Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಆಶಾ ಭೋಂಸ್ಲೆಗೆ ಫಿದಾ ಆದ ಹುಡುಗಿ ಕಾವ್ಯದ ಹಾದಿಗುಂಟ ನಡೆದು ಪರ್ವೀನ್ ಸುಲ್ತಾನಾ ಆದದ್ದು


``ನಿನ್ನ ಕಂಗಳ ಕೊಳದಿ
ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ
ಬೀಗುತಿಹುದೂ...``
ರತ್ನಮಾಲಾ ಪ್ರಕಾಶ್ ಹಾಡುತ್ತಿದ್ದರೆ ಇಡೀ ಜಗತ್ತು ಮರೆತು ಅವರ ಮುಂದೆ ಕುಳಿತುಬಿಟ್ಟಿದ್ದೆ. ಅವರು ನನ್ನ ಅತ್ಯಂತ ಇಷ್ಟದ ಗಾಯಕಿ. ಆದರೆ ಅಷ್ಟು ಹತ್ತಿರದಿಂದ ನೋಡಿ ಅಷ್ಟೊಂದು ಹೊತ್ತು ಹಾಡು ಕೇಳುತ್ತ ಜೊತೆಗಿದ್ದುದು ಇದೇ ಮೊದಲ ಬಾರಿಗೆ. ಅದರಲ್ಲೂ ಎಂ.ಎನ್.ವ್ಯಾಸರಾವ್ ಬರೆದ ``ನಿನ್ನ ಕಂಗಳ ಕೊಳದಿ..." ಹಾಡು ನನ್ನ all time ಆಸೆಯ ಹಾಡು. ಎಷ್ಟೋ ಸಲ ಸರಹೊತ್ತಿನಲ್ಲಿ ಕೇಳಿ ರತ್ನಮಾಲಾಗೆ ಫೋನ್ ಮಾಡಿ ಅಭಿನಂದನೆ ಥ್ಯಾಂಕ್ಸ್ ಎರಡನ್ನೂ ಹೇಳಿದ್ದೇನೆ. ಒಮ್ಮೆ ಖುದ್ದಾಗಿ ವ್ಯಾಸರಾವ್ ದಂಪತಿಗಳನ್ನೂ ಅವರ ಮಗನನ್ನೂ ಮನೆಗೆ ಕರೆದು ಔತಣ ನೀಡಿ ಗೌರವಿಸಿದ್ದೇನೆ. ನನ್ನ ಮನೆಗೆ ಸಾಹಿತ್ಯ ಸಂಗೀತಗಳು ನಿರಂತರವಾಗಿ ಹರಿದು ಬರುತ್ತಿರಲಿ ಎಂಬ ಆಸೆ ನನ್ನದು. ಅಮ್ಮನಿಂದ ಬಂದ ಸುಂದರ ಜಾಡ್ಯ.

ಕೆಲ ತಿಂಗಳ ಹಿಂದೆ ನನಗೆ ತಮ್ಮ legends ಎಂಬ ಸಿಡಿ ಕಳಿಸಿದ್ದರು ರತ್ನಮಾಲಾ. ಬೇರೆ ಬೇರೆ ಕವಿಗಳ ಭಾವಗೀತೆಗಳನ್ನು ಅವರು ಹಾಡಿದ್ದು. ಅದೆಷ್ಟು ಸಲ ಮನೆಯಲ್ಲಿ ಕಾರಿನಲ್ಲಿ ಆಫೀಸಿನಲ್ಲಿ ಷವರ್‌ನ ಅಡಿ ನಿಂತಾಗ ಹೀಗೆ ಕೇಳಿ ಕೇಳಿ ಮೂರೇ ದಿನಕ್ಕೆ ಸಿಡಿ ಕೀರಲಾಯಿತು. ಅಂಗಡಿಯಲ್ಲಿ ಕೇಳಿದರೆ ಅಲ್ಲಿ stock ಇಲ್ಲ. ರತ್ನಮಾಲಾಗೇ ಮತ್ತೆ ಫೋನ್ ಮಾಡಿದೆ. ಈ ಬಾರಿ ಅವರು ಆರು ಪ್ರತಿಗಳನ್ನು ಕಳಿಸಿದ್ದರು. ನಿನ್ನೆ ಸಿಕ್ಕಾಗ ಹೇಳಿದೆ :

``ರತ್ನಮಾಲಾ ಈಗ ಆರೂ ಕೀರಲಾಗಿವೆ. ನನ್ನ ಗತಿ?"

``ಇನ್ನೂ ಒಂದಷ್ಟು ಕಳಿಸ್ತೀನಿ" ಅಂದರು. ಕಂಪ್ಯೂಟರಿಗೆ ಹಾಕಿಟ್ಟುಕೊಂಡು ಬಿಟ್ಟರೆ ಸರಿಯಾದೀತು ಅಂದುಕೊಂಡೆ. ಹಾಗೆ ಸಿಡಿಗಳಲ್ಲಿ ಹಾಡು ಕೇಳುವುದು ಬೇರೆ. ಇಷ್ಟದ ಗಾಯಕಿಯನ್ನೇ ಎದುರಿಗೆ ಕೂಡಿಸಿಕೊಂಡು ಅವರಿಂದ ಹಾಡಿಸಿ ಆನಂದಿಸುವ ಮಜವೇ ಬೇರೆ. ಮೊನ್ನೆ ಅಂಥದ್ದೊಂದು ಸಮಾರಂಭ. ಸಮಾರಂಭ ಅನ್ನುವುದಕ್ಕಿಂತ ಚಿಕ್ಕ informal gathering. ಜರ್ಮನಿಯಿಂದ ಭಾನುವಾರ ದತ್ತ ಹೆಗಡೆ ಬಂದಿಳಿದಿದ್ದರು. ಕೊಂಚ ಸಂಕೋಚ ಭಿಡೆ `ನಿಮ್ಮ ಸಮಯ ಹಾಳು ಮಾಡುತ್ತೀನೇನೋ` ಎಂಬ ಹಿಂಜರಿಕೆ ಇವೆಲ್ಲ ಇರುವವರು ದತ್ತ. ಅದಕ್ಕೆ ತದ್ವಿರುದ್ಧ ನಾನು. ಸರಿಯಾಗಿ ಇಂಥ ದಿನ ಬರ‍್ತೀನಿ ಅಂತಲೂ ಹೇಳದೆ ಜರ್ಮನಿಗೆ ಹೋಗಿಳಿದು ಅವರ ಮನೆಯಲ್ಲಿ ಉಂಡು ದಿನಗಟ್ಟಲೆ ಅವರ ಕಾರಿನಲ್ಲಿ ತಿರುಗಿ ಅವರ ರಜೆಗಳನ್ನೆಲ್ಲ ಖಾಲಿ ಮಾಡಿಸಿ ಬಂದ ನಿಸ್ಸಂಕೋಚಿ. ``ಭಾನುವಾರ ಮಧ್ಯಾಹ್ನ ಒಂದು ಗಂಟೆಗೆ ಬರ‍್ತೇನೆ" ಅಂದಿದ್ದರು ದತ್ತ. ಅವರಿಗೆ ಜೆಪಿ ನಗರದಲ್ಲಿ ಒಂದು ಸ್ವಂತ ಫ್ಲ್ಯಾಟ್ ಇದೆ. ಕೇವಲ ಮೂರು ದಿನದ ಮಟ್ಟಿಗೆ ಬೆಂಗಳೂರಿನ ಭೇಟಿ. ಕಂಪೆನಿಯ ಕೆಲಸದ ಮೇಲೆ ಬಂದವರು ಭಾನುವಾರ ಅರ್ಧ ದಿನ ನನಗಾಗಿ ಎತ್ತಿಟ್ಟಿದ್ದರು.

ಓಡಾಡಿಸಿ ತೋರಿಸೋಣವೆಂದರೆ ಅವರಿಗೆ ಬೆಂಗಳೂರು ಹೊಸದಲ್ಲ. ಕೊಡೋಣವೆಂದರೆ ನನ್ನ ಅಷ್ಟೂ ಪುಸ್ತಕಗಳನ್ನು ಅವರು ಕೊಂಡಿದ್ದಾರೆ. ಆದರೆ ಕೆಲವು ವಿಶೇಷವಾದ ಅವರಿಗೆ ಇಷ್ಟವಾಗುವ ಸಿಡಿಗಳಿದ್ದವು. ಒಂದೆರಡು ಪುಸ್ತಕಗಳನ್ನು ಅವರೇ ನನ್ನ ಟೇಬಲ್ಲಿನ ಮೇಲಿಂದ ಆಯ್ದುಕೊಂಡರು. ಆಮೇಲೆ ಅವರನ್ನು ಮನೆಗೆ ಕರೆದುಕೊಂಡು ಹೋದೆ.
``ನಿವೇದಿತಾ ಅದ್ಯಾರೋ ದತ್ತ ಹೆಗಡೆಯಂತೆ. ನಮಗೆ ಪರಿಚಯದವರೂ ಅಲ್ಲ. ರವಿ ಕೂಡ ಮೊದಲನೇ ಸಲ ಭೇಟಿಯಾಗ್ತಿದ್ದಾರಂತೆ. ಜೊತೇಲಿ ಸ್ನೇಹಿತರೂ ಇಲ್ಲ. ಒಬ್ಬನೇ ಜರ್ಮನಿಗೆ ಹೋಗ್ತಿದ್ದಾನೆ ಪುಣ್ಯಾತ್ಮ. ದತ್ತ ಅವರ ನಂಬರ್ ಆದ್ರೂ ಕೊಡು. ಮಾತಾಡ್ತೀನಿ. ಟೈಮು ಟೈಮಿಗೆ ಔಷ ತಗೊಳ್ಳೋದನ್ನಾದರೂ ನೆನಪಿಸ್ತೀನಿ" ಅಂದ ಲಲಿತೆ ನಿವೇದಿತಾಳಿಂದ ನಂಬರ್ ತಗೊಂಡಿದ್ದಳಂತೆ. ಆದರೆ ದತ್ತ ಹೆಗಡೆ ಜೊತೆ ಮಾತನಾಡಿದ್ದು ಚೇತನಾ. ನನ್ನ ಎಲ್ಲ ಅಶಿಸ್ತನ್ನೂ ಫ್ರಾಂಕ್‌ಫರ್ಟ್ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಕಟ್ಟಿಡುವಂತೆ ಮಾಡಿ ಕಾರಿನಲ್ಲೂ ಸಿಗರೇಟು ಸೇದಲು ಬಿಡದೆ ಸೀಟ್ ಬೆಲ್ಟ್ ಕಟ್ಟಿ ಕೂಡಿಸಿ ಮುಕ್ಕಾಲು ಜರ್ಮನಿ ಸುತ್ತಾಡಿಸಿ ಕಳಿಸಿದ ದತ್ತ ಅದೆಷ್ಟು ನನ್ನನ್ನು ಸೀದಾಸಾದಾ ಮಾಡಿದ್ದರೆಂದರೆ ಮನೆ ಮಂದಿಗೆಲ್ಲ ಅವರನ್ನು ನೋಡುವ ಬರಮಾಡಿಕೊಳ್ಳುವ ಕುತೂಹಲವಿತ್ತು.

ಅದಕ್ಕೆ ಸರಿಯಾಗಿ ಬೆಳಗೆರೆ ಶಾಸ್ತ್ರಿಗಳು ಮನೆಯಲ್ಲಿದ್ದರು. ಅವರನ್ನು ಭೇಟಿಯಾಗಿ ದತ್ತ ತುಂಬ ಖುಷಿಯಾದಂತೆ ಕಂಡಿತು. ಊಟದ್ದೇನು ಯಡವಟ್ಟಾಗುತ್ತದೋ ಅಂತ ಆತಂಕಗೊಂಡಿದ್ದೆ. ನಮ್ಮ ಅಡುಗೆಯಾಕೆಗೆ ಹುಶಾರಿಲ್ಲ. ಲಲಿತೆ ಒಬ್ಬಳೇ ಅಡುಗೆ ನಿಭಾಯಿಸಲಾರಳು. ಅವರ ತಾಯಿ ಶಾರದಮ್ಮನವರಿಗೂ ವಯಸ್ಸಾಗಿದೆ. ಒಂದು ಒಳ್ಳೆಯ ಊಟ ಮಾಡಿಸದಿದ್ದರೆ ಹೇಗೆ ಅಂತ ಪೇಚಾಟಕ್ಕೆ ಬಿದ್ದಿದ್ದೆ. ಆದರೆ ಉಮೇಶನ ಹೆಂಡತಿ ವಿದ್ಯಾ ಭರತನಹಳ್ಳಿ ಬಂದವಳೇ ಒಂದಷ್ಟು ಹವ್ಯಕ ವೆರೈಟಿಯ ತಿನಿಸು ಮಾಡಿದ್ದಳು. ಇವತ್ತಿಗೂ ನನ್ನ ಮಗಳಾಗಿಯೇ ಇರುವ ಮಂಜುಳಾ ಬಂದು ಅವಳೊಂದಿಷ್ಟು ಅಡುಗೆ ಮಾಡಿದಳು. ನಮ್ಮ ಆಫೀಸಿನಲ್ಲಿರುವ ಹಾವೇರಿಯ ಹುಡುಗಿ ರೇಶ್ಮಾ ಅದ್ಭುತವಾದ ರೊಟ್ಟಿ-ಎಣ್ಣೆಗಾಯಿ ಮಾಡಿದ್ದಳು. ಊಟ ಹಬ್ಬಕ್ಕೆ ಮಾಡಿಸಿದಂತಿತ್ತು. ಜೊತೆಗೆ ಬೆಳಗೆರೆ ಶಾಸ್ತ್ರಿಗಳ ಹಿತವಾದ ಮಾತು. ಮಧ್ಯಾಹ್ನ ನೆಮ್ಮದಿಯಾಗಿ ಕಳೆಯಿತು. ದತ್ತ ಅವರನ್ನು ಒಯ್ದು ಪ್ರಾರ್ಥನಾದ ಎಂಟೂ ಕಟ್ಟಡ ತೋರಿಸಿದೆ.

ಸಂಜೆ ಹೊತ್ತಿಗೆ ಆರಂಭವಾದದ್ದು ಸಂಗೀತದ ರಂಗು. ರತ್ನಮಾಲಾ ತಮ್ಮ ಸಂಗೀತಗಾರರ ತಂಡದೊಂದಿಗೆ ಬಂದಿದ್ದರು. ಗಾಯಕಿಯರಾದ ನಾಗಚಂದ್ರಿಕಾ ಭಟ್ ಸುನೀತಾ ಮತ್ತು ಗೆಳೆಯರಾದ ಪಂಚಮ್ ಹಳಿಬಂಡಿ ಬದ್ರಿಪ್ರಸಾದ್ ಬಂದಿದ್ದರು. ಎಲ್ಲರೂ ನನ್ನೊಂದಿಗೆ ಟೀವಿ ಕಾರ್ಯಕ್ರಮಗಳಲ್ಲಿ ವೇದಿಕೆಗಳ ಮೇಲೆ ಹಾಡಿದವರೇ. ಮೊನ್ನೆ ಮೊನ್ನೆ ಅರ್ಚನಾ ಉಡುಪ ಸಿಡಿ ಬಿಡುಗಡೆ ಮಾಡಿದಾಗ ರತ್ನಮಾಲಾಗೆ ಸನ್ಮಾನ ಮಾಡಿದ ವೇದಿಕೆಯ ಮೇಲೆ ನಾನೂ ಇದ್ದೆ. ನಾನು ರತ್ನಮಾಲಾರನ್ನು ಸುಮಾರು ಇಪ್ಪತ್ತೈದು ವರ್ಷಗಳಿಂದ ನೋಡುತ್ತಿದ್ದೇನೆ. ಬಹಳ ಸಹಜವೆನ್ನಿಸುವಂಥ ಚೆಲುವು. ಮಾತು ವರ್ತನೆ ಎಲ್ಲ ಅಚ್ಚುಕಟ್ಟು. ನನಗಿಂತ ಕೊಂಚ ಚಿಕ್ಕವರಿರಬಹುದು. ಆದರೆ ಧ್ವನಿಯ ಚೆಲುವಿಕೆಗೆ ವಯಸ್ಸಾಗಿಲ್ಲ. ಆಕೆ ಸುಗಮ ಸಂಗೀತ ಪ್ರಪಂಚದ ಅನಭಿಷಿಕ್ತ ಮಹಾರಾಣಿ. ಇವತ್ತು-ನಿನ್ನೆ ಹಾಡಲಾರಂಭಿಸಿರುವ ಅನೇಕ ಹುಡುಗಿಯರ ಪಾಲಿಗೆ ಆಕೆ ಗುರುವು. ಮ್ಯಾಮ್! ರತ್ನಮಾಲಾ ಸಂಗೀತವೆಂಬುದು ರಕ್ತಗತವಾದದ್ದು. ಆಕೆಯ ತಂದೆ ಆರ್.ಕೆ.ಶ್ರೀಕಂಠನ್ ಕರ್ನಾಟಕ ಶಾಸ್ತ್ರೀಯ ಸಂಗೀತದ ದೊಡ್ಡ ವಿದ್ವಾಂಸರು.

ಆದರೆ ರತ್ನಮಾಲಾ ಫಿದಾ ಆದದ್ದು ಆಶಾ ಭೋಂಸ್ಲೆ ಮತ್ತು ಲತಾ ಮಂಗೇಶ್ಕರ್‌ರ ಸಿನೆಮಾ ಹಾಡುಗಳಿಗೆ. ಬಹುಶಃ ಸುಗಮ ಸಂಗೀತಕ್ಕೆ ದಾರಿ ತೋರಿಸಿದ್ದು ಸಿನೆಮಾ ಹಾಡುಗಳೇ. ರತ್ನಮಾಲಾ ಹುಡುಗಿಯಾಗಿದ್ದ ದಿನಗಳಲ್ಲಿ ಹಿಂದಿ ಸಿನೆಮಾ ಸಂಗೀತ ತುಂಬ ಲಾಲಿತ್ಯ ಹೊಂದಿತ್ತು. ಲಿರಿಕಲ್ ಆಗಿದ್ದ ಹಾಡುಗಳು. ಜೊತೆಗೆ ಸೆಮಿ ಕ್ಲಾಸಿಕಲ್ ಪ್ರಯೋಗಗಳು ನಡೆದಿದ್ದವು. ಮಗಳು ಶಾಸ್ತ್ರೀಯ ಸಂಗೀತ ಕಲಿಯಲಿ ಎಂದು ಬಯಸಿದ್ದರು. ಲಘು ಸಂಗೀತದೆಡೆಗಿನ deviation ಅವರಿಗೆ ಇಷ್ಟವಿರಲಿಲ್ಲ. ಆದರೂ ನಿನಗೆ ಇಷ್ಟ ಬಂದ ದಾರಿಯಲ್ಲೇ ಸಾಧನೆ ಮಾಡು ಅಂದರು. ಮೊದಲ ಸುತ್ತಿನಲ್ಲೇ ಆಕಾಶವಾಣಿಗೆ `ಎ` ಗ್ರೇಡ್ ಕಲಾವಿದೆಯಾಗಿ ಆಯ್ಕೆಯಾದ ರತ್ನಮಾಲಾ ಮುಂದೆ ಅದ್ಭುತವಾಗಿ ರೂಪುಗೊಂಡದ್ದು ಮೈಸೂರು ಅನಂತಸ್ವಾಮಿಗಳ ಕೈಯಲ್ಲಿ. ನಿಸ್ಸಾರ್ ಅಹ್ಮದ್ ಅವರ `ನಿತ್ಯೋತ್ಸವ` ಸುಗಮ ಸಂಗೀತ ಪ್ರಪಂಚದ ಹೆಬ್ಬಾಗಿಲಾಯಿತು. `ಮೈಸೂರು ಮಲ್ಲಿಗೆ` ರತ್ನಮಾಲಾ ಪಾಲಿಗೆ ಸಟಿಕ ಕಿರೀಟ. ರಾಜಕುಮಾರ್ ಕುಳಿತು ತುಂಬ ಆಸಕ್ತಿಯಿಂದ ಮೈಮರೆತು ರತ್ನಮಾಲಾ ಹಾಡಿದುದನ್ನು ಕೇಳುತ್ತಿದ್ದರೆ ಕವಿ ಕೆ.ಎಸ್.ನರಸಿಂಹ ಸ್ವಾಮಿ `ಈಕೆ ಕರ್ನಾಟಕದ ಪರ್ವೀನ್ ಸುಲ್ತಾನಾ` ಅಂತ ಪ್ರಶಂಸಿಸಿದ್ದರು. ``ಮೊದಲ ದಿನ ಮೌನ..." ಹಾಡನ್ನು ಮರೆಯುವುದುಂಟೆ? ``ದೀಪವು ನಿನ್ನದೆ ಗಾಳಿಯು ನಿನ್ನದೆ..." ಎಂಬುದೇನು ಮಾಮೂಲಿಯಾದ ಗೀತೆಯೇ?

ಹಾಗೆಯೇ ರತ್ನಮಾಲಾಗೆ ನಿರಂತರವಾದ ಉತ್ತೇಜನ ದೊರಕಿದ್ದು ಸಿ.ಅಶ್ವತ್ಥ್‌ರಿಂದ. ಆತನ ಸಿಡುಕು ಒರಟುತನ domination, ಕೆಲವೊಮ್ಮೆ ಪ್ರಕಟಗೊಳ್ಳುತ್ತಿದ್ದ ಸಣ್ಣತನ- ಇವೆಲ್ಲವುಗಳ ನಡುವೆಯೂ ಅಶ್ವತ್ಥ್ ರತ್ನಮಾಲಾಗೆ ತುಂಬ ಅದ್ಭುತವಾದ ಕಂಪೋಸಿಷನ್ಸ್ ಕೊಟ್ಟರು. ಮೈಸೂರು ಅನಂತಸ್ವಾಮಿ ಮತ್ತು ಅಶ್ವತ್ಥ್‌ರ ಸಿ.ಡಿಗಳ್ಯಾವೂ ಬಹುಶಃ ರತ್ನಮಾಲಾರ ಹಾಡುಗಳಿಲ್ಲದೆ ಹೊರ ಬಂದಿಲ್ಲ. ಶಿಶುನಾಳ ಷರೀಫ ಡಿವಿಜಿಯವರ ಮಂಕುತಿಮ್ಮನ ಕಗ್ಗ ಪು.ತಿ.ನ ಕುವೆಂಪು ಮಧುರ ಚೆನ್ನ ಬೇಂದ್ರೆ ಚಂದ್ರಶೇಖರ ಕಂಬಾರ ಗೋಪಾಲಕೃಷ್ಣ ಅಡಿಗ ಎಂ.ಎನ್.ವ್ಯಾಸರಾವ್ ಚನ್ನವೀರ ಕಣವಿ ಲಕ್ಷ್ಮಿನಾರಾಯಣ ಭಟ್ಟ ಎಚ್.ಎಸ್.ವೆಂಕಟೇಶಮೂರ್ತಿ- ಹೀಗೆ ಸಾಲು ಸಾಲು ಕವಿಗಳ ಗೀತೆಗಳನ್ನು ರತ್ನಮಾಲಾ ಹಾಡಿದರು. ಗೋಪಾಲಕೃಷ್ಣ ಅಡಿಗರು ತೀರಿಕೊಂಡ ದಿನ ಅವರ ಪಾರ್ಥಿವಶರೀರದ ಸಮ್ಮುಖದಲ್ಲೇ ``ಯಾವ ಮೋಹನ ಮುರಲಿ ಕರೆಯಿತೋ ದೂರ ತೀರಕೆ ನಿನ್ನನೂ..." ಹಾಡಿದಾಗ ರತ್ನಮಾಲಾ ಎಷ್ಟು ಉದ್ವಿಗ್ನರಾಗಿದ್ದರೆಂದರೆ ಕವಿಯ ಮನೆಯಂಗಳದಲ್ಲಿ ನೆರೆದವರೆಲ್ಲರ ಕಣ್ಣು ತೊಯ್ದಿದ್ದವು. ಕಿ.ರಂ.ನಾಗರಾಜರಂತೂ ಭಾವುಕತೆಯ ಪರಮಾವ ಹಂತ ತಲುಪಿದ್ದರು. ಹಾಗೆ ಕನ್ನಡ ಕಾವ್ಯ ಪ್ರಪಂಚದ ಜೊತೆ ಜೊತೆಯಲ್ಲೇ ರತ್ನಮಾಲಾ ಅವರ ಹೆಜ್ಜೆ ಗುರುತು ಮೂಡಿವೆ.

ನಿನ್ನೆ ದತ್ತಾಗೋಸ್ಕರ ಇಟ್ಟುಕೊಂಡಿದ್ದ ಕೂಟದಲ್ಲಿ ನನ್ನ ಇಷ್ಟದ ಗಾಯಕ-ಗಾಯಕಿಯರನ್ನೆಲ್ಲ ಸೇರಿಸಿದ್ದೆ. `ಪ್ರಾರ್ಥನಾ` ಸ್ಕೂಲ್‌ನ ಕೆಲವು ಹಿರಿಯ ಶಿಕ್ಷಕಿಯರು ನಮ್ಮ ಸಿಬ್ಬಂದಿಯವರು ಕರ್ಣ ಕಿಟ್ಟಿ ದತ್ತಾ ಹೆಗಡೆಯವರ ಅತ್ಯಾಪ್ತ ಮಿತ್ರ ದೇವರ ಭಟ್- ಹೀಗೆ ನಮ್ಮದೇ ಪುಟ್ಟ ಗುಂಪು. ಒಂದಷ್ಟು ಪೌಷ್ಠಿಕ ದ್ರವ ಸಾತ್ವಿಕ ಊಟ: ಎಲ್ಲ ಮುಗಿಯುವ ಹೊತ್ತಿಗೆ ರಾತ್ರಿ ಮುದುರಿತ್ತು. ಇಷ್ಟಾಗಿ ನನ್ನ `ಹಿಮಾಗ್ನಿ` ಕಾದಂಬರಿಗೆ ಕಾರಣರಾದವರೇ ದತ್ತ. ಅದನ್ನು ಬರೆಯಲು ಪ್ರೇರೇಪಿಸಿದವರೇ ಅವರು. ಅದಕ್ಕಾಗಿ ರಾಶಿರಾಶಿ ಮಟೀರಿಯಲ್ ಒದಗಿಸಿದರು. ನನ್ನನ್ನು ದೇಶದೇಶ ಸುತ್ತಿಸಿದರು. ನಿನ್ನೆ ತುಂಬಿದ ಫೈಲು ನೋಡಿ ಅದೆಷ್ಟು ಆನಂದ ಪಟ್ಟರೋ! ನಾನು ಎಳೇ ಮಗುವಿನಂತೆ ಜರ್ಮನಿಯಿಂದ ಅವರು ತಂದ ಹತ್ತಿಪ್ಪತ್ತು stabilor ಪೆನ್ನು ಮತ್ತು Esprit ನೋಟ್‌ಬುಕ್ಕುಗಳ ಮೇಲೆ ಕೈಯಿರಿಸಿ ಹಾಳೆಗಳನ್ನು ಎಳೇ ಹುಡುಗಿಯ ಕೆನ್ನೆಗಳೇನೋ ಎಂಬಂತೆ ಸವರುತ್ತ ಕುಳಿತಿದ್ದೆ.

ದತ್ತಾ ಭಾರತಕ್ಕೆ ಬರುವ ಹೊತ್ತಿಗೆ `ಹಿಮಾಗ್ನಿ` ಕಾದಂಬರಿ ಮುಗಿಸಿ ಬಿಡುತ್ತೇನೆ ಅಂದುಕೊಂಡಿದ್ದೆ. ಆದರೆ ತಿರುಗಾಟ ಕಾರ್ಯಕ್ರಮಗಳು ಪತ್ರಿಕೆಯ ಕೆಲಸ ಕಾದಂಬರಿಯ ಅಧ್ಯಾಯಗಳು ಬೇಡುವ ರಿಸರ್ಚು ಇವುಗಳ ಮಧ್ಯೆ ಅಂದುಕೊಂಡಷ್ಟು ವೇಗವಾಗಿ ಬರೆಯಲು ಸಾಧ್ಯವಾಗಲಿಲ್ಲ. ಇನ್ನೂ ಮೂವತ್ತು ಪರ್ಸೆಂಟಿನಷ್ಟು ಕೆಲಸ ಬಾಕಿಯಿದೆ. ಅದನ್ನು ಮುಗಿಸದ ಹೊರತು ಬೇರೆ ಏನನ್ನೂ ಬರೆಯಲಾರೆ. ಅಷ್ಟರ ಮಟ್ಟಿಗಿನ ನಿಷ್ಠೆಯಿಲ್ಲದಿದ್ದರೆ ambitious ಕಾದಂಬರಿಯೊಂದು ರೂಪುಗೊಳ್ಳಲಾರದು. ಇಷ್ಟರಲ್ಲೇ ಪೂರ್ತಿಯಾದ ಪುಟಗಳನ್ನು ಕಳಿಸಿಕೊಟ್ಟು ಸುಧಾಕರ ದರ್ಬೆ ಅವರಿಂದ ಓದಿಸಬೇಕು. ಕಾದಂಬರಿಗೆ ಮುಖಪುಟ ಮಾಡುವವರು ಅವರು. ಅದೂ ನನ್ನ ಜಾಯಮಾನದ ಪಾರ್ಟಿಯೇ: ನಿಧಾನ ಗರ್ಭ. ಆದರೆ ಅಪರೂಪದ ಕಲಾವಿದರು. ನನಗೆ ಅದೇನೋ ಸೆಂಟಿಮೆಂಟು. ನನ್ನ ಪತ್ರಿಕೆಯ `ಹಾಯ್ ಬೆಂಗಳೂರ್!`ಎಂಬ mast headನಿಂದ ಹಿಡಿದು ಅನೇಕ ಪುಸ್ತಕಗಳ ಮುಖಪುಟಗಳನ್ನು ಅವರಿಂದಲೇ ಮಾಡಿಸಿದ್ದೇನೆ. ಅವೆಲ್ಲವೂ ಯಶಸ್ವಿಯಾಗಿವೆ! ಇದು ಸೆಂಟಿಮೆಂಟಿನದಷ್ಟೆ ಮಾತಲ್ಲ. ಪುಸ್ತಕದ ಹೂರಣದಂತೆಯೇ ಅದರ ತೋರಣದಂಥ ಮುಖಪುಟವೂ ಆಕರ್ಷಕವಾಗಿರಬೇಕು. ನಾನು ಬರೆದಂತೆ ಬರೆದಂತೆ ಅದು ಕಂಪೋಸ್ ಆಗಿ ಪುಟವಿನ್ಯಾಸವೂ ಆಗಿ ಕೊನೆಯ ಪುಟ ಬರೆದು ಮುಗಿಸಿದ ದಿನ ಮುದ್ರಣಕ್ಕೆ ಹೊರಡಲು ಸಿದ್ಧವಾಗಿರುತ್ತದೆ. ಆದರೆ ಕೊನೆಯ ಪುಟ ಬರೆದು ಮುಗಿಸುವುದಕ್ಕೆ ಮುನ್ನ ಎಷ್ಟು ಪುಟ ಬರೆಯಬೇಕು? ಇದು ಕೆಲಸ ಪೂರ್ತಿಯಾಗದ ತನಕ ಬಗೆಹರಿಯದ ತಿಕ್ಕಲನ ಲೆಕ್ಕಾಚಾರ.

ಕೆಲವು ಕಾದಂಬರಿಕಾರರು ಕೆಲಸ ಮಾಡುವ ವಿಧಾನಗಳನ್ನೇ ಒಂದಷ್ಟು ದಿನ ಗಮನಿಸಿದೆ. ಮನೋಹರ ಮಳಗಾಂವಕರ್ ಬರೆಯುತ್ತಿರಲಿಲ್ಲ. ಟೈಪ್ ಮಾಡುತ್ತಿದ್ದರು. ``Hammering the type writer" ಅನ್ನುತ್ತಿದ್ದರು. ಬೆಳಗಿನ ಜಾವಕ್ಕೆದ್ದು walk ಹೋಗಿ ಬಂದು ಟೈಪ್ ಮಾಡಲು ಕುಳಿತರೆ ಅದು ಮಧ್ಯಾಹ್ನದ ತನಕ. ನಡುವೆ ಒಂದು ಪೆಗ್ ಜಿನ್ ಕುಡಿದು ಊಟ ಮಾಡಿ ಚಿಕ್ಕದೊಂದು ನಿದ್ರೆ ತೆಗೆದೆದ್ದರೆ ಮತ್ತೆ ರಾತ್ರಿಯ ತನಕ ಟೈಪು. ಹೆಚ್ಚೆಂದರೆ ವರ್ಷಕ್ಕೆ ಒಂದು ಕಾದಂಬರಿ ಬರೆಯುತ್ತಿದ್ದರು. ಸಿಂಹಳದ ನನ್ನ ಗೆಳೆಯ ಶೋಭಸಕ್ತಿ ಕಾದಂಬರಿಯ ಬಗ್ಗೆ ಚೆನ್ನಾಗಿ ಯೋಚಿಸಿ ಒಂದು ಸ್ಥೂಲ ಚಿತ್ರಣ ರೂಪಿಸಿಕೊಂಡು ಕಡೆಗೆ ಬರೆಯಲು ಕುಳಿತರೆ thirty days. ಭೈರಪ್ಪನವರದು ತಿರುಗಾಟ ಓದು ಟಿಪ್ಪಣಿ- ಅದೆಲ್ಲ home work ಮುಗಿದ ಮೇಲೆ ಅವರು ಏಕಾಂತಕ್ಕೆ ಹೊರಟು ಬಿಡುತ್ತಾರೆ. ಯಾರಿಗೂ ಫೋನಿಗೂ ಸಿಗುವುದಿಲ್ಲ. ಒಂದು stretchನಲ್ಲಿ ಬರೆದು ಮುಗಿಸಿದ ಮೇಲೆ ಕೆಲವು ಆಯ್ದ ಗೆಳೆಯರಿಗೆ ಓದಲು ಕೊಡುತ್ತಾರೆ. ಕೆಲವು ಚರ್ಚೆಗಳಾಗುತ್ತವೆ. ಕಾದಂಬರಿಯನ್ನು ಕೆಲವು ದಿನ ಮಾವಿನ ಹಣ್ಣು ಅಡಹಾಕಿದ ಹಾಗೆ ಅಡಹಾಕಿ ಮತ್ತೆ ಕೆಲವು ಭಾಗ ಬದಲಿಸುತ್ತಾರೆ. ಕೆಲವು ಪಾತ್ರಗಳನ್ನು ಸ್ಥೂಲವಾಗಿ perceive ಮಾಡಿಕೊಂಡ ಮೇಲೆ ಆ ಪಾತ್ರಕ್ಕೆ model ಆಗಿ ಯಾರನ್ನು ಆಯ್ಕೆ ಮಾಡಿಕೊಂಡಿರುತ್ತಾರೋ ಅವರಲ್ಲಿಗೇ ಹೋಗಿ ಜೊತೆಯಲ್ಲಿ ಆರೆಂಟು ದಿನ ಇದ್ದು ಬಂದು ಕಾದಂಬರಿಯ ಚೌಕಟ್ಟಿನೊಳಕ್ಕೆ ಆ ಪಾತ್ರವನ್ನು ಇಮಡಿಸುವ ಕುಸುರಿ ಕೆಲಸ ಮಾಡುತ್ತಾರೆ.ಅವರು ಒಂದು ಮುಸ್ಲಿಂ ಕುಟುಂಬದೊಂದಿಗೆ ಇದ್ದು ಆನಂತರ `ಆವರಣ` ಬರೆದರಂತೆ. `ತಂತು` ಬರೆಯುವ ಮುನ್ನ ಅವರು ಬೆಳಗೆರೆಯಲ್ಲಿದ್ದುದು ನನಗೆ ಗೊತ್ತು. ಅದರಲ್ಲಿ ನಮ್ಮ ಶಾಲೆ ಮತ್ತು ಬೆಳಗೆರೆ ಶಾಸ್ತ್ರಿಗಳು ಪಾತ್ರಗಳಾಗಿ ಮೂಡಿ ಬಂದಿವೆ. ಭೈರಪ್ಪನವರೂ ಸುಮಾರು ಒಂದು ವರ್ಷದಲ್ಲಿ ಒಂದು ಕಾದಂಬರಿ ಮುಗಿಸುತ್ತಾರೆ.

ಆದರೆ ನನಗೆ ಎಲ್ಲರಿಗಿಂತ ವಿಚಿತ್ರವೆನ್ನಿಸುವವನು ಜೆಫ್ರಿ ಆರ್ಚರ್. ಅವನು ಕಾದಂಬರಿಗಳ ಕಾರ್ಖಾನೆ. Not a Penny More, Not a Penny Less ನಿಂದ ಹಿಡಿದು First among equals, As the crow flies, Honour among thieves, the fourth Estate, only time will tell ತನಕ ಅನೇಕ ಕಾದಂಬರಿಗಳನ್ನು ಪುಂಖ ಪುಂಖ ಬರೆದ ಜೆಫ್ರಿ ಆರ್ಚರ್ ನಾಟಕಗಳನ್ನು ಬರೆದ. ಸಣ್ಣ ಕತೆ ಬರೆದ. ಮಕ್ಕಳಿಗಾಗಿ ಬರೆದ. ಅಷ್ಟೇ ಅಲ್ಲ ಆತ ರಾಜಕಾರಣಿಯಾಗಿದ್ದ. ಮಾರ್ಗರೆಟ್ ಥ್ಯಾಚರ್‌ಗೆ ಆತ್ಮೀಯನಾಗಿದ್ದ. ಸೊಗಸಾದ ಮಾತುಗಾರ. ಭಯಂಕರ ಹೆಣ್ಣುಬಾಕ. ದೊಡ್ಡ ಮೊತ್ತದ ಫ್ರಾಡ್‌ಗಳಲ್ಲಿ ತೊಡಗಿ ಅಕಾರ ಕಳೆದುಕೊಂಡ. ಜೈಲಿಗೆ ಹೋದ. ಅದರ ಬಗ್ಗೆಯೇ ಪುಸ್ತಕ ಬರೆದ. ನೂರಾರು ಕಿಲೋಮೀಟರು ನಡೆದು ಫಂಡ್ ಎತ್ತಿ ಸದ್ದಾಂನ ಕೈಲಿ ನಲುಗಿದ ಕುರ್ದಿಷ್ ನಿರಾಶ್ರಿತರಿಗೆ ಸಹಾಯ ಮಾಡುತ್ತೇನೆಂದ. ಅದಿಷ್ಟೂ ಫಂಡ್ ತಿಂದು ಹಾಕಿದ. ಇಷ್ಟೆಲ್ಲ ಮಾಡಿ ಅಷ್ಟೆಲ್ಲ ಬರೆದವನು ತನ್ನ ಒಂದೊಂದು ಕಾದಂಬರಿಯನ್ನು ಹದಿಮೂರರಿಂದ ಹದಿನೇಳು ಸಲ ಮತ್ತೆ ಮತ್ತೆ ತಿದ್ದಿ ಬರೆಯುತ್ತಾನೆಂದರೆ ಅವನೇನು ಮನುಷ್ಯನಾ? ದೈತ್ಯನಾ?

ಇವತ್ತಿಗೂ ಜೆಫ್ರಿ ಆರ್ಚರ್ ತನ್ನ sound proof ಕೋಣೆಯಲ್ಲಿ ದಿನವಿಡೀ ಕುಳಿತು ಬರೆಯುತ್ತಾನೆ. ಮಧ್ಯೆ ಎರಡು ತಾಸು long walk ಮಾಡುತ್ತಾನೆ. ಗ್ಲಾಸ್ ಬಿಯರ್ ಕೂಡ ಕುಡಿಯುವುದಿಲ್ಲ. ಕೊನೆಯ draft ಸಿದ್ಧಗೊಳ್ಳುವ ತನಕ ಕಾದಂಬರಿಯನ್ನು ಹೆಂಡತಿಗೂ ಓದಲಿಕ್ಕೆ ಕೊಡುವುದಿಲ್ಲ. ಅದರ ಬಗ್ಗೆ ಮಾತನಾಡುವುದಿಲ್ಲ.
ಎಷ್ಟು ವಿಚಿತ್ರ.

ಹ್ಞಾಂ ಆತ ತನ್ನ ಹೆಂಡತಿಯಿಂದ ಬೇರ್ಪಟ್ಟು ಅನೇಕ ವರ್ಷಗಳಾಗಿವೆಯಂತೆ!

ನಿಮ್ಮವನು
ಆರ್.ಬಿ

Read Archieves of 20 October, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books