಯುಸಿ ತನಕ ಶಿಕ್ಷಣ ಕೊಡುತ್ತಾರೆ. ಡಾ.ಕಮತಿ ಅವರಿಗೆ ಅವಟೆ, ದಾನವಾಡ, ದಡ್ಡಿಕರ, ಹಿರೇಮಠ ಮುಂತಾದ ಉತ್ಸಾಹಿ ಗೆಳೆಯರ ಸಾಂಗತ್ಯವಿದೆ. ಒಳ್ಳೆಯ ಶಿಕ್ಷಕರು ಸಿಕ್ಕಿದ್ದಾರೆ. ಸ್ವಂತ ಕಟ್ಟಡವಿದೆ. ರಿಜಲ್ಟು ಪ್ರತೀ ವರ್ಷ ನೂರಕ್ಕೆ ನೂರು. ಈ ಬಾರಿ ಪ್ರೀತಿ ಹುರಳಿಕೊಪ್ಪಿ ಎಂಬ ಮಗು ಚಿಕ್ಕೋಡಿ ತಾಲೂಕಿಗೇ ಅತಿ ಹೆಚ್ಚಿನ ಅಂಕ ತೆಗೆದುಕೊಂಡು, ಅದರಲ್ಲೂ ಕನ್ನಡದಲ್ಲಿ ೧೨೫ಕ್ಕೆ ೧೨೫ ಮಾರ್ಕ್ ತೆಗೆದುಕೊಂಡಿದ್ದಾಳೆ. ಇಲ್ಲಿ ಬೆಂಗಳೂರಿನಲ್ಲಿ ಶಾಲೆ ನಡೆಸುವುದು ದೊಡ್ಡ ಮಾತಲ್ಲ. ಎಕ್ಸಂಬದಂಥ ಗಡಿನಾಡ ಊರಿನಲ್ಲಿ ಹೀಗೆ ನಿರಂತರವಾಗಿ ಕನ್ನಡದ ಕೆಲಸ ಮಾಡುತ್ತಾ, ಬದುಕನ್ನೂ ಕಟ್ಟಿಕೊಳ್ಳುವುದು ಸುಮ್ಮನೆ ಮಾತಲ್ಲ.

ಕಾರ್ಯಕ್ರಮ ಮುಗಿದು ಡಾ.ಕಮತಿಯವರ ಮನೆಗೆ ಹೋಗಿ ಎರಡು ಮುಟಿಗೆಯಷ್ಟು ಅವಲಕ್ಕಿ ತಿನ್ನುವುದರೊಳಗಾಗಿ, ``ಸರ, ಅಲ್ಲಿ ಸಾವಿರಾರು ಮಂದಿ ಕಾಯಲಿಕ್ಕೆ ಹತ್ಯಾರ. ಹೊರಡ್ರಿ ಹೊರಡ್ರಿ" ಎಂದು ಮುಧೋಳ ಎಂಬ ಪತ್ರಕರ್ತ ಯುವಕ ಒತ್ತಾಯ ಮಾಡತೊಡಗಿದ. ನಾನು ಮಾಡಿದ ತಪ್ಪೆಂಥದು ಅಂತ ಗೊತ್ತಾದದ್ದೇ ಆಗ. ಎಕ್ಸಂಬಾಕ್ಕೆ ಹೊರಟಿದ್ದಿರಲ್ಲ? ಅದೇ ಸೀಮೆಗೆ ಸೇರಿದ ಖಾನಟ್ಟಿ ಎಂಬ ಗ್ರಾಮದಲ್ಲಿ ರಾಜ್ಯೋತ್ಸವ ಮತ್ತು ಸನ್ಮಾನ ಇಟ್ಟುಕೊಳ್ಳುತ್ತೇವೆ, ತಾವು ಬರಬೇಕು ಅಂತ ಗ್ರಾಮಸ್ಥರು ಫೋನು ಮಾಡಿದಾಗ `ಆಯ್ತು ಬರ‍್ತೀನಿ` ಅಂದು ಬಿಟ್ಟಿದ್ದೆ. ಅಸಲಿಗೆ ಯಕ್ಸಂಬಾದಿಂದ ಖಾನಟ್ಟಿ ಎಷ್ಟು ದೂರವಿದೆ ಎಂದೂ ಕೇಳಿಕೊಂಡಿರಲಿಲ್ಲ. ನೋಡಿದರೆ, ಅದು ಬೆಳಗಾವಿ ಜಿಲ್ಲೆಯ ಮತ್ತೊಂದು ಮೂಲೆ. ಹೋದಷ್ಟೂ ದಾರಿ. ಸಮೃದ್ಧವಾದ ಕಬ್ಬಿನ ಗದ್ದೆಗಳ ಮಧ್ಯೆ ಕಬ್ಬು ಹೇರಿದ ಟ್ರ್ಯಾಕ್ಟರುಗಳು ಓಡಾಡಿ ಓಡಾಡಿ ರಸ್ತೆ ಹಳ್ಳ ಹಿಡಿದು ಹೋಗಿದೆ. ತುಂಬ ಹೊತ್ತು ಪ್ರಯಾಣಿಸಿದ ನಂತರ ಸಿಕ್ಕಿದ್ದು ಗುರ್ಲಾಪುರ. ``ಇನ್ನೂ ಎಷ್ಟು ದೂರನಯ್ಯಾ?" ಅಂತ ಕೇಳಿದಾಗ ಪತ್ರಕರ್ತ ಮಿತ್ರ ಮುಧೋಳ, ``ಇಲ್ಲೇ ಹತ್ತಿರದಾಗ ಇರಬೇಕ್ರೀ... ಕೇಳಿ ಹೇಳತೀನಿ" ಅಂದ. ಅಲ್ಲಿಗೆ ಮುಗೀತು ನನ್ನ ಕಥೆ ಅಂದುಕೊಂಡೆ.

ಆಗಲೇ ರಾತ್ರಿಯ ಹತ್ತು ದಾಟಿತ್ತು. ಇನ್ನೇನು ಜನ ಸೇರಿದ್ದಾರು? ಚಿಕ್ಕದೊಂದು ಸಭೆ, ಪುಟ್ಟ ಸನ್ಮಾನ : ಅಷ್ಟೇ ಇದ್ದೀತು ಅಂದುಕೊಂಡು ಕಾರಿನಿಂದ ಇಳಿದರೆ ಖಾನಟ್ಟಿ ಎಂಬ ಊರು ಕೆಲವು ಸಾವಿರ ಜನರಿಂದ ಆ ಹೊತ್ತಿನಲ್ಲೂ ಕಿಕ್ಕಿರಿದಿತ್ತು. ಯಾವ ಚಿತ್ರನಟನನ್ನು ನೋಡಲಿಕ್ಕೂ ಅಷ್ಟು ಜನ ಬಂದಿರಲಾರರು. ಅದೇನು ಹುಚ್ಚು ಆ ಹುಡುಗರಿಗೆ! ಸುಮಾರು ಐದುನೂರು ಮಾಲೆ ಹಾಕಿದರು. ಮಾತಾಡಿದ್ದನ್ನು ಪ್ರತಿಯೊಬ್ಬರೂ ಮೊಬೈಲುಗಳಲ್ಲಿ ರೆಕಾರ್ಡ್ ಮಾಡಿಕೊಂಡರು. ಹಾಕಿದ ಮಾಲೆಗಳ ಭಾರಕ್ಕೆ ಕುಸಿದೇ ಬಿದ್ದೇನೆನ್ನಿಸಿತು. ಜನರ ಉತ್ಸಾಹ ನೋಡಿ ನಾನೂ ಸಾಕಷ್ಟು ಹೊತ್ತು ಮಾತನಾಡಿದೆ. ನನಗೆ ಆಶ್ಚರ್ಯವಾಗಿದ್ದುದೆಂದರೆ `ಕರುನಾಡ ಸಿರಿ` ಅಂತ ನಂಗೊಂದು ಬಿರುದು ಕೊಟ್ಟು, ಜೊತೆಗೆ ಹತ್ತು ಸಾವಿರ ರುಪಾಯಿ ಉಡುಗೊರೆ ಕೊಟ್ಟರು. ಇದೆಲ್ಲಿಯ ಋಣ. ಎಂಥ ಅಭಿಮಾನ? ಇವರಿಗಾಗಿ ನಾನು ಮಾಡಿದ್ದಾದರೂ ಏನು? ಇವರ ಊರಿನವನಲ್ಲ. ಇವರ ಜಾತಿಯವನಲ್ಲ. ನಾನು ರಾಜಕಾರಣಿಯಲ್ಲ. ``ಇವತ್ತು ನೀವು ಬರದೇ ಹೋಗಿದ್ದಿದ್ದರೆ ಜನ ಹುಚ್ಚಿಗೆದ್ದು ನಮ್ಮ ರುಂಡಾ ಕಡೀತಿದ್ರು ನೋಡ್ರಿ?" ಅಂದ ಸಂಘಟಕರನ್ನು ಆ ಕತ್ತಲಲ್ಲಿ ಅಚ್ಚರಿಯಿಂದ ನೋಡಿದೆ.

ಈ ಪರಿಯ ಅಭಿಮಾನವಿರಲಿಕ್ಕೆ ಕಾರಣವೇನು ಅಂತ ಯೋಚಿಸಿದಾಗ ಹೊಳೆದದ್ದು: `ಮನಸೇ` CD. ಅನೇಕ ಶಿಕ್ಷಕರು, ಅಧ್ಯಾಪಕರು ತಮ್ಮ ಮೊಬೈಲ್‌ಗಳಿಗೆ download ಮಾಡಿಕೊಂಡು ಆ ಧ್ವನಿ ಸುರುಳಿಯನ್ನು ಕ್ಲಾಸುಗಳಲ್ಲಿ ವಿದ್ಯಾರ್ಥಿಗಳಿಗೆ ಕೇಳಿಸುತ್ತಾರೆ. ಈ ಭಾಗದಲ್ಲಿ ಆ ಪರಿಪಾಠವಿದೆ. ಧ್ವನಿ ಜನರನ್ನು ತಲುಪುವುದು ಸುಲಭ. ಅದು ಪರಿಣಾಮ ಬೀರುವುದೂ ಹೆಚ್ಚು. ಅಂಥ ದುಬಾರಿಯೂ ಅಲ್ಲ. ಒಬ್ಬನೇ ಮಾಡಬಹುದಾದ ಚೆಂದದ ಕೆಲಸ. ``ಇನ್ನೆರಡು ಸಿ.ಡಿ. ಎಲ್ಲಿ ಸಿಗ್ತವೆ?" ಎಂದು ಕೇಳಿದವರು ಅನೇಕ ಮಂದಿ. ನಾನು ಮಾಡಿದ್ದರೆ ತಾನೆ? ಸಿ.ಡಿಗೆ ಸಂಗೀತದ ನೆರವು ಬೇಕು. `ಮನಸೇ` ಸಿ.ಡಿಗೆ ಸಂಗೀತ, ಹಿನ್ನೆಲೆ ಗಾಯನ ಮಾಡಿಕೊಟ್ಟವನು ನನ್ನ ಮಿತ್ರ ನಾಗರಾಜ ಹವಾಲ್ದಾರ್. ಅವನಿಗೆ ನನ್ನ ಮಾತಿನ ಭಾವ ಅರ್ಥವಾಗುತ್ತದೆ. ಅಮೆರಿಕಕ್ಕೆ ಹೋದವನು ಹಿಂತಿರುಗಿದ್ದಾನಾ? ವಿಚಾರಿಸಬೇಕು. ಎರಡು ಸಿ.ಡಿ ಬಿಡುಗಡೆ ಮಾಡುವುದು ಕಷ್ಟವಲ್ಲ. ಅವತ್ತು ಮುತ್ತಿಕೊಂಡಿದ ಯುವಕರಿಂದ ತಪ್ಪಿಸಿಕೊಂಡದ್ದಕ್ಕೆ ಕಾರಣ ಸಬ್ ಇನ್ಸ್‌ಪೆಕ್ಟರ್ ಅಶೋಕ್ ರಾಥೋಡ್. ಕಡೆಗೆ ಅವರ ಮನೆಯಲ್ಲೇ ಊಟ ಮಾಡಿ ಹೊರಟಾಗ ರಾತ್ರಿಯ ಎರಡನೇ ಜಾವ.

ಬೆಳಿಗ್ಗೆ ಎಚ್ಚರವಾದಾಗ, ಅದು ಖಾನಾಪುರ-ರಾಮನಗರಗಳಿಗೆ ಹತ್ತಿರವಿದ್ದ ಒಂದು ರೆಸಾರ್ಟು. ಚೆನ್ನಾಗಿತ್ತಾದರೂ ಯಾಕೋ ಉಳಿಯಬೇಕೆನ್ನಿಸಲಿಲ್ಲ. ಹತ್ತಿರದಲ್ಲೇ ಜೋಯಿಡಾ ಇದೆ. ಎಷ್ಟು ವರ್ಷಗಳಾದವು ಇಲ್ಲಿಗೆ ಬಂದು? ಸಂಜೆ ಹೊತ್ತಿಗೆ ಮನೋಹರ ಮಳಗಾಂವಕರರ ಬಂಗಲೆಯಲ್ಲಿದ್ದೆ. ಕೆಲವಷ್ಟು ಬದಲಾವಣೆಗಳಾಗಿವೆ. ಒಂದು ಸ್ವಿಮ್ಮಿಂಗ್ ಪೂಲ್ ಕಟ್ಟಿದ್ದಾರೆ. ಮೊದಲಿದ್ದ ನೌಕರರೇ ಇದ್ದಾರೆ. ಅವರ ಮೇಲ್ವಿಚಾರಣೆಗೆ ಎರಡು ದಿನಗಳ ಹಿಂದೆ ಜೆನೀ ಎಂಬ ಧಾರವಾಡದ ಹೆಣ್ಣುಮಗಳನ್ನು ಮಳಗಾಂವಕರರ ಅಳಿಯ ಕಪೂರ್ ನೇಮಿಸಿದ್ದಾರೆ. ಈ ಬಂಗಲೆಯನ್ನು ಒಂದರ್ಥದಲ್ಲಿ ಹೊಟೇಲನ್ನಾಗಿ ಮಾಡುತ್ತಾರಾ? ಆಕೆಗೂ ಗೊತ್ತಿಲ್ಲ. ಅಸಲು ಮಳಗಾಂವಕರ್ ಅವರು ಖ್ಯಾತ ಲೇಖಕರಾಗಿದ್ದರು ಎಂಬುದೂ ಆಕೆಗೆ ಗೊತ್ತಿಲ್ಲ. ಮಳಗಾಂವಕರ್ ಮಲಗಿ ಪ್ರಾಣ ಬಿಟ್ಟ ಮಂಚದ ಮೇಲೆ ಕೊಂಚ ಹೊತ್ತು ಕುಳಿತೆ. ಅವರ study roomನಲ್ಲಿ ಪುಸ್ತಕಗಳಿಲ್ಲ. ಅವರ ಕೋಣೆಯ ಪಕ್ಕದಲ್ಲಿ ನೆಲದುದ್ದ ಹಾಸಿದ್ದ ಹುಲಿ ಚರ್ಮವಿಲ್ಲ. ಬಾಗಿಲಲ್ಲಿದ್ದ ಆನೆ ದಂತವಿಲ್ಲ. ಲಕ್ಷಾಂತರ ಬೆಲೆಯ ಕಾರ್ಪೆಟ್‌ಗಳು ಕಾಣಿಸಲಿಲ್ಲ. ಪ್ರವೇಶವಾಗುತ್ತಿದ್ದಂತೆಯೇ ಕಾಣಿಸುತ್ತಿದ್ದ ಅವರ hatಗಳಿಲ್ಲ. ಅವರದೊಂದು ದೊಡ್ಡ ಫೊಟೋ ಕೂಡ ಅಲ್ಲಿ ಇಲ್ಲ. ಅಸಲು ಮನೋಹರ ಮಳಗಾಂವಕರರೇ ಇಲ್ಲದ ಆ ಬಂಗಲೆಯಲ್ಲಿ ಏನಿದ್ದರೆ ಏನು, ಇಲ್ಲದಿದ್ದರೆ ಏನು?

ಸುಮ್ಮನೆ ಬಂದು ಬಿಟ್ಟೆ.

-ನಿಮ್ಮವನು
ಆರ್.ಬಿ.

Read Archieves of 04 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books