Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಅಲ್ಲೆಲ್ಲೋ ಹಿಮ ಹನಿಯುವ ಹೊತ್ತಿಗೆ ಇಲ್ಲಿ ಹಿಮಾಗ್ನಿ ಮುಗಿದಿರುತ್ತದೆ!

ಒಂದು ಚಿಕ್ಕ ವ್ಯಾಯಾಮ.

ಕರೆಕ್ಟಾಗಿ ಇಪ್ಪತ್ನಾಲ್ಕು ನಿಮಿಷಗಳ ನಡಿಗೆ : ದಿನದ ಒಂದೊಂದು ಗಂಟೆಗೂ ಒಂದೊಂದು ನಿಮಿಷದ ಲೆಕ್ಕದಲ್ಲಿ. ಅದನ್ನು ಕಡ್ಡಾಯವಾಗಿ ಮಾಡು ಅಂತ ನನಗೆ ಹೇಳಿದ್ದು ಜರ್ಮನಿಯ ಮಿತ್ರ ದತ್ತ ಹೆಗಡೆ. ಆಮೇಲೆ ಹತ್ತು ನಿಮಿಷ ಸೈಕಲ್ಲು. ಇನ್ನೂ ಹತ್ತು ನಿಮಿಷ ಡಂಬಲ್ಸ್. ಇದೆಲ್ಲ ಆದ ಮೇಲೆ ಒಂದು ಯಂತ್ರದ ಮೇಲೆ ನಿಲ್ಲಬೇಕು. ಅದು ಹತ್ತು ನಿಮಿಷ ಇಡೀ ದೇಹವನ್ನು ಗಡಗಡ ಅಂತ ನಡುಗಿಸುತ್ತದೆ. ಎದುರಿಗಿನ ಟೀವಿಯಲ್ಲಿ ಎಂಥದೋ ಒಂದು ಸಿನೆಮಾದ ಡಿವಿಡಿ ಹಾಕಿಕೊಂಡು ಇದನ್ನೆಲ್ಲ ಮಾಡಿ ಮುಗಿಸುತ್ತೇನೆ. ಅಷ್ಟು ಸಾಕು ದೇಹಕ್ಕೆ. ನಾನ್ಯಾವ ದೇಹ ಧಾರ್ಡ್ಯ ಸ್ಪರ್ಧೆಗೆ ಹೋಗಬೇಕಿದೆ. ಇಷ್ಟಾಗಿ ಒಮ್ಮೊಮ್ಮೆ ನನ್ನ trainer ಬರುತ್ತಾನೆ, ರಘು. ಅವನು ಪೂಜಾ ಗಾಂಧಿ, ಗೋಲ್ಡ್ ಗಣೇಶ, ಶ್ರೀನಗರ ಕಿಟ್ಟಿ ಮುಂತಾದವರಿಗೆಲ್ಲ trainer. ಆದರೆ ಅವನು ಬಂದಾಗ ನಾನಿರುವುದಿಲ್ಲ. ನಾನು ಕಾದಾಗ ಅವನು ಬರುವುದಿಲ್ಲ.

ಇದೆಲ್ಲ ಕೃತಕ. ರೂಮಿನಲ್ಲಿ, ಮಷೀನಿನ ಮೇಲೆ ನಡೆಯುವ, ನಡುಗುವ ಬದಲು ಊರಿಂದ ಕೊಂಚ ದೂರ ಹೋಗಿ ಬಯಲಲ್ಲಿ walk ಮಾಡಿ ಅನ್ನುತ್ತಾರೆ. ಆದರೆ ಊರಿಂದ ಕೊಂಚ ದೂರದ ಬಯಲಿಗೆ ಹೋಗಲಿಕ್ಕೇನೇ ಮುಕ್ಕಾಲು ಗಂಟೆ drive ಮಾಡಬೇಕು. ಬರಲಿಕ್ಕೆ ಮುಕ್ಕಾಲು ಗಂಟೆ. ಅಲ್ಲೊಂದು ಗಂಟೆ ಕಳೆದರೆ ಅಲ್ಲಿಗೆ ದಿನದ ಅರಪಾವು ಕಳೆದೇ ಹೋದಂತೆ. ಅಷ್ಟೇ ಅಲ್ಲ, ಪ್ರತಿನಿತ್ಯ ಹಾಗೆ ಹೊರಕ್ಕೆ ಹೋಗುವ mood ಇರುವುದಿಲ್ಲ. ಏನೋ ಬರೆಯುತ್ತಿರುತ್ತೇನೆ. ಬಿಟ್ಟು ಹೊರಟರೆ ಬರೆಯುವ ಹಗ್ಗ ಹರಿದಂತಾಗಿ ಅದು ಅಲ್ಲಿಗೇ ನೇಣು. ಕಣ್ಣೆದುರಿಗಿನ ಕೋಣೆಯಲ್ಲಿ ಅಷ್ಟಿಷ್ಟು ಕಸರತ್ತು ಮಾಡಿ ಕೊಂಚ ಬೆವೆತು ಹೊರಬಂದರೆ ಅಷ್ಟೇ ಸಾಕೆನಿಸುತ್ತದೆ. ಪ್ರತಿನಿತ್ಯ walk ಹೋಗುವವರಿಗೆ ಒಂದು ಪರ್ಟಿಕ್ಯುಲರ್ ಆದ ಶಿಸ್ತು ಬೇಕು. ನನ್ನಲ್ಲಿ ಯಾವ ತರಹದ ಶಿಸ್ತೂ ಇಲ್ಲ, ಸುಡುಗಾಡು.

‘ಒಂದು ದಿನ walkingಗೆ ಹೋಗದೆ ಇದ್ರೆ ಏನೋ ಹಿಂಸೆಯಾಗುತ್ತೆ‘ ಅಂತ ಕೆಲವರು ಅನ್ನುತ್ತಿರುತ್ತಾರೆ. ಅಂಥ ಹಿಂಸೆ ನನಗೆ ಬರೆಯದೆ ಇದ್ದರೆ ಆಗುತ್ತದೆ. ಕೆಲವು ಸಲ ಊಟಕ್ಕೆ, ತಿಂಡಿಗೆ ಎದ್ದರೆ ಅದೂ ಟೈಮ್ ವೇಸ್ಟು ಅನ್ನಿಸುತ್ತಿರುತ್ತದೆ. ಹಾಗಂತ, ಇಂಥದ್ದನ್ನೇ ಬರೆಯಬೇಕು ಅಂತ ಅಲ್ಲ. ಅರೆಬರೆ ಬರೆದಿಟ್ಟ ಕಾದಂಬರಿಗಳು, ತೀರ ಮುಕ್ಕಾಲು ಮುಗಿದು ಗಕ್ಕನೆ ನಿಂತ ಅನುವಾದಗಳು, ಅರ್ಧ ಓದಿಟ್ಟ ಪುಸ್ತಕಗಳು-ಎಲ್ಲ ಟೇಬಲ್ಲಿನ ಮೇಲೇ ಇವೆ. ಇತ್ತೀಚೆಗೆ ಇಂಥ ಯಾವ ಅವಘಡವೂ ಇಲ್ಲದೆ ಸುರಳೀತ ಸಾಗುತ್ತಿರುವ ಕಾದಂಬರಿಯೆಂದರೆ ‘ಹಿಮಾಗ್ನಿ‘ಯೊಂದೇ. ನಾನು ಬೆಳಗ್ಗೆ 9ರಿಂದ ಬರೆಯಲು ಕುಳಿತರೆ ರಾತ್ರಿ ಒಂಬತ್ತರ ತನಕ ತಲೆಯೆತ್ತದೆ ಬರೆಯುತ್ತೇನೆ. ಆದರೆ ಮಾರಾಯಾ ಕಾದಂಬರಿಯಲ್ಲಿ ಮುಳುಗಿ ಹೋದರೆ ‘ಪತ್ರಿಕೆ‘ಯ ಗತಿಯೇನು? ಇವತ್ತು ಕಾದಂಬರಿ ಪಕ್ಕಕ್ಕೆ ಎತ್ತಿಟ್ಟು ‘ಪತ್ರಿಕೆ‘ಯ ಇದಿಷ್ಟೂ ಅಂಕಣ ಬರೆದಿಟ್ಟು ಹೋಗು ಅಂತ ಒಂದು ಪಟ್ಟಿ ಬರೆದು ಹಟಕ್ಕೆ ಬೀಳುತ್ತಾಳೆ ನಿವೇದಿತಾ. ನಾನಾದರೂ ಗದರಿಕೆಗೆ ಮಣಿದು ಬರೆಯಲು ಕೂತೇನು : ನಮ್ಮ ‘ಜನರಲ್ ಚೆಕ್ ಅಪ್‘ ಅಂಕಣದ ಡಾ.ವೆಂಕಟಸುಬ್ಬರಾಯರು ಮತ್ತು ‘ಜಾನಕಿ‘ ಪರಮ ಮೊಂಡರು. ಎದುರಿಗೆ ನಿಂತು ಹರಿದ ಮೆಟ್ಟು ಹೊಲಿಸಿಕೊಂಡು ಬರುತ್ತೇವಲ್ಲ? ಹಾಗೆ ಕುತ್ತಿಗೆಯ ಮೇಲೆ ಕುಳಿತು ಬರೆಸಿ ತರಬೇಕು. ಅವರಿಗಿಂತ ನಾನು ಬೆಟರು ಎಂಬ ಸಮಾಧಾನ. ನಿವೇದಿತಾಳ ಹಟದಿಂದಾಗಿ ‘ಪತ್ರಿಕೆ‘ ಆಚೆಯೀಚೆಯಾಗದಂತೆ ಹೊರ ಬರುತ್ತಿದೆ. ಕೆಲಬಾರಿ ಹುಡುಗರು ಸರಹೊತ್ತಿನ ತನಕ ಕೆಲಸ ಮಾಡುತ್ತಾರಾದರೂ, ಮೊದಲಿನಂತೆ ಅಹೋರಾತ್ರಿ ನಿದ್ದೆಗೆಡುವ ಹಿಂಸೆಯಿಲ್ಲ. ಅಂದ್ಹಾಗೆ, ‘ಹಿಮಾಗ್ನಿ‘ ಕಾದಂಬರಿ ನವೆಂಬರ್ 15ರ ಹೊತ್ತಿಗೆ ಬರೆದು ಮುಗಿಸುವ ಭರವಸೆ ಮೂಡಿದೆ. ಆ ಹೊತ್ತಿಗೆ ಯುರೋಪ್ ನ ತುದಿಯಲ್ಲೆಲ್ಲೋ ಹಿಮ ಹನಿಯುವ ನಿರೀಕ್ಷೆ!

- ಬೆಳಗೆರೆ

Read Archieves of 13 October, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books