Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಬಂದು ಸೇರುವ ಪುಸ್ತಕಗಳ ಜೊತೆ ಆಯುಷ್ಯವೂ ಬೆಳೆದರೆ...

ಒಂದೇ ಸಲಕ್ಕೆ ಧಿಗ್ಗಂತ ಎಲ್ಲ ಬದಲಾವಣೆಗಳನ್ನೂ ಮಾಡಿ ಓದುಗರನ್ನು ಗಲಿಬಿಲಿಗೆ ಈಡು ಮಾಡಬಾರದು. Bring the change, but that should be a sure change ಎಂಬ ಸಿದ್ಧಾಂತ ನನ್ನದು. “ಮುದ್ದು ಹುಡುಗೀರು’ ಅಂಕಣ ಹೊಸರಂಗು ತಂದಿದೆ. ‘ನೆಹ್ರೂ ನೈಟ್ಸ್’ ಎಂಬ ಹೆಸರು ಕೊಂಚ harsh ಆಯಿತು. ಲೇಖಕ ಎಂ.ಓ.ಮಥಾಯ್ ಬೇರೆ ಅನೇಕ ಸಂಗತಿಗಳ ಬಗ್ಗೆ ಬರೆದಿದ್ದಾನೆ. ಎಲ್ಲ ಬಿಟ್ಟು ನೆಹರೂ ಬೆನ್ನು ಬಿದ್ದ ಆ ಅಕರಾಳ-ವಿಕರಾಳ ಕೃಷ್ಣ ಸುಂದರಿ(?) ಪದ್ಮಜಾ ನಾಯ್ಡು ಬಗ್ಗೆ ಬರೆದ ಅಧ್ಯಾಯವನ್ನೇ ಪ್ರಕಟಿಸಿದ್ದೀರಲ್ಲಾ ಎಂಬ ತಕರಾರು ಕೆಲವು ಮಿತ್ರರದು.


ಇದು ಪತ್ರಿಕೋದ್ಯಮದ ಸಣ್ಣ ಟ್ರಿಕ್ಕು. ಮೊದಲು ಉಪ್ಪಿನ ಕಾಯಿ ಬಡಿಸುವುದೇ ಬಾಯಲ್ಲಿ ನೀರೂರಿ ಹೊಟ್ಟೆಯಲ್ಲಿ ರಸಕಣಗಳು ಸೃಷ್ಟಿಯಾಗಿ ಊಟಕ್ಕೆ ಕುಳಿತವರು ಪುಷ್ಕಳಕ್ಕೆ ಅಣಿಯಾಗುವಂತೆ ಮಾಡುವುದಕ್ಕಾಗಿ. ಅದು ಬಿಟ್ಟು “ಪಂಡಿತ್ ಜವಾಹರಲಾಲ್ ನೆಹರೂ ಅವರು ಮೋತಿಲಾಲ್ ನೆಹರೂ ಅವರ ಧರ್ಮಪತ್ನಿಯ ತುಂಬು ಗರ್ಭದಲ್ಲಿ ಅಲಹಾಬಾದದಲ್ಲಿ ಜನಿಸಿದಾಗ..." ಎಂದು ಪರಮ ಬೋರಿಂಗ್ ಆದ ಟ್ರಡಿಷನಲ್ ಸ್ಟೈಲಿನಲ್ಲಿ ಏನನ್ನಾದರೂ ಬರೆಯಲಾರಂಭಿಸುವುದು ನನ್ನ ಜಾಯಮಾನದ ಮಾತಲ್ಲ.


ನಾನು ವೈಭವೀಕರಿಸುತ್ತೇನೋ, ರುಚಿಕಟ್ಟಾಗಿಸುತ್ತೇನೋ, ಕೆಲವು ಸಲ ಅತಿರೇಕಕ್ಕೆ ಹೋಗುತ್ತೀನೋ, ಥ್ರಿಲ್ ಕೊಡುತ್ತೀನೋ-ನನಗೆ ಗೊತ್ತಿಲ್ಲ. ಇವೆಲ್ಲ ನನ್ನ ಮೇಲಿರುವ ಆಪಾದನೆಗಳಾ? ಕಾಂಪ್ಲಿಮೆಂಟುಗಳಾ? ನಾನು ತಲೆ ಕೆಡಿಸಿಕೊಂಡಿಲ್ಲ. ‘ಏನನ್ನು ಬರೆದರೂ, ಬೋರು ಮಾತ್ರ ಹೊಡೆಸುವುದಿಲ್ಲ’ ಹಾಗಂತ ನಿಶ್ಚಯಿಸಿಯೇ ಬರೆಯಲು ಕೂಡುತ್ತೇನೆ. ಆರಂಭದಲ್ಲಿ ಒಂದು ದೊಡ್ಡ sound ಮಾಡದೆ ಹೋದರೆ ನಾವು ಯಾರದೂ ಗಮನ ಸೆಳೆಯುವುದಿಲ್ಲ. A big bang is a must.


‘ಹಾಯ್ ಬೆಂಗಳೂರ್!’ನ ವಯಸ್ಸಿನ ಹಿಂದೆ ಹದಿನಾರು ವರ್ಷಗಳ ಈ ಗುಟ್ಟು ಅಡಗಿದೆ. ಅದಿರಲಿ, ಪತ್ರಿಕೆಯಲ್ಲಿನ ಬದಲಾವಣೆಗಳು ನಿಮಗೆ ಇಷ್ಟವಾಗಿದ್ದರೆ ಅದು ಸಂತೋಷದ ವಿಷಯ. ‘ಬದಲಿಸಿರುವ ಹಲೋ ಅಂಕಣದ ನಿಮ್ಮ ಫೊಟೋ ಚೆನ್ನಾಗಿದೆ’ ಅಂತ ಕೆಲವರು ಅಂದರು. ಚೆನ್ನಾಗಿರಲು ಹೇಗೆ ಸಾಧ್ಯ? ನೋಡೋಕೆ ಹೇಗಿದ್ದೀನೋ, ಫೊಟೋ ಕೂಡ ಹಾಗೇ ಇರುತ್ತದೆ : ಕನ್ನಡಿಯೊಳಗಿನ ಬಿಂಬದ ಹಾಗೆ. ಐವತ್ಮೂರರಲ್ಲೂ ಬಣ್ಣ ಹಚ್ಚಿಕೊಳ್ಳಲು ತಲೆಯಲ್ಲಿ ಕೂದಲು ಉಳಿದಿವೆ. ಕೆನ್ನೆ ಬತ್ತಿಲ್ಲ. ಹಲ್ಲು ಗಟ್ಟಿಯಿವೆಯಾದ್ದರಿಂದ ಮಾತು ಸ್ಪಷ್ಟ. ತೂಕ ಇಳಿದಿರುವುದರಿಂದ ನಡಿಗೆ ಸುಲಭ. ಇದನ್ನೆಲ್ಲ ಪುಣ್ಯವೆಂದುಕೊಳ್ಳಲಾ? ಪಾಪದ ಸೆನ್ಸೆಕ್ಸ್ ಏರದಿದ್ದರೆ ಸಾಕು.


ಈ ಮಧ್ಯೆ ರೇವಣ ಸಿದ್ಧಯ್ಯ ವಕೀಲರು ದಾವಣಗೆರೆಯಿಂದ ಬೆಂಗಳೂರಿಗೆ ಬಂದು ಯಶಸ್ವಿಯಾಗಿ ಹೈಕೋರ್ಟಿನಲ್ಲಿ ಪ್ರಾಕ್ಟೀಸು ನಡೆಸುತ್ತಿದ್ದಾರೆ. ಅವರ ಕಚೇರಿ ಮಿನರ್ವಾ ಸರ್ಕಲ್ ಬಳಿಯ ಎನ್.ಎಂ.ಎಚ್ ಹೊಟೇಲಿನಲ್ಲಿದೆ. ಒಂದು ಕೇಸು ಕೈಗೆ ಕೊಟ್ಟರೆ ಶತಾಯಗತಾಯ ಗೆದ್ದುಕೊಡಲು ಶ್ರಮಿಸುವ ರೇವಣ ಸಿದ್ಧಯ್ಯನವರು ನನ್ನನ್ನು ಐತಿಹಾಸಿಕವೆನ್ನಿಸಿದ ‘ಹರಪನಹಳ್ಳಿ’ ಕೇಸೂ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಗೆಲ್ಲಿಸಿದವರು. ಅವರು ಬೆಂಗಳೂರಿಗೆ shift ಆದ್ದರಿಂದ ನನಗೆ ಆದ ಮೊದಲ ಲಾಭವೆಂದರೆ, ಪುಸ್ತಕಗಳು! ಸಿನೆಮಾ, ಸಂಗೀತ, ರಾಜಕೀಯ-ಹೀಗೆ ನೂರೆಂಟು ಆಸಕ್ತಿಗಳಿರುವ ರೇವಣ ಸಿದ್ಧಯ್ಯನವರು ಮೊನ್ನೆ ನಂಗೊಂದು ರಾಶಿ ಪುಸ್ತಕ ಕಳಿಸಿದ್ದಾರೆ. ನಿಜಕ್ಕೂ ಉಪಯುಕ್ತ ಅವು. ನನ್ನ ಲೈಬ್ರರಿ ಹೇಗ್ಹೇಗೋ ಬೆಳೆಯುತ್ತಿದೆ. ಅದರೊಟ್ಟಿಗೆ ಓದುವ ಆಸಕ್ತಿ, ಆಯುಷ್ಯ ಎರಡೂ ಬೆಳೆದರೆ ಧನ್ಯ. ಎಲ್ಲವುಗಳ ಮಧ್ಯೆ ನನ್ನ ಕಾದಂಬರಿಯ ‘ಹಿಮಾಗ್ನಿ’ ಧಗಧಗಿಸುತ್ತಿದೆ. ಅಲ್ಲಿ ಈಗ ಶತ್ರು ದಮನದ ಕಾಲ. Chain of murder. ಇನ್ನೇನು ನಿಮಗೆ ಒಪ್ಪಿಸುವ ದಿನಗಳು ದೂರವಿಲ್ಲ.


-ಬೆಳಗೆರೆ

Read Archieves of 08 October, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books