Ravi Belagere
Welcome to my website
ಇದು 2012ರ ಫೆಬ್ರವರಿ 14ರ ವ್ಯಾಲಂಟೈನ್ಸ್ ಡೇಗೆ ಸಮಸ್ತ ಪ್ರೇಮಿಗಳಿಗಾಗಿ ನಾನು ಕೊಡುತ್ತಿರುವ ಅಕ್ಕರೆಯ gift : ‘ಒಲವೇ...’. ಅರವತ್ತು ನಿಮಿಷಗಳ ಅರ್ಥಪೂರ್ಣ ಧ್ವನಿ ಮುದ್ರಿಕೆ. ಅಪ್ಪ-ಅಮ್ಮನ ನೆರಳಲ್ಲಿ ಮುದ್ದಾಗಿ ಬೆಳೆದ ಹುಡುಗಿ, ಅಷ್ಟೇ ಬೆಚ್ಚನೆಯ ಆರೈಕೆಯಲ್ಲಿ ಚೆಂದಗೆ ಬೆಳೆದ ಹುಡುಗ ಅದ್ಯಾವ ಮಾಯೆಯಲ್ಲೋ ಒಬ್ಬರನ್ನೊಬ್ಬರು ಪ್ರೀತಿಸತೊಡಗುತ್ತಾರೆ. ಅಲ್ಲಿಂದ ಶುರುವಾಗುತ್ತೆ ಅವರ ಪ್ರೇಮ ಯಾತ್ರೆ. ಫೆಬ್ರವರಿ 14 ನಿಮ್ಮ ಗೆಳೆಯ ಅಥವಾ ಗೆಳತಿಯನ್ನು ಭೇಟಿಯಾದಾಗ ಪ್ರೀತಿಯಿಂದ ‘ಒಲವೇ’ ಸಿಡಿ ಕೊಡಿ. ಅಷ್ಟೇ ಅಲ್ಲ, ಇಬ್ಬರೂ ಒಟ್ಟಿಗೇ ಕೂತ್ಕೊಂಡು ಸಮಾಧಾನವಾಗಿ ಕೇಳಿ. Be sure. ನಿಮ್ಮ ಒಲವು ಫಲಿಸುತ್ತೆ. ಮನಸು ಮುದಗೊಳ್ಳುತ್ತೆ. ಆಮೇಲೆ ಯಾವತ್ತೇ ಮನಸ್ಸಿಗೆ ಬೇಕೆನ್ನಿಸಿದರೂ ನೀವು ‘ಒಲವೇ...’ ಸಿಡಿ ಕೇಳ್ತಾನೇ ಇರ‍್ತೀರಿ...
Home About Us Gallery Books Feedback Prarthana Contact Us

ಒಂದು ಅಂಗಡಿಯ ಬಾಗಿಲು ತೆರೆದ ಅಕ್ಷಯ ಘಳಿಗೆ!

ಅದೇನದು?


ಪುಸ್ತಕದ ಅಂಗಡಿಯ ಉದ್ಘಾಟನೆಯಾ? ಕನ್ನಡ ಹಬ್ಬವಾ? ಸಮ್ಮೇಳನದ ಮೆರವಣಿಗೆಯಾ? ಗಾಂಧಿಬಜಾರ್ ಗೆ ಮರಳಿ ಬಂದ ಪುಸ್ತಕ ವೈಭವವಾ? ನೆನಪಾದದ್ದು ಮಾಸ್ತಿ, ಅಡಿಗರು, ಲಂಕೇಶ್. ಇದ್ದಿದ್ದರೆ ಎಷ್ಟು ಖುಷಿ ಪಡುತ್ತಿದ್ದರೋ? ಕಿ.ರಂ.ನಾಗರಾಜ್ ಇದ್ದಿದ್ದರಂತೂ ಮಕ್ಕಳಂತೆ ಕೇಕೆ ಹೊಡೆದುಬಿಡುತ್ತಿದ್ದರು.

ಬೆಂಗಳೂರಿನಲ್ಲಿ ಅಂಗಡಿ-ಮಳಿಗೆ ಉದ್ಘಾಟನೆಗಳಿಗೆ ಸಿನೆಮಾ ನಟರನ್ನು ಕರೆಸುತ್ತಾರೆ. ಹೆಚ್ಚಿನ ಸಲ ಹಿಂದಿ ನಟಿಯರನ್ನ. ಅವರು ಕಾಲ್‌ಷೀಟ್‌ಗೆ ಆಗುವ ಮೊತ್ತ, ವಿಮಾನದ ಖರ್ಚು, ಇಲ್ಲಿ ಸ್ಟಾರ್ ಹೊಟೇಲಿನ ವಾಸ್ತವ್ಯ ಎಲ್ಲ ವಸೂಲಿ ಮಾಡಿಯೇ ಬರುತ್ತಾರೆ.

ನಾನು ಗಾಂಧಿಬಜಾರ್ನಲ್ಲಿ ಬಿಬಿಸಿ (ಬೆಳಗೆರೆ ಬುಕ್ಸ್ ಅಂಡ್ ಕಾಫಿ) ಎಂಬ ಪುಸ್ತಕದ ಅಂಗಡಿ ಮಾಡಲು ನಿರ್ಧರಿಸಿದ್ದು ನಿಮಗೆ ಗೊತ್ತು. ಪುಸ್ತಕದ ಅಂಗಡಿ, actually ನನಗೆ ಬೇಕಿರಲಿಲ್ಲ. ನನ್ನ ಮಟ್ಟಿಗೆ ನನ್ನ ಪುಸ್ತಕಗಳು ಸಲೀಸಾಗಿ ಮಾರಾಟವಾಗುತ್ತವೆ. ಕಡಿಮೆ ಅಂದರೆ ಮೂವತ್ತು ಸಾವಿರ. ಹಿಮಾಲಯನ್ ಬ್ಲಂಡರ್ ಅರವತ್ತು ಸಾವಿರ ಖರ್ಚಾಗಿದೆ. ಅದಲ್ಲ ವಿಷಯ: ಪುಸ್ತಕ ಮಾರುವುದರಲ್ಲಿ ಒಂದು thrill ಇದೆ. ನನ್ನವಷ್ಟೆ ಅಲ್ಲ, ಕನ್ನಡದ ಎಲ್ಲ ಲೇಖಕರ ಪುಸ್ತಕ ಮಾರಬೇಕು. ಜೊತೆಗೆ ಅಪರೂಪದ ಇಂಗ್ಲಿಷ್ ಲೇಖಕರವೂ. ಮಕ್ಕಳ ಪುಸ್ತಕಗಳನ್ನೂ ಮಾರಬೇಕು. ಅಂಗಡಿಯ ವಾತಾವರಣವೇ ಬೇರೆಯಿರಬೇಕು. ಬೇರೆ ಬೇರೆ ದೇಶಗಳಿಗೆ ಹೋದಾಗ ಅಲ್ಲಿನ ಪುಸ್ತಕದ ಅಂಗಡಿಗಳಿಗೆ ಹೋಗಿ ವಿನೂತನ ಅನಿಸಿದ್ದನ್ನು photograph ಮಾಡಿ ತಂದಿಟ್ಟುಕೊಳ್ಳುತ್ತಿದ್ದೆ. ಅದಕ್ಕೆ ಸರಿಯಾಗಿ ಗಾಂಧಿ ಬಜಾರ್ ನಲ್ಲಿ ಅಳಿಯನ ಮಳಿಗೆ ಸಿಕ್ಕಿತು.

‘ಹಿಮಾಗ್ನಿ’ ಮುಗಿಸಿದವನು ಅತಿಥಿಗಳನ್ನು ಖುದ್ದಾಗಿ ಹೋಗಿ ಕರೆಯೋಣ ಅಂದುಕೊಂಡೆ. ಕರೆದದ್ದು ಮಾಳವಿಕಾ ಮತ್ತು ಅವಿನಾಶ್‌ರನ್ನು ಮಾತ್ರ. ಉಳಿದೆಲ್ಲರನ್ನು ಕರೆಯಲು ನನ್ನ ವರದಿಗಾರರಾದ ಸ್ವಾಮಿಗೌಡ ಮತ್ತು ಸುನೀಲ್ ಹೆಗ್ಗರವಳ್ಳಿಯನ್ನು ಕಳಿಸಿದ್ದೆ. ಹಿರಿಯರಾದ ವೆಂಕಟೇಶ ಮೂರ್ತಿಯವರು, ದೊಡ್ಡ ರಂಗೇಗೌಡರು, ಡಾ.ವಿಜಯಮ್ಮ, ಚಂದ್ರಶೇಖರ ಆಲೂರು, ಎಂ.ಎನ್.ವ್ಯಾಸರಾವ್, ನಾಗತಿಹಳ್ಳಿ ಚಂದ್ರಶೇಖರ, ಪ್ರಧಾನ ಗುರುದತ್ತ, ಲಕ್ಷ್ಮೀನಾರಾಯಣ ಭಟ್ಟರು, ಬೆಳಗೆರೆ ಕೃಷ್ಣ ಶಾಸ್ತ್ರಿಗಳು, ಸಿ.ವಿ.ಶಿವಶಂಕರ್, ಜೋಗಿ, ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್- ಹೀಗೆ ಇಡೀ ಕನ್ನಡದ ಸಾಂಸ್ಕೃತಿಕ ಪ್ರಪಂಚವೇ ಅಲ್ಲಿಗೆ ಬಂದಿಳಿದಿತ್ತು.

ಬಸವನಗುಡಿ ಕ್ಲಬ್ ನೋಡಿದ್ದೀರಲ್ಲ? ಅದರ ಇದುರಿನದೇ ಟ್ಯಾಗೋರ್ ಸರ್ಕಲ್. ಅಲ್ಲಿಂದ ಡಿ.ವಿ.ಜಿ. ಸರ್ಕಲ್ ಮಧ್ಯೆ ಸರಿಯಾಗಿ 317 ಮರಗಳಿವೆ. ಕನ್ನಡದ ಅಧ್ವರ್ಯು ಬಿ.ಎಂ.ಶ್ರೀ ಅವರಿಂದ ಹಿಡಿದು ಡಾ.ರಾಜ್‌ಕುಮಾರ್ ಅವರ ತನಕ ಪ್ರತಿ ಮರಕ್ಕೂ ಕನ್ನಡಕ್ಕಾಗಿ ದುಡಿದವರ flex ಹಾಕಿಸಿದ್ದೆ. ಹೆಜ್ಜೆ ಹೆಜ್ಜೆಗೆ ಬ್ಯಾನರ್, ಬಂಟಿಂಗ್ಸ್. ಶುದ್ಧ ಸಾಂಪ್ರದಾಯಿಕ ಓಲಗದ ಮೇಳ. ರಸ್ತೆಗೆ ಅಕ್ಷರಶಃ red carpet ಹಾಕಿಸಿದ್ದೆ.

“ಏನಪ್ಪಾ, ಸಾಹಿತ್ಯ ಸಮ್ಮೇಳನಗಳಲ್ಲೂ ಹೀಗೆ ಮಾಡಲ್ಲ. ಅಂಥ ಮೆರವಣಿಗೆ ಮಾಡಿಸ್ತಾ ಇದೀಯಾ?\" ಅಂದರು ಲಕ್ಷ್ಮೀನಾರಾಯಣ ಭಟ್ಟರು.“ನೀವು ಬರೆದು ಕೊಟ್ಟ ಹಾಡುಗಳಿಗೆ ಇದು ಯಾವ ದೊಡ್ಡ ಪ್ರತ್ಯುತ್ತರ?\" ಅಂದೆ.

ಪ್ರಾರ್ಥನಾ ಶಾಲೆಯ ನೂರ ಹತ್ತು ಮಕ್ಕಳು ಇಕ್ಕೆಲಗಳಲ್ಲಿ ನಿಂತು ಸೇವಂತಿಗೆ ಪಕಳೆಗಳನ್ನು ಅತಿಥಿಗಳೆಡೆಗೆ ತೂರುತ್ತಿದ್ದರೆ ಓಲಗದ ನಡುವೆ ಸಂಭ್ರಮದ ಮೆರವಣಿಗೆ ಸಾಗಿತ್ತು. ಕವಿ ಎಚ್.ಎಸ್.ವೆಂಕಟೇಶ ಮೂರ್ತಿ ನನ್ನ ಮಳಿಗೆ ‘ಬಿಬಿಸಿ’ಯ ಉದ್ಘಾಟನೆ ಮಾಡಿದರು. ಅಷ್ಟೇ ನೆನಪು. ಆಮೇಲೆ ಜನವೋ ಜನ. ಒಂದು ಪುಸ್ತಕದ ಅಂಗಡಿಗೆ ಅಷ್ಟು ಜನ ಬರುತ್ತಾರಾ? ಅದೂ ಬೆಂಗಳೂರಿನಲ್ಲಿ? ಅದರಲ್ಲೂ ಭಾನುವಾರದಂದು?

That\'s ಓದುಗ ದೊರೆ ಡಾಟ್‌ಕಾಮ್! ಅಲ್ವೆ?

Read Archieves of 14 February, 2012
Kaamaraja Maarga Book
See for all books
TV Shows
 
Books & Coffee
 
Prathana School Prathana School
 
Photo Gallery
Ravi Photo

© Ravi Belagere.

My Books