Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಗೆಳತಿ ಗರ್ಭವತಿಯಾದಾಗ ಅಂಥ ಸುಭಾಷ್ ಚಂದ್ರಬೋಸರೇ ಹಿಂಜರಿದಿದ್ದರು

"ಶ್ರದ್ಧಾ ಮಾತಾ!
ಅದು ಆಕೆಯ ಗುರುತು ಜಗತ್ತಿಗೆ ಸಿಗಬಾರದು ಎಂಬ ಕಾರಣಕ್ಕೆ ನನ್ನ ಮೊದಲ ಪುಸ್ತಕದಲ್ಲಿ ಬರೆದ ಹೆಸರು. ನೆಹರೂ ಜೊತೆಗಿನ ಸಂಬಂಧ ಮುಗಿದು, ಆಕೆ ಗರ್ಭವತಿಯಾಗಿ, ಮಗುವನ್ನು ಹೆತ್ತು ಆ ನಂತರ ತನ್ನ ಮೊದಲಿನ ಹೆಸರಿನೊಂದಿಗೆ ಒಬ್ಬ ಮಾಮೂಲಿ ಹೆಂಗಸಿನಂತೆ ಜೈಪುರದಲ್ಲಿ ಬದುಕುತ್ತಿದ್ದಾಳೆ ಅಂತ ಭಾವಿಸಿದ್ದೆ. ಆದರೆ ಆಕೆ ಶ್ರದ್ಧಾ ಮಾತಾ ಎಂಬ ಹೆಸರಿನಲ್ಲೇ ಬದುಕುತ್ತಿದ್ದಾಳೆ ಮತ್ತು ಜೈಪುರದಲ್ಲೇ ಬದುಕುತ್ತಿದ್ದಾಳೆ. ಮೊದಲೇ ಗೊತ್ತಾಗಿದ್ದಿದ್ದರೆ ಶ್ರದ್ಧಾ ಮಾತಾ ಎಂಬ assumed ಹೆಸರನ್ನು ನಾನು ಮುಚ್ಚಿಟ್ಟು ಬೇರೆಯದೇ ಹೆಸರು ಬರೆಯುತ್ತಿದೆ. I am sorry`` ಎಂದು ತನ್ನ ಎರಡನೆಯ ಪುಸ್ತಕ My Days With Nehruದ ಆರಂಭದಲ್ಲೇ ಬರೆಯುತ್ತಾನೆ ಎಂ.ಓ.ಮಥಾಯ್.

ನನ್ನ ಪುಸ್ತಕ ಓದಿದ ಮೇಲೆ `ಇಂಡಿಯಾ ಟುಡೆ` ಪಾಕ್ಷಿಕ ಪತ್ರಿಕೆ (ಈಗ ವಾರಪತ್ರಿಕೆ)ಯ ಸಂಪಾದಕರು ತಮ್ಮ ವರದಿಗಾರರನ್ನು ಜೈಪುರಕ್ಕೆ ಕಳಿಸುತ್ತಾರೆ. ದೊಡ್ಡ ಗಾತ್ರದ ಎರಡೆಳೆ ರುದ್ರಾಕ್ಷಿ ಸರ ಹಾಕಿಕೊಂಡು, ಕಾವಿ ಸೀರೆ ಧರಿಸಿ ಕುಳಿತ ಶ್ರದ್ಧಾ ಮಾತಾಳನ್ನು ಸಂದರ್ಶನ ಮಾಡಿಸುತ್ತಾರೆ. ಕ್ಷಮಿಸಿ, ನನಗೆ ರುದ್ರಾಕ್ಷಿ-ಕಾವಿ ಎರಡನ್ನೂ ಅನುಮಾನದಿಂದ ನೋಡುವ ಚಟವಿದೆ. ನಾನೇನು ಮಾಡಲಿ? ನನ್ನ ಅನುಭವಗಳೇ ಅಂಥವು. ಆಕೆಯ ಸಂದರ್ಶನ 1978 ಫೆಬ್ರುವರಿಯ 16ನೇ ತಾರೀಕಿನ `ಇಂಡಿಯಾ ಟುಡೇ` ಸಂಚಿಕೆಯಲ್ಲಿ ಪ್ರಕಟವಾಗಿದೆ. ಜಾಣ ಹೆಂಗಸು: ಪತ್ರಕರ್ತರನ್ನು ಸರಿಯಾಗಿಯೇ ದಾರಿ ತಪ್ಪಿಸಿ ಹಳ್ಳ ಹಿಡಿಸಿದ್ದಾಳೆ.
ಒಂದು ಮಾತು ನಿಜ. ಶ್ರದ್ಧಾ ಮಾತಾ ಎಂಬ ಹೆಂಗಸು, ತಾನಿನ್ನೂ ಹತ್ತೊಂಬತ್ತರ ಯುವತಿಯಾಗಿದ್ದಾಗಲೇ 1932ನೆಯ ಇಸವಿಯಲ್ಲೇ ತನ್ನ ಪೂಜಾಗೃಹದಲ್ಲಿ ನೆಹರೂ ಅವರ ಫೊಟೋ ಹಾಕಿಕೊಂಡು ಅವರನ್ನು `ದೇವರೆ`ಂದು ಭಾವಿಸಿ ಪೂಜಿಸುತ್ತಿದ್ದೆ ಅಂತ ಹೇಳಿಕೊಳ್ಳುತ್ತಾಳೆ. ನೆಹರೂ ಅನೇಕ ಸಲ ನನ್ನನ್ನು ಭಾರತದ ಉಪಾಧ್ಯಕ್ಷಳಾಗು ಅಂತ ಕೇಳಿದ್ದರು. ಆದರೆ ಪಾರ್ಲಿಮೆಂಟ್‌ನಲ್ಲಿ ಕೂಡುವ ಇಚ್ಛೆ ನನಗಿಲ್ಲ. ನಾನು ಅವರ ವಿನಂತಿಯನ್ನು ಧಿಕ್ಕರಿಸಿದ್ದೆ ಅಂತ ಹೇಳಿಕೊಳ್ಳುತ್ತಾಳೆ.
`ಆದರೆ ನನಗೆ ಗೊತ್ತಿದ್ದಂತೆ ನೆಹರೂಗೆ ಯಾವತ್ತೂ ತಾತ್ಕಾಲಿಕವಾದ ಹುಚ್ಚು ಹಿಡಿದಿರಲಿಲ್ಲ. ಅಷ್ಟು ಕಿರಿಯ ವಯಸ್ಸಿನ ಹೆಂಗಸಿಗೆ ಉಪ ರಾಷ್ಟ್ರಪತಿ ಹುದ್ದೆ ಅಲಂಕರಿಸುವಂತೆ ಕೇಳಿಕೊಳ್ಳುವ ಬಾಲಿಶತನ ಅವರಿಗಿರಲಿಲ್ಲ. ಆಕೆ ಹೇಳುವ ಪ್ರಕಾರ ಪ್ರಕಟವಾದ ತನ್ನ ಫೊಟೋಗಳನ್ನು ನೋಡಿದ ನೆಹರೂ ಈಕೆ ಯಾರೆಂದು ಡಾ.ಶಾಮಪ್ರಸಾದ್ ಮುಖರ್ಜಿಯವರನ್ನು ಕೇಳಿದರು. ಆ ಹೊತ್ತಿಗೆ ಶಾಮಪ್ರಸಾದ ಮುಖರ್ಜಿ ಶ್ರದ್ಧಾ ಮಾತಾಳ ಶಿಷ್ಯರಾಗಿದ್ದರು. ಹೀಗೇಕೆ ಸಾವಿರಾರು ಜನ ಆಕೆಯ ಪ್ರವಚನ ಕೇಳಲು ಹೋಗುತ್ತಾರೆ ಎಂದು ಆಶ್ಚರ್ಯಗೊಂಡ ನೆಹರೂ, ಆಕೆಯನ್ನು ದಿಲ್ಲಿಗೆ ಕರೆಯಿಸುವಂತೆ ಮುಖರ್ಜಿಗೆ ಹೇಳಿದರು. ಇದು ಶ್ರದ್ಧಾ ಮಾತಾ ಹೇಳುವ ಕತೆ. ಆಕೆಗೆ ಗೊತ್ತಿರಲಿಕ್ಕಿಲ್ಲ; ನೆಹರೂ ಮತ್ತು ಶ್ಯಾಮಪ್ರಸಾದ ಮುಖರ್ಜಿ ಮಧ್ಯೆ ಮೊದಲಿಂದಲೂ ಸೌಹಾರ್ದಯುತ ಸಂಬಂಧ ಇರಲಿಲ್ಲ. ಎಲ್ಲ ಬಿಟ್ಟು ತೀರ ಇಂಥ ವಿಷಯಗಳಲ್ಲಿ ನೆಹರೂ ಅವರು ಮುಖರ್ಜಿಯವರನ್ನು ನಂಬಿರಲು ಸಾಧ್ಯವೇ ಇಲ್ಲ.

ಇಷ್ಟಕ್ಕೂ ಆಗಿದ್ದೇನೆಂದರೆ, 1948ರಲ್ಲಿ ಚಿಕ್ಕ ವಯಸ್ಸಿನ ಶ್ರದ್ಧಾ ಮಾತಾ ಎಂಬ ಸನ್ಯಾಸಿನಿ ಬನಾರಸ್‌ ನಿಂದ ದಿಲ್ಲಿಗೆ ಬಂದಳು. ಆಕೆಗೆ ಸಂಸ್ಕೃತ ಗೊತ್ತಿತ್ತು. ವೇದ ಪುರಾಣ ಓದಿಕೊಂಡಿದ್ದಳು. ಶ್ರೀಮಂತರು, ಖ್ಯಾತ ನಾಮರು, ಕೆಲವು ಸಂಸದರು ಕೂಡ, ಆಕೆಯ ಪ್ರವಚನ ಕೇಳಲು ಹೋಗುತ್ತಿದ್ದರು. ಒಮ್ಮೆ ಆಕೆ ಬರೆದ ಪತ್ರವನ್ನು ತಂದ ನೆಹರೂ ಅವರ ಹಳೆಯ ನೌಕರ ಎಸ್.ಡಿ.ಉಪಾಧ್ಯಾಯ ಅವರು ಶ್ರದ್ಧಾ ಮಾತಾ ಬಗ್ಗೆ ಬಹಳ ಹೊಗಳಿ ಮಾತಾಡಿದರು. ಆನಂತರ ಪ್ರಧಾನಿ ನಿವಾಸದಲ್ಲೇ ನೆಹರೂ ಆಕೆಗೊಂದು ಸಂದರ್ಶನ ನೀಡಿದರು. ಆಮೇಲಾಮೇಲೆ ಅವರ ಭೇಟಿಗಳು ಹೆಚ್ಚಾದವು. ತಮ್ಮ ಇಡೀ ದಿನದ ಕೆಲಸ ಮುಗಿಸಿದ ಮೇಲೆ, ರಾತ್ರಿಗಳಲ್ಲಿ ಆಕೆಯನ್ನು ಭೇಟಿಯಾಗುತ್ತಿದ್ದರು. ಒಮ್ಮೆ ನೆಹರೂ ಲಖನೌಗೆ ಹೋದಾಗ ಅಲ್ಲಿಗೆ ಬಂದ ಶ್ರದ್ಧಾ ಮಾತಾ ಅದೇ ಎಸ್.ಡಿ.ಉಪಾಧ್ಯಾಯರ ಮೂಲಕ ಒಂದು ಪತ್ರ ಕಳಿಸಿದಳು. ಅದಕ್ಕೆ ನೆಹರೂ ಉತ್ತರಿಸಿದರು. ಶ್ರದ್ಧಾ ಮಾತಾ ಅವತ್ತು ಮಧ್ಯರಾತ್ರಿ ಬಂದು ನೆಹರೂರನ್ನು ಭೇಟಿಯಾದಳು. ಇದು ಗೊತ್ತಾದಾಗ ಕೃಷ್ಣ ಸುಂದರಿ ಪದ್ಮಜಾ ನಾಯ್ಡು ಹುಚ್ಚಿಯಂತೆ ಕೂಗಾಡಿದ್ದಳು.

ಅವರಿಬ್ಬರ ಮಧ್ಯೆ ಕೊಂಡಿಯಂತಿದ್ದ ಎಸ್.ಡಿ.ಉಪಾಧ್ಯಾಯನ ನಡವಳಿಕೆ ನನಗೆ ಸರಿಕಾಣಲಿಲ್ಲ. ಹಾಗಂತ ನೇರವಾಗಿ ನಾನೇ ಆತನಿಗೆ ಹೇಳಿದೆ. ಶ್ರದ್ಧಾ ಮಾತಾ ಬಗ್ಗೆ ನನಗೆ ನನ್ನದೇ ಆದ ಅನುಮಾನಗಳಿವೆ ಅಂದೆ. ಆದರೆ ಉಪಾಧ್ಯಾಯ ಶುದ್ಧ ಮೂರ್ಖ: ಶ್ರದ್ಧಾ ಮಾತಾ ಸಾಕ್ಷಾತ್ತು ದೇವತೆ ಅಂತ ವಾದಿಸಿದ. ಮುಂದೆ 1949ರಲ್ಲಿ ಶ್ರದ್ಧಾ ಮಾತಾ ಇದ್ದಕ್ಕಿದ್ದಂತೆ ನಾಪತ್ತೆಯಾದಳು. ಆನಂತರ ಕೇಳಿ ಬಂದದ್ದೇ ಅವಳಿಗೆ ಬೆಂಗಳೂರಿನಲ್ಲಿ ಗಂಡುಮಗು ಹುಟ್ಟಿತೆಂಬ ಸುದ್ದಿ.

ಡೆಕ್ಕನ್ ಹೆರಲ್ಡ್‌ನ ವರದಿಗಾರ ಪಿ.ಫ್ರೆಡರಿಕ್ ಇಗ್ನೇಷಿಯಸ್ ಅವರ ವರದಿಯ ಪ್ರಕಾರ ಪ್ರಕಾಂಡ ಹಿಂದಿ ಪಂಡಿತ ಹಾಗೂ ಇಂಗ್ಲಿಷ್ ಪ್ರೊಫೆಸರ್ ಡಾ.ಕರಮಚಂದ್ ವಾಡೆ ಅವರ ಕೈಗೆ ನೆಹರೂ ಅವರು ಶ್ರದ್ಧಾ ಮಾತಾಗೆ ಬರೆದ ಪ್ರೇಮಪತ್ರಗಳ ಕಂತೆಯೊಂದು ಸಿಕ್ಕಿತು. ಅದು ಅವರಿಗೆ ಸಿಕ್ಕಿದ್ದೂ ಒಂದು ಕಥೆಯೇ. ಕಾಕ್ಸ್ ಟೌನ್‌ನ ವೀಲರ್ ರೋಡ್‌ನಲ್ಲಿ ಟಿಂಬರ್ ವ್ಯಾಪಾರಿಯಾಗಿದ್ದ ಎಜೆಕಿಲ್ ಎಂಬಾತ ಕರಮಚಂದ್ ವಾಡೆ ಅವರನ್ನು ಪರಿಚಯ ಮಾಡಿಕೊಂಡ. ತನ್ನಲ್ಲಿರುವ ಕೆಲವು ಹಿಂದಿ ಪತ್ರಗಳನ್ನು ತರ್ಜುಮೆ ಮಾಡಿಕೊಡುವಂತೆ ಹಿಂದಿ ಪಂಡಿತರಾದ ಡಾ.ವಾಡೆ ಅವರನ್ನು ವಿನಂತಿಸಿದ. ಅದರಲ್ಲಿ ಒಂದು ಪತ್ರ 1948 ಮಾರ್ಚ್ 2ರಂದು ಲಖನೌದ ಗವರ್ನಮೆಂಟ್ ಹೌಸ್‌ನಿಂದ ಪೋಸ್ಟ್ ಆಗಿದ್ದುದನ್ನು ಗಮನಿಸಿದ ಕರಮಚಂದ್ ವಾಡೆ ಅವರಿಗೆ ಇದು ಜವಾಹರಲಾಲ್ ನೆಹರೂ ಅವರೇ ಬರೆದದ್ದು ಎಂಬುದು ಖಚಿತವಾಯಿತು. ತಮ್ಮ ಪತ್ನಿ ಹಿಂದಿಯಲ್ಲಿ ಇನ್ನೂ ಪಂಡಿತಳು ಅಂದ ಡಾ.ವಾಡೆ, ಪತ್ರಗಳನ್ನು ಮನೆಯೊಳಕ್ಕೆ ಒಯ್ದು ಹೆಂಡತಿಯೊಂದಿಗೆ ಚರ್ಚಿಸಿದರು. ನಂತರ ಆ ಪತ್ರಗಳನ್ನು ತಮ್ಮಲ್ಲೇ ಇರಿಸಿಕೊಂಡು ಪಂಡಿತ್ ನೆಹರೂ ಅವರಿಗೆ ಕಳಿಸಲು ನಿರ್ಧರಿಸಿದರು. ಅಷ್ಟರಲ್ಲಿ ಎಜೆಕಿಲ್ ಅವರು ಶ್ರದ್ಧಾಮಾತಾಗೆ ಬರೆದ ಪತ್ರವೊಂದನ್ನು ತೋರಿಸಿದರು. ಅದನ್ನು ಶ್ರದ್ಧಾಮಾತಾಜೀ, C/o ಅಶುತೋಶ್ ಲಾಹಿರಿ, G.S.H.M.S., ಹೊಸದಿಲ್ಲಿ ಎಂಬ ವಿಳಾಸಕ್ಕೆ ಬರೆದಿದ್ದು, ಅದು ಅಂಚೆ ಇಲಾಖೆಯವರಿಂದ ವಾಪಸು ಎಜೆಕಿಲ್ ಅವರಿಗೇ ಬಂದಿತ್ತು.

ಎಜೆಕಿಲ್ ಅವರ ಪತ್ನಿ ಬೆಂಗಳೂರಿನ ಕಂಟೋನ್ಮೆಂಟ್ ರೇಲ್ವೆ ಸ್ಟೇಷನ್ ಬಳಿಯ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಮೇ 15, 1949ರಂದು ಬಂದಿಳಿದ ತುಂಬು ಗರ್ಭಿಣಿ ತನ್ನ ಹೆಸರು, ವಿಳಾಸ ಮುಂತಾಗಿ ಏನನ್ನೂ ಹೇಳಲು ಸಿದ್ಧಳಿರಲಿಲ್ಲ. ಆಕೆಯ ಪರಿಸ್ಥಿತಿ ನೋಡಿ ಅನುಕಂಪದಿಂದ ಎಜೆಕಿಲ್ ಅವರ ಪತ್ನಿ ಡಾ.ಮಿಸೆಸ್ ಎಜೆಕಿಲ್ ತಮ್ಮ ಮನೆಗೆ ಕರೆದುಕೊಂಡು ಹೋಗಿ ಕೆಲಕಾಲ ಇಟ್ಟುಕೊಂಡು ರೋಮನ್ ಕೆಥೋಲಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ಮೇ 30ರಂದು ಟ್ಯಾಕ್ಸಿಯಲ್ಲಿ ಆಕೆಯನ್ನು ಕರೆದುಕೊಂಡು ಹೋದ ಡಾ.ಮಿಸೆಸ್ ಎಜೆಕಿಲ್ ಅಂದೇ ರಾತ್ರಿ ಆಕೆಯ ಹೆರಿಗೆ ಮಾಡಿಸಿದರು. ಆದರೆ ಹುಟ್ಟಿದ್ದು ಗರ್ಭದಲ್ಲೇ ಮರಣಿಸಿದ್ದ ಗಂಡು ಮಗು. ಮುಂದೆ ಜೂನ್ 9ರಂದು ಆಕೆ ಬಿಡುಗಡೆಯಾದಾಗ ಆಕೆಯನ್ನು ಮತ್ತೆ ಮನೆಗೆ ಕರೆದೊಯ್ದು ಎಜೆಕಿಲ್ ದಂಪತಿಗಳು ಉಪಚರಿಸಿದರು. ಆಕೆ ದಂಪತಿಗಳಿಂದಲೇ ಸಾಲ ಪಡೆದು ಜೂನ್ 19ರಂದು ದಿಲ್ಲಿಗೆ ವಿಮಾನದಲ್ಲಿ ಪ್ರಯಾಣಿಸಿದಳು. ಹೋಗುವ ಮುನ್ನ ಪತ್ರಗಳ ಒಂದು ಕಂತೆಯನ್ನು ಎಜೆಕಿಲ್ ಅವರ ಮನೆಯಲ್ಲೇ ಬಿಟ್ಟು ಹೋದಳು.

ಆದರೆ ಇಸಿದುಕೊಂಡ ಆರು ನೂರು ರುಪಾಯಿ ಸಾಲವನ್ನು ಎಜೆಕಿಲ್ ದಂಪತಿಗಳಿಗೆ ತಾನು ದಿಲ್ಲಿಗೆ ಹೋದ ನಂತರ ಹಿಂತಿರುಗಿಸುವುದಾಗಿ ಆಕೆ ತಿಳಿಸಿದ್ದಳು. ಅಷ್ಟು ಹಣವನ್ನು ಎಜೆಕಿಲ್‌ರ ಹೆಂಡತಿ ತನ್ನದೊಂದು ಒಡವೆ ಅಡವಿಟ್ಟು ತಂದುಕೊಟ್ಟಿದ್ದಳು. ಜೊತೆಗೆ ಬಾಣಂತಿತನದ ಖರ್ಚು ಭರಿಸಿದ್ದಳು. ರೇಷನ್ನಿಗೆ, ಧೋಬಿಗೆ, ಮನೆ ಬಾಡಿಗೆಗೆ- ಯಾವುದಕ್ಕೂ ಆಕೆ ಹಣಕೊಟ್ಟಿರಲಿಲ್ಲ. ಮೂರು ಮಕ್ಕಳ ತಾಯಿ ಡಾ.ಎಜೆಕಿಲ್ ತನ್ನ ಸಮಸ್ಯೆ ನಿವೇದಿಸಿಕೊಂಡು ಪತ್ರ ಬರೆದಾಕೆ ಕೊನೆಯಲ್ಲಿ ಕೆಲವು ಇಂಟರೆಸ್ಟಿಂಗ್ ಆದ ಸಾಲುಗಳನ್ನು ಬರೆಯುತ್ತಾಳೆ. `ಮಾತಾಜೀ, ನೀವು ಕಳಿಸುವ ಹಣದ ಕಟ್ಟ ಕಡೆಯ ಆಣೆನೂ ಲೆಕ್ಕ ಕೊಡುತ್ತೇನೆ. ನನ್ನ ಪ್ರಾಣ ಹೋದರೂ ಸರಿಯೇ, ನಿಮ್ಮ ರಹಸ್ಯಗಳನ್ನು ನಾನು ಬಿಟ್ಟು ಕೊಡುವುದಿಲ್ಲ. ನಿಮ್ಮ ಮೌನ, ನಿರುತ್ತರ ಕಂಡು ಆಶ್ಚರ್ಯವಾಗುತ್ತದೆ. ನೀವು ಇಲ್ಲಿಂದ ತೆರಳಿದ ಮೇಲೆ ನಿಮಗೆ ಅನೇಕ ಪತ್ರಗಳು ಬಂದವು. ಅವೆಲ್ಲವೂ ನನ್ನಲ್ಲಿವೆ" ಎಂದು ಬರೆಯುತ್ತಾಳೆ. ಆದರೆ ಆ ಪತ್ರ ವಾಪಸು ಬರುತ್ತದೆ.

ಅಸಲು ಈ ಶ್ರದ್ಧಾಮಾತಾ ಯಾರು? ಎಲ್ಲಿರುತ್ತಾಳೆ? ಈಕೆಗೆ ಪತ್ರ ಬರೆಯುತ್ತಿದ್ದವರು ಯಾರು? ತಮ್ಮ ಮನೆಯಲ್ಲಿದ್ದಾಗ ಕೆಲವು ಪತ್ರಗಳನ್ನು ಈಕೆ ಕಂತೆಯಿಂದ ಮತ್ತೆ ಮತ್ತೆ ತೆಗೆದು ಓದುತ್ತಿದ್ದುದೇಕೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟ ಎಜೆಕಲ್ ಭೇಟಿಯಾಗುವುದೇ ಡಾ.ಕರಮಚಂದ್ ವಾಡೆಯವರನ್ನ. ನೆಹರೂ ಬಗ್ಗೆ ಅಪಾರ ಗೌರವವಿದ್ದ ಡಾ.ಕರಮಚಂದ್ ವಾಡೆ, ಎಜೆಕಿಲ್ ದಂಪತಿಗಳಿಗೆ ಆರು ನೂರು ರುಪಾಯಿ ಕೊಟ್ಟು ಅವೆಲ್ಲ ಪತ್ರಗಳನ್ನೂ ಪಡೆದುಕೊಳ್ಳುತ್ತಾರೆ. ಆನಂತರ ಅವರು ಕುಂಭಕೋಣಂನಲ್ಲಿ ತಮಗೆ ಪರಿಚಯವಾಗಿದ್ದ ಪ್ರಧಾನಮಂತ್ರಿಯ ಪ್ರಿನ್ಸಿಪಲ್ ಪ್ರೈವೇಟ್ ಸೆಕ್ರೆಟರಿ ಎ.ವಿಠ್ಠಲ ಪೈ ಅವರಿಗೆ ಪತ್ರ ಬರೆದು ಶ್ರದ್ಧಾ ಮಾತಾ ಬಿಟ್ಟು ಹೋದ ಕಂತೆ ತಮ್ಮಲ್ಲಿರುವ ವಿಷಯ ತಿಳಿಸುತ್ತಾರೆ.

`ನಿಜ, ನೀನಂದಂತೆ ಪತ್ರಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುವ ಅವಕಾಶವಿದೆ. ಆದರೆ ಅವುಗಳನ್ನು ತಮ್ಮ ಹೆಸರು ಕೆಡಿಸಲು ಯಾರಾದರೂ ಬಳಸಿಕೊಳ್ಳಬಹುದು ಎಂಬ ಆತಂಕ ಸ್ವತಃ ನೆಹರೂ ಅವರಿಗೇ ಇಲ್ಲ. ಅದೇನೇ ಇರಲಿ, ನೀವು ಕಳಿಸಲಿರುವ ಪತ್ರಗಳನ್ನು ತೆಗೆದುಕೊಂಡು ದಿಲ್ಲಿಯ ತನಕ ಬರುವ ಶ್ರಮ ಬೇಡ. ರಿಜಿಸ್ಟರ್ಡ್ ಅಂಚೆಯ ಮೂಲಕ ಕಳಿಸಿದರೆ ಸಾಕು" ಅಂತಲೂ ಬರೆಯುತ್ತಾರೆ. ಇಷ್ಟಾದ ಮೇಲೂ ಡಾ.ಕರಮಚಂದ್ ಆ ಪತ್ರಗಳು ನೆಹರೂಗೆ ಹಾನಿಯುಂಟು ಮಾಡಬಹುದು ಎಂದು ಅನುಮಾನ ವ್ಯಕ್ತಪಡಿಸಿ, ಒಂದು ಪತ್ರದಲ್ಲಿ ನೆಹರೂ ಅವರು ಆಕೆಯನ್ನು ರಾತ್ರಿ 10ರ ನಂತರ ಬಂದು ಕಾಣುವಂತೆ ಬರೆದಿದ್ದಾರೆ ಎಂದು ನಿಖರವಾಗಿ ತಿಳಿಸುತ್ತಾರೆ. ಅದಕ್ಕೆ ವಿಠ್ಠಲ ಪೈ ಉತ್ತರಿಸುತ್ತಾ, `ನೆಹರೂಜಿ ಯಾವ ವೇಗದಲ್ಲಿ ಮತ್ತು ಎಷ್ಟು ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂಬ ಕಲ್ಪನೆ ನಿಮಗಿಲ್ಲ. ಅವರು ರಾತ್ರಿ ಎರಡರ ತನಕವೂ ಕೆಲಸ ಮಾಡುತ್ತಾರೆ. ಹೀಗಾಗಿ ರಾತ್ರಿ 10ರ ನಂತರ ಯಾರನ್ನಾದರೂ ಬರಹೇಳಿದರೆ ಅದರಲ್ಲಿ ಅನುಮಾನ ಪಡುವಂತಹುದೇನಿದೆ? ನೀವು ಲಖನೌ ಗೌರಮೆಂಟ್ ಹೌಸ್‌ನಿಂದ ಪತ್ರ ಬಂದಿರುವುದಾಗಿ ಹೇಳಿದ್ದೀರಲ್ಲ, ಅವತ್ತು ಸರೋಜಿನಿ ನಾಯ್ಡು ಅವರು ನಿಧನರಾದ ದಿನ" ಎಂಬುದನ್ನು ನಿಮ್ಮ ಗಮನಕ್ಕೆ ತರುತ್ತಿದ್ದೇನೆ ಎಂದು ಬರೆಯುತ್ತಾರೆ. `ನೀವು ಉಲ್ಲೇಖಿಸಿರುವ ಉಪಾಧ್ಯಾಯ ಎಂಬುವವರು ನಮ್ಮ ಸೆಕ್ರೆಟರಿ ಎಂಬುದು ನಿಜ. ಶ್ರದ್ಧಾ ಮಾತಾಳನ್ನು ನೆಹರೂ ಅವರು ಒಂದೆರಡು ಬಾರಿ ಉಪಾಧ್ಯಾಯ ಅವರ ಮೂಲಕ ಭೇಟಿಯಾಗಿರಲೂಬಹುದು. ಇದರಿಂದ ನೆಹರೂ ಅವರ ಹೆಸರು ಕೆಡುತ್ತದೆ ಎಂಬುದಕ್ಕಿಂತ ಆಕೆಯ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ ಎಂಬುದೇ ನಮ್ಮ ಚಿಂತೆ " ಅಂತಲೂ ಬರೆಯುತ್ತಾರೆ ವಿಠ್ಠಲ ಪೈ.

ಇದಾದ ಮೇಲೆ ಡಾ.ಕರಮಚಂದ್ ಖುದ್ದಾಗಿ ಪತ್ರಗಳನ್ನು ತೆಗೆದುಕೊಂಡು ಸೆಪ್ಟಂಬರ್ 11ರಂದು ದಿಲ್ಲಿಗೆ ಹೋಗುತ್ತಾರೆ. ಮರುದಿನ ಆ ಕಂತೆಯನ್ನು ನೆಹರೂಗೆ ಒಪ್ಪಿಸಿದಾಗ ಒಂದೇ ಒಂದು ಮಾತನಾಡದ ನೆಹರೂ ಸುಮ್ಮನೆ ನಸು ನಕ್ಕು, ಥ್ಯಾಂಕ್ಸ್ ಹೇಳಿ, ಆ ಪತ್ರಗಳ ಪೈಕಿ ಒಂದನ್ನು ಝರಾಕ್ಸ್ ಮಾಡಿ ಕರಮಚಂದ್‌ಗೆ ಕೊಟ್ಟು, ಜೊತೆಗೆ ತಮ್ಮ `ಡಿಸ್ಕವರಿ ಆಫ್ ಇಂಡಿಯಾ`ದ ಪ್ರತಿಯನ್ನೂ ಕೊಡುತ್ತಾರೆ.


ಹಾಗಂತ ಡೆಕ್ಕನ್ ಹೆರಲ್ಡ್‌ನಲ್ಲಿ ವರದಿಯಾಗಿದೆ. ಇಲ್ಲಿ ನನಗೆ ಕೆಲವು ಅಚ್ಚರಿಗಳಿವೆ. ಸ್ವತಃ ಹಿಂದಿ ಪಂಡಿತರಾದ ಡಾ.ಕರಮಚಂದ್ ವಾಡೆ, ನೆಹರೂ ಬರೆದ ಪತ್ರಗಳನ್ನು ಓದಲು ತಮ್ಮ ಹೆಂಡತಿಯ ಸಹಾಯವನ್ನೇಕೆ ಪಡೆದರೋ? ನಾನು ಡಾ.ಕರಮಚಂದ್ ವಾಡೆ ಎಂಬ ಹೆಸರನ್ನು ಜೀವನದಲ್ಲಿ ಮೊದಲು ಓದಿದ್ದೇ 15 ಫೆಬ್ರುವರಿ, 1978ರ ಡೆಕ್ಕನ್ ಹೆರಲ್ಡ್‌ನಲ್ಲಿ. ಈ ಹೆಸರನ್ನು ಒಮ್ಮೆಯೂ ನೆಹರೂ ನನ್ನೊಂದಿಗೆ ಪ್ರಸ್ತಾಪಿಸಿರಲಿಲ್ಲ. ಒಬ್ಬ ವ್ಯಕ್ತಿ ದಿಲ್ಲಿಗೆ ಬಂದದ್ದು ನಿಜ. ಆದರೆ ನೆಹರೂ ಅವರನ್ನು ಅಧಿಕೃತವಾಗಿ ಭೇಟಿಯಾಗಲಿಲ್ಲ. ವಿಠ್ಠಲ ಪೈಗಳು ಆತನನ್ನು ನೆಹರೂ ಬಳಿಗೆ ಒಯ್ದರೆಂಬುದು ಹೌದು. ಅದಕ್ಕಿಂತ ಮುಂಚೆ ಆ ಅನಾಮಧೇಯ ವ್ಯಕ್ತಿ ಎರಡು ಸಲ ನನ್ನನ್ನು ಭೇಟಿಯಾಗಿದ್ದ. ಬುದ್ಧಿವಂತನಂತೆ, ಸಭ್ಯನಂತೆ ಕಂಡ. ತನಗೆ ಪ್ರಧಾನಿ ಕಾರ್ಯಾಲಯದಲ್ಲಿ ಅಥವಾ ಯಾವುದಾದರೂ ರಾಮಭಾರ ಕಚೇರಿಯಲ್ಲಿ ಹುದ್ದೆ ಸಿಗಬಹುದೇ ಎಂದು ವಿಚಾರಿಸಿದ್ದ. ಆ ಕ್ಷಣದಲ್ಲಿ ಅಂಥ ಸಾಧ್ಯತೆಗಳಿರಲಿಲ್ಲ. ಆದರೆ ಆತ ನೆಹರೂಗೆ ಅಷ್ಟೂ ಪತ್ರಗಳನ್ನು ಕೊಟ್ಟಿರಲಿಲ್ಲ ಎಂಬ ಗುಮಾನಿ ನನಗೆ ಬಂದಾಗ ನಾನು ಅವುಗಳನ್ನು ಕೊಡುವಂತೆ ಒತ್ತಾಯಿಸಿದೆ. ಆತ ಕೊಟ್ಟು ಬಿಟ್ಟ. ಅಷ್ಟೇ ಅಲ್ಲ ಶ್ರದ್ಧಾ ಮಾತಾ ಹೆತ್ತ ಮಗು ಸತ್ತಿಲ್ಲ: ಅದು ಆರೋಗ್ಯಕರವಾಗಿತ್ತು ಅಂತಲೂ ತಿಳಿಸಿದ.

ಮಾರನೆಯ ದಿನ ಉಳಿದ ಪತ್ರಗಳನ್ನು ನೆಹರೂ ಕೈಗಿಟ್ಟಾಗ, `ಇವುಗಳನ್ನು ತಂದ ವ್ಯಕ್ತಿಗೆ ಪ್ರಯಾಣದ ಖರ್ಚು ಕೊಡಬೇಕಿತ್ತು" ಅಂದರು. ಮಾರನೆಯ ದಿನ ಅದನ್ನು ಪೂರೈಸಲಾಯಿತು. ಆದರೆ ನನಗೆ ಅರ್ಥವಾಗದ ಸಂಗತಿಯೆಂದರೆ, ಆ ರಹಸ್ಯ ಪತ್ರಗಳ ಪ್ರತಿಯನ್ನು ಕರಮಚಂದ್ ವಾಡೆಗೆ ನೆಹರೂ ಕೊಟ್ಟರಾದರೂ ಹೇಗೆ? ಅವರೇ ಹೋಗಿ ಫೊಟೋಸ್ಟ್ಯಾಟ್ ಮಾಡಿಸಿಕೊಂಡು ಬಂದರಾ? ಅಷ್ಟು ಸಮಯ ಅವರಿಗೆಲ್ಲಿತ್ತು? ಅಥವಾ ಬೆಂಗಳೂರಿನಿಂದ ಹೊರಡುವಾಗಲೇ ಕರಮಚಂದ್ ಪತ್ರಗಳ ಫೊಟೋಕಾಪಿ ಮಾಡಿಸಿಟ್ಟು ಕೊಂಡಿದ್ದರಾ?

ಇದಲ್ಲದೆ `ಇಂಡಿಯಾ ಟುಡೇ` ವರದಿಗಾರ ಶ್ರದ್ಧಾ ಮಾತಾ ಬಗ್ಗ್ಗೆ ಬರೆಯುತ್ತಾ `ಆಕೆಯ ಛೇಲಾಗಳ ಪೈಕಿ ಜವಾಹರ ಲಾಲ್ ನೆಹರೂ ಆದ್ಯರಾಗಿದ್ದರು` ಅಂತ ಬರೆಯುತ್ತಾರೆ. `ನೆಹರೂ ಮೇಲೆ ಆಕೆಗೆ ಅಗಾಧವಾದ ಹಿಡಿತವಿತ್ತು" ಅಂತಲೂ ಬರೆಯುತ್ತಾನೆ. ಇದಕ್ಕಿಂತ ಮೂರ್ಖತನ ಇನ್ನೊಂದಿಲ್ಲ. ನಿಮಗೆ ಗೊತ್ತಿರಲಿ: ನೆಹರೂ ಯಾವತ್ತಿಗೂ ಹೆಂಗಸರ ಬೆನ್ನತ್ತಲಿಲ್ಲ. ಅನೇಕ ಹೆಂಗಸರು ನೆಹರೂರ ಬೆನ್ನತ್ತಿದರು. ಆದರೆ ಯಾವುದೇ ಹೆಂಗಸು ನೆಹರೂ ಮೇಲೆ ದೇಶಕ್ಕೆ, ಆಡಳಿತಕ್ಕೆ ಅಥವಾ ಯಾವುದೇ ಮುಖ್ಯವಾದ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಣಯ ಕೈಗೊಳ್ಳುವಾಗ ಅತಿಕೊಂಚ ಪ್ರಭಾವವನ್ನೂ ಎಂದಿಗೂ ಬೀರಲಿಲ್ಲ.
ಒಮ್ಮೆ ತಾನು ಭಾರತ ದೇಶಕ್ಕೆ `ಇಂಡಿಯಾ`ಅಂತ ಹೆಸರಿಡ ಕೂಡದು ಎಂದು ಉಪವಾಸ ಮಾಡಿದಾಗ ಅದನ್ನು ನಿಲ್ಲಿಸುವಂತೆ ವಿನಂತಿಸಲು ನೆಹರೂ ತನ್ನ ಮನೆಗೆ ಬಂದಿದ್ದರು ಎಂಬುದಾಗಿ ಶ್ರದ್ಧಾಮಾತಾ ಹೇಳಿಕೊಂಡಿದ್ದಾಳೆ. ಇದು ಶುದ್ಧ ಸುಳ್ಳು. ಒಮ್ಮೆ ರಾಜೇಂದ್ರಪ್ರಸಾದ್ ಅವರು ಇದರ ಬಗ್ಗೆ ಪ್ರಸ್ತಾಪ ಮಾಡಿ, ಅದು ಸಾರಾಸಗಟಾಗಿ ತಿರಸ್ಕರಿಸಲ್ಪಟ್ಟದ್ದರಿಂದ ಯಾರಿಗೂ ಭಾರತದ ಹೆಸರಿನ ಬಗ್ಗೆ ಹಟ ಹಿಡಿದು ಆಮರಣಾಂತ ಉಪವಾಸ ಮಾಡುವ ಪ್ರಮೇಯವೇ ಬಂದಿರಲಿಲ್ಲ. ಉಪವಾಸ ನಿಲ್ಲಿಸುವಂತೆ ಕೇಳಲು ನೆಹರೂ ಯಾರ ಮನೆಗೂ ಹೋಗಿರಲಿಲ್ಲ. ಆಕೆಯನ್ನು ಮನೆ ಅಥವಾ ಪಾರ್ಕು-ಉಹುಂ, ಎಲ್ಲೂ ನೆಹರೂ ಭೇಟಿಯಾಗುತ್ತಿರಲಿಲ್ಲ. ಎಂದೂ ಟೆಲಿಫೋನ್‌ನಲ್ಲಿ ಆಕೆಯೊಂದಿಗೆ ಮಾತನಾಡಿರಲಿಲ್ಲ. ತೀರ 1958ರ ತನಕ ತನಗೆ ನೆಹರೂರೊಂದಿಗೆ ಸಂಬಂಧವಿತ್ತು ಅಂತ ಹೇಳಿಕೊಂಡಿದ್ದಾಳೆ ಶ್ರದ್ಧಾ ಮಾತಾ. ಇದು ಸುಳ್ಳು. ಹೆಚ್ಚೆಂದರೆ 1948ರಿಂದ 1949ರವರೆಗೆ ಇತ್ತು. ನೆಹರೂ ಬರೆದದ್ದಾದರೂ ಚಿಕ್ಕ-ಚಿಕ್ಕ ಚೀಟಿಗಳನ್ನ. ಅವುಗಳನ್ನು ಯಾವತ್ತೂ ಅಂಚೆ ಮೂಲಕ ಕಳಿಸುತ್ತಿರಲಿಲ್ಲ. ಅದಕ್ಕಾಗಿಯೇ ಉಪಾಧ್ಯಾಯರಂಥ ಮೆಸೆಂಜರುಗಳಿದ್ದರು.

ಉಪರಾಷ್ಟ್ರಪತಿಯಾಗಿದ್ದ ಡಾ.ಎಸ್.ರಾಧಾಕೃಷ್ಣನ್‌ರನ್ನು ಭೇಟಿಯಾದ ಶ್ರದ್ಧಾ ಮಾತಾ, ತಾನು ವಿದೇಶಗಳಲ್ಲಿ ಭಾರತೀಯ ಸಂಸ್ಕೃತಿ ಹರಡಲು ಹೋಗಬೇಕಾಗಿದೆಯೆಂದೂ, ಅದಕ್ಕೆ ನೆಹರೂರಿಂದ ನೆರವು ಕೊಡಿಸಬೇಕೆಂದೂ ಕೇಳಿಕೊಂಡಳು. ಅಮಾಯಕರಾದ ರಾಧಾಕೃಷ್ಣನ್ ಈ ಬಗ್ಗೆ ನೆಹರೂರಲ್ಲಿ ಪ್ರಸ್ತಾಪ ಮಾಡಿದಾಗ `ಇಂಥದ್ದೇನನ್ನೂಪ್ರಸ್ತಾಪಿಸಬೇಡಿ` ಎಂದು ನಿಚ್ಚಳವಾಗಿ ಹೇಳಿಬಿಟ್ಟರು. ಆನಂತರ ರಾಧಾಕೃಷ್ಣನ್ ಅಪ್ಪಿ ತಪ್ಪಿಯೂ ಶ್ರದ್ಧಾ ಮಾತಾಳ ಹೆಸರೆತ್ತಲಿಲ್ಲ.
ಕೊನೆಯದಾಗಿ ಒಂದು ಮಾತು ಹೇಳಬೇಕು. ಶ್ರದ್ದಾ ಮಾತಾಳ ಪತ್ರಗಳನ್ನು ಕೈಗೆ ಕೊಟ್ಟಾಗ ಮುಖದಲ್ಲಿ ಯಾವುದೇ ಭಾವನೆಗಳಿಲ್ಲದೆ ಅವುಗಳನ್ನು ನೆಹರೂ ಹರಿದು ಹಾಕಿದರು. ಅಪ್ಪಿತಪ್ಪಿ ಕೂಡ ಅವರು ಮಗುವಿನ ಬಗ್ಗೆ ಆಸಕ್ತಿ ತೋರಿಸಲಿಲ್ಲ. ಇಂಥದೇ ವರ್ತನೆಯನ್ನೊಮ್ಮೆ ಸುಭಾಷ್‌ಚಂದ್ರ ಬೋಸ್ ತೋರಿಸಿದ್ದರು. ಜರ್ಮನಿಯ ತಮ್ಮ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಆಸ್ಟ್ರಿಯಾದ ಹುಡುಗಿ ಗರ್ಭ ಧರಿಸಿದಾಗ ಗಲಿಬಿಲಿಗೊಂಡ ಬೋಸ್, ಆಕೆಗೆ ಗರ್ಭಪಾತ ಮಾಡಿಸುವುದಕ್ಕೆ ಮುಂದಾದರು. ಆದರೆ ಆ ಅವಧಿ ಮುಗಿದು ಹೋಗಿತ್ತು. ಸುಭಾಷ್ ಚಂದ್ರ ಬೋಸ್‌ಗೆ ಆಕೆಯನ್ನು ಮದುವೆಯಾಗುವ ಆಸಕ್ತಿಯಿರಲಿಲ್ಲ. ಅವರಿಗೆ ತಮ್ಮ ರಾಜಕೀಯ ಭವಿಷ್ಯ ಮುಖ್ಯವಾಗಿತ್ತು. ಇದೆಲ್ಲವನ್ನೂ ಅವರು ನನಗೂ ಮಿತ್ರರಾಗಿದ್ದ, ಜರ್ಮನಿಯಲ್ಲೇ ಇದ್ದ ಎ.ಸಿ.ಎನ್. ನಂಬಿಯಾರ್ ಅವರಲ್ಲಿ ಹೇಳಿಕೊಂಡಿದ್ದರು. ಮುಂದೆ ಅವರು ಜರ್ಮನಿಯಿಂದ ಜಪಾನ್‌ಗೆ ಸಬ್‌ಮರೀನ್‌ನಲ್ಲಿ ಹೊರಟು ಹೋದರು. ಇದರ ಅರ್ಥವಿಷ್ಟೆ: ಕಾಮದ ಮತ್ತು ಅದರ ಪರಿಣಾಮದ ವಿಷಯ ಬಂದಾಗ ಯಾವ ರಾಜಕಾರಣಿಯೂ ತನ್ನ ಸಂಬಂಧವನ್ನು ಒಪ್ಪಿಕೊಂಡು ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳುವುದಿಲ್ಲ. ಹಾಗಂತ ಬರೆಯುತ್ತಾರೆ ಎಂ.ಓ.ಮಥಾಯ್

- ರವಿ ಬೆಳಗೆರೆ

Read Archieves of 13 October, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books