Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ನೆನಪಿನ ಶಕ್ತಿಯೆಂಬುದು ಏಳು ಪಾಪಗಳ ತಾಯಿಯಂತೆ!

ಒಂದು ಪುಸ್ತಕ.

ಅದು `ನೆನಪು`ಗಳ ಬಗ್ಗೆಯೇ ಬರೆದ ಒಂದು ಪುಸ್ತಕ. ಯಾರದೋ ನೆನಪುಗಳಲ್ಲ ಆತ್ಮ ಚರಿತ್ರೆಯಲ್ಲ ಇತಿಹಾಸದಿಂದ ಆಯ್ದ ನೆನಪುಗಳದಲ್ಲ. ಅದು ಡೇನಿಯಲ್ ಸ್ಕ್ಯಾಕ್ಟರ್‌ಎಂಬ ಮನೋ ವಿಜ್ಞಾನಿ ಬರೆದ ವೈಜ್ಞಾನಿಕ ಪುಸ್ತಕ. ಮಿದುಳು ಹೇಗೆ ಮರೆತು ಹೋಗುತ್ತದೆ ಮತ್ತು ಏಕೆ ನೆನಪಿಟ್ಟುಕೊಳ್ಳುತ್ತದೆ ಎಂಬುದೇ ಅದರ ವಸ್ತು. `ಜ್ಞಾಪಕ ಶಕ್ತಿ ಹೆಚ್ಚಿಸಿಕೊಳ್ಳುವುದು ಹೇಗೆ` ಎಂಬಂಥ ಕಮರ್ಷಿಯಲ್ ಆದ stupid ಪುಸ್ತಕವಲ್ಲ. ಅದರ ಮುನ್ನುಡಿ ಆರಂಭವಾಗುವುದೇ `ಯುಮಿಯೂರಾ` ಎಂಬ ಸಣ್ಣ ಕತೆಯೊಂದಿಗೆ. ಅದು ಯಸುನರಿ ಕವಾಬಾಟ ಬರೆದ ಕಥೆ. ಕಾದಂಬರಿಕಾರನೊಬ್ಬನ ಮನೆಗೆ ಇದ್ದಕ್ಕಿದ್ದಂತೆ ಒಬ್ಬ ಮಹಿಳೆ ಬರುತ್ತಾಳೆ. `ನೀನು ನನಗೆ ಮೂವತ್ತು ವರ್ಷಗಳಿಂದ ಗೊತ್ತು` ಅನ್ನುತ್ತಾಳೆ. `ಒಂದ್ಸಲ ನನ್ನ ಮನೆಗೆ ಬಂದು ನೀನು ನನ್ನನ್ನ ಮದುವೆಯಾಗ್ತೀಯಾ?`ಅಂತ ಕೇಳಿದ್ದೆ ಅಂದವಳು ಆ ಮಧುರ ಕ್ಷಣಗಳನ್ನೆಲ್ಲ ಕಣ್ಣಿಗೆ ಕಟ್ಟುವಂತೆ ವಿವರಿಸುತ್ತಾಳೆ. ಆಗಲೇ ಕಾದಂಬರಿಕಾರ ಗಾಬರಿಯಾಗೋದು. ಏಕೆಂದರೆ ಇತ್ತೀಚೆಗೆ ಆತನಿಗೆ ಕೊಂಚ ಮರೆವಿನ ಸಮಸ್ಯೆ. Memory lapse. ಆದರೆ ಆ ಸಮಸ್ಯೆ ತೀರ ಈ ಮಟ್ಟಕ್ಕೆ ಹೋಯಿತಾ? ಏನು ಮಾಡಿದರೂ ಆತನಿಗೆ ಆಕೆಯನ್ನು ಭೇಟಿಯಾದದ್ದು ಮದುವೆಗೆ ಪ್ರಪೋಸ್ ಮಾಡಿದ್ದು ಆಕೆಯ ಊರಿಗೆ ಹೋದದ್ದು- ಯಾವುದೂ ನೆನಪಾಗಲೊಲ್ಲದು. ಯಾವ ಊರು ಅದು? ಯುಮಿಯೂರಾ!

ಎಲ್ಲಿದೆ ಯುಮಿಯೂರಾ? ಆಕೆ ಎದ್ದು ಹೋದನಂತರ ಎದುರಿಗೆ ಮ್ಯಾಪ್ ಇಟ್ಟುಕೊಂಡು ಭೂತಗನ್ನಡಿ ಹಿಡಿದು ಹುಡುಕುತ್ತಾನೆ. ಆ ಊರಿನ ಹಾದಿ ಇರುವ ಜಾಗ ಸುತ್ತಲ ಬೆಟ್ಟ ಹತ್ತಿರದ ನದಿ- ಇವುಗಳನ್ನು ನೋಡಿದಾಗಲಾದರೂ ಫಕ್ಕನೆ ಯಾವುದೋ wire connect ಆಗಿ ಆಕೆ ಹೇಳಿದುದೆಲ್ಲ ನೆನಪಾಗಬಹುದಾ ಅಂತ ಪ್ರಯತ್ನಿಸುತ್ತಾನೆ. ಆದರೆ ಯಾವ ಮ್ಯಾಪ್‌ನಲ್ಲೂ ಯುಮಿಯೂರಾ ಎಂಬ ಹೆಸರಿನ ಊರೇ ಇಲ್ಲ. ಆಕೆ ತುಂಬ ವಿವರವಾಗಿ ಹೇಳಿದ್ದೆಲ್ಲ ಸರಿ: ಆದರೆ ಆಕೆ ಹೇಳಿದ್ಯಾವುದೂ ನಿಜವಲ್ಲ. ಅಂಥ ಹೆಸರಿನ ಊರೂ ಇಲ್ಲ. ಇವನು ಆಕೆಯನ್ನು ಭೇಟಿಯಾಗಿಯೂ ಇಲ್ಲ.

ಕಥೆಯುದ್ದಕ್ಕೂ ಕತೆಗಾರ ನೆನಪಿನ ಶಕ್ತಿ ಅಥವಾ ಮರೆವು ತಂದಿಡಬಹುದಾದ ಫಜೀತಿಗಳನ್ನು ವಿವರಿಸುತ್ತ ಹೋಗುತ್ತಾನೆ. ಕೆಲವು ಸಲ ನಾವು ಹಳೆಯದನ್ನು ಮರೆಯುತ್ತೇವೆ. ಕೆಲಸಲ ನೆನಪುಗಳನ್ನು ತಿರುಚುತ್ತೇವೆ. ಕೆಲವು ಒಲ್ಲದ ನೆನಪುಗಳು ವರ್ಷಗಟ್ಟಲೆ ಬೆನ್ನತ್ತುತ್ತವೆ. ಇಷ್ಟಾದರೂ ನಮ್ಮ ಪ್ರತಿನಿತ್ಯದ ಸಹಸ್ರಾರು taskಗಳನ್ನು ಮಾಡಲು ನಾವು ಆಧಾರಪಡುವುದು ನೆನಪಿನ ಶಕ್ತಿಯ ಮೇಲೆಯೇ. ಗೆಳೆಯರೊಂದಿಗೆ ಆಡಿದ ಮಾತು ಮನೆಯವರೊಂದಿಗೆ ಕಳೆದ ರಜೆ ಯಾರನ್ನೋ ಭೇಟಿಯಾಗಬೇಕಾದ ಅವಶ್ಯಕತೆ ಮಾಡಲೇಬೇಕಾದ ಚಿಕ್ಕ ಪುಟ್ಟ ಕೆಲಸ ಮಾತಿಗಾರಂಭಿಸಲು ಅಗತ್ಯವಾಗಿ ಬೇಕಾದುದೊಂದು ಶಬ್ದ ನಮಗಿಷ್ಟವಾಗುವ ವಸ್ತು-ವ್ಯಕ್ತಿಗಳ ಹೆಸರು ಹೊಸ ನೌಕರಿಗೆ ಬೇಕಾದ ಮಾಹಿತಿ ಗಳಿಸಿಕೊಳ್ಳುವಿಕೆ-ಇವೆಲ್ಲಕ್ಕೂ ನೆನಪಿನ ಶಕ್ತಿಯೇ ಮೂಲ. ಸಮಸ್ಯೆಯೆಂದರೆ ನೆನಪಿನ ಶಕ್ತಿ ಕೈಕೊಟ್ಟು ಫಜೀತಿಯಾಗುವ ತನಕ ನಮಗೆ ಎಲ್ಲ ನೆನಪಿದೆ ಬಿಡು ಎಂಬ ಧೋರಣೆಯಲ್ಲೇ ಇರುತ್ತೇವೆ.

ಆದರೆ ಇವತ್ತು `ಮರೆವು` ಎಂಬುದು ಸಣ್ಣ ಸಂಗತಿಯಾಗಿ ಉಳಿದಿಲ್ಲ. ಅದು ಅತಿ ಮುಖ್ಯವಾದ ಆರೋಗ್ಯ ಸಂಬಂಧ ಸಮಸ್ಯೆ ಎಂಬುದನ್ನು ವಿಜ್ಞಾನಿಗಳು ಗುರುತಿಸಿದ್ದಾರೆ. ಕಾರಣ ನೂರಾರಿವೆ. ಮೊದಲಿಗಿಂತ ನಾವೆಲ್ಲ busy ಆಗಿದ್ದೇವೆ. ವಿಪರೀತ ಒತ್ತಡಕ್ಕೆ stressಗೆ ಒಳಗಾಗಿದ್ದೇವೆ. ಎಲ್ಲಿಯವರೆಗೆಂದರೆ ಇವರನ್ನು ಎಲ್ಲಿ ಭೇಟಿಯಾಗಿದ್ದೆ ಅಂತ ಫಜೀತಿಗೆ ಬೀಳುತ್ತೇವೆ. ತುಂಬ ಪರಿಚಿತರ ಮುಖ ನೆನಪಿರುತ್ತೆ. ಸುಡುಗಾಡು ಅವರ ಹೆಸರೇ ಮರೆತು ಹೋಗಿರುತ್ತೆ. ಕನ್ನಡಕ ಕಳೆದುಕೊಳ್ಳುವುದು ದಿನಕ್ಕೆ ಎಷ್ಟು ಸಲವೋ? ಅದರಲ್ಲೂ ಕಂಪ್ಯೂಟರು ಬಂದ ಮೇಲೆ ಅದೆಷ್ಟು ಪಾಸ್‌ವರ್ಡು? ಅವೆಷ್ಟು PINಗಳು? ಫೋನ್ ನಂಬರುಗಳನ್ನು ನೆನಪಿಟ್ಟುಕೊಳ್ಳುವುದಂತೂ ಬ್ರಹ್ಮನಿಗೂ ಸಾಧ್ಯವಿಲ್ಲ.

ನಿಮಗೆ ಆಶ್ಚರ್ಯವಾಗಬಹುದು: ಬೆಂಜಮಿನ್ ವಿಲ್‌ಕೋಮಿರ್‌ಸ್ಕಿ ಎಂಬಾತ Fragments ಎಂಬ ಪುಸ್ತಕ ಬರೆದಾಗ ಜಗತ್ತಿನ ಗಮನ ಸೆಳೆದ. ಆತ ತನ್ನ ಬಾಲ್ಯದ ನೆನಪುಗಳನ್ನು ತುಂಬ vivid ಆಗಿ graphic ಆಗಿ ಹೇಳಿಕೊಂಡಿದ್ದ. ನಾಝಿಗಳು ಯಹೂದಿಗಳನ್ನು ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಕೊಲ್ಲಲು ಕಾನ್ಸನ್‌ಟ್ರೇಷನ್ ಕ್ಯಾಂಪ್‌ಗಳನ್ನಿಟ್ಟರಲ್ಲ? ಅದರಲ್ಲಿ ಬಾಲ್ಯ ಕಳೆದು ಹೇಗೋ ಪಾರಾದವನು ಬೆಂಜಮಿನ್. ತಮಾಷೆಯೆಂದರೆ ಆತ ಯಾವುದೋ ಥೆರಪಿಗೆ ಒಳಗಾದಾಗ ಇದ್ದಕ್ಕಿದ್ದಂತೆ ಇವೆಲ್ಲ ನೆನಪಾಗಿ ಆನಂತರ ಕುಳಿತು ಕ್ರಮಬದ್ಧವಾಗಿ ನೆನಪು ಮಾಡಿಕೊಂಡು ಅವೆಲ್ಲವನ್ನೂ ಬರೆದಿದ್ದ. ಅಲ್ಲಿಯತನಕ ಆತನಿಗೆ ಅವ್ಯಾವ ಭೀಕರ ಸಂಗತಿಗಳೂ ನೆನಪಿರಲಿಲ್ಲ. ಆತನ ಪುಸ್ತಕ ಹೇಗೆ ಸಂಚಲನ ಹುಟ್ಟಿಸಿತೆಂದರೆ ನಾಝಿಗಳ ಹತ್ಯಾಯತ್ನಗಳಿಂದ ಹೇಗೋ ಪಾರಾಗಿ ಬಂದವರು ಒಬ್ಬೊಬ್ಬರಾಗಿ ಪುಂಖಾನುಪುಂಖವಾಗಿ ತಮ್ಮ ನೆನಪುಗಳನ್ನು ಬರೆಯುವ ಒಂದು trend ಸೃಷ್ಟಿಯಾಗಿ ಬೆಂಜಮಿನ್ ನಿಜಕ್ಕೂ ಅಂತಾರಾಷ್ಟ್ರೀಯ ಖ್ಯಾತಿಗೆ ಬಂದುಬಿಟ್ಟ.

ಆದರೆ 1998ರಲ್ಲಿ ಸ್ವೀಡಿಷ್ ಪತ್ರಕರ್ತ ಡೇನಿಯಲ್ ಗಾಂಜ್‌ಫ್ರೀಡ್ ಒಂದು ಲೇಖನ ಪ್ರಕಟಿಸಿದ. ಅಸಲು ಬೆಂಜಮಿನ್ ನಾಝಿಗಳ ಕಾನ್ಸನ್‌ಟ್ರೇಷನ್ ಕ್ಯಾಂಪ್‌ನಲ್ಲಿ ಇರಲೇ ಇಲ್ಲ! ಅವನು ತನ್ನ ಸಾಕು ತಂದೆಯ ಬೆಚ್ಚನೆಯ ಮನೆಯಲ್ಲಿ ಇಡೀ ಬಾಲ್ಯ ಕಳೆದಿದ್ದ. ಶಾಲೆಗೆ ಹೋಗಿದ್ದ. ಆತ ಬರೆದಿದ್ದೆಲ್ಲ ಸುಳ್ಳು. ಹಾಗಾದರೆ ಬೆಂಜಮಿನ್ ಸುಳ್ಳನಾ? Not necessarily. ಇವತ್ತಿಗೂ ಆತ ತನ್ನ ನೆನಪುಗಳೆಲ್ಲ ಸತ್ಯ ಎಂದೇ ನಂಬಿದ್ದಾನೆ.

ಸಮಸ್ಯೆಯೇನೆಂದರೆ ನಾವು ನಮ್ಮ ಕಳೆದುಹೋದ ದಿನಗಳನ್ನು ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ destroy ಮಾಡುವ ತಾಕತ್ತು ಹೊಂದಿದ್ದೇವೆ. We distort our pasts. ಇದಕ್ಕೆಲ್ಲ ಏನು ಕಾರಣ? ನಾವೇಕೆ ತುಂಬ ಪರಿಚಿತರ ಹೆಸರು ಮರೆಯುತ್ತೇವೆ? ಬೀಗದ ಕೈ ಕನ್ನಡಕ ಏಕೆ ಕಳೆದುಕೊಳ್ಳುತ್ತೇವೆ? ಕೆಲವು ಘಟನೆಗಳೇಕೆ ಕುರುಹೂ ಇಲ್ಲದೆ ಮರೆತು ಹೋಗುತ್ತವೆ? ಕೆಲವು ಕಹಿ ನೆನಪುಗಳೇಕೆ ಬೆನ್ನತ್ತಿ ಜೀವ ತಿನ್ನುತ್ತವೆ? ಇದನ್ನೆಲ್ಲ ತಡೆಯುವುದು ಹೇಗೆ? ತಪ್ಪಿಸುವುದು ಹೇಗೆ? ಇವುಗಳನ್ನು memory errors ಅಂತಾರೆ. Memory imperfections ಅಂತಾರೆ. ಅವೆಲ್ಲ ಒಂದೇ ಜಾಡಿನವಲ್ಲ. ಎಲ್ಲವನ್ನೂ ಸೇರಿಸಿ ಏಳು ಗುಂಪುಗಳನ್ನಾಗಿ ವಿಂಗಡಿಸುತ್ತಾನೆ ಡೇನಿಯಲ್ ಸ್ಕ್ಯಾಕ್ಟರ್. ಅವುಗಳನ್ನು `ಜ್ಞಾಪಕ ಶಕ್ತಿಯ ಏಳು ಮಹಾ ಪಾಪಗಳು` ಅನ್ನುತ್ತಾನೆ.

ಮೊದಲನೆಯದು transience. ಕಾಲ ಕ್ರಮೇಣ ಸಂಗತಿಗಳು ಮರೆತು ಹೋಗುವ ಸಹಜ ಪ್ರಕ್ರಿಯೆ. ಎರಡನೆಯದು Absent mindedness. ಮರೆಗುಳಿತನ. ಅದು ನಾವು ಇಡಬೇಕಾದ ಗಮನಕ್ಕೂ-ನೆನಪಿಗೂ ಮಧ್ಯೆ ಸರಣಿ ಕಡಿದುಹೋಗುವುದರ ಪರಿಣಾಮ. ನಮ್ಮ ಗಮನ ಮತ್ತೆಲ್ಲೋ ಇರುವುದರಿಂದ ಹಾಗಾಗುತ್ತೆ. ಮೂರನೆಯದು Blocking. ಒಂದು ಚಿರಪರಿಚಿತ ಹೆಸರು ಬೇಕಾದಾಗ ನೆನಪಿಗೆ ಬಾರದೆ ಮತ್ಯಾವಾಗಲೋ ಹೊಳೆಯುತ್ತದಲ್ಲ? ಹಾಗೆ. ಇವೆಲ್ಲ ಸಹಜವಂತೆ.

ಆದರೆ ಇದಕ್ಕೆ ತದ್ವಿರುದ್ಧವಾಗಿ ನಮ್ಮ ನೆನಪಿನ ಶಕ್ತಿ ನಾಲ್ಕು ಪಾಪಗಳನ್ನು ಮಾಡುತ್ತದೆ.ಬೇಕೆಂತಲೇ ಒಂದು ವಿಷಯವನ್ನು ತಪ್ಪಾಗಿ ನೆನಪಿಟ್ಟುಕೊಳ್ಳುವುದು misattribution. ಎರಡನೆಯದು suggestibility. ಯಾರೋ ಎದುರಿಗೆ ಕೂತು ಅವತ್ತು ಹೀಗಲ್ಲ ಹಾಗಾಯಿತಲ್ಲ ಅಂದಾಗ ಅದಕ್ಕೆ ಹೌದೆಂದುಬಿಡುವುದು. ಮೂರನೆಯದು bias. ನಾವು ಬೇಕಂತಲೇ ಹಳೆಯ ನೆನಪುಗಳನ್ನು ತಿರುಚಿ edit ಮಾಡಿ rewrite ಮಾಡಿ ನೆನಪುಗಳನ್ನಾಗಿ ಇಟ್ಟುಕೊಂಡುಬಿಡುತ್ತೇವೆ. ಇದನ್ನು ನಾವು ಬೇಕೆಂತಲೇ ಮಾಡಬೇಕಿಲ್ಲ. ಇವತ್ತಿನ ಮಟ್ಟಿಗೆ ನಾವು ಯಾವುದನ್ನು ಸರಿ ಅಂದುಕೊಳ್ಳುತ್ತೇವೋ ಅದರ ಬೆಳಕಿನಲ್ಲಿ ಅವತ್ತು ಹಾಗೇ ನಡೆದಿತ್ತು ಅಂತ ಭಾವಿಸಿಬಿಡುತ್ತೇವೆ.

ಕೊನೆಯದು persistence. ನಾವು ಹಟಕ್ಕೆ ಬಿದ್ದು ನಮಗೆ ಬೇಡವಾದ ಘಟನೆಗಳನ್ನೇ ಮತ್ತೆ ಮತ್ತೆ ಎಳೆದು ನೆನಪು ಮಾಡಿಕೊಳ್ಳುತ್ತೇವೆ. ಇದು ಕೂಡ ನಾವು ಬೇಕೆಂತಲೇ ಮಾಡುವುದಿಲ್ಲ. ಜ್ಞಾಪಕವೆಂಬ ಪಾಪಿ ನಮ್ಮಿಂದ ಈ ಏಳೂ ಪಾಪಗಳನ್ನೂ ಮಾಡಿಸಬಲ್ಲದು ಅನ್ನುತ್ತಾನೆ ಡೇನಿಯಲ್ ಸ್ಕ್ಯಾಕ್ಟರ್.

ನಾನು ನೆನಪುಗಳಿಂದ ನರಳುವ-ನಲಿಯುವ ಮನುಷ್ಯ. ಈ ನಡುವೆ ಯಾರೋ ಸಿಗರೇಟು ಸೇದಿದರೆ ನೆನಪಿನ ಶಕ್ತಿ ಕ್ಷೀಣವಾಗುತ್ತದೆ ಅಂದರು. ಮೊಟ್ಟಮೊದಲಬಾರಿಗೆ ನಾನು ಸೇದಿದ ಸಿಗರೇಟಿನ ಹೆಸರು `ಪನಾಮಾ` ಅಂತ ನೆನಪಾಗಲಿಕ್ಕೆ ಒಂದು ಹೊಸ ಸಿಗರೇಟು ಹಚ್ಚಬೇಕಾಯಿತು.

-ರವೀ

Read Archieves of 20 October, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books