Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಎಲ್ಲಿದ್ದಾನೆ ಅಂಥ ಆತ್ಮ ಬಂಧುವು?

``ಅವನು ಆತ್ಮ ಬಂಧು.

`ನನ್ನ ಮೈ ಮುಟ್ಟುವುದಿಲ್ಲ. ತಾಕಿ ಕೊಳೆ ಮಾಡುವುದಿಲ್ಲ. ಹಸಿದವನಂತೆ ಸದಾ ನನ್ನ ಸುತ್ತ ಪಹರೆ ತಿರುಗುವುದಿಲ್ಲ. ನಂಗೊತ್ತು; ತುಂಬ ಇಷ್ಟಪಡುತ್ತಾನೆ. ಆದರೆ ನನ್ನ ಮೈಯನ್ನಲ್ಲ. ತುಂಬ ಪ್ರೀತಿಸುತ್ತಾನೆ; ಆದರೆ ಸಂಬಂಧಕ್ಕೊಂದು ಹೆಸರಿಡುವುದಿಲ್ಲ. ಆಪತ್ತು ಬಂದಾಗ ಆತು ನಿಲ್ಲುತ್ತಾನೆ. ಸಂಭ್ರಮದ ಕ್ಷಣಗಳಲ್ಲಿ ತಪ್ಪದೆ ನೆನಪಾಗುತ್ತಾನೆ. ಯಾಕೋ ಯಾವುದೂ ಬೇಡವೆನ್ನಿಸಿದಾಗ ಒಬ್ಬಳೇ ನನ್ನ ಪಾಡಿಗೆ ನನ್ನನ್ನು ಇರಲು ಬಿಡುತ್ತಾನೆ. ಅವನು ಗಂಡನಲ್ಲ, ಪ್ರಿಯಕರನಲ್ಲ, ಸವಕಲಾಗಿ ಹೋಗಿರುವ ಶಬ್ದವಾದ `ಒಳ್ಳೆಯ ಫ್ರೆಂಡು` ಅಂತೀವಲ್ಲ? ಅದೂ ಅಲ್ಲ. ನಮ್ಮಿಬ್ಬರ ಸಂಬಂಧಕ್ಕೆ ಇಂಥದ್ದೇ ಅಂತ ಹೆಸರಿಲ್ಲ. ಯಾವತ್ತೋ ಒಂದು ದಿನ ಅವನಿಗೆ ನನ್ನನ್ನು ಒಪ್ಪಿಸಿಕೊಳ್ಳಬೇಕು ಎಂಬ ಧಾವಂತವಿಲ್ಲ. ಅವನು ಸ್ವೀಕರಿಸದಿದ್ದರೆ ಏನಾದೀತು ಅಂತ ಆತಂಕವಿಲ್ಲ.

ಅವನೇ ನಿಜವಾದ ಆತ್ಮ ಬಂಧು"

ಈ ಮೇಲಿನ ಸಾಲುಗಳನ್ನು ಓದಿ ಹೇಳಿ? ಅವಳೆಂಥ ಹುಡುಗಿಯೇ ಆದರೂ ಕಣ್ಣರಳಿಸಿ ಕೇಳುತ್ತಾಳೆ; `ನಿಜಕ್ಕೂ ಜಗತ್ತಿನಲ್ಲಿ ಅಂಥವನೊಬ್ಬ ಆತ್ಮ ಬಂಧು ಸಿಗುತ್ತಾನಾ?`

ಖಂಡಿತ ಸಿಗುತ್ತಾನೆ. ಅವನು ನಮ್ಮ ಆಸು ಪಾಸಿನಲ್ಲೇ ಸಿಗುತ್ತಾನೆ. ಅವನನ್ನು ಹುಡುಕಬೇಕಿಲ್ಲ. ಒಬ್ಬ ಒಳ್ಳೆಯ ಮನುಷ್ಯ ಅಂತ ಗೊತ್ತಾದರೆ ಸಾಕು, ಅವನೊಳಗೆ ಇಂಥದೊಂದು ಕಲ್ಪನೆ ಮೂಡಿಸಬಹುದು. `ನೀನೇ ನನ್ನ ಆತ್ಮ ಬಂಧುವು ದೊರೆಯೇ` ಅಂತ ಅವನಲ್ಲಿ ನಿವೇದಿಸಿಕೊಳ್ಳಬಹುದು. ಅದನ್ನವನು ಒಪ್ಪಿಕೊಳ್ಳುವಂತೆಯೂ ಮಾಡಬಹುದು. ಅದೆಲ್ಲವೂ ಹುಡುಗಿಯಾದವಳ ಕೈಯಲ್ಲಿದೆ. ಆಕೆ ಮಾಡುವ ತೀರ್ಮಾನಗಳಲ್ಲಿದೆ. ಆಕೆಯ ವರ್ತನೆಯಲ್ಲಿದೆ. ಅವಳ ಮಾತಿನಲ್ಲಿ, ಕಣ್ಣಿನಲ್ಲಿ, ಮೌನದಲ್ಲಿ, ಭಾಷೆಯಲ್ಲಿ, relate ಆಗಿಯೂ ಆಗದೆ ಇದ್ದುಬಿಡುವ ರೀತಿಯಲ್ಲಿ ಖಂಡಿತ ಅವಳೊಬ್ಬ ಆತ್ಮಬಂಧುವನ್ನು ಹುಡುಕಿಕೊಳ್ಳುವ ಸಾಧ್ಯತೆ ಇದೆ. ಚಿಕ್ಕದೊಂದು ಪತ್ರ ಬರೆಯುವಾಗಲೂ ಅವಳಿಗೆ ಎಚ್ಚರಿಕೆಯಿರಬೇಕು. ಪತ್ರದ ಒಕ್ಕಣೆ ಅಥವಾ ಸಂಬೋಧನೆಯಲ್ಲೇ ಅವಳು ಎಂಥ ಸಂಬಂಧವನ್ನು ತೆರೆಯುತ್ತಿದ್ದಾಳೆ ಎಂಬುದರ hint ಸಿಕ್ಕಿಬಿಡುತ್ತದೆ. ಕೆಲವರು ಪತ್ರದ ಮೊದಲ ಸಾಲಿನಲ್ಲೇ ಕರುಣೆ, ಸಿಂಪಥಿ, ಅಯ್ಯೋ ಪಾಪ-ಮುಂತಾದವು ಹುಟ್ಟುವಂತೆ ಬರೆದಿರುತ್ತಾರೆ. ಮುಖ ನೋಡುವುದಕ್ಕೆ ಮೊದಲೇ `ಐ ಲವ್ ಯೂ` ಅಂತ ಬರೆಯುವವರಿದ್ದಾರೆ. ವಿನಾಕಾರಣವಾಗಿ ಅಣ್ಣ, ಅಂಕಲ್, ಗೆಳೆಯ, ತಂದೆ ಸಮಾನನಾದ, ನಿನ್ನನ್ನೇ ನಂಬಿರುವ, ಬಾಳಿನ ಬೆಳಕಾಗುತ್ತೀ ಎಂದು ಆಶಿಸಿರುವ-ಇತ್ಯಾದಿ ಪದಗಳನ್ನು ಬಳಸಿರುತ್ತಾರೆ. ಅವರ ಉದ್ದೇಶ ಒಳ್ಳೆಯದೇ ಇರಬಹುದು. ಆದರೆ ಒಂದು ಪತ್ರದ ಸಂಬೋಧನೆಯೇ ಆ ಪತ್ರ ಬರೆದ ಹುಡುಗಿಯ ಅಭದ್ರತೆ, ಭಯ, ಆಸೆ, ನಿಸ್ಸಹಾಯಕತೆ-ಎಲ್ಲವನ್ನೂ ವ್ಯಕ್ತವಾಗಿಸಿಬಿಟ್ಟಿರುತ್ತದೆ. ಮೊದಲ ತಪ್ಪೇ ಅದು. ಅಂಥ ಯಾವ ಸಂಬೋಧನೆಯೂ ಇಲ್ಲದೆ-ನೇರವಾಗಿ ಹೆಸರಿಟ್ಟೇ ಪತ್ರ ಪ್ರಾರಂಭಿಸಿಬಿಟ್ಟರೆ, ಹೇಳಬೇಕಾದುದನ್ನು ನೇರವಾಗಿ ಹೇಳಿಬಿಟ್ಟರೆ-ಅದು ಪತ್ರ ಬರೆಸಿಕೊಂಡವನಲ್ಲಿ ಇಲ್ಲದ confusion ಉಂಟು ಮಾಡುವುದಿಲ್ಲ. ರಸ್ತೆಯಲ್ಲಿ ಎದುರಿಗೆ ಸಿಕ್ಕಾಗ `ಹಲೋ` ಅನ್ನುವ ರೀತಿ ಕೂಡ ಅಷ್ಟೆ. ಅದು ನಿಶ್ಚಲವಾಗಿರಬೇಕು. ಎರಡೆರಡು ಅರ್ಥ ಬರುವಂತೆ ಮಾತು ಆರಂಭಿಸಬಾರದು. ನಿಲ್ಲುವ ಭಂಗಿಯಲ್ಲಿ ಅಪಾರ್ಥಗಳಿಗೆ ಎಡೆ ಮಾಡಿಕೊಡುವಂತಿರಬಾರದು. ಅನತಿ ದೂರದಿಂದ ನೋಡಿದವರಿಗೂ ಕೂಡ ನಾವು ನಿಂತ ರೀತಿಯಲ್ಲೇ ದೋಷ, ಯಡವಟ್ಟು ಕಾಣಿಸುವಂತಿರಬಾರದು. ಆ ಮೇಲೆ ಪರಿಚಯ ಬೆಳೆಯುತ್ತ ಬೆಳೆಯುತ್ತ ನಮ್ಮ ವ್ಯಕ್ತಿತ್ವ ಎಂಥದು, ಈ ಪರಿಚಯದಿಂದಾಗಿ ನಮಗೆ ಏನಾಗಬೇಕಿದೆ, ಈ ಸಂಬಂಧದ ಸ್ವರೂಪ ಹೇಗಿರಲಿಕ್ಕೆ ನಾವು ಇಷ್ಟ ಪಡುತ್ತೇವೆ-ಮುಂತಾದವೆಲ್ಲವನ್ನೂ ಆತನಿಗೆ (ಹುಡುಗಿಯಾದವಳು) ಸ್ಪಷ್ಟಪಡಿಸುತ್ತಾ ಹೋಗಬೇಕು. ತೀರ ವ್ಯಾಪಾರಕ್ಕೆ ಕುಳಿತವರ ಶೈಲಿಯಲ್ಲಿ ಮಾತಾಡಬೇಕಿಲ್ಲ. ಆದರೆ ತೀರ ಅವ್ಯವಹಾರಿಕ ಶೈಲಿಯಲ್ಲಿ `ನೀನಿಲ್ಲದಿದ್ದರೆ ಗತಿಯಿಲ್ಲ ಪ್ರಭುವೇ` ಎಂಬಂತಹ ಧಾಟಿಯಲ್ಲಿ ಖಂಡಿತ ಮಾತಾಡಬೇಕಿಲ್ಲ.

ಸಾಮಾನ್ಯವಾಗಿ ಅಭದ್ರತೆಗೆ ಒಳಗಾದ ಹುಡುಗಿಯರು ಬಲುಬೇಗನೆ ಎದುರಿನವರನ್ನು ಅಣ್ಣ, ಅಂಕಲ್ಲು, ಅಪ್ಪಾಜಿ-ಇತ್ಯಾದಿಯಾಗಿ ಸಂಬೋಸತೊಡಗಿಬಿಡುತ್ತಾರೆ. ನಿಮ್ಮನ್ನು ಸಮೀಪಿಸಿದ ಮನುಷ್ಯ ನಿಮ್ಮನ್ನು ತಂಗಿಯಂತೆ ನೋಡಲು ಇಷ್ಟ ಪಡುತ್ತಿದ್ದಾನೆ ಎಂಬುದು ಖಚಿತವಾಗುವ ತನಕ ಅವನನ್ನು `ಅಣ್ಣಾ` ಅಂದುಬಿಡಬೇಡಿ. ಆ ಶಬ್ದವನ್ನು ನಿಮ್ಮ ಡಿಫೆನ್ಸಿಗೆ ಬಳಸಿಕೊಳ್ಳಬೇಡಿ. ಆತ ನಿಮಗೆ ಪ್ರಪೋಸ್ ಮಾಡಿಬಿಟ್ಟಾನು ಎಂಬ ಭಯಕ್ಕೆ ಬಿದ್ದು ನೀವೇ ಒಂದು ಸಂಬಂಧಕ್ಕೆ ಹೆಸರಿಟ್ಟುಬಿಡಬೇಡಿ. ಯಾವನೋ ಅಪರಿಚಿತ ಅಥವಾ ಹೊಸಬ ದಿಢೀರನೆ ಬಂದು `ನಿಮ್ಮನ್ನು ತಂಗಿ ಅಂತ ಕರೆಯಲಾ?` ಅಂತ ಕೇಳಿದರೆ ಅದನ್ನೂ ನಿರಾಕರಿಸಿ. ಸಂಬಂಧಗಳು ಈ ಅಣ್ಣ-ತಂಗಿ, ಪ್ರಿಯಕರ-ಪ್ರೇಯಸಿ, ಅಂಕಲ್ಲು-ಡಾಟರ್ರು ಇತ್ಯಾದಿಗಳನ್ನೆಲ್ಲ ಮೀರಿಯೂ ಬದುಕಬಲ್ಲವು.

ನೀವಾಗಿ ಆಸೆ ಹುಟ್ಟಿಸಿದರೆ ಆತ್ಮ ಬಂಧುವು ಕೂಡ ಆಸೆಬುರುಕ ಗಂಡಸಾಗುತ್ತಾನೆ. ನೀವು ಬಲಹೀನರು, ನಿಸ್ಸಹಾಯರು ಅನ್ನಿಸಿದರೆ ಎಂಥ ಸಭ್ಯನೂ ಅದರ ಫಾಯಿದೆ ಪಡೆಯಲೆತ್ನಿಸುತ್ತಾನೆ. ಸುಮ್ಮನೆ ಅವನೊಂದಿಗೆ ಮೇಲ್ಮಟ್ಟದಲ್ಲಿ ತಮಾಷೆಗಾಗಿ ಫ್ಲರ್ಟ್ ಮಾಡಿ ನೋಡೋಣ, ಹ್ಯಾಗೆ ರಿಯಾಕ್ಟ್ ಮಾಡ್ತಾನೋ ನೋಡೋಣ ಅಂತ ಯೋಚಿಸಲೇ ಬೇಡಿ. ನೀವು ತಮಾಷೆಗಾಗಿ ಮಾಡಿದ್ದು ಕೂಡ ಅವನಲ್ಲಿ ಸಲ್ಲದ ಆಸೆ ಹುಟ್ಟಿಸಿಬಿಡಬಹುದು.
ಒಟ್ಟಿನಲ್ಲಿ ಅತಿ ಚಿಕ್ಕ ತಪ್ಪೂ ನಿಮ್ಮಿಂದ ಆಗದೆ ಇರಲಿ. ಸಾಮಾನ್ಯವಾಗಿ ಎಲ್ಲ ಪ್ರಕರಣಗಳಲ್ಲೂ ಮೊದಲು ಪ್ರಪೋಸ್ ಮಾಡುವವನು ಗಂಡಸೇ ಆಗಿರುತ್ತಾನೆ. ಆದರೆ ಹಾಗೆ ಪ್ರಪೋಸ್ ಮಾಡಲಿಕ್ಕೆ ಹೆಂಗಸು ಅವಕಾಶಗಳನ್ನು ಒದಗಿಸಿ ಕೊಟ್ಟಿರುತ್ತಾಳೆ! ಆ ತಪ್ಪು ನೀವು ಮಾಡದಿರಿ. `ನಾನು ಯಾವ ಅವಕಾಶಗಳನ್ನೂ ಒದಗಿಸದೆ ಗಂಭೀರವಾಗಿದ್ದೆ. ಅವನೇ ಪ್ರಪೋಸ್ ಮಾಡಿದ` ಅಂತ ನೀವನ್ನೋದಾದರೆ (ಅದು ಸತ್ಯವೂ ಆಗಿದ್ದರೆ) ಅಂಥವನ ಬಗ್ಗೆ ಗಂಭೀರವಾಗಿ ಯೋಚಿಸಬೇಕಿಲ್ಲ.

ಎಲ್ಲ ಹೇಳಿದ ಮೇಲೆ ಒಂದು ಮಾತು ಹೇಳುತ್ತೇನೆ; ಎಲ್ಲೋ ತೀರ ಅಪರೂಪಕ್ಕೆ ಒಬ್ಬ ಒಳ್ಳೆಯ ಆತ್ಮ ಬಂಧುವಿನಂತಹ ಗಂಡಸು ಸಿಗುತ್ತಾನೆ. ಆದರೆ ಇದಿರಾದ ಒಬ್ಬ ಸಭ್ಯ ಗಂಡಸನ್ನು ಆತ್ಮ ಬಂಧುವನ್ನಾಗಿ ಮಾಡಿಕೊಳ್ಳುವ ಜಾಣತನ ಹುಡುಗಿಯಾದವಳಿಗಿರಬೇಕು.

ಗುಡ್‌ಲಕ್!

-ರವೀ

Read Archieves of 04 November, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books