Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ದೇಶದ ಘಟಾನುಘಟಿ ವಕೀಲರು ಪ್ರಾಂಜಲ ವಂದನೆ ಸಲ್ಲಿಸಿದ್ದು ನಮ್ಮ ನ್ಯಾಯಾಧೀಶರಿಗೆ!

ಇನ್ನು ಮುಂದೆ ಕೇಂದ್ರ ಸರ್ಕಾರ ತನ್ನ ಸಂಪುಟ ಸಭೆಯನ್ನು ತಿಹಾರ್ ಜೈಲಿನಲ್ಲಿ ನಡೆಸುವ ಕಾಲ ಬರುತ್ತದೆ ಅಂತ ಬಿಜೆಪಿಯ ಮಹಾಬಲಿ ಲಾಲಕೃಷ್ಣ ಅದ್ವಾನಿ ಘೋಷಿಸುತ್ತ ಜನ ಜಾಗೃತಿ ಯಾತ್ರೆ ಆರಂಭಿಸಿದರು. ಇಲ್ಲಿ ಕರ್ನಾಟಕದ ಸಂಪುಟವಾಗಲೇ ಜಯದೇವ ಆಸ್ಪತೆಯಲ್ಲಿ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಕೊಂಚ ಚಂಚಲಗೂಡಾದಲ್ಲಿ ಸಂಪುಟ ಸಭೆಗಳನ್ನು ಖುದ್ದಾಗಿ ಫೋನಿನಲ್ಲಿ ಹಾಗೂ ವಿಡಿಯೋ ಕಾನರೆನ್ಸ್‌ಗಳ ಮೂಲಕ ನಡೆಸತೊಡಗಿದೆ. ಯಡಿಯೂರಪ್ಪನನ್ನು ಕಸ್ಟಡಿಗೆ ತೆಗೆದುಕೊಂಡ ಸುದ್ದಿ ಕೇಳುತ್ತಿದ್ದಂತೆಯೇ ಅನೇಕ ಬಿಜೆಪಿ ನಾಯಕರು ಆನಂದ ತುಂದಿಲರಾದರು. ಒಬ್ಬೊಬ್ಬರಿಗೆ ಒಂದೊಂದು ತೆರನಾದ ಸಂತಸ. ಸದಾನಂದ ಗೌಡರು ``ಇನ್ನಾರು ತಿಂಗಳು ದಿನಗೂಲಿ ಮುಂದುವರಿಯೋ ಹಂಗೆ ಕಾಣುತ್ತೆ" ಅಂದುಕೊಂಡರೇನೋ? ಅವಿವೇಕಿಯಂತೆ ಮಾತನಾಡುವ ಪಾಳಿ ಈ ಬಾರಿ ಬೇಳೂರು ಸುದರ್ಶನರದು. ``ಯಡಿಯೂರಪ್ಪ ಬಂಧನದ ಹಿಂದೆ ರಾಜಕೀಯವಿದೆ" ಅಂದರು. ``ನ್ಯಾಯಾಧೀಶರು ರಾಜಕೀಯ ಮಾಡಿದ್ದಾರಾ?" ಅಂತ ಕೇಳಿದುದಕ್ಕೆ ``ಅಲ್ಲ ಕಾಂಗ್ರೆಸ್‌ನೋರು ಮಾಡಿದ್ದಾರೆ" ಎಂದು ಅಸಂಬದ್ಧ ಉತ್ತರ ಕೊಟ್ಟಿದ್ದಾರೆ. ರೇಣುಕಾ ಚಾರ್ಯನದು ಯಥಾ ಪ್ರಕಾರದ ಕೋಡಂಗಿ ಗುಟುರು ``ನಾನು ಒಬ್ನೇ ಬರ‍್ತೀನಾ? ನೋಡ್ತಿರಿ ಮುದುಕ ಯಡಿಯೂರಪ್ಪನ್ನೂ ಒಳಿಕ್ಕೆ ಬರೋ ಹಂಗೆ ಮಾಡ್ತೀನಿ" ಅಂದಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಈ ಸದ್ಯಕ್ಕೆ ಆ ಮಟ್ಟಿಗಿನ ಸಂತೋಷವನ್ನು ಅನುಭವಿಸುವಂತಿಲ್ಲ. ಜೈಲಿನಿಂದ ಜೀವಂತವಾಗಿ ಹೊರ ಬೀಳ್ತೀನಿ ಅನ್ನೋ ಗ್ಯಾರಂಟೀನೂ ಇಲ್ಲ. `ಜಾಮೀನು ಸಿಕ್ಕರೆ ಕಡೇ ಪಕ್ಷ ಮನೇಲಾದರೂ ನೆಮ್ಮದಿಯಾಗಿ ಪ್ರಾಣ ಬಿಡ್ತೀನಿ` ಅನ್ನುತ್ತಿದ್ದಾನಂತೆ. ಯಡ್ಡಿ ಜೈಲಿಗೆ ಹೋದ ಸುದ್ದಿ ಕೇಳಿ ಚಂಚಲಗೂಡಾದಲ್ಲಿ ರೆಡ್ಡಿ ಸಂತೋಷಪಟ್ಟನಂತೆ ಅಂತ ಸುದ್ದಿಯಾಗಿದೆ. ಇದೆಲ್ಲದರ ಮಧ್ಯೆ ಪೂರ್ತಿ ಡಲ್ಲು ಹೊಡೆದು ಹೋಗಿರುವವಳು ಶೋಭಾ ಕರಂದ್ಲಾಜೆ. ಜಯದೇವ ಆಸ್ಪತ್ರೆಗೆ ಭೇಟಿ ಕೊಟ್ಟವಳ ಮುಖದಲ್ಲಿ ಗಿಲ್ಲಿದರೂ ಹನಿ ರಕ್ತವಿರಲಿಲ್ಲ. ಅಳುಮುಂಜಿ ಯಲಹಂಕದ ವಿಶ್ವನಾಥ್ ಜೊತೆಯಲ್ಲಿ ಹೆಜ್ಜೆ ಹಾಕುತ್ತಿದ್ದುದು ವಿದ್ರಾವಕ ದೃಶ್ಯ. ಆಶ್ಚರ್ಯವೆಂದರೆ ದಿನ ಬೆಳಗ್ಗೆ ಮುಖ್ಯಮಂತ್ರಿಯ ಮನೆಯ ಹಜಾರದಲ್ಲಿ ಕೋಡುಬಳೆಯಂತೆ ಮುದುರಿಕೊಂಡು ಕೂತಿರುತ್ತಿದ್ದ ಕೃಷ್ಣಯ್ಯ ಶೆಟ್ಟಿ `ಜಾಮೀನು ತಿರಸ್ಕರಿಸಲಾಗಿದೆ` ಅನ್ನುತ್ತಿದ್ದಂತೆಯೇ `ಅಯ್ಯೋ...` ಅಂದವನೇ ಲಾಳ ಕಟ್ಟಲು ಕೆಡವಲ್ಪಟ್ಟ ಎತ್ತಿನಂತೆ ಕೋರ್ಟಿನಲ್ಲೇ ಅಡ್ಡ ಬಿದ್ದದ್ದು.

ಇಂಥವುಗಳನ್ನು ಭಾರತ ಇತ್ತೀಚಿನ ದಿನಗಳಲ್ಲಿ ಪದೇಪದೆ ನೋಡುತ್ತಿದೆ. ಆದರೆ ನ್ಯಾಯಾಲಯಗಳಿಗೆ ಇವೇನೂ ಹೊಸ ಧಾರಾವಾಹಿಗಳಲ್ಲ. ಸಮನ್ಸ್ ಜಾರಿಯಾದ ಕೂಡಲೆ ರೋಗದ ಹೆಸರು ಹುಡುಕುವುದು ವಾರಂಟು ಹೊರಡುತ್ತಿದ್ದಂತೆಯೇ ಅಡ್ಮಿಟ್ ಆಗುವುದು ಜೈಲು ಸೇರುತ್ತಿದ್ದಂತೆಯೇ ಎದೆ ನೋವು ವಾಂತಿ ಅಸ್ಪತ್ರೆಗೆ shift ಆದರೂ ನಿಲ್ಲದ ರಕ್ತಬೇದಿ ವಾಯಿದೆ ಬೇಕೆಂದರೆ ನೆನಪಾಗುವ ಸಾಕು ಮಗಳ ಮದುವೆ ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಕುಸಿದು ಬೀಳುವುದು- ಎಲ್ಲವೂ ಕೋರ್ಟುಗಳಲ್ಲಿ ನಿತ್ಯದ ದೃಶ್ಯಗಳೇ. ಅದಕ್ಕೇ ಮೊನ್ನೆ ಲೋಕಾಯುಕ್ತ ನ್ಯಾಯಾಲಯದ ನ್ಯಾಯಾಧೀಶರು ಬಹಳ ಬುದ್ಧಿವಂತಿಕೆಯಿಂದ ಸಮಚಿತ್ತದಿಂದ ಈ ದೃಶ್ಯ ವಿಕಾರಗಳನ್ನು handle ಮಾಡಿದರು ನೋಡಿ. ಮೊದಲು ಕಿಟಕಿ ಬಾಗಿಲು ತೆರೆಸಿ ಜನರನ್ನು ಸರಿಸಿ ಗಾಳಿ ಬೆಳಕು ಬರುವಂತೆ ಮಾಡಿ ಕೃಷ್ಣಯ್ಯ ಶೆಟ್ಟಿಗೆ ಪ್ರಥಮೋಪಚಾರ ದೊರಕುವಂತೆ ಮಾಡಿದರು. ಬಂದ ಆಂಬುಲೆನ್ಸ್‌ನಲ್ಲೇ ಚಿಕಿತ್ಸೆ ಆರಂಭವಾಗಬೇಕು ಆಸ್ಪತ್ರೆಯಲ್ಲಿ ತಪಾಸಣೆಯಾಗಬೇಕು ಅಲ್ಲಿಂದ ನೇರವಾಗಿ ಜೈಲಿಗೇ ತಲುಪಿಸಬೇಕು ಎಂದು ಆe ಮಾಡಿದರು. ಅಂಗಾತ ಬಿದ್ದ ಶೆಟ್ಟಿಗೆ ಜೈಲು ಅನಿವಾರ್ಯ ಅಂತ ಗೊತ್ತಾದಾಗ ತೆಪ್ಪಗೆ ಎದ್ದು ಹೋದ. ಇವನು ನೋಡಿ ಸ್ವಭಾವತಃ `ದಾನ ಚಿಂತಾಮಣಿ`. ನಾನು ದಾನ ಚಿಂತಾಮಣಿಗಳನ್ನು ಮೊದಲಿಂದಲೂ ಅನುಮಾನದಿಂದಲೇ ನೋಡಿದವನು. ಮನೆ ಬಾಗಿಲಿಗೆ ಬಂದವರಿಗೆಲ್ಲ ಪ್ರಸಾದ ಲಡ್ಡು ಗಿಫ್ಟು ಕೇಳಿದವರಿಗೆ ದುಡ್ಡು ಬೆದರಿಸಿದ ಪತ್ರಕರ್ತರಿಗೆ ಕಪ್ಪ ಹೀಗೆ ಕೊಟ್ಟುಕೊಂಡೇ ಬಂದ ಕೃಷ್ಣಯ್ಯ ಶೆಟ್ಟಿ ತಾನು ಹುಟ್ಟಿದ್ದೇ ತಿರುಪತಿ ತಿಮ್ಮಪ್ಪನ ಸೇವೆಗೆ ಎಂಬಂತೆ ಆಡುತ್ತಿದ್ದ. ಕಡೆಗೆ ಇವನು ಆಡಿದ ಬೃಹನ್ನಾಟಕವೆಂದರೆ ಎಲ್ಲಿಂದಲೋ ಗ್ಯಾಲನ್‌ಗಟ್ಟಲೆ ಚರಂಡಿ ನೀರು ತಂದು ಗಂಗಾಜಲದ ಹೆಸರಿನಲ್ಲಿ ಅದನ್ನು ಹಂಚಿದ. ಅದೆಲ್ಲ ದಾನ ತಿರುಪತಿ ಯಾತ್ರೆ ಗಂಗಾ ವಿತರಣೆ- ಇವುಗಳಿಂದ ಶೆಟ್ಟಿಗೆ ಪುಣ್ಯ ಬಂತೋ ಇಲ್ಲವೋ: ಮಾಡಿದ ಪಾಪವಂತೂ ಜೈಲಿಗೆ ಬಿಟ್ಟು ಬಂದಿದೆ. ನಾಲ್ಕು ಜನ ದಣಿದು ಹೆಗಲ ಮೇಲೆ ಹೊರುವಂಥ ಭಾರದ ವಜ್ರದ ಕಿರೀಟ ಒಯ್ದು ಅದೇ ತಿಮ್ಮಪ್ಪನಿಗೆ ತೊಡಿಸಿ ಬಂದ ರೆಡ್ಡಿ. ಪಾಪ ಪರಿಹಾರವಾಯಿತೇ?

ಕರ್ನಾಟಕ ಕಂಡ ರಾಜಕಾರಣಿಗಳಲ್ಲಿ ಮುಕ್ಕಾಲು ಪಾಲು ದೈವ ಭಕ್ತರೇ. ಪಟೇಲರಂಥ ನಾಸ್ತಿಕರು ಕೂಡ ಕಾಟಾಚಾರಕ್ಕೆ ಬಿದ್ದು ಗುಡಿಗಳಿಗೆ ಹೋಗುತ್ತಿದ್ದರು. ಆದರೆ ಕಣ್ಣಿಗೆ ಬಿದ್ದ ಮಠಾಶರಿಗೆಲ್ಲ ಪಾದ ಮುಟ್ಟಿ ನಮಸ್ಕರಿಸಿ ಪ್ರತಿ ದೇವಸ್ಥಾನಕ್ಕೂ ಹೋಗಿ ಗಂಟೆ ಕಟ್ಟಿಸಿ ಆನೆ ನಾಯಿ ಕತ್ತೆ ದಾನಮಾಡಿ ಬಂದ ಅಗ್ರಮಾನ್ಯ ದೈವಭಕ್ತರೆಂದರೆ ಯಡಿಯೂರಪ್ಪ. ಕೇರಳದಲ್ಲಂತೂ ಅವರು ಶೋಭಾ ಕರಂದ್ಲಾಜೆಯನ್ನೇ ತಮ್ಮ ಅಕೃತ ಧರ್ಮಪತ್ನಿ ಅಂತ ದೇವರಿಗೆ ಇಂಟ್ರೊಡ್ಯೂಸ್ ಮಾಡಿಕೊಟ್ಟರು. ಈ ಕೆಲಸವನ್ನು ಕುಮಾರಸ್ವಾಮಿಯವರೂ ಮಾಡಿದರು. ಇವರಿಬ್ಬರಿಗಿಂತ ವಿಭಿನ್ನರಾಗಿದ್ದವರು ಆರ್.ಗುಂಡೂರಾಯರು. ಅವರು ಯಾವುದೇ ಪುಣ್ಯಕ್ಷೇತ್ರಕ್ಕೆ ಹೋದರೂ ಪಕ್ಕದಲ್ಲಿ ಪತ್ನಿಯನ್ನು ಕೂಡಿಸಿಕೊಂಡೇ ಅರ್ಚನೆ ಮಾಡಿಸುತ್ತಿದ್ದರು. ಆದರೆ ಅದು ತಮ್ಮ ಪತ್ನಿಯೇ ಆಗಿರಬೇಕೆಂದು ಹಟ ಮಾಡುತ್ತಿರಲಿಲ್ಲ. ಯಾರ ಪತ್ನಿಯಾದರೂ ಸರಿಯೇ. ಒಮ್ಮೆ ರಾಜ್ಯದ ಮೆಡಿಕಲ್ ಡೈರೆಕ್ಟರೊಬ್ಬಾಕೆಯನ್ನು ಕೂಡಿಸಿಕೊಂಡು (ಬಹುಶಃ ಶೃಂಗೇರಿಯಲ್ಲಿ) ಅರ್ಚನೆ ಮಾಡಿಸುತ್ತಿದ್ದಾಗ ಅವರನ್ನು ಪಕ್ಕಕ್ಕೆ ಕರೆದು ``ಗುಂಡೂರಾಯಾ ಇವಳನ್ನು ಮೈಸೂರಿನಲ್ಲಿ ನಾನು ಪಕ್ಕ ಕೂರಿಸ್ಕಂಡು ನನ್ನ ಹೆಂಡ್ತಿ ಅಂತ ಅರ್ಚನೆ ಮಾಡಿಸಿದ್ನಲ್ಲೋ?" ಎಂದು ಎಚ್.ಸಿ.ಶ್ರೀಕಂಠಯ್ಯ ಗೇಲಿ ಮಾಡಿದ್ದರಂತೆ. ಅದಿರಲಿ ಇವರು ಮಾಡಿದ ಪೂಜೆ ಹವನ ಯಾಗ ಯಜ್ಞ ರಹಸ್ಯ ಪೂಜೆಗಳು ವಾಮಾಚಾರಗಳು ದಾನಗಳು ನಾಗಮಂಡಲಗಳು ಭೂತಾರಾಧನೆಗಳು- ಇವ್ಯಾವಾದರೂ ಇವರನ್ನು ಸಂಕಷ್ಟಗಳಿಂದ ಪಾರು ಮಾಡಿದವಾ? ಇವರ ಪಾಪಗಳನ್ನು ತೊಳೆದವಾ?

ಕರ್ನಾಟಕವೊಂದೇ ಯಾಕೆ ಇಡೀ ದೇಶದ ಗಮನ ಸೆಳೆದಿರುವ ಲೋಕಾಯುಕ್ತ ನ್ಯಾಯಾಧೀಶರಾದ ಸುಂದ್ರ ರಾಯರೂ ಧಾರ್ಮಿಕರೇ. ಕೋಲಾರ ಮೂಲದ ಅವರು ಶುದ್ಧ ಶಾಕಾಹಾರಿ. ಕೊಂಚ ಮಟ್ಟಿಗಿನ ವೇದಾಂತವಾದಿ. ಆದರೆ ಮಹಾನ್ ಮಾನವತಾವಾದಿ. ಅವರು ಬಳ್ಳಾರಿಯಲ್ಲಿದ್ದಾಗ ನ್ಯಾಯ ಕೇಳಿ ಬರುವವರಿಗೆ ನ್ಯಾಯಾಲಯದಲ್ಲಿ ಮಾಡಿಕೊಟ್ಟ ವ್ಯವಸ್ಥೆಗಳು ಬಳ್ಳಾರಿಯ ನ್ಯಾಯಾಲಯದ ಆವರಣದ ಸ್ವರೂಪವನ್ನೇ ಬದಲಿಸಿದ್ದವು. ಅವರು ಯಾರನ್ನೂ ದ್ವೇಷಿಸಿದವರಲ್ಲ. ದೂರವಿಟ್ಟವರಲ್ಲ. ಆದರೆ ಯಾರನ್ನೂ ಅಗತ್ಯಕ್ಕಿಂತ ಹತ್ತಿರಕ್ಕೆ ಬಿಟ್ಟು ಕೊಂಡವರಲ್ಲ. ಖಾಸಗಿ ಜೀವನದಲ್ಲಿ ಅತ್ಯಂತ ಪರಿಶುದ್ಧ ಕಟ್ಟುನಿಟ್ಟು. ಕೊಂಚ ಅಸ್ವಸ್ಥಗೊಂಡಿದ್ದ ತಮ್ಮ ಪತ್ನಿಯನ್ನು ಅವರು ನೋಡಿಕೊಂಡ ರೀತಿ ಅದು ಬಹುಶಃ ದೇವರನ್ನೂ-ಅಂತಃಸಾಕ್ಷಿಯನ್ನೂ ಮೆಚ್ಚಿಸುವಂತಹುದಾಗಿತ್ತು. ಇದೆಲ್ಲ ಒಂದು ಮುಖವಾದರೆ ನ್ಯಾಯಸ್ಥಾನದಲ್ಲಿ ಕುಳಿತಾಗಿನ ಅವರ ವರ್ತನೆಯ ಆ ಮುಖವೇ ಬೇರೆ. ಕೋಟಿಗಟ್ಟಲೆ ನುಂಗಿದ ರಾಜಕಾರಣಿಗಳು ಸಿಕ್ಕಿ ಬಿದ್ದ ಸಂದರ್ಭದಲ್ಲಿ ಕೋಟ್ಯಂತರ ರುಪಾಯಿ ಸುರಿದು ದೇಶದ ಸರ್ವಶ್ರೇಷ್ಠ ಬುದ್ಧ್ಧಿವಂತ ಪ್ರಕಾಂಡ ಪಾಂಡಿತ್ಯವುಳ್ಳ ಹೆಸರಾಂತ ವಕೀಲರನ್ನು ವಿಶೇಷ ವಿಮಾನ ಕೊಟ್ಟು ಕರೆಸುತ್ತಾರೆ. ಯಾವುದೇ ನ್ಯಾಯಾಧೀಶರ ಮುಂದೆ ಎಂಥ ವಕೀಲ ನಿಂತು ವಾದಿಸುತ್ತಾನೆ ಎಂಬುದರ ಮೇಲೆ ಅನೇಕ ಸಲ ಮೊಕದ್ದಮೆಯ ಭವಿಷ್ಯ ನಿರ್ಧಾರಿತವಾಗುತ್ತದೆ. ಆದರೆ ಕೇಸಿನ ತಿರುಳೇನು ಎಂಬುದನ್ನು ಬಲ್ಲ ನ್ಯಾಯಾಧೀಶರು ಸ್ಥಿರವಾಗಿ ಕುಳಿತು ಬಿಟ್ಟರೆ ಯಾವ ವಕೀಲರು ಏನು ಮಾಡಬಲ್ಲರು? ನ್ಯಾಯಾಧೀಶ ಸುಂದ್ರರಾಯರು ಕಾನೂನುಗಳ ವಿಷಯದಲ್ಲಿ ಎಂಥ ಪಾರಂಗತರೆಂದರೆ ವಕೀಲರು ಪ್ರಸ್ತಾಪಿಸುವ ಪ್ರತಿ ಸಂಗತಿಯೂ ಅವರಿಗೆ ಕಾನೂನಿನ ಗ್ರಂಥದ ಕಡೆಗೆ ಕಣ್ಣೇ ಹಾಯಿಸದೆ ಗೊತ್ತು ಮಾಡಿಕೊಳ್ಳಬಲ್ಲರು. `ಇಂಥ ಅಂಶದ ಮೇಲೆ ಆರೋಪಿಗೆ ಇಂಥ ರಿಲೀಫ್ ಕೊಡಬಹುದು` ಅಂತ ವಕೀಲರು ಮಾತು ಆರಂಭಿಸುತ್ತಿದ್ದಂತೆಯೇ ಅಂಥ ರಿಲೀಫ್ ಕಾನೂನಿನಲ್ಲಿ ಇಲ್ಲ ಎಂದು ಸುಂದ್ರರಾವ್ ವಿವರಿಸಿಬಿಡುತ್ತಾರೆ. ನಿಮ್ಮಂಥ ಪ್ರಾಜ್ಞ ನ್ಯಾಯಾಧೀಶರ ಮುಂದೆ ಕ್ಷಣಹೊತ್ತು ನಿಂತು ವಾದ ಮಂಡಿಸಿದ್ದೇ ನನ್ನ ಪುಣ್ಯ ಎಂದು ಪ್ರಾಂಜಲ ವಂದನೆ ತಿಳಿಸಿ ಘಟಾನುಘಟಿ ವಕೀಲರು ವಾಪಸು ವಿಮಾನ ಹತ್ತಿದ್ದಾರೆ.
ಇಂಥ ಕಾರಣಗಳಿಗಾಗಿಯೇ ಸುಂದ್ರರಾಯರು great ಅನ್ನಿಸಿಕೊಳ್ಳುವುದು. ಮೊನ್ನೆ ಇವೆಲ್ಲ sensitive ಹಗರಣಗಳ ವಿಚಾರಣೆ ಆರಂಭವಾದಾಗ ಅವರಿಗೆ `ಝಡ್` ಸೆಕ್ಯೂರಿಟಿ ನೀಡಬೇಕೆಂಬ ಪ್ರಸ್ತಾಪ ಬಂತು. ``No. Not a police man in my car" ಅಂತ ಸಾರಾಸಗಟಾಗಿ ತಿರಸ್ಕರಿಸಿದ ಸುಂದ್ರರಾವ್ `ನನ್ನ ರಕ್ಷಣೆಗೆ ದೇವರಿದ್ದಾನೆ` ಅಂದರಂತೆ. ಕೋಟ್ಯಂತರ ತಿಂದ ಖದೀಮರಾದ ಯಡಿಯೂರಪ್ಪ ಕಟ್ಟಾ ನಾಯ್ಡು ಕಟ್ಟಾ ಜಗದೀಶ್ ರೆಡ್ಡಿ ಕುಮಾರಸ್ವಾಮಿ ಮುಂತಾದವರೆಲ್ಲ ನಂಬಿದ ದೇವರನ್ನೇ ಸುಂದ್ರರಾಯರೂ ನಂಬಿದ್ದಾರೆ. ಆದರೆ ವ್ಯತ್ಯಾಸವಿರುವುದು ನಂಬುವುದರ ಹಿಂದಿರುವ ಕಾರಣದಲ್ಲಿ ಅಲ್ಲವೆ? ಇವರಿಗೆಲ್ಲ ನಂಬುಗೆ ಹುಟ್ಟಲು ಕಾರಣ ಭೀತಿ. ಸುಂದ್ರರಾಯರು ದೇವರನ್ನು ನಂಬುವುದು: ಅದು ಅವರ ಜೀವನ ರೀತಿ. ಅಷ್ಟೇ ಫರ್ಕು.

ಮೊನ್ನೆ ನಡೆದ ಇನ್ನೊಂದು ಅಸಹ್ಯವನ್ನು ನೀವೂ ಗಮನಿಸಿದ್ದೀರಿ. ಜೈಲಿನಲ್ಲಿ ಬಕಬಕ ಕಾರಿಕೊಂಡು ಜಯದೇವ ಆಸ್ಪತ್ರೆಗೆ ಬಂದ ಯಡಿಯೂರಪ್ಪನನ್ನು ಅವರ ಮನೆಯವರು ಪಕ್ಷದವರು ಮಂತ್ರಿಗಳು ನೋಡಲು ಬಂದದ್ದು ಸಹಜವಿತ್ತು. ಆದರೆ ಈ ಪೀಠಾಪತಿಗಳೇಕೆ ಬರಬೇಕು? ಜಯದೇವ ಆಸ್ಪತ್ರೆಯ ICU ಘಟಕದಲ್ಲಿ ಯಡ್ಡಿಗೇನು ಲಿಂಗ eನ ಎರೆಯುವುದಿತ್ತೆ? ಹೇಸಿಗೆಯೆಂದರೆ ಸಮಾಜಕ್ಕೆ ಸನ್ಮಾರ್ಗ ತೋರುತ್ತೇವೆಂದು ಹೇಳಿಕೊಳ್ಳುವ ಈ ಸ್ವಾಮಿಗಳು ದುಡ್ಡು ತಿಂದು ಸಿಕ್ಕು ಬಿದ್ದ ಕಳ್ಳ ಜೈಲಿನಲ್ಲಿರುವಾಗ ನಿಮಗೆ ನಮ್ಮ ಬೆಂಬಲವಿದೆ ಅಂತ ಹೇಳಿಬರುತ್ತಾರೆ. ರಂಭಾಪುರಿ ಪ್ರಸನ್ನ ವೀರ ಸೋಮೇಶ್ವರ ಸ್ವಾಮಿ ಕೊಳದ ಮಠದ ಶಾಂತವೀರ ಸ್ವಾಮಿ ಬೇಬಿ ಮಠದ ದುರ್ದಂಡೇಶ್ವರ ಸ್ವಾಮಿ ಶಿವಗಂಗೆಯ ಶಿವಕುಮಾರಸ್ವಾಮಿ- ಹೀಗೆ ಸುಮಾರು ಹದಿನೈದು ಜನ ಕಾವಿ ನೈಟಿಗಳನ್ನು ಹಾಕಿಕೊಂಡು ಮುದಿಕಳ್ಳನನ್ನು ಕಂಡು ಬೆಂಬಲ ಸಲ್ಲಿಸಿ ಬಂದಿದ್ದಾರೆ. ಇಂಥವರಿಗೇ ಅಲ್ಲವಾ ಬಸವೇಶ್ವರರು ಯಕ್ಕಡದಲ್ಲಿ ಹೊಡೆಯಲು ಹೇಳಿದ್ದು?

ಜಾತಿ ಎಂಬುದು ಭ್ರಷ್ಟಾಚಾರಕ್ಕಿಂತ ದೊಡ್ಡ ವಿಷ ಎಂಬುದು ಸಾಬೀತಾಗಿರುವುದು ಲೋಕಸೇವಾ ಆಯೋಗದ ಅಧ್ಯಕ್ಷ ಎಚ್.ಎನ್.ಕೃಷ್ಣ ವಿಷಯದಲ್ಲಿ. ಹಾಸನದ ಹಲ್ಲಿನ ವೈದ್ಯರಾದ ಡಾ.ಕೃಷ್ಣ ತುಂಬ ಅಪ್ರಮಾಣಿಕರಲ್ಲ. ಆದರೆ ಜಾತಿಯ ವಿಷ ವಲಯಕ್ಕೆ ಸಿಕ್ಕು ತಪ್ಪು ಮಾಡಿದರು. ಜಾತಿಯ ಕಾರಣಕ್ಕೇ ಮನೆಗೆಲಸದ ಹುಡುಗಿಗೆ ಸರ್ಕಾರಿ ನೌಕರಿ ಕೊಟ್ಟು ಮನೆಗೆಲಸಕ್ಕೇ ಇಟ್ಟುಕೊಂಡು ಬಂಧನವಾಗಲಿದೆ ಅಂದಾಗ ಅವಳು ತಮ್ಮ ಸಾಕು ಮಗಳೆಂದೂ ಅವಳ ಮದುವೆಯಿದೆಯೆಂದೂ ಸುಳ್ಳು ಹೇಳಿ ಒಂದು ಸಲ ತಪ್ಪಿಸಿಕೊಂಡರು. ಇವತ್ತು ಅದ್ಯಾವುದೂ ಅಡ್ಡ ನಿಲ್ಲಲಿಲ್ಲ. ನೇರವಾಗಿ ಜೈಲಿಗೆ ನಡೆದಿದ್ದಾರೆ.

ಹೇಸಿಗೆ ನಾಟಕದ ಕೊನೆಯ ಅಂಕವೆಂದರೆ ಸಂಪುಟ ಸಭೆ ಕೈಗೊಂಡ ತೀರ್ಮಾನ. ಯಡಿಯೂರಪ್ಪನವರ ಬೆಂಬಲಕ್ಕೆ ನಿಲ್ಲಲು ಸದಾನಂದ ಗೌಡರ ಸಂಪುಟ ತೀರ್ಮಾನಿಸಿದೆ. ಅಂಥ ಲೋಕಾಯುಕ್ತ ವರದಿಯನ್ನೇ ಅಡಿಗೆ ಹಾಕಿಕೊಂಡು ಕುಳಿತಿರುವ ಭ್ರಷ್ಟ ಸಮೂಹಕ್ಕೆ ಕಡುಭ್ರಷ್ಟ ಹಿರಿಯನನ್ನು ಬೆಂಬಲಿಸುವುದರಲ್ಲಿ ನಾಚಿಕೆಯಾಗಲು ಸಾಧ್ಯವೇ? ನರಮೇಧ ಮಾಡಿ ಬಾಯೊರೆಸಿಕೊಂಡ ಮೋದಿಯಂಥವನನ್ನೇ ಬೆಂಬಲಿಸುವ ತೀರ್ಮಾನವನ್ನು ಕೇಂದ್ರ ಮಟ್ಟದಲ್ಲಿ ಅಂದಿನ ಬಿಜೆಪಿ ಸರ್ಕಾರ ತೆಗೆದುಕೊಂಡಿತ್ತು. ಸದಾನಂದಗೌಡರ ಶಿಶುಗಳು ಅಂದಿನ ನಾಯಕರ ಸಂತಾನಗಳಷ್ಟೆ.

ಅಂದ ಹಾಗೆ ಯಡ್ಡಿ ಜೈಲಿಗೆ ಹೋದದ್ದು ತಮ್ಗೆ ನೋವಾಗಿದೆ ಅಂದು ಕುಮಾರಸ್ವಾಮಿ ಹೊಸ ಚೌಂಕ್ ಕೊಟ್ಟಿದ್ದಾರೆ. ಇದು ಅಪವಿತ್ರ ಮೈತ್ರಿಯ ಇನ್ನೊಂದು ಅಧ್ಯಾಯದ ಆರಂಭವಾ? ಅಥವಾ ಅದೇ ಜೈಲಿಗೆ ತಾವೂ ಹೋಗಬಹುದೆಂಬ ಆತಂಕವಾ?
In fact, ಕುಮಾರಸ್ವಾಮಿ ಜೈಲಿಗೆ ಹೋದರೆ ತುಂಬ ನೋವು ಅನುಭವಿಸುವುದು ಅವರ ತಂದೆ ದೇವೆಗೌಡರು. ಏಕೆಂದರೆ ಪರಪ್ಪನ ಅಗ್ರಹಾರದ ಜೈಲು ಉದ್ಘಾಟಿಸಿದ್ದೇ ಅವರು!

-ರವಿ ಬೆಳಗೆರೆ

Read Archieves of 20 October, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books