Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಕಾಶ್ಮೀರದ ಪಂಡಿತ್ ನೆಹರೂಗೆ ಕೇರಳಿಗ ಕ್ರೈಸ್ತ ಸೆಕ್ರೆಟರಿಯಾದ!

ಈ ಮನುಷ್ಯ ಎಂ.ಓ.ಮಥಾಯ್ ನಿಜಕ್ಕೂ ಇಂಟರೆಸ್ಟಿಂಗ್ ಆಸಾಮಿ. ಈತ ಮೊದಲು 1945ರಲ್ಲಿ ಜವಾಹರಲಾಲ್ ನೆಹರೂಗೆ ಒಂದು ಪತ್ರ ಬರೆಯುತ್ತಾನೆ. ಆದರೆ ಆಗಷ್ಟೆ ಜೈಲಿನಿಂದ ಹೊರಬಿದ್ದ ನೆಹರೂಗೆ ಅದು ತಲುಪುವುದಿಲ್ಲ. ಮಥಾಯ್ ತಾನಿದ್ದ ಅಸ್ಸಾಮ್‌ನಿಂದಲೇ ಇನ್ನೊಂದು ಪತ್ರ ಬರೆಯುತ್ತಾನೆ. ಅದಕ್ಕೆ ನೆಹರೂ ಉತ್ತರಿಸುತ್ತಾರೆ : ನಾನೇ ಅಸ್ಸಾಮಕ್ಕೆ ಇಂಥ ದಿನ ಇಂಥ ಜಾಗಕ್ಕೆ ಬರುತ್ತಿದ್ದು ಅಲ್ಲೇ ಭೇಟಿಯಾಗೋಣ ಎಂದು ಬರೆಯುತ್ತಾರೆ.
ಮದುವೆಯಾಗುವುದಿಲ್ಲ

``ನೆಹರೂ ಜೊತೆ ಕೆಲಸ ಮಾಡುವ ಮೂಲಕ ನಾನು ದೇಶಕ್ಕಾಗಿ ದುಡಿಯುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದೆ. ಆದರೆ ನನ್ನೊಂದಿಗೆ ಬದುಕೋದು ಸುಲಭವಲ್ಲ. ಅದು ಅನಿಶ್ಚಯವೂ ಹೌದು ಅಂದರು ನೆಹರೂ. ಇಷ್ಟಾಗಿ ನನಗೆ ರಾಜಕೀಯದಲ್ಲಿ ಅಂಥ ಅನುಭವವಿರಲಿಲ್ಲ. ಟ್ರಾವೆಂಕೂರ್‌ನಲ್ಲಿ ಸರ್ ಸಿ.ಪಿ.ರಾಮಸ್ವಾಮಿ ಆಡಳಿತದ ದೌರ್ಜನ್ಯದ ವಿರುದ್ಧ ವಿದ್ಯಾರ್ಥಿ ನಾಯಕನಾಗಿ ಹೋರಾಡಿದ್ದೆ. ಪೊಲೀಸರು ಹುಡುಕಿಕೊಂಡು ಬಂದಾಗ ತಪ್ಪಿಸಿಕೊಂಡಿದ್ದೆ. ಆ ದಿನಗಳಲ್ಲಿ ಟ್ರಾವೆಂಕೂರಿನಲ್ಲಿ ಕಾಂಗ್ರೆಸ್ ಚಳವಳಿಗಳೇನಿರಲಿಲ್ಲ. ಸದ್ಯಕ್ಕೆ ನಾನು ಮದ್ರಾಸ್ ವಿಶ್ವವಿದ್ಯಾಲಯದಿಂದ ಪದವಿ ಪಡೆಯುತ್ತಿದ್ದೇನೆ. ನನಗೆ ತಂದೆ ತಾಯಿ ಸೋದರ ಸೋದರಿಯರಿದ್ದಾರೆ. ಹೀಗಾಗಿ ನಾನು ದುಡಿಯಬೇಕಿದೆ. ನೈತಿಕ ಜವಾಬ್ದಾರಿಗಳನ್ನು ನಾನು ತಪ್ಪಿಸಿಕೊಳ್ಳುವುದಿಲ್ಲ. ಆದರೆ ವ್ಯಕ್ತಿಗತವಾಗಿ ನಾನು ವಿವಾಹವಾಗದೆ ಇರಲು ನಿರ್ಧರಿಸಿರುವ ಮನುಷ್ಯ. ಬದುಕಿಗೊಂದು ನಿಶ್ಚಿತ ಉದ್ದೇಶ ಬೇಕು. Purpose ಬೇಕು. ಬದುಕು ಎಷ್ಟೇ ಅಪಾಯಕಾರಿಯಾಗಿರಲಿ : ನಾನು ಬದುಕುತ್ತೇನೆ. ಅದು ನನ್ನ ಗುರಿ ಅಂತ ಹೇಳಿದೆ. ಆನಂತರ ನೆಹರೂ ನನ್ನನ್ನು ಅಲಹಾಬಾದಕ್ಕೆ ಬಂದು ಕೆಲದಿನ ತಮ್ಮೊಂದಿಗಿರುವಂತೆ ಕೇಳಿದರು. ಆ ಹಂತದಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದೀತೆಂಬ ಅಂದಾಜು ನೆಹರೂಗೂ ಇರಲಿಲ್ಲ ನನಗೂ ಇರಲಿಲ್ಲ. ಆದರೆ ಒಂದೇ ವರ್ಷದೊಳಗಾಗಿ ಆ ಅಚ್ಚರಿ ಸಂಭವಿಸಿತು.
ದುಡ್ಡು ಬೇಕಾಗಿಲ್ಲ

ಮುಂದೆ 1945ರ ಡಿಸೆಂಬರಿನಲ್ಲಿ ನೆಹರೂ ಆನಂದ ಭವನದಲ್ಲಿ ನನ್ನನ್ನು ಇರಿಸಿಕೊಂಡು ಮಾತನಾಡಿದರು. ಕೇರಳ ನನ್ನ ತವರು ಅಂದಾಗ ಅಲ್ಲಿನ ಬಾಳೆ ತೆಂಗು ಸರೋವರಗಳು ಸಮುದ್ರ ಇತ್ಯಾದಿಗಳ ಬಗ್ಗೆ ವಿಚಾರಿಸಿದರು. ನಾನು ಕಾಳಿದಾಸ ಮಲಯಾಳಿ ಎಂಬುದನ್ನು ವಿವರಿಸಿದೆ. ಅವರಿಗೆ ಗೊತ್ತಿರದ ಕೆಲವು ಸಂಗತಿಗಳನ್ನು ಕೇರಳದ ಬಗ್ಗೆ ಹೇಳಿದೆ. ಆದರೆ ಆಲಹಾಬಾದ್‌ನಿಂದ ಹೊರಡುವ ಮುನ್ನ ``ನೋಡು ಮಥಾಯ್ ನಿನಗೆ ನಾನು ಸಂಬಳವನ್ನಾಗಿ ಏನನ್ನೂ ಕೊಡುವ ಸ್ಥಿತಿಯಲ್ಲಿ ಇಲ್ಲ. ನಿನ್ನ ಭವಿಷ್ಯ ಹಾಳು ಮಾಡಲು ನನಗಿಷ್ಟವಿಲ್ಲ. ನೀನು ಬೇರೆ ದಾರಿ ನೋಡಿಕೋ" ಅಂದರು. ಆದರೆ ನನಗೆ ಹಣ ಬೇಕಿಲ್ಲ ಅಂದವನೇ ನನ್ನ ಅವತ್ತಿನ ಆರ್ಥಿಕ ಸ್ಥಿತಿಗತಿ ವಿವರಿಸಿದೆ. ಅಷ್ಟೇ ಅಲ್ಲ ದುಡ್ಡಿಗಾಗಿ ನಾನು ಕೆಲಸ ಮಾಡಲು ನಿಮ್ಮ ಬಳಿಗೆ ಬಂದಿಲ್ಲ. ನಾನು ಹಣಕ್ಕಾಗಿ ಕೆಲಸ ಮಾಡುವವನೂ ಅಲ್ಲ. ಭವಿಷ್ಯದ ಮಾತು ಬಿಡಿ. ನನಗೆ ಅದರ ಬಗ್ಗೆ ಆತಂಕವಿಲ್ಲ ಅಂದೆ. ಆಗಲೇ ನೆಹರೂ ನನ್ನ ವಿದ್ಯಾರ್ಹತೆ ನೇರವಂತಿಕೆ ವಿಶ್ವಾಸಾರ್ಹತೆಗಳನ್ನು ಪರಿಶೀಲಿಸಿ ಮಲಯಾಕ್ಕೆ ಹೊರಟಿರುವ ತಮ್ಮೊಂದಿಗೆ ಸೆಕ್ರೆಟರಿಯಾಗಿ ಬರಲು ತಿಳಿಸಿದರು. ಮಲಯಾಕ್ಕೆ ಅವರು ಹೊರಡುವಷ್ಟರಲ್ಲಿ ನಾನು ಕೇರಳಕ್ಕೆ ಹೋಗಿ ನನ್ನ ತಂದೆ ತಾಯಿಯರನ್ನು ಕಂಡು ಬರುವುದಾಗಿ ಹೇಳಿದೆ. ಫೆಬ್ರುವರಿ 1946ರ ಮೊದಲ ವಾರ ಅಲಹಾಬಾದಕ್ಕೆ ಬರುವಂತೆ ಆದೇಶಿಸಿದರು. ಆದರೆ ಆ ಬಾರಿ ನೆಹರೂ ಅವರಿಗೆ ಸೆಕ್ರೆಟರಿಯಾಗಿ ಮಲಯಾಕ್ಕೆ ಹೋದದ್ದು ಅವರ ಭಾವ ಮೈದುನ ಗುಣೋತ್ತಮ್ ಪುರುಷೋತ್ತಮ್ ಹೂಥೀ ಸಿಂಗ್.

ಕೊನೇ ಜೈಲು

ಕೇರಳದಲ್ಲಿ ನನ್ನ ತಂದೆ ಆಸ್ತಿ ಪಾಲು ಮಾಡಿ ನನಗೆ ಒಂದು ಭಾಗ ಕೊಟ್ಟಿದ್ದರು. ಆದರೆ ಆ ಭಾಗವನ್ನೂ ನಾನು ನನ್ನ ಸೋದರರ ಹೆಸರಿಗೆ ಬರೆದುಬಿಟ್ಟೆ. ನೆಹರೂ ಜೊತೆ ಇರುವುದು ಬೇಡ. ನೀನೂ ಅವರೊಂದಿಗೆ ಜೈಲಿಗೆ ಹೋಗಬೇಕಾಗುತ್ತದೆ ಅಂದಿದ್ದಳು ನನ್ನ ತಾಯಿ. ಅದರಂತೆಯೇ ಆಯಿತು. ಫೆಬ್ರುವರಿ 1946ರಲ್ಲಿ ನಾನು ಅಲಹಾಬಾದಕ್ಕೆ ಹೋದೆ. ಅವರೂ ಮಲಯಾದಿಂದ ಹಿಂತಿರುಗಿದ್ದರು. ಪರಿಸ್ಥಿತಿ ನೋಡಿದ ತಕ್ಷಣ ನನಗೆ ಅರ್ಥವಾಗಿತ್ತು. ಅಲಹಾಬಾದ್‌ನ ಬಂಗಲೆಯಲ್ಲಿ ಅವರಿಗೆ ಯಾವುದೇ ರೀತಿಯ ಸಹಾಯಕರಿರಲಿಲ್ಲ. ಒಂದು ಕ್ರಮವೂ ಇರಲಿಲ್ಲ. ಅವರ ಪುಸ್ತಕಗಳು ಅವುಗಳಿಗೆ ಬರಬೇಕಿದ್ದ ಗೌರವಧನ ಹಣಕಾಸು ಸ್ಥಿತಿ-ಎಲ್ಲವೂ ಹೀನಾಯವಾಗಿದ್ದವು. ಸದ್ಯಕ್ಕೆ ನಿಮಗೆ ತುಂಬ ಮುಖ್ಯವಾಗಿ ಬೇಕಾಗಿರುವುದು ಒಬ್ಬ ಒಳ್ಳೆಯ ಸೆಕ್ರೆಟರಿ. ಆ ಕೆಲಸವನ್ನು ನಾನು ಒಂದು ವರ್ಷದ ಮಟ್ಟಿಗೆ ಮಾಡುತ್ತೇನೆ ಅಂತ ಹೇಳಿದೆ. ವರ್ಷದ ಕೊನೆಯಲ್ಲಿ ನಾನೇ ಒಬ್ಬನನ್ನು ಕಾರ್ಯದರ್ಶಿಯನ್ನಾಗಿ ನೇಮಿಸಿ ಅವನಿಗೆ ತರಬೇತಿ ನೀಡಿ ಕೈ ತೊಳೆದುಕೊಳ್ಳಲು ನಿರ್ಧರಿಸಿದ್ದೆ. ನೆಹರೂಗೆ ಹಾಗಂತ ಹೇಳಲಿಲ್ಲ. ಆದರೆ ನಾನು ಸೆಕ್ರೆಟರಿಯಾದದ್ದು ನೆಹರೂಗೆ ತುಂಬ ಸಮಾಧಾನ ತಂದಿತ್ತು.
ಮ್ಯಾಕ್ ಅಂದರು

ಅದೇ 1946ರಲ್ಲಿ ನೆಹರೂ ಅವರ ಭೇಟಿಗೆ ಬಂದಿದ್ದ ಅಮೆರಿಕನ್ನರ‍್ಯಾರೋ ನನ್ನನ್ನು ಗುರುತು ಹಿಡಿದು `Hello Mac` ಅಂತ ಕರೆದರು. ನೆಹರೂ ಕೇಳಿಸಿಕೊಂಡರು. ಅವರ ಅಂತರ್ವಲಯದಲ್ಲಿ ನನಗೆ ಅವತ್ತಿನಿಂದ `ಮ್ಯಾಕ್` ಎಂಬ ಹೆಸರೇ ಖಾಯಮ್ಮಾಯಿತು. ಅಷ್ಟರಲ್ಲಿ ದಿಲ್ಲಿ ಮತ್ತು ಶಿಮ್ಲಾಗಳಲ್ಲಿ ಬ್ರಿಟಿಷ್ ಕ್ಯಾಬಿನೆಟ್ ಮಿಷನ್‌ನ ಕೆಲಸಕ್ಕೆ ತೊಡಗಿಕೊಂಡೆ. ಮುಂದೆ ಮುಂಬಯಿಯ AICC ಅವೇಶನದಲ್ಲಿ ಮೌಲಾನಾ ಆಜಾದ್‌ರಿಂದ ನೆಹರೂ ಅವರು ಅಧ್ಯಕ್ಷತೆಯನ್ನು ತೆಗೆದುಕೊಂಡರು. ಆಗ ಆರಂಭವಾಯಿತು ಮಧ್ಯಂತರ ಸರ್ಕಾರದ ರಚನೆಯ ಕುರಿತು ವೈಸ್‌ರಾಯ್ ಲಾರ್ಡ್ ವೇವೆಲ್‌ರೊಂದಿಗೆ ಮಾತುಕತೆ. ಇದರ ಮಧ್ಯೆ ನೆಹರೂ ಅದೇನು ತೋಚಿಕೊಂಡರೋ ನನ್ನನ್ನು ಕರೆದುಕೊಂಡು ಕಾಶ್ಮೀರಕ್ಕೆ ಹೊರಟರು. ಅದರೆ ಸರಹದ್ದಿನಲ್ಲಿ ಬ್ರಿಟಿಷ್ ಪೊಲೀಸರು ನಮ್ಮಿಬ್ಬರನ್ನು ಬಂಸಿದರು. ನೆಹರೂರೊಂದಿಗೆ ಅವರ ಕಟ್ಟ ಕಡೆಯ ಜೈಲುವಾಸವನ್ನು ಕೆಲವೇ ದಿನಗಳ ಮಟ್ಟಿಗೆ ಅನುಭವಿಸುವ ಭಾಗ್ಯ ನನ್ನದಾಯಿತು.

ಹಟಮಾರಿ ನಿರ್ಧಾರ

ಸೆಪ್ಟಂಬರ್ 2 1946ರಂದು ಮಧ್ಯಂತರ ಸರ್ಕಾರ ರಚನೆಯಾದಾಗ ನೆಹರೂ ನನ್ನನ್ನು ವಿದೇಶಾಂಗ ಖಾತೆಯ ಕಚೇರಿಗೆ ಕರೆದೊಯ್ದರು. ಆದರೆ ನನಗೆ ಸರ್ಕಾರಿ ನೌಕರನಾಗುವ ಇಚ್ಛೆಯಿಲ್ಲವೆಂದು ಅವತ್ತೇ ಸಂಜೆ ಹೇಳಿದೆ. ಮರುದಿನ ನಾನು ಕಚೇರಿಗೆ ಹೋಗಲಿಲ್ಲ. ಸ್ವಾತಂತ್ರ್ಯ ಬಂದ ಆಗಸ್ಟ್ 15 1947ರ ತನಕ ನಾನು ಸರ್ಕಾರದಿಂದ ದೂರವೇ ಉಳಿದೆ. ನೆಹರೂ ಈ ಬಗ್ಗೆ ಮುನಿಸಿಕೊಂಡಿದ್ದರಾದರೂ ಅವರ ಮನೆಯಲ್ಲಿ ಮಾಡುವುದಕ್ಕೆ ರಾಶಿ ಕೆಲಸವಿತ್ತು. ನಾನೇ ಕೆಲಸವನ್ನು ಆಯ್ಕೆ ಮಾಡಿ ಅವರಿಗೊಂದು ಅಫಿಷಿಯಲ್ ಸೆಕ್ರೆಟೇರಿಯೆಟ್ ರೂಪಿಸಿಕೊಟ್ಟೆ. ಪೂರ್ಣ ಸ್ವಾತಂತ್ರ್ಯ ಲಭಿಸಿ ಆಗಸ್ಟ್ 15ರಂದು ಭಾರತ ಸರ್ಕಾರ ರಚನೆಯಾಗುವ ತನಕ ನೆಹರೂ ಅವರ ಎಲ್ಲ ಮುಖ್ಯ ಕೆಲಸ ಕಾರ್ಯಗಳೂ ಅವರ ಮನೆಯಲ್ಲೇ ಆದವು. ಆದರೆ ಸ್ವಾತಂತ್ರ್ಯ ಸಿಕ್ಕ ಕೆಲವೇ ದಿನಗಳಿಗೆ ನೆಹರೂ ಘೆಟ್ಟಠಿe North West Frontier Province (NWFP)ಗೆ ಭೇಟಿ ನೀಡುವ ತಪ್ಪು ನಿರ್ಧಾರ ತೆಗೆದುಕೊಂಡರು. ಆಗ ಅಲ್ಲಿ ಖಾನ್ ಸಾಹಿಬ್ ಮುಖಂಡತ್ವದ ಕಾಂಗ್ರೆಸ್ ಸರ್ಕಾರವಿತ್ತು. ನೆಹರೂ ನೀಡಿದ ಭೇಟಿ ಎಷ್ಟು ಅಪಕ್ವವಾಗಿತ್ತೆಂದರೆ ಅದರ ಲಾಭವನ್ನು ಕಡೆಗೂ ಪಡೆದದ್ದು ಮುಸ್ಲಿಂ ಲೀಗ್ ಪಕ್ಷ.

ಓಡಿ ಬಂದರು ನೆಹ್ರೂ

ಸೆಪ್ಟಂಬರ್ 1946ರಿಂದ ಮುಂದಿನ ಎರಡು ವರ್ಷದ ದಿನಗಳು ನಿಜಕ್ಕೂ ದುರ್ಭರ. ಭಯಂಕರ hectic. ಕೆಲಸ ಕೆಲಸ ಕೆಲಸ. ವಿಶ್ರಾಂತಿಯೇ ಇರುತ್ತಿರಲಿಲ್ಲ. ನಿದ್ರೆ ಮಾಡದೆ ಕಳೆದ ಅವೆಷ್ಟು ರಾತ್ರಿಗಳೋ! ದೇಶ ಇಬ್ಭಾಗವಾಗಿ ಪಾಕಿಸ್ತಾನದಿಂದ ಓಡಿ ಬಂದ ಹಿಂದೂಗಳು ಇಲ್ಲಿನ ಮುಸ್ಲಿಮರ ಮೇಲೆ ಭಯಾನಕ ಹಲ್ಲೆಗಳನ್ನು ಮಾಡುತ್ತಿದ್ದರೆ ನಮಗೆ ರಾತ್ರಿಯಿಡೀ ಮುಸ್ಲಿಮರಿಂದ ಕರೆಗಳು ಬರುತ್ತಿದ್ದವು. ಅದೊಂದು ರಾತ್ರಿ ಯಾರ್ಕ್ ರೋಡ್‌ನಲ್ಲಿ ಬದ್ರುದ್ದೀನ್ ತ್ಯಾಬ್‌ಜೀ ಬಂಗಲೆಯ ಮೇಲೆ ದಾಳಿಯಾಗುತ್ತಿದೆ ಅಂತ ಸುದ್ದಿ ಬಂದ ಕೂಡಲೆ ನಾನು ನಮ್ಮ ಬಂಗಲೆಯ ಕಾವಲಿಗಿದ್ದ ಪೊಲೀಸರದೇ ತುಕಡಿ ತೆಗೆದುಕೊಂಡು ಜೀಪಿನಲ್ಲಿ ಹೊರಟೆ. ಆ ಶಬ್ದ ಕೇಳಿ ಮೇಲಿನ ಮಹಡಿಯಲ್ಲಿ ಇನ್ನೂ ಓದುತ್ತ ಕುಳಿತಿದ್ದ ನೆಹರೂ ಓಡಿ ಬಂದು ಜೀಪು ಹತ್ತಿದರು. ನಿಜಕ್ಕೂ ಬದ್ರುದ್ದೀನ್ ತ್ಯಾಬ್‌ಜೀ ಬಂಗಲೆಗೆ ಕ್ರುದ್ಧ ಜನ ಮುತ್ತಿಗೆ ಹಾಕಿದ್ದರು. ಪಕ್ಕದ ಬಂಗಲೆಯ ದಿವಾನ್ ಚಮನ್‌ಲಾಲ್ ಜನರನ್ನು ಚೆದುರಿಸುವ ಭಗೀರಥ ಪ್ರಯತ್ನ ಮಾಡುತ್ತಿದ್ದರು. ಉಳಿದ ಒಪ್ಪು ತಪ್ಪುಗಳೇನೇ ಇರಲಿ ದಿವಾನ್ ಚಮನ್‌ಲಾಲ್ ಖಂಡಿತವಾಗಿಯೂ ಧರ್ಮಭ್ರಾಂತನಾಗಿರಲಿಲ್ಲ. ನೆಹರೂರನ್ನು ಕಂಡ ಕೂಡಲೆ ಜನ ಚೆದುರಿದರು. ನೆಹರೂ ಆ ಮನೆಯ ರಕ್ಷಣೆಗೆ ಪೊಲೀಸರನ್ನು ನೇಮಿಸಿದರು.

ಅಂಥವರಿದ್ದರು :

ಬದ್ರುದ್ದೀನ್ ತ್ಯಾಬ್‌ಜೀ ತುಂಬ ಆತಂಕಗೊಂಡಿದ್ದರಾದರೂ ಹತಾಶರಾಗಿರಲಿಲ್ಲ. ಅವರು ಕುಲೀನ ಮುಸ್ಲಿಂ ಕುಟುಂಬದವರು. ಆ ಕುಟುಂಬ ಒಬ್ಬ ಕಾಂಗ್ರೆಸ್ ಅಧ್ಯಕ್ಷನನ್ನು ನೀಡಿದ ಹಿರಿಮೆ ಹೊಂದಿದೆ. ಬದ್ರುದ್ದೀನ್ ತ್ಯಾಬ್‌ಜೀ ಮತ್ತು ಆಜಿಮ್ ಹುಸೇನ್ ಇಬ್ಬರೂ ICS ಅಕಾರಿಗಳಾಗಿ ನಿವೃತ್ತರಾಗಿದ್ದವರು. ದೇಶ ವಿಭಜನೆಯಾದಾಗ ಭಾರತದ ಸೇವೆಗೆ ಒಪ್ಪಿಸಿಕೊಂಡ ರಾಷ್ಟ್ರ ಪ್ರೇಮಿಗಳು. ಅವರಂತೆಯೇ ಜಾಕೀರ್ ಹುಸೇನ್ ಕೂಡ ಭಾರತ ನಿಷ್ಠರಾಗಿದ್ದು ಅದೇ ಕಾರಣಕ್ಕೆ ಅವರ ಮೇಲೆ ಕೊಲೆ ಯತ್ನವೂ ನಡೆಯಿತು. ನಾವು ಕಾಶ್ಮೀರವನ್ನು ಪಾಕಿಸ್ತಾನಿಗಳಿಂದ ರಕ್ಷಿಸಲು ಪ್ರಾಣ ಕೊಟ್ಟ ಬ್ರಿಗೇಡಿಯರ್ ಉಸ್ಮಾನ್‌ರನ್ನಾಗಲೀ 1965ರ ಯುದ್ಧದಲ್ಲಿ ಪ್ರಾಣ ಕೊಟ್ಟ ಪರಮ ವೀರ ಚಕ್ರ ಅಬ್ದುಲ್ ಹಮೀದ್‌ರನ್ನಾಗಲೀ ಮರೆತರೆ ಕೃತಘ್ನರಾಗುತ್ತೇವೆ. ಭಾರತ ಕೃತಘ್ನ ರಾಷ್ಟ್ರವಾಗಬಾರದು" ಎಂದು ಬರೆಯುತ್ತಾರೆ ಎಂ.ಓ.ಮಥಾಯ್.

(ಮುಂದುವರೆಯುವುದು)

Read Archieves of 20 October, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books