Ravi Belagere
Welcome to my website
ಈಗ ಒಂದು ವರ್ಷದ ಹಿಂದೆ 'ಕಾಮರಾಜ ಮಾರ್ಗ' ಪುಸ್ತಕ ಬಿಡುಗಡೆಯಾಗಿತ್ತು. ರವೀಂದ್ರ ಕಲಾಕ್ಷೇತ್ರ ತುಂಬಿ ತುಳುಕಿ ಹಿಂಬದಿಯ ಸಂಸ ಬಯಲು ರಂಗ ಮಂದಿರವೂ ಭರ್ತಿಯಾಗಿತ್ತು. `ಕಾಮರಾಜ ಮಾರ್ಗ' ಹೆಚ್ಚು ಕಡಿಮೆ ಬಿಜೆಪಿ ನಾಯಕರ ಕಥೆಯಾಗಿತ್ತು. ಇದೇ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿರುವ `ಹಿಮಾಗ್ನಿ' ಸೋನಿಯಾ ಗಾಂಧಿ ಸುತ್ತ ಹೆಣೆದ ಬೃಹತ್ ಕಾಬಂದರಿ. ಜೊತೆಗೆ 'ಉಡುಗೊರೆ', 'ಖಾಸ್ ಬಾತ್ 2004', 'ಬಾಟಮ್ ಐಟಮ್ 6' ಹೀಗೆ ಸಾಲು ಸಾಲು ಪುಸ್ತಕಗಳು ತಾಯಾರಿವೆ. ಅಷ್ಟೇ ಅಲ್ಲದೇ ಅರವತ್ತು ನಿಮಿಷಗಳ ಸಿ.ಡಿ ಬಿಡುಗಡೆ ಮಾಡೋಣವೆಂದುಕೊಂಡಿರುವೆ.
Home About Us Gallery Books Feedback Prarthana Contact Us

ಮಲೆನಾಡಿನ ಎಗುಡು ದಿಗುಡು ಮಲೆಗಳ ಮಧ್ಯೆ ಅಲೆಮಾರಿಯೊಬ್ಬನ ದಿನಚರಿ

ಇದೆಲ್ಲಿಯ ನಂಟು?

ಇಲ್ಲೆಲ್ಲೋ ತೋಟ-ಗದ್ದೆ ಖರೀದಿಸಿದ್ದೇನೇನೋ ಎಂಬಂತೆ ಮಲೆನಾಡಿನ ಉದ್ದಗಲ ಓಡಾಡುತ್ತಿದ್ದೇನೆ. ಒಂದು ಕಡೆಯಿಂದ ಉಡುಪಿ, ಮಂಗಳೂರು, ಭಟ್ಕಳ, ಮುರ್ಡೇಶ್ವರ, ಕಾರವಾರ ಅಂತ ಕಡಲಿನ ಸೊಂಟ ಸವರಿ ಕೊಂಡೇ ಓಡಾಡಿದವನು ಆಮೇಲೆ ಶಿವಮೊಗ್ಗ, ತೀರ್ಥ ಹಳ್ಳಿ, ಶೃಂಗೇರಿ, ಚಿಕ್ಕಮಗಳೂರು, ಬೇಲೂರು ಅಂತ ತೋಟ-ಕಾಡುಗಳ ಮಧ್ಯೆ ಅಲೆದೆ. ಈ ಬಾರಿ ನೋಡಿ ದಷ್ಟು ಮಳೆಯನ್ನು ಕೆಲವು ವರ್ಷಗಳ ಹಿಂದೆ ನೋಡಿದ ನೆನಪು. ಭಯಂಕರ ಎಕ್ಸೈಟ್‌ಮೆಂಟಿಗೆ ಒಳಗಾಗಿದ್ದೇನೆ. ಜರ್ಮನಿಯಿಂದ ಬರುತ್ತಿದ್ದಂತೆಯೇ ನಮ್ಮ ವಕೀಲರಾದ ದಿವಾಕರ್ ಅವರ ಕಚೇರಿಯಿಂದ ಎಚ್ಚರಿಕೆಯ ಪತ್ರ ಬಂದಿತ್ತು : ಕೆಲವು ಊರುಗಳ ಕೋರ್ಟುಗಳಿಗೆ ತಕ್ಷಣ ಹೋಗಬೇಕಿದೆ ಅಂತ. ಕೆಲ ವರ್ಷಗಳ ಹಿಂದೆ ನನ್ನ ಬೆಳ ಗೆರೆ ಗ್ರಾಮದ ಯುವಕ ರಾಜಕುಮಾರ್‌ನನ್ನು ದಿವಾಕರ್ ರಿಗೆ ಪರಿಚಯಿಸಿ, ಕಾನೂನು ಓದಿರುವ ಈ ಹುಡುಗ ನಿಗೆ ವಕೀಲಿಕೆ ಕಲಿಸಿ ಅಂತ ವಿನಂತಿಸಿಕೊಂಡಿದ್ದೆ. ಈಗ ರಾಜಕುಮಾರ್, ಮಿತ್ರರಾದ ದಿವಾಕರ್‌ಗೆ able assistant. ಅವನಿಗೆ ಮದುವೆಯಾಗಿ, ಹೆಂಡತಿಗೆ ಸರ್ಕಾರಿ ಕೆಲಸ ಸಿಕ್ಕು, ಒಂದು ಮಗುವೂ ಆಗಿ ನೆಮ್ಮ ದಿಯಾಗಿದ್ದಾನೆ. ವಕೀ ಲಿಕೆ ಮೈ ಹಿಡಿಯುತ್ತಿ ರುವಂತಿದೆ. ಅವನು ಒಂದೇ ಸಮ ಬೆನ್ನು ಬಿದ್ದು ನೀವು ಭಟ್ಕಳಕ್ಕೆ ಹೋಗಲೇಬೇಕು ಅಂದಿದ್ದ. ಅಲ್ಲಿ ನನ್ನ ವಿರುದ್ಧ ನಾಲ್ಕು ಮಾನ ನಷ್ಟ ಮೊಕದ್ದಮೆಗ ಳಿವೆ. ಇತ್ತೀಚೆಗೆ ನನ್ನ ಅನಾರೋಗ್ಯ ಮತ್ತು ವಿದೇಶಗಳ ತಿರುಗಾಟ ದಿಂದಾಗಿ ರೆಗ್ಯುಲರ್ ಆಗಿ ಭಟ್ಕಳಕ್ಕೆ ಹೋಗಲಾಗಿರಲಿಲ್ಲ. ಹಾಗೆ ಯಾರ‍್ಯಾರು ಗೈರು ಹಾಜರಾಗಿದ್ದಾರೋ, ಅವರನ್ನೆಲ್ಲ ಅರೆಸ್ಟ್ ಮಾಡಿ ಕೋರ್ಟಿಗೆ ಹಾಜರುಪಡಿಸಿ ಎಂದು ಹಿರಿಯ ಪೊಲೀಸ್ ಅಕಾರಿಗಳು ತಮ್ಮ ಇಲಾಖೆಯ ಸಿಬ್ಬಂದಿಗೆ ಆರ್ಡರು ಮಾಡಿದ್ದರು. ನಿಜ, ಅವ್ಯಾವೂ ಭಯಂಕರ ಮೊಕದ್ದಮೆ ಗಳಲ್ಲ. ಆದರೆ ನ್ಯಾಯಾಲಯದಿಂದ ತಪ್ಪಿಸಿಕೊಂಡು ತಿರುಗುವುದರಲ್ಲಿ ಅರ್ಥವಿಲ್ಲ. ಅದು ಸರಿಯೂ ಅಲ್ಲ. ನಾನು ತಪ್ಪಿಸಿಕೊಂಡು ತಿರುಗಿದರೆ ಪೊಲೀಸ್ ಅಕಾರಿ ಗಳಿಗೆ, ಪೇದೆಗಳಿಗೆ ತೊಂದರೆಯಾಗುತ್ತದೆ. ಇಷ್ಟರ ಮೇಲೆ ತಲೆ ತಪ್ಪಿಸಿಕೊಂಡು ಎಷ್ಟು ದಿನ ಇರಲು ಸಾಧ್ಯ? ಅದರ ಅವಶ್ಯಕತೆಯಾದರೂ ಏನು?ಬರೆಯುವುದನ್ನು ಮುಗಿಸಿ ಒಂದು ಟ್ಯಾಕ್ಸಿ ತರಿಸಿ ಕೊಂಡು ನೆಟ್ಟಗೆ ಭಟ್ಕಳಕ್ಕೆ ಹೊರಟೇ ಬಿಟ್ಟೆ. ಸಹಾಯಕ ರಿಲ್ಲದೆ ನನ್ನನ್ನು ನಾನು ಸಂಭಾಳಿಸಿಕೊಂಡು ಬದುಕುವು ದನ್ನು ನನಗೆ ಬಹುಶಃ ಜರ್ಮನಿ ಕಲಿಸಿದೆ. ರಾತ್ರಿ ಶಿವ ಮೊಗ್ಗ, ಸಾಗರ ದಾಟಿ ಜೋಗ ತಲುಪಿದ್ದು ಕಷ್ಟವಾಗಲಿಲ್ಲ. ಆದರೆ ಜೋಗದಿಂದ ಮುರ್ಡೇಶ್ವರ ತಲುಪುವ ಹೊತ್ತಿಗೆ ಟ್ಯಾಕ್ಸಿಯ ಚಾಲಕ ಮೂರ್ತಿ ಹೈರಾಣಾಗಿದ್ದ. ಆಕಾಶಕ್ಕೆ ತೂತು ಹೊಡೆದಿದೆಯೇನೋ ಎಂಬಂತೆ ಸುರಿಯುತ್ತಿದ್ದ ಮಳೆ, ತಿರುವುಗಳ ಘಾಟ್ ರಸ್ತೆ, ರಸ್ತೆಯ ತುಂಬ ಅನಾ ಹುತಕಾರಿ ಹೊಂಡಗಳು! ತಿಂದ ಹಣದಲ್ಲಿ ಹತ್ತು ಪರ್ಸೆಂ ಟಾದರೂ ಖರ್ಚು ಮಾಡಿದ್ದಿದ್ದರೆ, ಮುಖ್ಯಮಂತ್ರಿಯಾ ಗಿದ್ದ ಯಡಿಯೂರಪ್ಪನ ಜಿಲ್ಲೆಯ ರಸ್ತೆಗಳು ಇಷ್ಟು ಕೆಟ್ಟ ದಾಗಿರುತ್ತಿರಲಿಲ್ಲ ಅಂದುಕೊಂಡೆ. ಕಾರು ಕುಂಟುತ್ತ ಸಾಗಿತ್ತು. ನನಗೆ ಸಣ್ಣ ನಿದ್ರೆ.

ಬೆಳಕು ಹರಿಯುವ ಹೊತ್ತಿಗೆ ಮುರ್ಡೇಶ್ವರದ ಭೋರ್ಗರೆವ ಕಡಲ ಸಮ್ಮುಖದಲ್ಲಿ ನಿಂತಿದ್ದೆ. ಪ್ರಯಾ ಣದ ದಣಿವೆಲ್ಲ ಒಮ್ಮೆಲೆ ಮುಗಿದು ಹೋಗಿ, short ಆಗಿ ಒಂದು ಸ್ನಾನ ಮಾಡಿದವನೇ ಬರೆಯಲು ಕುಳಿತೆ. ಬೆಳ್ಳ ಬೆಳಗ್ಗೆ ಬರೆಯಲು ಕೂಡುವುದು ಅಭ್ಯಾಸವಾಗಿದೆ. ಮಧ್ಯಾಹ್ನದ ಹೊತ್ತಿಗೆ ಅವತ್ತಿನ ಅರ್ಧ ಕೆಲಸ ಮುಗಿದಿ ರುತ್ತದೆ. ತಲುಪಿಕೊಂಡ ದಿನ ನನಗೆ ಬೇರೇನೂ ಕೆಲಸ ವಿರಲಿಲ್ಲ. ಜೊಯಿಡಾದಿಂದ ಗೆಳೆಯ ನರಸಿಂಹ ಬಂದಿದ್ದ. ಕೈ ಹಿಡಿದುಕೊಂಡು ಕಡಲ ಕಿನಾರೆಯುದ್ದಕ್ಕೂ ನಡೆ ದೆವು. ಮಳೆ, ಕೆಡವಿ ಬಡಿಯುತ್ತಿತ್ತು. ಈ ದಿನಗಳಲ್ಲಿ ಸಮು ದ್ರಕ್ಕೆ ಇಳಿಯುವುದಕ್ಕಿಂತ ಅಪಾಯಕಾರಿಯಾದುದು ಮತ್ತೊಂದಿಲ್ಲ. ಮುರ್ಡೇಶ್ವರ, ಗೋಕರ್ಣ, ಮರವಂತೆ ಮುಂತಾದವು ರಮ್ಯ ಮೃತ್ಯುಕೂಪಗಳು. ಅಲ್ಲಿ ಸಮುದ್ರ ಇದ್ದಕ್ಕಿದ್ದಂತೆ ಧಡಕ್ಕನೆ ಆಳಕ್ಕಿಳಿದುಬಿಡುತ್ತದೆ. ನಿಂತವನ ಕಾಲ ಕೆಳಗಿನ ಮರಳು ಅಲೆಯ ಜೊತೆಯಲ್ಲೇ ಹೇಗೆ ಜರ್ರನೆ ಜರಿದು ಹೋಗುತ್ತದೆಯೆಂದರೆ, ಏನಾಗುತ್ತಿದೆ ಯೆಂಬುದು ಗೊತ್ತಾಗುವುದಕ್ಕೆ ಮುಂಚೆಯೇ ಕಡಲಿನ ಕಬಂಧ ಬಾಹುಗಳೊಳಕ್ಕೆ ಸಿಲುಕಿ ಹೋಗಿರುತ್ತಾನೆ ಮನುಷ್ಯ. ಅಲ್ಲಿಂದ ಹೊರಬಿದ್ದು, ಅಲೆಯ ಹೊಡೆತದ ವಿರುದ್ಧ ಈಜಿ ದಡ ಸೇರುವುದು impossible. ಅವನನ್ನು ಬಚಾವು ಮಾಡಲು ಇನ್ನೊಬ್ಬರು ಕಡಲಿಗಿಳಿದರೆ, ಎರಡು ಸಾವು ನಿಶ್ಚಿತ. ನಾನು ಮುರ್ಡೇಶ್ವರಕ್ಕೆ ಹೋದ ದಿನವೇ ಹಿರಿಯ ಅಕಾರಿಯೊಬ್ಬರು ಇನ್ನಿಬ್ಬರ ಸಮೇತ ಕಡಲಪಾಲಾಗಿದ್ದರು. ಅಲ್ಲಿ ಹೆಣ ಸಿಗುವುದೂ ಅಪರೂ ಪವೇ. ಷಾರ್ಕ್‌ಗಳು ಅನಾಮತ್ತಾಗಿ ಮನುಷ್ಯನನ್ನು ತಿಂದು ಕೊಂಡು ಬಿಡುತ್ತವೆ. ಕಡಲ ಕಿನಾರೆಯಲ್ಲೇ ಬದುಕುವ ಜನ ಎಚ್ಚರಿಕೆಯಿಂದಿರುತ್ತಾರೆ. ಆದರೆ ಪ್ರವಾಸ ಹೋದ ವರಿಗೆ ಹುಚ್ಚು ಉತ್ಸಾಹ. ತುಂಬ ಜನ ನೀರಿಗಿಳಿದು ಬಿಡುತ್ತಾರೆ : ಮತ್ತೆ ಹಿಂತಿರುಗುವುದಿಲ್ಲ.

ನಾನು ಕಿನಾರೆಯುದ್ದಕ್ಕೂ ಓಡಾಡಿದೆ. ಸಮುದ್ರದ ಅಲೆ, ತುಯ್ದಾಟ, ಅದರ ಹೊರಳು, ದಡ ಮುಟ್ಟಿ ಮತ್ತೆ ಹಿಂದಕ್ಕೆ ಓಡುವ ಕ್ಷಾರ ಜಲಯ ಮೋದ-ಎಲ್ಲ ಕಂಡು ಭಾವುಕನಾಗಿದ್ದೆ. ಈ ಸಮುದ್ರಕ್ಕೆ ಯಾಕಿಷ್ಟು ಅಸಹನೆ? ನನ್ನ ಮನಸ್ಸೂ ಹೀಗೇ ಅಸಹನೆಗೆ ಬೀಳುತ್ತದಲ್ಲವಾ? ಇದರ ಹುಣ್ಣಿಮೆಯ ಉಕ್ಕು, ಅಮಾವಾಸ್ಯೆಯ ಮೌನ, ಮಳೆಗಾಲದ ಸೆಡವು... ಈ ಸಮುದ್ರವೆಂದರೆ ನಾನೇನಾ? ನನ್ನವು ಇಂಥವೇ ಹುಚ್ಚು ಪ್ರಶ್ನೆಗಳು. ಕಿನಾರೆಯಿಂದ ಹಿಂತಿರುಗಿ ರೂಮು ಸೇರಿದವನು ಅದೇನನ್ನಿಸಿತೋ, ಕೆಮೆರಾ ಎತ್ತಿಕೊಂಡು ಒಂದು ಕಾಗೆಯ ಫೊಟೋ ತೆಗೆಯ ತೊಡಗಿದೆ. ಹಂಸದಷ್ಟೇ ಚೆಂದಗೆ ಕಾಣಿಸಿತ್ತು ಕಡಲ ಕಿನಾ ರೆಯ ಅನಿಷ್ಟ ಕಾಗೆ!

"ನವಿಲು ಕುಣಿಯೋದು ಯಾಕೆ ಅಂತ ನಿಮಗೆ ಗೊತ್ತಾ? ಅದನ್ನು ನಾವು ಗಂಡು ನವಿಲಿನ ಮೋಹ ನೃತ್ಯ ಅಂದುಕೊಳ್ತೇವೆ. ಆದರೆ ಕುಣಿತದ ಹಿಂದಿನ ಸಂಗತಿಯೇ ಬೇರೆ. ಗಂಡು-ಹೆಣ್ಣು ನವಿಲುಗಳಿಗೆ ಅದು ಮಿಲನ ಮಹೋತ್ಸವದ ಕಾಲ. ಕಾಡಿನಲ್ಲಿ ಚಿಕ್ಕ-ಚಿಕ್ಕ ಇಂಬಳ, ಜಿಗಣೆ ಮುಂತಾದ ಹುಳ ಹುಪ್ಪಟೆಗಳು ಎಲ್ಲೋ ಸದ್ದಿಲ್ಲದೆ ಅಡಗಿ ಕುಳಿತಿರುತ್ತವೆ. ಮಳೆಯ ಮೊದಲ ಹನಿ ಬೀಳುವ ಸದ್ದು ಕೇಳಿದರೆ ಸಾಕು, ಅವು ಹೊರಕ್ಕೆ ಬಂದುಬಿಡುತ್ತವೆ. ಗಂಡು ನವಿಲು ರೆಕ್ಕೆ ಕೆದರಿ ಕುಣಿಯುವಾಗ ತಪತಪ ತಟತಟ ಸದ್ದಾಗುತ್ತದಲ್ಲ? ಮಳೆ ಬಿದ್ದೇ ಬಿಟ್ಟಿತೇನೋ ಎಂಬ ಭ್ರಮೆ ಉಂಟು ಮಾಡುವ ಶಬ್ದವದು. ಆಕಾಶ ದಲ್ಲಿ ಹೆಪ್ಪುಗಟ್ಟಿದ ಮೋಡ, ತಂಪು ಗಾಳಿ ಮತ್ತು ಗಂಡು ನವಿಲಿನ ತಟತಟ ಸದ್ದು ಎಂಥ ಮಳೆಯ ಭ್ರಮೆ ಉಂಟು ಮಾಡುತ್ತವೆಂದರೆ, ಇಂಬಳ-ಜಿಗಣೆ-ಹುಳ ಹುಪ್ಪಡಿಗ ಳೆಲ್ಲ ಸಂಕೋಚ ಬಿಟ್ಟು ಪೊದರಿನಿಂದ ಈಚೆಗೆ ಬಂದು ಬಿಡುತ್ತವೆ. ಅವುಗಳನ್ನು ತಿನ್ನಲು ಹೊರಬರುವುದೇ ಹೆಣ್ಣು ನವಿಲು. ಅದನ್ನು ಗಂಡು ನವಿಲು ಆವರಿಸಿಕೊಳ್ಳುವುದೇ ಆವಾಗ! Time for firtility..." ಅಂತ ವಿವರಿಸಿದವರು ಮಿತ್ರರಾದ ಕಲ್ಕುಳಿ ವಿಠಲ ಹೆಗ್ಡೆ. ಗಂಡು ನವಿಲಿನ ಕಷ್ಟ ಮತ್ತು ಹೆಣ್ಣು ನವಿಲಿನ ಇಷ್ಟ : ಅರ್ಥವಾಗುವುದು ಎಷ್ಟು ಕಷ್ಟ ಅನ್ನಿಸಿತ್ತು.

ಇದೆಲ್ಲ ಭಾವುಕ ಪ್ರಪಂಚದ ಮಾತಾಯಿತು. ಮರು ದಿನ ಬೆಳಗ್ಗೆ ನಾನು ಭಟ್ಕಳದ ನ್ಯಾಯಾಲಯದ ಮುಂದೆ ಹಾಜರಾಗಿದ್ದೆ. ಹಾಜರಿ ಮುಗಿಸಿ ಹೊರಬರುತ್ತಿದ್ದಂತೆಯೇ ಅಲ್ಲಿನ ಎಸ್ಸೈ ಪ್ರಕಾಶ್ ಬಂದು "ನಮ್ಮ ಸಾಹೇಬರು ಕರೀ ತಿದ್ದಾರೆ. ಠಾಣೆಗೆ ಬನ್ನಿ" ಅಂದರು. ಇನ್ನೆಂಥ ಠಾಣೆ ಮಾರಾಯರೇ? ಕೋರ್ಟಿಗೆ ಹಾಜರಾದದ್ದಾಯಿತಲ್ಲ? ಮತ್ಯಾಕೆ ಠಾಣೆಗೆ? ಇನ್ನೊಂದ್ಯಾವುದಾದರೂ ಕೇಸು ಕಾದಿ ದೆಯಾ? ಆವರಿಸಿ ಜೈಲಿಗೆ ಕಳಿಸಿಬಿಟ್ಟರೆ ಗತಿ? ಅನು ಮಾನಿಸುತ್ತಲೇ ಭಟ್ಕಳದ ಡಿವೈಎಸ್ಪಿ ಕಚೇರಿಗೆ ಹೋದೆ. ಅಲ್ಲಿ ಚಿಕ್ಕ ನಗೆಯೊಂದಿಗೆ ಕಾಯುತ್ತಿದ್ದವರು ಡಿವೈಎಸ್ಪಿ ನಾರಾಯಣ್. "ಅಂತೂ ನಿಮ್ಮನ್ನು ಅರೆಸ್ಟು ಮಾಡುವ ಅವಕಾಶ ಕೊಡಲಿಲ್ಲ ನೀವು..." ಅಂದು ನಗುತ್ತಾ ಬರಮಾಡಿ ಕೊಂಡರು. ಅವರು ನನಗಿಂತ ತುಂಬ ಚಿಕ್ಕ ವಯಸ್ಸಿನವರು. ಕೋಲಾರದಿಂದ ವಲಸೆ ಬಂದು ಬೆಂಗಳೂರಿನಲ್ಲಿ ನೆಲೆ ನಿಂತ ಕುಟುಂಬದವರು. ತಂದೆ ತಾಯಿ ತುಂಬ ಶ್ರಮಪಟ್ಟು ನಾರಾಯಣ್‌ರನ್ನು ಓದಿಸಿದ್ದಾರೆ. ಪೊಲಿಟಿಕಲ್ ಸೈನ್ಸ್ ನಲ್ಲಿ ಎಂ.ಎ., ಮಾಡಿರುವ ನಾರಾಯಣ್‌ಗೆ ಐ.ಪಿ.ಎಸ್ ಅಕಾರಿಯಾಗುವ ಕನಸು. ಅಷ್ಟರಲ್ಲಿ ಡಿವೈಎಸ್ಪಿ ನೌಕರಿ ದೊರೆತಿದೆ. ಭಟ್ಕಳದಂಥ ಜಾಗ, ಆ ಹುದ್ದೆ ಸಂಭಾಳಿಸುವುದು ಸುಲಭದ ಮಾತಲ್ಲ. ಅಲ್ಲಿ ಮನುಷ್ಯ ದ್ವೇಷ ಹೊತ್ತಿ ಉರಿ ಯಲಿಕ್ಕೆ ಒಂದು ಗಣೇಶೋತ್ಸವ, ಒಂದು ರಮಜಾನ್ ಸಾಕು. ಆದರೆ ಭಟ್ಕಳದ ನವಾಯತ ಮುಸಲ್ಮಾನರು ಖುದ್ದಾಗಿ ಮುಂದೆ ಬಂದು ಗಣೇಶೋತ್ಸವಕ್ಕೆ ಬೆಂಬಲ ನೀಡಿದ್ದಾರೆ. ಈ ಬಾರಿಯ ರಮಜಾನ್ ಹಬ್ಬಕ್ಕೆ ಪೊಲೀಸರೂ ಸೇರಿ ದಂತೆ ಅನೇಕ ಹಿಂದೂಗಳಿಗೆ ದಾವತ್ : ಹಬ್ಬದೂಟ. ನಾರಾಯಣ್‌ಗೆ ಮಾನ ವೀಯ ಮಿಡಿತ, ಪ್ರಜ್ಞೆ, ಜವಾಬ್ದಾರಿ ಮತ್ತು ಪ್ರಾಮಾಣಿಕತೆ-ಎಲ್ಲವೂ ಇವೆ. ಎಲ್ಲ ಜಾತಿಗಳವರ ಪ್ರೀತಿ ಗಳಿಸಿದ್ದಾರೆ. ಇಡಗುಂಜಿ, ಗೋಕರ್ಣದಂಥ ಮಹಾ ತಲೆನೋವಿನ ಧಾರ್ಮಿಕ ತಾಣಗಳಲ್ಲಿ ವಿಪ್ರ ಸೈಂಧವರ ಬಡಿದಾಟ ನಿಲ್ಲಿಸಿ ದ್ದಾರೆ. ಮುಖ್ಯವಾಗಿ ಮಟ್ಕಾ ನಿಲ್ಲಿಸಿ, ಅದರ ಉಸಿರಡಗಿಸಿ ಬಿಟ್ಟಿದ್ದಾರೆ. ಅವ ರಿಗೆ ಪ್ರಕಾಶ್ ಮತ್ತು ಉಮೇಶ್ ಸೇರಿದಂತೆ ಅನೇಕ ಯುವ ಅಕಾರಿಗಳ, ಕಾನ್ಸ್‌ಟೇಬಲ್‌ಗಳ ಬೆಂಬಲವಿದೆ. ಬಾಂಬು ಸಿಡಿಸುತ್ತಿದ್ದ, ತಯಾರಿಸುತ್ತಿದ್ದ ಪಾತಕಿಯೊಬ್ಬನನ್ನು ಕೇರಳದಿಂದ ಎತ್ತಿಕೊಂಡು ಬಂದು ಸೊಂಟದ ಬೋಲ್ಟು ಕಳಚಿ ಬೀಳುವಂತೆ ಬಡಿದು ಜೈಲಿಗೆ ಕಳಿಸಿದ ನಾರಾಯಣ್, ನನಗೆ ಉಡು ಗೊರೆಯಾಗಿ ನೀಡಿದ್ದು ಎರಡು ಪುಸ್ತಕ, ಒಂದು ಕಪ್ ಚಹ.

ಇದಲ್ಲದೆಯೂ ನಾರಾಯಣ್‌ಗೆ ನನ್ನೊಂದಿಗೆ ಒಂದು ಭಾವನಾತ್ಮಕ ನಂಟಿದೆ. ಅವರು ಈ ಹಿಂದೆ ಬಿಜಾಪುರ ಜಿಲ್ಲೆಯಲ್ಲಿ ಕೆಲಸ ಮಾಡಿದವರು. ಅವರು ಸುತ್ತಿದ ಇಂಡಿ, ದೇವಣಗಾಂವ, ಸೊನ್ನ, ಚಡಚಣ, ಉಮ್ರಾಣಿ, ಝಳಕಿ... ಎಲ್ಲಿಗೆ ಹೋದರೂ ಅವರಿಗೆ ನಾನು ನೆನಪಾಗಿದ್ದೇನೆ. ಅದು ಭೀಮೆಯ ತೀರದ ನಾಡು. "ಭೀಮಾ ತೀರದ ಹಂತಕರು" ಪುಸ್ತಕ ಅವರ ಟೇಬಲ್ಲಿನ ಮೇಲೆ ಇತ್ತು. ಅದು ಕೇವಲ ಹತ್ಯೆಗಳ ವಿವರ ನೀಡುವ ಪುಸ್ತಕವಲ್ಲ. ಆ ಸೀಮೆಯ ಜನ, ಅವರ ಭಾವನೆ, ರೀತಿ-ರಿವಾಜು, ದಾರಿದ್ರ್ಯ, ಆಸೆ, ಕೊರತೆ, ಹುಂಬತನ- ಎಲ್ಲವನ್ನೂ ವಿವರಿಸುವ ಪುಸ್ತಕ. ನಾರಾಯಣ್ ಒಬ್ಬ ಯುವಕ. ಉತ್ಸಾಹಿ ಅಕಾರಿ. ಸಮಾಜಕ್ಕೆ ನಾನು ಏನೋ ಬಾಕಿಯಿದ್ದೇನೆ : ಋಣ ತೀರಿಸಬೇಕು ಎಂದು ಭಾವಿಸುವ ಶುದ್ಧ ಪ್ರಾಮಾಣಿಕ. ತನ್ನ ಮಗ ಓದಿ ಅಕಾರಿಯಾಗಲಿ ಎಂಬ ಕನಸು ಹೊತ್ತು, ಸಾಲ ಮಾಡಿ, ಅಲ್ಪ ಸ್ವಲ್ಪ ಒಡವೆಯಿದ್ದರೆ ಅದನ್ನೂ ಒತ್ತೆ ಯಿಟ್ಟು, ಬರುತ್ತಿದ್ದ ಸಂಬಳದ ಮೇಲೂ ಸಾಲ ತೆಗೆದು ಮಗನನ್ನು ಓದಿಸಿ ಕನಸು ಕಾಣುತ್ತಿದ್ದಾಕೆ, ನಾರಾಯಣ್‌ರ ತಾಯಿ : ಆಕೆ ಒಬ್ಬ ಸಾಮಾನ್ಯ 'ಡಿ' ಗ್ರೂಪ್ ನೌಕರಳು. ಇವತ್ತು ತಂದೆ-ತಾಯಿಯರನ್ನು ಜೊತೆಗೇ ಇಟ್ಟುಕೊಂಡು ಅವರಿಗೊಂದು ಗೌರವಯುತ ಸಂಧ್ಯಾಕಾಲವನ್ನು ನೀಡುತ್ತಿದ್ದಾರೆ ಗೆಳೆಯ ನಾರಾಯಣ್. ಜಾತಿಯ ಖಾಯಿಲೆ, ಹಣದ ಮೋಜು, ಅತಿರೇಕದ ದೌರ್ಬ ಲ್ಯಗಳು ಇಲ್ಲದಿರುವ ನಾರಾಯಣ್ ಹೇಳಿದ ಒಂದು ಮಾತು ನನಗೆ ತುಂಬ ಇಷ್ಟವಾಯಿತು : "ನನ್ನ ಸಂಬಳದಲ್ಲೇ ಒಂದು ತಿಂಗಳ ಖರ್ಚು ನಿಭಾಯಿಸ ಬೇಕು ಅಂತ ನನ್ನ ಹೆಂಡತಿಗೆ ಮೊಟ್ಟ ಮೊದಲ ದಿನವೇ ಹೇಳಿದ್ದೇನೆ ರವಿಯ ವರೇ" ಅಂದರು ಆತ. ನನಗೆ ಹೆಮ್ಮೆ ಎನಿಸಿತು.

ಅವತ್ತು ಗೆಳೆಯರಾದ ಡಿ.ಎಫ್.ಓ. ಉಡುಪುಡಿಯವರು ಹೊನ್ನಾವರ ದಲ್ಲಿ ಊಟಕ್ಕೆ ಕರೆದರು. ಉಡುಪುಡಿಯವರ ಬಗ್ಗೆ ಬರೆಯಲು ಕುಳಿತರೆ ತುಂಬ ಬರೆಯಬೇಕು. ನನ್ನದೇ ವಯಸ್ಸಿನ, ಕಟ್ಟುಮಸ್ತು ದೇಹದ ಕೃಷ್ಣ ಸುಂದರ ಆತ. ಆಲಮಟ್ಟಿಯಲ್ಲಿ ಅವರು ಡ್ಯಾಮ್‌ನ ದಡದಲ್ಲಿ ಮಾಡಿರುವ ತೋಟ : ಅದು ಮೈಸೂರಿನ ಬೃಂದಾವನ್ ಗಾರ್ಡನ್ಸ್‌ಗೆ ತಾಯಿಯಂತಹುದು. ಬೆಂಗಳೂರಿನಲ್ಲಿ ಅವರು ಕೆಲವು ಅದ್ವಿತೀಯ ಪಾರ್ಕ್‌ಗಳನ್ನು ಮಾಡಿದ್ದಾರೆ. ಕರ್ನಾಟಕದ best ತೋಟಮಾಲಿ ಅಂದರೆ ಉಡುಪುಡಿ. 'ಗಿಡ ಹಚ್ಚೋದಷ್ಟೆ ಅಲ್ರೀ...' ಅಂತ ಮಾತಿಗಿಳಿಯುವ ಉಡುಪುಡಿ ಜಗತ್ತಿನ ಯಾವ ಅಂಗುಲ ವನ್ನೂ ಕಾಡಿಲ್ಲದೆ, ಹಸಿರಿಲ್ಲದೆ, ಸಮೃದ್ಧವನ್ನಾಗಿಸುವ ಹುಚ್ಚು ಹಂಬಲದ ಬೆನ್ನತ್ತಿರುವ ಅರಣ್ಯಾಕಾರಿ. ಅವರದು ಬೆಳಗಾವಿ ಜಿಲ್ಲೆಯ ಮರಳುಗಾಡಿ ನಂತಿರುವ ರಾಮದುರ್ಗ ಪ್ರದೇಶದ ಪುಟ್ಟ ಹಳ್ಳಿ. ತಂದೆ ಶುದ್ಧ ಕೃಷಿಕ. ಅರಣ್ಯಾಕಾರಿಯಾದ ಮೇಲೆ ಉಡುಪುಡಿ ಮಾಡಿದ ಒಂದೇ ಕೆಲಸವೆಂದರೆ : ಗಿಡ ಹಚ್ಚೋದು. ಅವತ್ತು ರಾತ್ರಿ ಹೊನ್ನಾವರದ ಬಳಿಯ ಫಾರೆಸ್ಟ್ ಗೆಸ್ಟ್‌ಹೌಸ್‌ನಲ್ಲಿ ಅವರು ಊಟಕ್ಕೆ ವ್ಯವಸ್ಥೆ ಮಾಡಿದ್ದರು. ಆ ಸೀಮೆಗೆ ಹೋದರೆ ನನ್ನ taste buds ಶಾಶ್ವತವಾಗಿಬಿಡುತ್ತವೆ. ಏನೇ ಕಷ್ಟ ವಾದರೂ ಒಂದು ಸಲ ಕುಂದಾಪುರದ 'ಶೆಟ್ಟಿ ಲಂಚ್ ಹೋಮ್'ಗೆ ಹೋಗಿ ಕಾಣೆ ಮೀನು ತಿಂದು ಬಂದು ಬಿಡುವ ಜಿಹ್ವಾ ಚಾಪಲ್ಯ. ಆದರೆ ಹೊನ್ನಾವರದ ಬಳಿಯ ಗೆಸ್ಟ್‌ಹೌಸ್‌ನಲ್ಲಿ ಉಡುಪುಡಿ ಅದೆಂಥ ಅದ್ಭುತವಾದ ಕಾಣೆ ಮೀನು ಮಾಡಿಸಿದ್ದರೆಂದರೆ: ಕುಂದಾಪುರ ಕ್ಯಾನ್ಸಲ್! ಮಸೀದಿಯ ಮೆಟ್ಟಿಲ ಮೇಲೆಯೇ ಅಲ್ಲಾಹುವಿನ ದರ್ಶನವಾಗಿರುವಾಗ ಒಳಕ್ಕೆ ಹೋಗಿ ನಮಾಜು ಮಾಡಿ ಮುಲ್ಲಾನ ಆಶೀರ್ವಾದ ಕೇಳುವುದೇಕೆ? ಇದು ಮಹಾನ್ ಕವಿ ಮಿರ್ಜಾ ಗಾಲಿಬ್‌ನ ಅನಿಸಿಕೆ. ಕಾಣೆ ಮೀನಿನ ಊಟ ಮಾಡಿ ರಾತ್ರೋರಾತ್ರಿ ನಾನು ಹೊರಟು ಸೇರಿಕೊಂಡದ್ದು ತೀರ್ಥಹಳ್ಳಿಯ ವಿಹಂಗಮ ರೆಸಾರ್ಟ್.

ಅದು ಕಡಿದಾಳ್ ಶಾಮಣ್ಣನವರ ಸೋದರ ಕಡಿದಾಳು ದಯಾನಂದ ನಡೆಸುತ್ತಿರುವ ರೆಸಾರ್ಟು. ತುಂಗೆ ಎಂಥ ಸಡಗರದಿಂದ ಹರಿಯುತ್ತಿದ್ದಳೆಂ ದರೆ, ಅದರ ಭುಜದ ಮೇಲೆಯೇ ಕಟ್ಟಿರುವ ರೂಮಿನಲ್ಲಿ ತಂಗಿದ ನನಗೆ ಮೈಮೇಲೆಯೇ ತುಂಗೆ ಹರಿದಂಥ ಸುಖ. ಅಲ್ಲಿ ಕುಳಿತು ತುಂಬ ಬರೆದೆ. ಮಳೆ ನೋಡಿದೆ. ತುಂಗೆಯ ಅಬ್ಬರದಲ್ಲಿ ಕ್ಷಣಕ್ಷಣದ ಸ್ಖಲನ. ಕಡಿದಾಳು ದಯಾ ನಂದ್‌ರ ಮಗ ಕಾನೀನ ನನ್ನನ್ನು ನೋಡುತ್ತಿದ್ದಂತೆಯೇ "ತೀರ್ಥಹಳ್ಳಿಗೆ ಈವತ್ತು ಕಡಿದಾಳು ಶಾಮಣ್ಣ ಬಂದಿದ್ದಾರೆ" ಅಂದ. ನಾನು ತುಂಬ ಗೌರವಿ ಸುವ ಶುದ್ಧ ಸಮಾಜವಾದಿ ಕಡಿದಾಳು ಶಾಮಣ್ಣ. ಅವರಿಗೀಗ ಎಪ್ಪತ್ತೆಂಟು ವರ್ಷ. ಇನ್ನೂ ಡ್ರೈವ್ ಮಾಡುತ್ತಾರೆ. ಫೊಟೋ ತೆಗೆಯುತ್ತಾರೆ. ಅವರ ತಾಯಿಗೆ ತೊಂಬತ್ತೊಂದು ವರ್ಷ. ಎಲ್ಲೇ ನಾಲ್ಕು ಜನ ಸೇರಿ ಯಾರದೇ ವಿರುದ್ಧ ಪ್ರತಿ ಭಟನೆ ಮಾಡಿದರೂ ಅಲ್ಲಿ ಕಡಿದಾಳು ಶಾಮಣ್ಣ ಹಾಜರಿರುತ್ತಾರೆ. "ನೀನು ನನ್ನ ಬಗ್ಗೆ ಶಿವಮೊಗ್ಗದಲ್ಲಿ ಹತ್ತು ನಿಮಿಷ ಮಾತಾಡಿದೆಯಂತೆ?" ಅಂದ ಶಾಮಣ್ಣ ಅಕ್ಕರೆಯಿಂದ ಅಪ್ಪಿಕೊಂಡರು. ತೇಜಸ್ವಿ, ಲಂಕೇಶ್, ಅನಂತಮೂರ್ತಿ ಅಥವಾ ಯಾವುದೇ ಸೋಷಲಿಸ್ಟ್ ಹೋರಾಟಗಾರರ, ಚಿಂತಕರ ಬಗ್ಗೆ ಮಾತ ನಾಡುವಾಗ ಕಡಿದಾಳು ಶಾಮಣ್ಣನ ಬಗ್ಗೆ ಮಾತನಾಡದೆ ಇರಲು ಸಾಧ್ಯವೇ ಇಲ್ಲ. ನಂಬಿದ್ದನ್ನು ವಂಚಿಸದ, ಹೇಳಿದ್ದನ್ನು ಪಾಲಿಸುವ, ತೀರ ಹತ್ತಿರದವರೇ ತಪ್ಪು ಮಾಡಿದಾಗ ಅವರನ್ನೂ ಕ್ಕರಿಸುವ ಕಡಿದಾಳು ಶಾಮಣ್ಣ ನನಗೆ ಇಷ್ಟ. ಆತನ ಭ್ರಮೆ, ಕನಸು, ಆದರ್ಶ, ಹಟ-ಎಲ್ಲವುಗಳ ಸಮೇತ ಶಾಮಣ್ಣ ನನಗೆ ಇಷ್ಟ. ನಾನು-ಶಾಮಣ್ಣ ಹಾಗೆ ಮೈಮರೆತು ಹರಟುತ್ತಿದ್ದಾಗಲೇ ಗೌರಿ ಎಚ್ಚ ರಿಸಿದಳು : "ಶಾಮಣ್ಣಾ, ಹೊರಡೋಣ. ಕತ್ತಲಾಯ್ತು" ಅಂತ. ಲಂಕೇಶ್ ತೀರಿದ ನಂತರವೂ ತನ್ನ ತಂದೆಯ ಸ್ನೇಹಿತರನ್ನು ಮಾತನಾಡಿಸುತ್ತಾ, ಅವ ರಿಂದ ಬರೆಯಿಸುತ್ತಾ, ಹೋರಾಟಗಳಿಗೆ ಕರೆಯುತ್ತಾ, ತಾನೂ ಹೋಗುತ್ತಾ ಸಕ್ರಿಯಳಾಗಿರುವ ಗೌರಿ ಲಂಕೇಶ್, ನನಗೆ ಓರಗೆಯ ಗೆಳತಿ. ಕಡಿದಾಳು ಶಾಮಣ್ಣ ಮತ್ತು ಗೌರಿ ತೀರ್ಥಹಳ್ಳಿಯ ಸೋಷಲಿಸ್ಟ್ ಮಿತ್ರರ ಶ್ರದ್ಧಾಂಜಲಿ ಕಾರ್ಯಕ್ರಮಕ್ಕೆ ಬಂದಿದ್ದರು. ಯಾವುದೋ ಸಸಿ ಹುಡುಕಿಕೊಂಡು ವಿಹಂ ಗಮ ನರ್ಸರಿಗೆ ಬಂದವರ ಅನಾಯಾಸ ಭೇಟಿ.

ಅದಾದ ಎರಡು ದಿನ ನಾನು 'ವಿಹಂಗಮ'ದಲ್ಲೇ ಇದ್ದೆ. ಬಗ್ಗಿಸಿದ ತಲೆ ಎತ್ತದೆ ಬರೆಯುತ್ತಿದ್ದೆ. ಸೆಪ್ಟಂಬರ್ ೪ರ ಭಾನುವಾರ ನನ್ನ ತಾಯಿ ತೀರಿಕೊಂಡ ದಿನ. ಯಾರೊಂದಿಗೂ ಮಾತು ಬೇಕು ಎನ್ನಿಸಿರಲಿಲ್ಲ. ಮರುದಿನ ಬೆಳಗ್ಗೆ ಶೃಂಗೇರಿಯ ಕಾಲೇಜಿನಲ್ಲಿ ಹಳೆಯ ವಿದ್ಯಾರ್ಥಿಗಳ ಸಂಘದವರ ಶಿಕ್ಷಕರ ದಿನಾಚರಣೆಗೆ ನಾನು ಅತಿಥಿ. ಪ್ರೊ.ರಾಮಕೃಷ್ಣರಾಯರ ಹೆಸರಿನಲ್ಲಿ ದತ್ತಿ ಉಪನ್ಯಾಸ. "ನೀವು ಬರದಿದ್ರೆ ಈ ಜನ್ಮದಲ್ಲಿ ಮತ್ತೆ ನಿಮ್ಮ ಮುಖ ನೋಡಲ್ಲ" ಅಂತ ಬೆದರಿಸಿದ್ದವರು ವಿಠಲ ಹೆಗ್ಡೆ ಕಲ್ಕುಳಿ. ಆತ ಒಬ್ಬ ಹಟಮಾರಿ ಹೋರಾಟ ಗಾರ. ತುಂಬ ಓದಿಕೊಂಡ, ತಿಳುವಳಿಕಸ್ಥ ಮಿತ್ರ. ಹೆಚ್ಚು ಕಡಿಮೆ ನನ್ನದೇ ವಯಸ್ಸು. ನಕ್ಸಲೀಯ ನಾಯಕ ಅಂತ ಹೆಸರಿಟ್ಟು ಕಲ್ಕುಳಿ ವಿಠಲ ಹೆಗ್ಡೆಯನ್ನು ಎನ್‌ಕೌಂಟರ್ ಮಾಡಿ ಕೊಂದೇಬಿಡುವ ಹುನ್ನಾರವನ್ನು ಪೊಲೀಸರು ಮಾಡಿ ದಾಗ, ಆ ಸಂಚನ್ನು ಬಯಲಿಗೆಳೆದು ವಿಠಲ ಹೆಗ್ಡೆ ಬೆಂಬಲಕ್ಕೆ ನಿಂತದ್ದು 'ಪತ್ರಿಕೆ'. ವಿಠಲ ಹೆಗ್ಡೆ ಪರಮ ಜಿಗುಟು. ಸಣ್ಣದೊಂದು ಸಂಧಾನವನ್ನೂ ಮಾಡಿಕೊ ಳ್ಳದ ಪ್ರಾಮಾಣಿಕ. ಕೊಂಚ ಮೂರ್ಖ. ಆದರೆ ನನಗೆ ಇಷ್ಟವಾದದ್ದು ಆತನ ಜೀವನಾದರ್ಶ. ಅವರ ಪತ್ನಿಎಸ್ತಲಿನಾ ಮೊನೀಸ್. ನಿಜಕ್ಕೂ ತಾಯಿಯಂಥ ವರು. ಆದರೆ ನನಗೆ ತುಂಬ ಇಷ್ಟವಾದವನು ಕಲ್ಕುಳಿ ವಿಠಲ ಹೆಗ್ಡೆ ಅವರ ಮಗ ಕೃಷಿಕ್. ಆ ಹುಡುಗ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನಲ್ಲಿ ಜೂನಿಯರ್ ಫೆಲೋ ರಿಸರ್ಚರ್. ಒಂದರ್ಥದಲ್ಲಿ ವಿಜ್ಞಾನಿ. ಮುಂದಿನ ರಿಸ ರ್ಚ್‌ಗಾಗಿ ವಿದೇಶಕ್ಕೆ ಹೋಗಲಿದ್ದಾನೆ. ವಿಠಲ ಹೆಗ್ಡೆ ಸರಿಯಾಗಿ ಪಿಯುಸಿ ಕೂಡ ಮುಗಿಸದೆ ಹೋರಾಟಗಳಲ್ಲಿ ತೊಡಗಿಕೊಂಡು, ಇವತ್ತಿಗೂ ರಾಜಿ ಮಾಡಿಕೊಳ್ಳದೆ ಬದುಕುತ್ತಿರುವ ಮನುಷ್ಯ. ಅವರ ಪತ್ನಿ ಆರೋಗ್ಯ ಕಾರ್ಯಕರ್ತೆ. ಆದರೆ ವಿಠಲ ಹೆಗ್ಡೆಯ ಮಗ ಇದ್ಯಾವ ಎತ್ತರಕ್ಕೆ ಬೆಳೆಯುತ್ತಿರುವ ಮಗು?

ಮರುದಿನ ಅವರ ಮುರುಕು ಮನೆಯಲ್ಲೇ ಒಂದು ನೀರುದೋಸೆ, ಆಮ್ಲೆಟ್ಟು, ಕೊಂಚ ಕೋಳಿಸಾರು ತಿಂದು ಶೃಂಗೇರಿಯ ಕಾಲೇಜಿಗೆ ಹೋದೆ. ಸಾವಿರಾರು ಹುಡುಗರು, ಹುಡುಗಿಯರು. ಇಡೀ ಕಾರ್ಯಕ್ರಮ ಸಂಘಟಿಸಿದ್ದು ಕಲ್ಕುಳಿ ವಿಠಲ ಹೆಗ್ಡೆ ಮತ್ತು ಅವರ ಗೆಳೆಯರು. ನಿವೃತ್ತ ಪೊಲೀಸ್ ಅಕಾರಿ ರವೀಂದ್ರನಾಥ ಟ್ಯಾಗೋರ್ ಆ ಹಳೇ ವಿದ್ಯಾರ್ಥಿ ಸಂಘದ ಸಂಸ್ಥಾಪಕ ಅಧ್ಯಕ್ಷರು. ಯಥಪ್ರಕಾರ ನಾನು ಭೀಕರ ಭಾಷಣ ಮಾಡಿದೆ. ಹುಡುಗ-ಹುಡುಗಿಯರು ಖುಷಿಯಾದಂತಿತ್ತು. ನನಗೆ ತುಂಬ ಸಂತೋಷವಾದದ್ದು ಆ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲರಾದ ವೆಂಕಣ್ಣಯ್ಯನವರನ್ನು ನಾನು ಸನ್ಮಾನಿಸಿದ್ದು. ವೆಂಕಣ್ಣಯ್ಯ ತ.ಸು.ಶಾಮರಾಯರ ಮಗ. ಅವರ ತಾಯಿಯ ಕೈ ತುತ್ತು ತಿಂದವನು ನಾನು. ಆಕೆ ನನ್ನ ಪಾಲಿಗೆ ಸುಬ್ಬಮ್ಮತ್ತೆ. ವೆಂಕಣ್ಣಯ್ಯ ವರಸೆಯಲ್ಲಿ ನನಗೆ ಅಣ್ಣನಾಗ ಬೇಕು. ಮುಖೇಶ್ ಮತ್ತು ಓ.ಪಿ.ನಯ್ಯರ್ ಅವರ ಪರಮಾಭಿಮಾನಿ. ಮಧ್ಯಾಹ್ನ ಅವರ ಮನೆಗೆ ಹೋಗಿ, ಎಣ್ಣೆಯಲ್ಲಿ ಕರಿದ ಸಮಸ್ತ ವನ್ನೂ ತಿಂದು, ಅವರ ಪತ್ನಿ ಲಲಿತಮ್ಮನಿಗೆ ನಮಸ್ಕಾರ ಹೇಳಿ ಹೊರಡುವ ಹೊತ್ತಿಗೆ ಶೃಂಗೇರಿಯ ನೆತ್ತಿಯ ಮೇಲೆ ದಿವ್ಯಮಳೆ : ಜಲಲ ಜಲ್ಲಲ ಜಲಧಾರೇ...!

ಮನಸು ಒದ್ದೆಮುದ್ದೆ.

ನಿಮ್ಮವನು

ಆರ್.ಬಿ.

Read Archieves of 10 September, 2011
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books