Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಒಬ್ಬ ಮುಖ್ಯಮಂತ್ರಿ ಹೀಗೂ ಮಾತನಾಡುತ್ತಾರಾ?

ಮುಖ್ಯಮಂತ್ರಿ ಸದಾನಂದಗೌಡರ ಮುಖದಲ್ಲಿದ್ದ ನಗು, ಮನಸ್ಸಿನಲ್ಲಿ ತಳವೂರಿದ್ದ ತಾಳ್ಮೆ ಕ್ರಮೇಣ ಕರಗುತ್ತಿರುವ ಲಕ್ಷಣಗಳು ಕಾಣುತ್ತಿವೆ. ಮೊನ್ನೆ ಅವರಾಡಿದ ಒಂದು ಮಾತನ್ನು ಕೇಳಿದ ಮೇಲಂತೂ ಅನುಮಾನವೇ ಬೇಡ. ಮುಖ್ಯಮಂತ್ರಿಯಾಗಿ ಅಕಾರ ಸ್ವೀಕಾರ ಮಾಡುವಾಗ ಅವರಲ್ಲಿದ್ದ ತಾಳ್ಮೆ ಕಡಿಮೆಯಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ.

ನೂತನ ಲೋಕಾಯುಕ್ತರ ನೇಮಕಾತಿಗೆ ಸಂಬಂಸಿದಂತೆ ಸರ್ಕಾರ ತೆಗೆದುಕೊಂಡ ತೀರ್ಮಾನ, ಈ ತೀರ್ಮಾನವನ್ನು ರಾಜ್ಯಪಾಲರಿಗೆ ಕಳಿಸುತ್ತಿದ್ದಂತೆಯೇ ಎದ್ದ ವಿವಾದ, ಆ ವಿವಾದಕ್ಕೆ ಸದಾನಂದಗೌಡ ಪ್ರತಿಕ್ರಿಯಿಸಿದ ರೀತಿಯನ್ನು ನೋಡಿದರೆ ಅನುಮಾನವೇ ಬೇಡ, ಸದು ಕ್ರಮೇಣ ಬದಲಾಗುತ್ತಿದ್ದಾರೆ. ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಲೋಕಾಯುಕ್ತ ಹುದ್ದೆಯಿಂದ ನಿವೃತ್ತಗೊಂಡ ನಂತರ ಆ ಜಾಗಕ್ಕೆ ನೇಮಕಗೊಂಡ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ವಿರುದ್ಧ ಆರೋಪಗಳು ಕೇಳಿ ಬಂದವು. ವೈಯಾಲಿ ಕಾವಲ್ ಹೌಸಿಂಗ್ ಸೊಸೈಟಿ ಮತ್ತು ನ್ಯಾಯಾಂಗ ಬಡಾವಣೆಯಲ್ಲಿ ತಮ್ಮ ಹಾಗೂ ಕುಟುಂಬದವರ ಹೆಸರಿನಲ್ಲಿ ನಿವೇಶನ ಪಡೆದ ಆರೋಪ ಹೆಗಲಿಗೇರಿದ ನಂತರ ಶಿವರಾಜ್ ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಇದಾದ ನಂತರ ಆ ಜಾಗಕ್ಕೆ ಯಾರನ್ನು ತರಬೇಕು? ಎಂಬ ಪ್ರಶ್ನೆ ಮೇಲೆದ್ದಾಗ ಸರ್ಕಾರ ಮಾಡಿದ ಸರ್ಕಸ್ಸು ಒಂದೆರಡಲ್ಲ. ಫೈನಲಿ, ಈ ಜಾಗಕ್ಕೆ ಸದಾನಂದಗೌಡರು ಆಯ್ಕೆ ಮಾಡಿದ ಹೆಸರು ನ್ಯಾಯಮೂರ್ತಿ ಬನ್ನೂರು ಮಠ ಅವರದು. ಅವರ ಹೆಸರಿದ್ದ ಪಟ್ಟಿಯನ್ನು ರಾಜ್ಯಪಾಲರಿಗೆ ಶಿಫಾರಸು ಮಾಡುತ್ತಿದ್ದಂತೆಯೇ ನ್ಯಾಯಮೂರ್ತಿ ಬನ್ನೂರು ಮಠ ವಿರುದ್ಧವೂ ಆರೋಪ ಕೇಳಿ ಬಂತು. ನಾಗರೀಕ ಸೌಲಭ್ಯಕ್ಕಾಗಿ ಮೀಸಲಿಟ್ಟ ನಿವೇಶನವನ್ನು ಪಡೆದು ಅವರು ಮನೆ ಕಟ್ಟಿಕೊಂಡಿದ್ದಾರೆ ಎಂಬುದು ಈ ಆರೋಪ. ಇದಕ್ಕೆ ಸದಾನಂದಗೌಡರು ಪ್ರತಿಕ್ರಿಯಿಸಿದ ರೀತಿ ನಿಜಕ್ಕೂ ವಿಶೇಷವೇ. `ದೇಶದಲ್ಲಿ ಯಾರೊಬ್ಬರೂ ನೂರಕ್ಕೆ ನೂರು ಪರಿಶುದ್ಧರಲ್ಲ, ವ್ಯಕ್ತಿಗಳಲ್ಲಿ ಸಣ್ಣ ಪುಟ್ಟ ಲೋಪಗಳಿರುವುದು ಸಹಜ. ಹಾಗೆ ಒಂದು ಲೋಪವಿದೆ ಎಂದ ಮಾತ್ರಕ್ಕೆ ಯಾರೂ ದೊಡ್ಡ ಜವಾಬ್ದಾರಿಯನ್ನು ವಹಿಸಿಕೊಳ್ಳಬಾರದು ಅಂತೇನಿಲ್ಲ` ಎಂದು ಈ ಮಾತುಗಳನ್ನಾಡುವ ಮುನ್ನ ಸದಾನಂದಗೌಡ ತಾವು ಹೇಳುತ್ತಿರುವುದೇನು ಅನ್ನುವುದನ್ನು ಅರ್ಥ ಮಾಡಿಕೊಂಡಿದ್ದರೇ?

ನ್ಯಾಯಮೂರ್ತಿ ಬನ್ನೂರು ಮಠ ತಮ್ಮ ಸೇವಾವಯಲ್ಲಿ ಎಂದೂ ಆರೋಪಗಳಿಗೆ ಗುರಿಯಾದವರಲ್ಲ. ಈಗ ಅವರ ಮೇಲೆದ್ದಿರುವ ಆರೋಪ ಎಷ್ಟರ ಮಟ್ಟಿಗೆ ನಿಜ? ಈ ರೀತಿ ಅವರು ನಾಗರೀಕ ಸೌಲಭ್ಯಕ್ಕಾಗಿ ಮೀಸಲಿಟ್ಟ ನಿವೇಶನವನ್ನು ಉದ್ದೇಶಪೂರ್ವಕವಾಗಿ ಪಡೆದರೇ? ಅಥವಾ ತಪ್ಪು ಗ್ರಹಿಕೆಯಿಂದ ಪಡೆದಿರಬಹುದೇ? ಇವೆಲ್ಲವೂ ಚರ್ಚಾರ್ಹ ಪ್ರಶ್ನೆಗಳೇ. ಒಂದು ಆರೋಪ ಕೇಳಿ ಬಂದ ತಕ್ಷಣ ನ್ಯಾಯಮೂರ್ತಿ ಬನ್ನೂರು ಮಠ ಅವರ ಕುರಿತಂತೆ ವಿನಾಕಾರಣ ಮಾತನಾಡಬೇಕಿಲ್ಲ. ಆದರೆ ಇಂತಹದೊಂದು ಆರೋಪ ಕೇಳಿ ಬಂದ ಕೂಡಲೇ ಮುಖ್ಯಮಂತ್ರಿಯಾದವರು ಏನು ಮಾಡಬೇಕಿತ್ತು? ಬನ್ನೂರು ಮಠ ಅವರ ಮೇಲೆ ಕೇಳಿ ಬಂದ ಆರೋಪ ನಿಜವೇ? ಎಂಬ ಕುರಿತು ಸಣ್ಣದೊಂದು ಪರಿಶೀಲನಾ ಕಾರ್ಯ ನಡೆಸಬೇಕಿತ್ತು. ಮುಖ್ಯಮಂತ್ರಿ ಸದಾನಂದಗೌಡ ಆ ಕೆಲಸವನ್ನೇ ಮಾಡಲಿಲ್ಲ. ಸಾರ್ವಜನಿಕ ಜೀವನದಲ್ಲಿರುವವರೆಲ್ಲ ಪರಿಶುದ್ಧರೇನಲ್ಲ, ಎಲ್ಲ ವ್ಯಕ್ತಿಗಳಲ್ಲೂ ಲೋಪ ದೋಷಗಳು ಇದ್ದೇ ಇರುತ್ತವೆ. ಹೀಗಾಗಿ ನಾವು ಯಾರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಅಂತ ಶಿಫಾರಸು ಮಾಡಿದ್ದೇವೋ ಅವರನ್ನೇ ಆ ಜಾಗಕ್ಕೆ ತರಲು ಬದ್ಧರಾಗಿದ್ದೇವೆ ಎಂದು ಬಿಟ್ಟರು.

ಸದಾನಂದಗೌಡರು ಹೇಳಿದ್ದನ್ನು ಪಾಸಿಟಿವ್ ಆಗಿಯೇ ತೆಗೆದುಕೊಳ್ಳೋಣ. ವ್ಯಕ್ತಿಗಳಲ್ಲಿ ಲೋಪ ದೋಷಗಳಿರುವುದು ಸಹಜ. ಹೀಗಾಗಿ ಅದನ್ನು ದೊಡ್ಡದು ಮಾಡಬಾರದು ಎಂಬ ತೀರ್ಮಾನಕ್ಕೆ ಬಂದರೆ ಏನಾಗುತ್ತದೆ? ಒಬ್ಬ ವ್ಯಕ್ತಿಯಲ್ಲಿ ಯಾವ ಪ್ರಮಾಣದ ಲೋಪವಿದ್ದರೆ ಸಹ್ಯ, ಯಾವ ಪ್ರಮಾಣದ ಲೋಪವಿದ್ದರೆ ಸಹ್ಯವಲ್ಲ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಬನ್ನೂರು ಮಠ ವಿರುದ್ಧ ಕೇಳಿ ಬಂದ ಆರೋಪದಲ್ಲಿ ಹುರುಳಿಲ್ಲ ಎಂದಾದರೆ ಅದಕ್ಕಿಂತ ಸಂತಸದ ಸಂಗತಿ ಮತ್ತೊಂದಿಲ್ಲ. ಹೀಗಾಗಿ ಈ ಆರೋಪದಲ್ಲಿ ಹುರುಳಿದೆಯೋ, ಇಲ್ಲವೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ ಸದಾನಂದಗೌಡ ನಂತರ ಮಾತನಾಡಬೇಕಿತ್ತು. ಆದರೆ ಅವರು ಆ ಕೆಲಸ ಮಾಡದೇ ಆಡಿದ ಮಾತುಗಳು ಬೇರೆಯೇ ಅರ್ಥವನ್ನು ಧ್ವನಿಸತೊಡಗುತ್ತವೆ. ಇವತ್ತು ಯಾರಾದರೂ ನಾಗರೀಕ ಸೌಲಭ್ಯಕ್ಕಾಗಿ ಮೀಸಲಿಟ್ಟ ನಿವೇಶನವನ್ನು ಸ್ವಂತಕ್ಕಾಗಿ ಪಡೆದುಕೊಂಡಿದ್ದರು ಅಂತಿಟ್ಟುಕೊಳ್ಳಿ. ನಾಳೆ ಅಂಥವರ ವಿರುದ್ಧ ಲೋಕಾಯುಕ್ತಕ್ಕೆ ಯಾರಾದರೂ ದೂರು ಕೊಟ್ಟರೆ ಆಗ ಆರೋಪಿಯ ಜಾಗದಲ್ಲಿರುವವನು ಏನು ಹೇಳುತ್ತಾನೆ? ಮುಖ್ಯಮಂತ್ರಿ ಸದಾನಂದಗೌಡರು ಹೇಳಿರುವ ಪ್ರಕಾರ ವ್ಯಕ್ತಿಗಳಲ್ಲಿ ಸಣ್ಣ ಪುಟ್ಟ ದೋಷಗಳಿರುವುದು ಸಹಜ. ಹೀಗಾಗಿ ಇದನ್ನು ತುಂಬ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದು ಆತ ವಾದಿಸಬಹುದು. ಉಲ್ಟಾ ಹೇಳಲು ಹೋದರೆ ತನ್ನ ರಕ್ಷಣೆಗಾಗಿ ಈ ನಾಡಿನ ಮುಖ್ಯಮಂತ್ರಿಗಳೇ ಆಡಿದ ಮಾತುಗಳನ್ನು ಆತ ಉದಾಹರಣೆಯಾಗಿ ಕೊಡಲೂಬಹುದು. ಆಗ ಏನಾಗುತ್ತದೆ? ಈಗಾಗಲೇ ವ್ಯವಸ್ಥೆಯಲ್ಲಿ ಬೇರು ಬಿಟ್ಟಿರುವ ಭ್ರಷ್ಟಾಚಾರವನ್ನು ಸಕ್ರಮಗೊಳಿಸಲು ತಾನೇ ತಾನಾಗಿ ಒಂದು ದಾರಿ ತೆರೆದುಕೊಂಡಂತಾಗುತ್ತದೆ.

ಇವತ್ತು ನಿಮ್ಮ ಮಕ್ಕಳನ್ನೋ, ಇನ್ಯಾರನ್ನೋ ಶಾಲೆಗೆ ಸೇರಿಸಲು ಒಂದು ಜಾತಿ ಪ್ರಮಾಣ ಪತ್ರ ತೆಗೆದುಕೊಳ್ಳಬೇಕೆಂದು ಹೋಗಿ ಬಂದಿದ್ದರೆ ನಿಮ್ಮ ಅನುಭವಕ್ಕೇ ಬಂದಿರುತ್ತದೆ. ಗ್ರಾಮೀಣ ಭಾಗದಲ್ಲಾದರೆ ಐವತ್ತೋ, ನೂರೋ, ಸಿಟಿ ಏರಿಯಾಗಳಲ್ಲಾದರೆ ಮುನ್ನೂರು, ನಾನೂರು, ಐನೂರು ರುಪಾಯಿ ಲಂಚ ತೆರದೆ ನೀವು ಒಂದು ಜಾತಿ ಪ್ರಮಾಣ ಪತ್ರವನ್ನು ತರಲು ಸಾಧ್ಯವೇ ಇಲ್ಲ. ಉಳಿದಂತೆ ಕಂದಾಯ ಇಲಾಖೆಯ ವ್ಯಾಪ್ತಿಗೆ ಬರುವ ಸಬ್ ರಿಜಿಸ್ಟ್ರಾರ್ ಕಚೇರಿಗಳಿಗೆ ಹೋಗಿ ನೋಡಿ. ರಾಜ್ಯದಲ್ಲಿರುವ ಯಾವುದೇ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ನಿಮ್ಮ ಆಸ್ತಿ ದಾಖಲೆಯನ್ನು ನೋಂದಾವಣೆ ಮಾಡಿಸಿಕೊಳ್ಳಲು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹಣವನ್ನು ನೀವು ತೆರಲಿಲ್ಲ ಎಂದು ಹೇಳಿದರೆ ಅದು ಗಿನ್ನಿಸ್ ದಾಖಲೆಯೇ ಸರಿ. ಇವತ್ತು ರಾಜ್ಯದ ಬಹುತೇಕ ಸಬ್ ರಿಜಿಸ್ಟ್ರಾರ್ ಕಚೇರಿಗಳ ಬಳಿ ಸಂಜೆ ಐದು ಮೂವತ್ತಕ್ಕೆ ಹೋಗಿ ನೋಡಿ. ಅಲ್ಲಿ ಕೆಲಸ ಮಾಡುವವರೆಲ್ಲ ಇರುವಾಗಲೇ ಐದು ನಿಮಿಷದ ಮಟ್ಟಿಗೆ ಕಚೇರಿ ಬಾಗಿಲು ಛಕ್ಕಂತ ಮುಚ್ಚಿಕೊಳ್ಳುತ್ತದೆ. ನಂತರ ಎಲ್ಲವೂ ಮಾಮೂಲು.

ಈ ಐದು ನಿಮಿಷದ ಮಟ್ಟಿಗೆ ಏಕೆ ಸಬ್ ರಿಜಿಸ್ಟ್ರಾರ್ ಕಚೇರಿ ಬಾಗಿಲು ಮುಚ್ಚಿಕೊಳ್ಳುತ್ತದೆ ಎಂದರೆ, ಅವತ್ತು ನೋಂದಣಿ ಕಾರ್ಯದಿಂದ ಬಂದ ಹೆಚ್ಚುವರಿ ಆದಾಯವನ್ನು ಅವರವರ ಲೆವೆಲ್ಲಿಗೆ ತಕ್ಕ ಹಾಗೆ ಹಂಚಿಕೊಳ್ಳುವ ಕೆಲಸ ನಡೆಯಬೇಕಲ್ಲ? ಅದಕ್ಕಾಗಿ ಅವು ಹಾಗೆ ಮುಚ್ಚಿಕೊಳ್ಳುತ್ತವೆ. ಇನ್ನು ಸರ್ಕಾರಿ ಆಸ್ಪತ್ರೆಗಳ ಕತೆಯನ್ನಂತೂ ಹೇಳುವುದೇ ಬೇಡ. ಅಲ್ಲಿ ಬಡ ಕುಟುಂಬಗಳ ಗರ್ಭಿಣಿಯರಿಗೆ ಕೊಟ್ಟ ಮಡಿಲು ಕಿಟ್‌ಗಳನ್ನೂ ಕಿತ್ತು ತಿನ್ನುವ ವ್ಯವಸ್ಥೆಯಿದೆ. ದೂರು ನೀಡಿದರೆ ಆ ಊರಿನ ಎಮ್ಮೆಲ್ಲೆ ಬಾಯಿ ಬಡಿದುಕೊಳ್ಳುತ್ತಾನೆ. ಮೊದಲೇ ವೈದ್ಯರ ಕೊರತೆ ಇದೆ ಸ್ವಾಮಿ. ಈಗ ನಾವು ಅವರನ್ನು ಲಂಚ ತಗೊಳ್ತೀರಿ ಅಂತ ಬೈದರೆ ನಾಳೆ ಕೆಲಸಕ್ಕೆ ರಾಜೀನಾಮೆ ಕೊಟ್ಟು ಪ್ರೈವೇಟ್ ಪ್ರಾಕ್ಟೀಸ್ ಮಾಡ್ತೀವಿ ಅಂತ ಹೋಗುತ್ತಾರೆ. ಅವರೂ ಇಲ್ಲ ಎಂದರೆ ಈಗ ಸಿಗುತ್ತಿರುವ ಸೇವೆಯೂ ಇಲ್ಲದಂತಾಗುತ್ತದೆ ಎಂದು ಹೇಳುತ್ತಾರೆ.

ಇದು ಒಂದು ಕಡೆಗಾದರೆ, ಮತ್ತೊಂದೆಡೆ ವರ್ಷಕ್ಕೆ ಸಾವಿರಾರು ಮಕ್ಕಳು ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸಿಗೆ ಸೇರುತ್ತಾರೆ. ಸರ್ಕಾರಿ ಸೌಲಭ್ಯ ಪಡೆದು ಓದುವವರಿಗೆ ಸರ್ಕಾರ ಬೊಕ್ಕಸದಿಂದ ಲಕ್ಷಗಟ್ಟಲೆ ಹಣ ಸುರಿಯುತ್ತದೆ. ಇದು ಈ ನಾಡಿನ ಜನ ತೆರುವ ತೆರಿಗೆಯ ದುಡ್ಡು. ಆದರೆ ಅವರು ಮೆಡಿಕಲ್ ಓದಿದ ಮೇಲೆ ಮಿನಿಮಮ್ ಐದೋ, ಹತ್ತೋ ವರ್ಷ ಕಡ್ಡಾಯವಾಗಿ ಸರ್ಕಾರಿ ಸೇವೆಯಲ್ಲಿರಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡಬೇಕು, ಜನರ ಸೇವೆಯಲ್ಲಿ ತಮ್ಮ ಗರಿಷ್ಠ ಬದ್ಧತೆಯನ್ನು ತೋರಬೇಕು ಅಂತ ಕರಾರುವಾಕ್ಕಾಗಿ ಹೇಳಲು ಸರ್ಕಾರ ಸಿದ್ಧವಿಲ್ಲ. ಇದಕ್ಕೆ ಸಂಬಂಸಿದಂತೆ ಒಂದಷ್ಟು ಕಾನೂನುಗಳಿವೆಯಾದರೂ ಅವ್ಯಾವೂ ಸರಿಯಾಗಿ ಜಾರಿಗೆ ಬರುವುದಿಲ್ಲ. ಹೀಗೆ ಹೇಳುತ್ತಾ ಹೋದರೆ ಈ ವ್ಯವಸ್ಥೆಯಲ್ಲಿರುವ ಲೋಪಗಳು ಒಂದಾ ಎರಡಾ? ಇದರ ಮಧ್ಯೆಯೇ ಜನಸಾಮಾನ್ಯರು ತೊಳಲಾಡುವ ಪರಿಸ್ಥಿತಿ ಇರುವಾಗ ಸದಾನಂದಗೌಡರು ಇದ್ದಕ್ಕಿದ್ದಂತೆ, ವ್ಯಕ್ತಿಗಳಲ್ಲಿ ದೋಷ ಸಹಜ. ಯಾರೂ ನೂರಕ್ಕೆ ನೂರು ಪರಿಶುದ್ಧರಲ್ಲ ಎಂದು ಬಿಟ್ಟರೆ ಗತಿ ಏನು?

ನಾಳೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಡ್ಜಸ್ಟ್‌ಮೆಂಟ್ ವ್ಯವಹಾರ ಮಾಡುವವರು, ಒಂದು ಜಾತಿ ಪ್ರಮಾಣ ಪತ್ರಕ್ಕಾಗಿ ಬಡವರನ್ನೂ ಬಿಡದೆ ದೋಚುವವರು ಹೀಗೆ ಎಲ್ಲರೂ ಸೇರಿ, ನಾಗರೀಕ ಸೌಲಭ್ಯಕ್ಕಾಗಿ ಮೀಸಲಿಟ್ಟ ನಿವೇಶನವನ್ನು ಪಡೆಯುವುದೇ ಸಣ್ಣ ಲೋಪವಾದರೆ ನಮ್ಮದೆಲ್ಲ ಲೋಪವೂ ಅಲ್ಲ, ಪಾಪವೂ ಅಲ್ಲ ಎಂದು ಸಮರ್ಥಿಸಿಕೊಳ್ಳುವುದಿಲ್ಲವೇ? ಇವತ್ತಿನ ರಾಜಕೀಯ ವ್ಯವಸ್ಥೆ ಅಂತಲ್ಲ, ಜನಜೀವನದ ತಳ ಮಟ್ಟದವರೆಗೂ ಭ್ರಷ್ಟಗೊಂಡಿದೆ. ಹಾಗಂತ ಅದನ್ನು ಕಾನೂನುಬದ್ಧಗೊಳಿಸಲು ಸಾಧ್ಯವೇ? ಇಂತಹ ವ್ಯವಸ್ಥೆಯನ್ನು ಬಡಿಯಲು ಅಂತ ತಾನೇ ಲೋಕಾಯುಕ್ತದಂತಹ ಆದರ್ಶದ ಜಾಗಗಳಿರುವುದು? ಅಲ್ಲಿ ಕುಳಿತಿರುವವರ ಮೇಲೇ ಆರೋಪಗಳಿದ್ದರೆ ಹೇಗೆ? ಈ ವಿಷಯದಲ್ಲಿ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರ ನಿಲುವನ್ನು ನಾನು ಮೆಚ್ಚುತ್ತೇನೆ. ತಮ್ಮ ವಿರುದ್ಧ ಆರೋಪ ಕೇಳಿ ಬಂದ ಕೂಡಲೇ ಜಾಗ ಬಿಟ್ಟು ಎದ್ದು ಹೋದರು. ತಮ್ಮ ಸುದೀರ್ಘ ಸೇವಾವಯಲ್ಲಿ ಅವರು ದುಡಿದ ದುಡ್ಡಿನಿಂದ ಒಂದೆರಡಲ್ಲ ಹತ್ತು ಸೈಟು ಮಾಡಬಹುದಿತ್ತು. ಅದೂ ಕಾನೂನು ಬದ್ಧವಾಗಿ ಮಾಡಬಹುದಿತ್ತು. ಆದರೆ ಉದ್ದೇಶಪೂರ್ವಕವಾಗಿಯಲ್ಲದಿದ್ದರೂ ಅವರಿಂದ ಲೋಪವಾಗಿದೆ ಎಂಬ ದೂರು ಕೇಳಿ ಬಂದಾಗ ಗೌರವಯುತವಾಗಿ ಅವರು ಜಾಗ ಖಾಲಿ ಮಾಡಿದ್ದಾರೆ. ನಾಳೆ ಈ ಜಾಗಕ್ಕೆ ಬರುವವರು ಯಾವ ಆರೋಪಗಳನ್ನೂ ಹೊರದಿರುವುದು ಸೂಕ್ತ. ನಾಳೆ ನ್ಯಾಯಮೂರ್ತಿ ಬನ್ನೂರು ಮಠ ಅವರ ವಿರುದ್ಧದ ಆರೋಪ ಸುಳ್ಳು ಅಂತಾದರೆ ಅದು ಸಂತೋಷದ ವಿಷಯವಷ್ಟೇ ಆಲ್ಲ, ಒಂದು ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವನ್ನು ಗುಡಿಸಿ ಹಾಕಲು ಸಮರ್ಥರೊಬ್ಬರು ಸಿಕ್ಕಿದರು ಎಂದು ಸಮಾಧಾನಪಡಬಹುದು.

ಹಾಗೆ ಆಗುವ ಮುನ್ನ ಸದಾನಂದಗೌಡ ತುಂಬ ಎಚ್ಚರಿಕೆಯಿಂದ ಮಾತನಾಡುವುದು ಒಳಿತು. ಶುರುವಿನಲ್ಲಿ ಅವರು ಹೀಗಿರಲಿಲ್ಲ. ಇದೇ ಕುಮಾರಸ್ವಾಮಿ ತಮ್ಮ ಕುರಿತು ವ್ಯಂಗ್ಯವಾಡುತ್ತಾ, ಇವರು ಯಡಿಯೂರಪ್ಪನವರ ಕೈ ಗೊಂಬೆ ಎಂದರೆ ಸದು ವ್ಯಂಗ್ಯದ ಕುರುಹೇ ಇಲ್ಲದಂತೆ ಹೌದು, ನಾನು ಆರು ಕೋಟಿ ಜನರ ಕೈಗೊಂಬೆ ಎಂದು ಹೇಳಿದ್ದರು. ಇದೇ ರೀತಿ ಸದಾನಂದಗೌಡ ದಿನಗೂಲಿ ಸಿಎಂ ಅಂತ ಟೀಕೆ ಕೇಳಿ ಬಂದಾಗಲೂ ಅಷ್ಟೇ ಸಮಾಧಾನದಿಂದ ಹೌದು, ನಾನು ಆರು ಕೋಟಿ ಜನರ ದಿನಗೂಲಿ ಎಂದು ಹೇಳಿದ್ದರು. ಅವರು ಇಷ್ಟು ಮಾತನಾಡಿದ್ದೇ ತಡ, ಕುಮಾರಸ್ವಾಮಿಗೆ ಮುಂದೇನು ಹೇಳಬೇಕು ಅಂತ ತಿಳಿಯಲಿಲ್ಲ.

ಆ ಮಟ್ಟದ ಸಮಚಿತ್ತದ ಸದಾನಂದಗೌಡ ಬರ ಬರುತ್ತಾ ತಾಳ್ಮೆ ಕಳೆದುಕೊಳ್ಳತೊಡಗಿದ್ದಾರೆ. ಅವರ ಮುಖದಲ್ಲಿ ಕಾಣುತ್ತಿದ್ದ ಬುದ್ಧನಂತಹ ನಗುವಿನ ಹಿಂದೆ ಈಗ ಯಾವುದೋ ಒತ್ತಡ ಕಾಣುತ್ತಿದೆ. ಒಂದು ಕಡೆ ಐರಾವಣನಂತಹ ಯಡಿಯೂರಪ್ಪ, ಮತ್ತೊಂದು ಕಡೆ ಮೈರಾವಣನಂತಹ ಈಶ್ವರಪ್ಪ ಅವರನ್ನಿಟ್ಟುಕೊಂಡ ಮೇಲೆ ಸದಾನಂದಗೌಡರ ನೆಮ್ಮದಿ ಹಾಳಾಗುವುದು ಸಹಜವೇ. ಆದರೆ ಅಕ್ಕ ಪಕ್ಕ ಇರುವವರೇ ಇಂಥವರು ಎಂಬುದು ಕನ್‌ಫರ್ಮ್ ಆದ ಮೇಲೆ ಸದಾನಂದಗೌಡ ತಮ್ಮ ತಾಳ್ಮೆಯನ್ನು ಉಳಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸಬೇಕು. ಸದ್ಯದ ಸ್ಥಿತಿಯಲ್ಲಿ ಅದು ಕಷ್ಟದ ಕೆಲಸ ಅಂತ ಒಪ್ಪಿಕೊಳ್ಳೋಣ. ಆದರೆ ಹಾಗಂತ ತಾಳ್ಮೆ ಕಳೆದುಕೊಂಡು ನಾಗರೀಕ ಸೌಲಭ್ಯಕ್ಕಾಗಿ ಮೀಸಲಿಟ್ಟ ನಿವೇಶನವನ್ನು ಪಡೆಯುವುದು ತಪ್ಪಲ್ಲ, ಲೋಪ ಮಾತ್ರ ಎನ್ನುವ ಮಟ್ಟಕ್ಕೆ ಹೋದರೆ ಯಾವ ವ್ಯಕ್ತಿಯೂ ನೂರಕ್ಕೆ ನೂರು ಪರಿಶುದ್ಧನಲ್ಲ ಎಂದು ಹೇಳುವ ಸಿನಿಕತನ ತೋರಿದರೆ ನಾಳೆ ರಾಜ್ಯದ ಗತಿ ಏನಾದೀತು? ಇವತ್ತು ರಾಜ್ಯ ಬಿಜೆಪಿಯ ಮೇಲೆ, ಸದಾನಂದಗೌಡರ ನೇತೃತ್ವದ ಸರ್ಕಾರದ ಮೇಲೆ ನಿಯಂತ್ರಣ ಸಾಸಲು ಯಡಿಯೂರಪ್ಪ ನಡೆಸುತ್ತಿರುವ ಪ್ರಯತ್ನ, ಈ ಪ್ರಯತ್ನದ ವಿರುದ್ಧ ಈಶ್ವರಪ್ಪ, ಅನಂತಕುಮಾರ್, ಅಶೋಕ್, ಶೆಟ್ಟರ್, ರಾಮದಾಸ್ ಥರದವರು ಆಡುತ್ತಿರುವ ಪ್ರತಿಯಾಟಗಳು ಸಣ್ಣವೇನಲ್ಲ. ಇದರ ಪ್ರತಿಫಲವಾಗಿಯೇ ಒಂದು ಬಣದವರು ಮತ್ತೊಂದು ಬಣದವರ ವಿರುದ್ಧ ಕೇಸು ಜಡಿಸುತ್ತಾ, ಜೈಲಿಗೆ ಹೋಗೋಣ ಬನ್ನಿ ಎಂದು ಆಹ್ವಾನ ಕೊಡುತ್ತಾ ತಿರುಗುವ ಪರಿಸ್ಥಿತಿ ಬಂದಿರುವುದು. ಇಂತಹ ಕಾಲದಲ್ಲಿ ಸದಾನಂದಗೌಡರಂತಹ ವ್ಯಕ್ತಿಯೂ ತಾಳ್ಮೆಗೆಟ್ಟು ಮಾತನಾಡತೊಡಗಿದರೆ ಈ ಸರ್ಕಾರ ಮಾತ್ರವಲ್ಲ, ರಾಜ್ಯದ ಜನರೂ ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗದಿರಲಿ.

-ಆರ್‌ಬಿ

Read Archieves of 04 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books